ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿನಾಯಿ ನಿಯಂತ್ರಣ ಇನ್ನು ಸಬೂಬು ಬೇಡ

Last Updated 25 ಡಿಸೆಂಬರ್ 2019, 20:30 IST
ಅಕ್ಷರ ಗಾತ್ರ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಏಳು ವರ್ಷಗಳ ಬಳಿಕ ಬೀದಿನಾಯಿಗಳ ಗಣತಿ ನಡೆದಿದ್ದು, ಅದರ ಫಲಿತಾಂಶ ಹೊರಬಿದ್ದಿದೆ. ನಗರದಲ್ಲಿ 3.10 ಲಕ್ಷ ಬೀದಿನಾಯಿಗಳಿರುವುದು ಗೊತ್ತಾಗಿದೆ. ಇವುಗಳಲ್ಲಿ 1.42 ಲಕ್ಷ ನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಆಗಿಯೇ ಇಲ್ಲ ಎಂಬುದು ಆಘಾತಕಾರಿ ಅಂಶ. ಇತ್ತೀಚಿನ ವರ್ಷಗಳಲ್ಲಿ ಬೀದಿನಾಯಿಗಳು ಜನರ ಮೇಲೆ, ಅದರಲ್ಲೂ ವಿಶೇಷವಾಗಿ ಮಕ್ಕಳ ಮೇಲೆ ದಾಳಿ ನಡೆಸಿವೆ. ಬೆಂಗಳೂರಿನಲ್ಲಿ ಅವುಗಳ ದಾಳಿಯಿಂದ ಮಕ್ಕಳು ಸತ್ತ ಉದಾಹರಣೆಗಳೂ ಇವೆ. ಬೀದಿನಾಯಿಗಳ ಹಾವಳಿ ವರದಿಯಾಗುತ್ತಲೇ ಜನ ಆಕ್ರೋಶ ವ್ಯಕ್ತಪಡಿಸುತ್ತಾರೆ. ಅವುಗಳನ್ನು ನಿಯಂತ್ರಿಸುವಂತೆ ಬಿಬಿಎಂಪಿ ಮೇಲೆ ಒತ್ತಡ ಹೇರುತ್ತಾರೆ. ಆದರೆ, ಪರಿಣಾಮ ತೃಪ್ತಿದಾಯಕವಾಗಿ ಇಲ್ಲ.

1960ರ ಪ್ರಾಣಿ ಹಿಂಸೆ ತಡೆ ಕಾಯ್ದೆಯ ಸೆಕ್ಷನ್‌ 11 ಹಾಗೂ ಭಾರತೀಯ ದಂಡಸಂಹಿತೆಯ ಸೆಕ್ಷನ್‌ 428 ಮತ್ತು 429ರ ಅನುಸಾರ ನಾಯಿಗಳಿಗೂ ರಕ್ಷಣೆ ಇದೆ. ಸಂಖ್ಯೆ ಹೆಚ್ಚಾಯಿತೆಂದು ಅವುಗಳನ್ನು ಕೊಲ್ಲಲು ಅವಕಾಶ ಇಲ್ಲ.ಬೀದಿನಾಯಿಗಳ ಹಾವಳಿ ತಡೆಯುವುದಕ್ಕೆ ಇರುವ ಏಕೈಕ ನಿಯಮಬದ್ಧ ಪರಿಹಾರ ಮಾರ್ಗವೆಂದರೆ ಅವುಗಳ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಯನ್ನು ಕಾಲಕಾಲಕ್ಕೆ ನಡೆಸುವುದು, ಆ ಮೂಲಕ ಅವುಗಳ ಸಂತತಿ ನಿಯಂತ್ರಣ ಮೀರಿ ಬೆಳೆಯುವುದನ್ನು ತಡೆಯುವುದು.

ಈ ಸಲುವಾಗಿಯೇ ಬಿಬಿಎಂಪಿಯು ಬಜೆಟ್‌ನಲ್ಲಿ ₹3 ಕೋಟಿಯಷ್ಟು ಮೊತ್ತವನ್ನು ತೆಗೆದಿರಿಸುತ್ತದೆ. ಒಂದು ನಾಯಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸಲು ₹1,200 ವೆಚ್ಚವಾಗುತ್ತದೆ. ಆದರೆ, ಬೀದಿನಾಯಿಗಳ ಸಂತಾನ ನಿಯಂತ್ರಣ ಕಾರ್ಯಕ್ರಮಕ್ಕೆ ಬಿಡುಗಡೆಯಾದ ಹಣ ದುರುಪಯೋಗವಾಗಿರುವ ಬಗ್ಗೆಯೂ ದೂರುಗಳಿವೆ. ಶಸ್ತ್ರಚಿಕಿತ್ಸೆ ನಡೆಸಲು ಆಯ್ಕೆ ಮಾಡಲಾಗಿದ್ದ ಸಂಸ್ಥೆಗಳ ಗುತ್ತಿಗೆಯನ್ನು ಹಣ ದುರುಪಯೋಗದ ಕಾರಣಕ್ಕೆ ರದ್ದುಪಡಿಸಿದ ನಿದರ್ಶನಗಳೂ ಇವೆ. ಮುಂದೆ ಹೀಗಾಗದಂತೆ ಎಚ್ಚರ ವಹಿಸುವುದು ಅಗತ್ಯ.

ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಬೀದಿನಾಯಿಗಳನ್ನು ಅವು ಮೊದಲು ಇದ್ದ ಪ್ರದೇಶದಲ್ಲೇ ಬಿಡಬೇಕು ಎಂದು ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ. ಬೇರೆ ಕಡೆ ಬಿಟ್ಟರೆ, ಅವು ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳದೆ ವ್ಯಗ್ರವಾಗಿ ವರ್ತಿಸುವ ಅಪಾಯ ಹೆಚ್ಚು. ಸಂತಾನ ನಿಯಂತ್ರಣ ಕಾರ್ಯಕ್ರಮದ ಗುತ್ತಿಗೆ ಪಡೆದ ಸಂಸ್ಥೆಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಡೆಸುತ್ತಿಲ್ಲ ಎಂಬುದು ಪ್ರಾಣಿದಯಾ ಸಂಘಟನೆಗಳ ದೂರು. ಶಸ್ತ್ರಚಿಕಿತ್ಸೆಗೊಳಪಡಿಸಿದ ನಾಯಿಗಳು 2–3 ದಿನಗಳಲ್ಲೇ ಸತ್ತ ನಿದರ್ಶನಗಳು ಬಹಳಷ್ಟಿವೆ. ಶಸ್ತ್ರಚಿಕಿತ್ಸೆ ಬಳಿಕ ಅವುಗಳನ್ನು ಆರೈಕೆ ಮಾಡಲು ನಾಯಿಗೂಡುಗಳ ಸಂಖ್ಯೆಯೂ ಅಗತ್ಯ ಪ್ರಮಾಣದಲ್ಲಿ ಇಲ್ಲ ಎಂಬ ಆರೋಪ ಇದೆ. ಶಸ್ತ್ರಚಿಕಿತ್ಸೆಯು ಕಾಟಾಚಾರದ ಕ್ರಿಯೆ ಆಗದಂತೆ ನೋಡಿಕೊಳ್ಳುವುದು ಹಾಗೂಶಸ್ತ್ರಚಿಕಿತ್ಸೆಗೆ ಅಗತ್ಯ ಮೂಲಸೌಕರ್ಯ ಒದಗಿಸುವುದು ಬಿಬಿಎಂಪಿಯ ಕರ್ತವ್ಯ.

ಸಂತಾನ ನಿಯಂತ್ರಣ ಕಾರ್ಯಕ್ರಮವನ್ನು ನಿರಂತರವಾಗಿ ಹಾಗೂ ವ್ಯಾಪಕವಾಗಿ ನಡೆಸಿದರೆ ಮಾತ್ರ ಬೀದಿನಾಯಿಗಳ ಸಂಖ್ಯೆಯನ್ನು ಹದ್ದುಬಸ್ತಿನಲ್ಲಿ ಇಡಬಹುದು. ಇತ್ತೀಚಿನ ಐದು ವರ್ಷಗಳ ದಾಖಲೆಗಳನ್ನು ನೋಡಿದರೆ ಬಿಬಿಎಂಪಿಯು ವರ್ಷಕ್ಕೆ ಸುಮಾರು 35 ಸಾವಿರದಿಂದ 45 ಸಾವಿರ ನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಿರುವುದು ಕಂಡುಬಂದಿದೆ. 2016–17ರಲ್ಲಿ ಈ ಸಂಖ್ಯೆ ದಿಢೀರನೆ 8,662ಕ್ಕೆ ಕುಸಿದಿತ್ತು.ಸಂತಾನ ನಿಯಂತ್ರಣ ಕಾರ್ಯಕ್ರಮದಲ್ಲಿ ನಿರಂತರತೆ ಕಾಯ್ದುಕೊಳ್ಳದೇ ಹೋದರೆ ನಾಯಿಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳ ಕಾಣುತ್ತದೆ. ಇದಕ್ಕೆ ಬಿಬಿಎಂಪಿ ಅವಕಾಶ ನೀಡಬಾರದು. 2012ರ ಬಳಿಕ ನಗರದಲ್ಲಿ ಬೀದಿನಾಯಿಗಳು ಎಷ್ಟು ಇವೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನವೇ ನಡೆದಿರಲಿಲ್ಲ.

ನಾಯಿಗಳ ಕುರಿತ ನಿಖರ ಮಾಹಿತಿ ಕೊರತೆಯಿಂದಸಂತಾನ ನಿಯಂತ್ರಣ ಕಾರ್ಯಕ್ರಮವನ್ನು ಸಮರ್ಪಕವಾಗಿ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದರು. ಇನ್ನು ಇದಕ್ಕೆ ಅವಕಾಶ ಇಲ್ಲ. ಯಾವ ವಾರ್ಡ್‌ನಲ್ಲಿ ಎಷ್ಟು ಬೀದಿನಾಯಿಗಳಿವೆ, ಅವುಗಳಲ್ಲಿ ಗಂಡೆಷ್ಟು, ಹೆಣ್ಣೆಷ್ಟು, ಎಷ್ಟು ನಾಯಿಗಳಿಗೆ ಶಸ್ತ್ರಚಿಕಿತ್ಸೆ ಬಾಕಿ ಇದೆ ಎಂಬ ನಿಖರ ಅಂಕಿ–ಅಂಶಗಳು ಬಿಬಿಎಂಪಿ ಬಳಿ ಈಗ ಇವೆ. ಈ ದತ್ತಾಂಶದ ಆಧಾರದಲ್ಲಿ ಬೀದಿನಾಯಿಗಳ ಸಂತಾನ ನಿಯಂತ್ರಣಕ್ಕೆ ಪರಿಣಾಮಕಾರಿ ಯೋಜನೆ ರೂಪಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT