ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಕಲ್ಯಾಣ ಕಾರ್ಯಗಳಿಗೆ ಸಕಾಲಕ್ಕೆ ಅನುದಾನ ನೀಡುವುದು ಆದ್ಯತೆಯಾಗಲಿ

Last Updated 13 ಜನವರಿ 2020, 19:23 IST
ಅಕ್ಷರ ಗಾತ್ರ

ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಏಕಮಾತ್ರ ರಾಜ್ಯ ಕರ್ನಾಟಕ. ರಾಜ್ಯವು ಕಂಡ ಮಹಾ ನೆರೆಗೆ ಪರಿಹಾರ ನೀಡುವಲ್ಲಿ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ತುಸು ಧಾರಾಳಿಯಾಗಿ ಇರಬೇಕಾಗಿತ್ತು. ಆದರೆ, ಆ ವಿಷಯದಲ್ಲಿ ಉದಾಸೀನ ತೋರಿ ಜನರ ಅಸಮಾಧಾನಕ್ಕೆ ಗುರಿಯಾಗಿದೆ. ಬಜೆಟ್‌ಪೂರ್ವ ವಾಗ್ದಾನದಂತೆ, ಕೊಡಲೇಬೇಕಾಗಿದ್ದ ಅನುದಾನ ನೀಡುವಲ್ಲಿಯೂ ತಾತ್ಸಾರ ಮಾಡಲಾಗಿದೆ ಎಂಬುದನ್ನು ರಾಜ್ಯ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ವರದಿಯೇ ಹೇಳಿದೆ.‍ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮದಡಿ ಬರಬೇಕಾದ ₹5,335 ಕೋಟಿ ಮೊತ್ತದಲ್ಲಿ ಅಲ್ಪಮೊತ್ತವನ್ನಷ್ಟೇ ಈವರೆಗೆ ಕೇಂದ್ರ ಸರ್ಕಾರ ಕೊಟ್ಟಿದೆ. ಬಡವರಿಗೆ ಸೂರು, ಮಕ್ಕಳು–ಮಹಿಳೆಯರ ಸಬಲೀಕರಣ, ಶಿಕ್ಷಣದ ಸುಧಾರಣೆ, ಯುವ ಸಮುದಾಯಕ್ಕೆ ಉದ್ಯೋಗದ ದಿಕ್ಕು ತೋರಿಸುವ ಕೌಶಲಾಭಿವೃದ್ಧಿಗೆ ನೀಡಬೇಕಾದ ಅನುದಾನದ ವಿವರಗಳನ್ನು ಈ ವರದಿ ಒಳಗೊಂಡಿದೆ. ಕೊಳೆಗೇರಿ ನಿವಾಸಿಗಳ ಪುನರ್ವಸತಿ ಸೇರಿದಂತೆ ಕೇಂದ್ರ ಪ್ರಾಯೋಜಿತ ವಸತಿ ಯೋಜನೆಗಳಿಗೆ ₹1,080 ಕೋಟಿ ಬರಬೇಕಾಗಿದ್ದು, ಕೇಂದ್ರ ನೀಡಿರುವುದು ಬರೀ ₹10 ಕೋಟಿ. ಅಪೌಷ್ಟಿಕತೆಯಿಂದಾಗಿ ಮತ್ತು ಆರೋಗ್ಯ ಸೌಲಭ್ಯಗಳ ಕೊರತೆಯಿಂದಾಗಿ ರಾಜ್ಯದಲ್ಲಿ ಹಸುಗೂಸುಗಳ ಸಾವಿನ ಪ್ರಮಾಣ ಏರುತ್ತಿರುವ ಆತಂಕಕಾರಿ ಮಾಹಿತಿಯೂ ಇದೆ. ಶಿಶುಮರಣ ಪ್ರಮಾಣವನ್ನು ಕಡಿಮೆ ಮಾಡಲು ನೆರವಾಗುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ₹1,547 ಕೋಟಿ ಬರಬೇಕಾಗಿದೆ. ಆ ಪೈಕಿ, ₹ 80 ಕೋಟಿ ಮಾತ್ರ ಬಂದಿದೆ. ಸಮಾಜದಲ್ಲಿ ಕಟ್ಟಕಡೆಯ ಮನುಷ್ಯನ ಅಳಲು ಆಲಿಸಿ, ಅಲಕ್ಷಿತರ ನೋವಿಗೆ ಸಾಂತ್ವನದ ಮುಲಾಮು ಹಚ್ಚಬೇಕಾದುದು ಸರ್ಕಾರಗಳ ಕರ್ತವ್ಯ. ದೈನ್ಯದ ಸ್ಥಿತಿಯಲ್ಲೇ ಬದುಕುತ್ತಿರುವ ತಳ ಸಮುದಾಯದವರ ಜೀವನಮಟ್ಟ ಸುಧಾರಿಸುವ ಯೋಜನೆಗಳಿಗೆ ಯಾವುದೇ ಸರ್ಕಾರವಾಗಲೀ ಆದ್ಯತೆ ಮೇರೆಗೆ ಅನುದಾನ ಬಿಡುಗಡೆ ಮಾಡುವ ಸಂಕಲ್ಪ ಮಾಡಬೇಕು. ಈ ರೀತಿಯ ಜನಕಲ್ಯಾಣ ಯೋಜನೆಗಳಿಗೂ ಸಕಾಲದಲ್ಲಿ ಅನುದಾನ ಬಿಡುಗಡೆ ಮಾಡದೇ ಇರುವುದಕ್ಕೆ ಕಾರಣ ಏನು ಎಂಬುದನ್ನು ಕರ್ನಾಟಕವನ್ನು ಪ್ರತಿನಿಧಿಸುವ ಕೇಂದ್ರ ಅರ್ಥಸಚಿವರೇ ಹೇಳಬೇಕು.

‍ಕೇಂದ್ರ ಸರ್ಕಾರ ನೀಡುವ ಅನುದಾನದ ಮೊತ್ತದ ನಿರ್ಧಾರವು ವರ್ಷದ ಮಧ್ಯದಲ್ಲೋ ಅಥವಾ ಅಂತ್ಯದಲ್ಲೋ ಆಗುವುದಿಲ್ಲ. ಕೇಂದ್ರ ಬಜೆಟ್‌ ಮಂಡನೆಯ ಪೂರ್ವದಲ್ಲೇ ರಾಜ್ಯದ ಹಣಕಾಸು ಸಚಿವಾಲಯದಿಂದ ವಿವರಣೆ ಪಡೆದು, ಯಾವ ಯೋಜನೆಗಳಿಗೆ ಎಷ್ಟು ಅನುದಾನ ಬೇಕು ಎಂದು ಲೆಕ್ಕ ಹಾಕಿ, ಸಂಸತ್‌ನಲ್ಲಿ ಒಪ್ಪಿಗೆಯನ್ನೂ ಪಡೆಯಲಾಗಿರುತ್ತದೆ. ಅದರ ಆಧಾರದ ಮೇಲೆಯೇ ರಾಜ್ಯ ಸರ್ಕಾರ ತನ್ನ ಬಜೆಟ್‌ ಸಿದ್ಧಪಡಿಸುತ್ತದೆ. ಹೀಗಿರುವಾಗ ಘೋಷಿತ ಕಾರ್ಯಕ್ರಮಗಳಿಗೆ ಅನುದಾನ ನೀಡುವಲ್ಲಿ ವಿಳಂಬ ಮಾಡುವುದು ಸರಿಯಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದಾಗ ನಾಡಿಗೆ ಆಗುವ ಪ್ರಯೋಜನ ಹೆಚ್ಚು ಎಂಬುದು ಜನರ ನಂಬಿಕೆ. ಲೋಕಸಭೆ ಚುನಾವಣೆ ವೇಳೆ ಇದೇ ಮಾತನ್ನು ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸಿದ್ದರು. ಆದರೆ, ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದ ಮೇಲೆ ಆಗಿರುವುದೇ ಮತ್ತೊಂದು.ಕೇಂದ್ರ ಮತ್ತು ರಾಜ್ಯದಲ್ಲಿ ಬೇರೆ ಬೇರೆ ಪಕ್ಷಗಳು ಅಧಿಕಾರದಲ್ಲಿದ್ದಾಗ ರಾಜ್ಯಕ್ಕೆ ಅನ್ಯಾಯವಾದರೆ ಆಗ ಪ್ರತಿಭಟಿಸುವ ಅವಕಾಶವಾದರೂ ಇರುತ್ತದೆ. ಎರಡೂ ಕಡೆ ಒಂದೇ ಪಕ್ಷ ಚುಕ್ಕಾಣಿ ಹಿಡಿದರೆ, ಅದರಲ್ಲೂ ಆ ಪಕ್ಷದ ವರಿಷ್ಠರು ಪ್ರಬಲರಾಗಿದ್ದರೆ, ದನಿ ಎತ್ತಿ ಅನುದಾನ ತರುವ ಅವಕಾಶ ಕ್ಷೀಣವಾಗುತ್ತದೆ ಎಂಬ ಅನುಮಾನ ರಾಜ್ಯದ ಜನರಲ್ಲಿ ಈಗ ಮೂಡಿದ್ದರೆ ಅದಕ್ಕೆ ಬಿಜೆಪಿಯೇ ಹೊಣೆ.ಇಂತಹ ಸಂದರ್ಭದಲ್ಲಿ, ಮುಖ್ಯಮಂತ್ರಿಯು ಅಸಹಾಯಕತೆಗೆ ಒಳಗಾಗುವ ಸಾಧ್ಯತೆಯೇ ಹೆಚ್ಚು. ರಾಜ್ಯದ ಆ ಪಕ್ಷದ ನಾಯಕರು ಲೋಕಸಭೆ ಚುನಾವಣೆಯಲ್ಲಿ ಬಿಜೆ‍ಪಿಯ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಣತೊಟ್ಟು, ಅದರಲ್ಲಿ ಯಶಸ್ಸನ್ನೂ ಕಂಡರು. ರಾಜ್ಯದ ಜನರ ಹಿತಕ್ಕೆ ತುರ್ತಾಗಿ ಸ್ಪಂದಿಸಬೇಕಾದ ಅಗತ್ಯಗಳ ಕುರಿತು ಅವರೀಗ ತಮ್ಮ ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಡಬೇಕಾದ ಅಗತ್ಯ ಎದುರಾಗಿದೆ. ಕೇಂದ್ರ ಮತ್ತು ರಾಜ್ಯದ ನಾಯಕರ ನಡುವೆ ಅಭಿಪ್ರಾಯಭೇದವೋ ಪ್ರತಿಷ್ಠೆಯೋ ಅಡ್ಡಗೋಡೆಯಾಗಿ ನಿಂತಿದ್ದರೆ ಅದನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು. ಪಕ್ಷದ ಒಳರಾಜಕೀಯವು ರಾಜ್ಯದ ಜನರ ಏಳಿಗೆಗೆ ಅಡ್ಡಿಯಾಗುವ ಹಂತ ತಲುಪಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT