ಸಮಪಾಲು ಆಕೆಯ ಹಕ್ಕು ಪುರುಷ ವ್ಯವಸ್ಥೆ ಅರಿಯಲಿ

7

ಸಮಪಾಲು ಆಕೆಯ ಹಕ್ಕು ಪುರುಷ ವ್ಯವಸ್ಥೆ ಅರಿಯಲಿ

Published:
Updated:
Prajavani

ದಿವಂಗತ ಅಂಬರೀಷ್‌ ರಾಜ್ಯದಲ್ಲಿ ಮನೆಮಾತಾಗಿದ್ದ ಜನಪ್ರಿಯ ಚಲನಚಿತ್ರ ನಟರಲ್ಲೊಬ್ಬರು. ನಟನೆಯ ಜೊತೆಗೆ ರಾಜಕಾರಣದಲ್ಲೂ ಸಾಕಷ್ಟು ಯಶಸ್ಸು ಕಂಡದ್ದು ಅವರದೇ ವಿಶೇಷ. ಅವರ ಸಹಧರ್ಮಿಣಿ ಸುಮಲತಾ, ದಕ್ಷಿಣ ಭಾರತದ ಬಹುಭಾಷಾ ತಾರೆಯಾಗಿದ್ದವರು. ಪ್ರೇಮವಿವಾಹದ ನಂತರ ಪತಿಯ ನೆರಳಾಗಿ ಜೀವಿಸಿದವರು. ಲೋಕಸಭಾ ಚುನಾವಣೆ ಸಮೀಪಿಸಿದೆ. ಹಳೆಯ ಮೈಸೂರು ಪ್ರದೇಶದಲ್ಲಿ ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಲೋಕಸಭಾ ಕ್ಷೇತ್ರಗಳ ಪೈಕಿ ಮಂಡ್ಯ ಪ್ರಮುಖ. ಅಂಬರೀಷ್‌ ರಾಜಕಾರಣ ಬಹುಮಟ್ಟಿಗೆ ಮಂಡ್ಯದೊಂದಿಗೆ ಬೆಸೆದಿತ್ತು. ಪುರುಷಪ್ರಧಾನ ವ್ಯವಸ್ಥೆಯಲ್ಲಿ ವಯಸ್ಸಿಗೆ ಬಂದ ಮಗನಿಗೇ ತಂದೆಯ ಪಟ್ಟ ಕಟ್ಟುವುದು ಅನೂಚಾನದ ರೂಢಿ. ಅಂಬರೀಷ್ ಪುತ್ರ ಅಭಿಷೇಕ್ ಗೌಡ ಒಲವು ಸದ್ಯಕ್ಕೆ ಚಲನಚಿತ್ರಗಳತ್ತ. ‘ಅಭಿಮಾನಿಗಳ’ ನಿರೀಕ್ಷೆ ಸುಮಲತಾ ಅವರತ್ತ ಸರಿದಿದೆ. ಈ ನಿಟ್ಟಿನಲ್ಲಿ ಆಕೆಯ ಆರಂಭಿಕ ಪ್ರತಿಕ್ರಿಯೆ ಕೂಡ ನಕಾರಾತ್ಮಕವಾಗಿಲ್ಲ. ರಾಜಕಾರಣಕ್ಕೆ ಧುಮುಕುವ ಕುರಿತು ಇನ್ನೂ ಅಂತಿಮವಾಗಿ ತೀರ್ಮಾನಿಸಿಲ್ಲವೆಂದು ಅವರು ಹೇಳಿದ್ದಾರೆ. ಕಾಂಗ್ರೆಸ್- ಜೆಡಿಎಸ್‌ ಮೈತ್ರಿ ಸರ್ಕಾರ ಲೋಕಸಭೆ ಚುನಾವಣೆಯಲ್ಲೂ ಸೀಟು ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಗಳು ಇನ್ನೂ ತೆರೆದಿವೆ. ಮಂಡ್ಯ ಲೋಕಸಭಾ ಕ್ಷೇತ್ರ ಮತ್ತು ಅಲ್ಲಿನ ವಿಧಾನಸಭೆ ಕ್ಷೇತ್ರಗಳ ಮೇಲೆ ಜೆಡಿಎಸ್‌ ಹಿಡಿತ ಭದ್ರ ಎಂಬುದು ನಿರ್ವಿವಾದದ ಸಂಗತಿ. ಜೆಡಿಎಸ್‌ನ ಪ್ರಥಮ ಕುಟುಂಬದ ಮೂರನೆಯ ತಲೆಮಾರು ರಾಜಕಾರಣ ಪ್ರವೇಶಿಸುವ ದಟ್ಟ ಸಾಧ್ಯತೆಗಳಿವೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರ್ ರಾಜಕಾರಣ ಮತ್ತು ಚಲನಚಿತ್ರ ಎರಡರಲ್ಲೂ ಆಸಕ್ತಿ ಪ್ರಕಟಿಸಿದ್ದಾರೆ. ಅವರನ್ನು ಮಂಡ್ಯ ಲೋಕಸಭಾ ಕ್ಷೇತ್ರದ ಹುರಿಯಾಳಾಗಿಸುವ ದಟ್ಟ ಸಾಧ್ಯತೆಗಳಿವೆ. ಈ ವಾಸ್ತವಗಳನ್ನು ಸುಮಲತಾ ಬಲ್ಲರು. ಮೈತ್ರಿ ಇಲ್ಲದೆ ಹೋಗಿದ್ದಲ್ಲಿ ಕಣಕ್ಕೆ ಇಳಿಯುವಂತೆ ಕಾಂಗ್ರೆಸ್ ಪಕ್ಷ ತಮ್ಮನ್ನು ಕೋರುತ್ತಿತ್ತು, ಅಂಬರೀಷ್ ರಾಜಕೀಯ ಪರಂಪರೆಯನ್ನು ಮುಂದುವರಿಸಲು ಅಭಿಮಾನಿಗಳಿಂದ ಒತ್ತಡವಿದೆ, ಅವರಿಗೆ ನಿರಾಸೆ ಮಾಡುವುದು ಕಷ್ಟ ಎಂದು ಆಕೆ ಹೇಳಿಕೊಂಡಿದ್ದಾರೆ.

ಈ ನಡುವೆ ಸುಮಲತಾ ಮಂಡ್ಯದ ಗೌಡತಿ ಅಲ್ಲ, ಮಂಡ್ಯಕ್ಕೆ ಅವರ ಕೊಡುಗೆಯೇನು ಎಂದು ಅವರ ಆಂಧ್ರ ಮೂಲವನ್ನು ಕೆದಕಲಾಗಿದೆ. ರಾಜಕೀಯ ಸಮೀಕರಣಗಳು ಕೂಡಿ ಬರದೆ ವಿರೋಧ ಮಾಡಿದರೆ ಅದಕ್ಕೆ ಅರ್ಥ ಉಂಟು. ಆದರೆ, ಮಂಡ್ಯದ ಗೌಡತಿ ಅಲ್ಲ ಎಂಬ ಕಾರಣಕ್ಕಾಗಿ ಮಹಿಳೆಯೊಬ್ಬರ ರಾಜಕೀಯ ಪ್ರವೇಶಕ್ಕೆ ಅಡಚಣೆ ಒಡ್ಡುವುದು ಸ್ವಸ್ಥ ಸಮಾಜದ ಲಕ್ಷಣವಲ್ಲ. ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಮೆರಿಕೆಯ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವರೆಂಬ ಸುದ್ದಿಗೆ ಹೆಮ್ಮೆಯಿಂದ ಬೀಗುವುದು ಡಾಂಬಿಕತನ ಆದೀತು. ಲಾಲೂ ಪ್ರಸಾದ್ ತಮ್ಮ ಪತ್ನಿ ರಾಬ್ಡಿದೇವಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದ್ದು ಅನಿವಾರ್ಯಗಳಿಗೆ ಕಟ್ಟುಬಿದ್ದು ಎಂಬುದು ನಿಜ. ಆದರೆ, ಬಿಹಾರಕ್ಕೆ ರಾಬ್ಡಿದೇವಿ ಕೊಡುಗೆಯೇನು ಎಂದು ಆಕೆಯನ್ನು ತಡೆ ಹಿಡಿದಿದ್ದರೆ ಅಡುಗೆ ಮನೆಯ ಬಂದಿಯಾಗಿದ್ದ ಮಹಿಳೆಯೊಬ್ಬರು ಬಿಹಾರ ವಿಧಾನಸಭೆಯಲ್ಲಿ ನಿಂತು ನಿತೀಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲ. ಆದರೆ ಲಾಲೂ-ರಾಬ್ಡಿ ಪುತ್ರ ತೇಜಸ್ವಿ ಯಾದವ್ ವಯಸ್ಸಿಗೆ ಬಂದ ನಂತರ ರಾಬ್ಡಿದೇವಿ ಎಂಬ ಮಹಿಳೆ ರಾಜಕಾರಣದಲ್ಲಿನ ತಮ್ಮ ಸ್ಥಾನವನ್ನು ಪುತ್ರನಾದರೂ ಪುರುಷನೊಬ್ಬನಿಗೆ ‘ತ್ಯಾಗ’ ಮಾಡಬೇಕಾಗಿ ಬಂದದ್ದು ಬಹುದೊಡ್ಡ ವ್ಯಂಗ್ಯ. ‘ಮಹಿಳೆ ಅರ್ಧ ಆಕಾಶದ ಒಡತಿ’ ಎಂದು ಚೀನಾ ಕ್ರಾಂತಿಯ ಹರಿಕಾರ ಮಾವೊ ತ್ಸೆ ತುಂಗ್ ಪ್ರತಿಪಾದಿಸಿದ್ದುಂಟು. ಆದರೆ, ಚೀನಾ ಸೇರಿದಂತೆ ಜಗತ್ತಿನ ಬಹುತೇಕ ರಾಜಕೀಯ ವ್ಯವಸ್ಥೆಗಳಲ್ಲಿ ಮಹಿಳೆಯನ್ನು ಅಂಚಿಗೆ ನೂಕಲಾಗಿದೆ. ಈ ಮಾತಿಗೆ ಭಾರತವೂ ಅಪವಾದ ಅಲ್ಲ. ರಾಜಕಾರಣದಲ್ಲಿ ಮಹಿಳೆಗೆ ಮೀಸಲಾತಿ ನೀಡಿದರೆ ತುಟಿ ರಂಗು ಹಚ್ಚಿದ ಮತ್ತು ಬಾಬ್ ಕಟ್ ಮಾಡಿಸಿಕೊಂಡ ವರ್ಗದ ಮಹಿಳೆಯರೇ ಅದರ ಲಾಭ ಪಡೆಯುತ್ತಾರೆ ಎಂದು ಕೆಲವು ಪ್ರಮುಖ ಪಕ್ಷಗಳ ನಾಯಕರು ಮಾಡಿದ ಟೀಕೆ ಪುರುಷಪ್ರಧಾನ ಮನಸ್ಥಿತಿಗೆ ಹಿಡಿದ ಕನ್ನಡಿ. ಹೀಗಾಗಿಯೇ ಶಾಸನಸಭೆಗಳಲ್ಲಿ 100ಕ್ಕೆ 33 ಸ್ಥಾನಗಳನ್ನು ಮಹಿಳೆಗೆ ಮೀಸಲಿಡಬೇಕೆಂಬ ಆಶಯ ಮಸೂದೆಯ ರೂಪ ತಳೆದರೂ ಸಂಸತ್ತಿನ ಅಂಗೀಕಾರ ಕನಸಾಗಿಯೇ ಉಳಿದು, ಕಡೆಗೆ ಅದರ ಅವಧಿ ತೀರಿ ಕೊನೆಯುಸಿರೆಳೆದದ್ದು ದುರಂತವೇ ಸರಿ. ಮಹಿಳೆಗೆ ಅರ್ಧಾಸನ ಬಿಟ್ಟುಕೊಡುವ ಇಚ್ಛಾಶಕ್ತಿ ಪ್ರಕಟಿಸುವ ಕಾಲಮಾನ ಮುಖಾಮುಖಿಯಾಗಿದೆ ಎಂಬುದು ನಿಷ್ಠುರ ಸತ್ಯ. ಪುರುಷರಿಂದಲೇ ಕಿಕ್ಕಿರಿದಿರುವ ನಮ್ಮ ರಾಜಕೀಯ ಪಕ್ಷಗಳು ಈ ಸತ್ಯವನ್ನು ಎಷ್ಟು ಬೇಗ ಅರಿತರೆ ಅಷ್ಟು ಒಳ್ಳೆಯದು.

ಬರಹ ಇಷ್ಟವಾಯಿತೆ?

 • 18

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !