ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಮೇಲ್ಸೇತುವೆ: ನಿರ್ವಹಣೆ ಲೋಪ ಜನರ ಸುರಕ್ಷೆ ಕುರಿತು ಅಸಡ್ಡೆ

Last Updated 30 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರಿನ ಹೊರವರ್ತುಲ ರಸ್ತೆಯಲ್ಲಿ ಇರುವ ಸುಮನಹಳ್ಳಿ ಮೇಲ್ಸೇತುವೆಯಲ್ಲಿ ದೊಡ್ಡ ರಂಧ್ರ ಸೃಷ್ಟಿಯಾಗಿದೆ. ಅದರ ಮೂಲಕ ಕೆಳಗಿನ ರಸ್ತೆಯನ್ನು ಕಾಣಬಹುದು! ಈ ಮೇಲ್ಸೇತುವೆ ಕೇವಲ 16 ವರ್ಷ ಹಳೆಯದು. ಈ ರೀತಿ ಆಗಿರುವುದು ವಾಹನ ಸವಾರರ ಸುರಕ್ಷತೆ ಕುರಿತು, ಮೇಲ್ಸೇತುವೆ ಕಾಮಗಾರಿಯ ಗುಣಮಟ್ಟದ ಬಗ್ಗೆ, ಕಾಲಕಾಲಕ್ಕೆ ಅದರ ನಿರ್ವಹಣೆ ಹೇಗಿತ್ತು ಎಂಬುದರ ಬಗ್ಗೆ ಪ್ರಶ್ನೆ
ಗಳನ್ನು ಮೂಡಿಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಈ ಮೇಲ್ಸೇತುವೆಯನ್ನು ನಿರ್ಮಿಸಿದೆ. ಈ ಮೇಲ್ಸೇತುವೆಯನ್ನು ಬಿಡಿಎ 2015ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹಸ್ತಾಂತರಿಸಿತು. ಈ ಮೇಲ್ಸೇತುವೆಯಲ್ಲಿ ತಳ ಕಾಣಿಸುವಂತಹ ಗುಂಡಿ ಕಾಣಿಸಿಕೊಂಡಿದ್ದು ಇದೇ ಮೊದಲ ಸಲ ಅಲ್ಲ. 2019ರಲ್ಲೂ ಸುಮಾರು 5 ಅಡಿ ಸುತ್ತಳತೆಯ ಗುಂಡಿ ಕಾಣಿಸಿಕೊಂಡಿತ್ತು. ಮೇಲ್ಸೇತುವೆಗಳು ಕನಿಷ್ಠ 80 ವರ್ಷಗಳಾದರೂ ಬಾಳಿಕೆ ಬರಬೇಕು. ಆದರೆ, ಬೆಂಗಳೂರಿನ ಮೇಲ್ಸೇತುವೆಗಳು ಪದೇ ಪದೇ ಶಿಥಿಲಗೊಳ್ಳುತ್ತಿವೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್ಎಚ್‌ಎಐ) ತುಮಕೂರು ರಸ್ತೆಯಲ್ಲಿ ನಿರ್ಮಿಸಿ, ನಿರ್ವಹಿಸುತ್ತಿರುವ ಮೇಲ್ಸೇತುವೆಯೂ ಶಿಥಿಲಗೊಂಡಿದೆ. ದುರಸ್ತಿ ಸಲುವಾಗಿ ಆ ಮೇಲ್ಸೇತುವೆಯಲ್ಲಿ 2021ರ ಡಿಸೆಂಬರ್‌ ಬಳಿಕ ಎರಡು ತಿಂಗಳ ಕಾಲ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಎಂಟು ತಿಂಗಳುಗಳಿಂದ ಈ ಮೇಲ್ಸೇತುವೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಇದನ್ನು ದುರಸ್ತಿ ಪಡಿಸಲು ಸಾಧ್ಯವಾಗದ ಕಾರಣ ಮೇಲ್ಸೇತುವೆಯನ್ನು ಶಿಥಿಲಗೊಂಡ ಕಡೆ ಕೆಡವಿ ಮತ್ತೆ ನಿರ್ಮಿಸುವುದೇ ಸೂಕ್ತ ಎಂದು ತಜ್ಞರು ಸಲಹೆ ನೀಡಿದ್ದಾರೆ. ಶಿವಾನಂದ ವೃತ್ತದ ಉಕ್ಕಿನ ಸೇತುವೆಯನ್ನು ಪ್ರಾಯೋಗಿಕ ಸಂಚಾರಕ್ಕೆ ಅನುವಾಗಿಸಿದ ಕೆಲವೇ ದಿನಗಳಲ್ಲಿ ದುರಸ್ತಿಗಾಗಿ ತಾತ್ಕಾಲಿಕವಾಗಿ ಮುಚ್ಚಬೇಕಾಯಿತು.

ಬಿಬಿಎಂಪಿಯು ನಗರದ ಎಲ್ಲ ಮೇಲ್ಸೇತುವೆಗಳು ಹಾಗೂ ಕೆಳಸೇತುವೆಗಳನ್ನು ತಜ್ಞರಿಂದ ತಪಾಸಣೆಗೆ ಒಳಪಡಿಸಲು 2020ರಲ್ಲಿ ತಟಸ್ಥ ಸಂಸ್ಥೆಯೊಂದನ್ನು ನೇಮಿಸಿತ್ತು. ಈ ಸಲುವಾಗಿ ₹ 5 ಕೋಟಿಯನ್ನು ವಿನಿಯೋಗಿಸಿತ್ತು. ತಪಾಸಣೆಗೆ ಒಳಪಡಿಸಲಾದ 29 ಕಾಂಕ್ರೀಟ್‌ ಸೇತುವೆಗಳ ಸಂರಚನೆ ಸದೃಢವಾಗಿದೆ. ಆದರೆ, ಸೇತುವೆಗಳ ನಿರ್ವಹಣೆಯು ನಿಯಮಿತವಾಗಿ ನಡೆಯುತ್ತಿಲ್ಲ ಎಂಬ ಅಂಶವನ್ನೂ ತಪಾಸಣಾ ವರದಿಯಲ್ಲಿ ಬೊಟ್ಟು ಮಾಡಲಾಗಿತ್ತು. ಸುಮನಹಳ್ಳಿ ಮೇಲ್ಸೇತುವೆ ಕಾಮಗಾರಿಯ ಗುಣಮಟ್ಟ ಕಳಪೆಯಾಗಿರುವ ಸಾಧ್ಯತೆಯೊಂದಿಗೆ ನಿಯಮಿತ ನಿರ್ವಹಣೆ ಇಲ್ಲದಿರುವುದು ಕೂಡ ಈ ಸೇತುವೆ ಶಿಥಿಲಗೊಳ್ಳುವುದಕ್ಕೆ ಕಾರಣ ಎಂಬುದನ್ನು ಅಲ್ಲಗಳೆಯಲಾಗದು.ಬಿಬಿಎಂಪಿ ಅಧೀನದ ಮೇಲ್ಸೇತುವೆ ಹಾಗೂ ಕೆಳಸೇತುವೆಗಳನ್ನು ಕೂಲಂಕಷವಾಗಿ ತಪಾಸಣೆಗೆ ಒಳಪಡಿಸಿದಂತೆ ಎನ್‌ಎಚ್‌ಎಐ ಹಾಗೂ ವಿವಿಧ ಇಲಾಖೆಗಳ ನಿರ್ವಹಣೆಯಲ್ಲಿರುವ ಮೇಲ್ಸೇತುವೆಗಳನ್ನೂ ಸಮಗ್ರವಾಗಿ ತಪಾಸಣೆಗೆ ಒಳಪಡಿಸಬೇಕಾದ ಅಗತ್ಯವಿದೆ.

ನಗರಗಳ ಸಂಚಾರ ದಟ್ಟಣೆ ನಿವಾರಣೆಗೆ ಮೇಲ್ಸೇತುವೆ ಮತ್ತು ಕೆಳಸೇತುವೆಗಳ ನಿರ್ಮಾಣವೊಂದೇ ಪರಿಹಾರ ಆಗಲಾರದು. ಸ್ಥಳೀಯ ಸಂಸ್ಥೆಗಳು ಈ ಸಂಬಂಧ ಸಮಗ್ರ ಯೋಜನೆಯನ್ನು ಮೊದಲು ರೂಪಿಸಬೇಕು. ಸಮರ್ಪಕವಾದ ಅಧ್ಯಯನ ನಡೆಸದೆ ಕೈಗೊಳ್ಳುವ ಅರೆಬರೆ ಪರಿಹಾರೋಪಾಯಗಳು ಸಮಸ್ಯೆ ಮತ್ತಷ್ಟು ಬಿಗಡಾಯಿಸುವಂತೆ ಮಾಡುತ್ತವೆ. ಇದಕ್ಕೆ ಬೆಂಗಳೂರಿನಲ್ಲೇ ನಿದರ್ಶನಗಳು ಸಿಗುತ್ತವೆ. ಕೆ.ಆರ್‌.ಪುರ, ಹೆಬ್ಬಾಳ, ಸಿಲ್ಕ್‌ಬೋರ್ಡ್‌, ರಿಚ್ಮಂಡ್‌ ರಸ್ತೆ, ಬಾಣಸವಾಡಿ ಮೇಲ್ಸೇತುವೆಗಳ ಬಳಿ ಪ್ರಯಾಣಿಕರು ನಿತ್ಯ ಎದುರಿಸುವ ಸಮಸ್ಯೆಗಳು ಇದಕ್ಕೆ ಜ್ವಲಂತ ಉದಾಹರಣೆಗಳು. ಮೇಲ್ಸೇತುವೆಗಳ ಅವೈಜ್ಞಾನಿಕ ವಿನ್ಯಾಸ, ಕಾಮಗಾರಿಗಳು ಕಾಲಮಿತಿಯಲ್ಲಿ ಪೂರ್ಣಗೊಳ್ಳದಿರುವುದು, ಕಾಮಗಾರಿ ಗುಣಮಟ್ಟ ಕಳಪೆಯಾಗಿರುವುದು, ನಿರ್ವಹಣೆಯ ಲೋಪಗಳು ಸಂಚಾರಕ್ಕೆ ಸಂಬಂಧಿಸಿದ ಅವ್ಯವಸ್ಥೆಯನ್ನು ಇನ್ನಷ್ಟು ಗೋಜಲುಗೊಳಿಸಿವೆ. ಈ ಎಲ್ಲ ನಿದರ್ಶನಗಳು ಕಣ್ಣ ಮುಂದೆ ಇದ್ದರೂ ನಮ್ಮ ನೀತಿ ನಿರೂಪಕರು ಸಮಸ್ಯೆಗಳ ನಿವಾರಣೆಗೆ ದೀರ್ಘಾವಧಿಯ ಪರಿಹಾರ ಕ್ರಮಗಳನ್ನು ಕಂಡುಕೊಳ್ಳುವುದಕ್ಕಿಂತ ಅಲ್ಪಾವಧಿಯ ತ್ವರಿತ ಪರಿಹಾರ ಕ್ರಮಗಳಿಗೆ ಒತ್ತು ನೀಡುತ್ತಿರುವುದು ವಿಪರ್ಯಾಸ. ಸರ್ಕಾರ ಹಾಗೂ ಬಿಬಿಎಂಪಿ ಇನ್ನಾದರೂ ಎಚ್ಚೆತ್ತು ನಗರದ ಸಂಚಾರ ಸಮಸ್ಯೆಗಳ ನಿವಾರಣೆಗೆ ಇಚ್ಛಾಶಕ್ತಿ ತೋರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT