ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಈದ್ಗಾ: ಸುಪ್ರೀಂ ಆದೇಶ ಸ್ವಾಗತಾರ್ಹ, ಸೌಹಾರ್ದ ಪರಂಪರೆ ಎತ್ತಿಹಿಡಿಯೋಣ

Last Updated 2 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಇನ್ನೂರು ವರ್ಷಗಳಿಂದ ರಂಜಾನ್‌ನಂತಹ ವಿಶೇಷ ಸಂದರ್ಭಗಳಲ್ಲಿ ಮುಸ್ಲಿಂ ಸಮುದಾಯದವರ ಸಾಮೂಹಿಕ ಪ್ರಾರ್ಥನೆ ಹಾಗೂ ಮಕ್ಕಳ ಕ್ರೀಡೆ, ಕುರಿ ವ್ಯಾಪಾರಕ್ಕೆ ಬಳಕೆಯಾಗುತ್ತಿದ್ದ ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಗಣೇಶೋತ್ಸವ ಆಚರಣೆಗೆ ಅವಕಾಶ ಕಲ್ಪಿಸಲು ಹೊರಟಿದ್ದ ರಾಜ್ಯ ಸರ್ಕಾರದ ನಡೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

ಗಣ‍‍ಪತಿ ಪ್ರತಿಷ್ಠಾಪನೆಗೆ ಅವಕಾಶ ನಿರಾಕರಿಸಿರುವ ಸುಪ್ರೀಂ ಕೋರ್ಟ್‌ನ ತ್ರಿದಸ್ಯ ಪೀಠವು ಯಥಾಸ್ಥಿತಿ ಕಾಪಾಡಿ ಕೊಳ್ಳುವಂತೆ ಆದೇಶಿಸಿರುವುದು ಸ್ವಾಗತಾರ್ಹ. ಈದ್ಗಾ ಮೈದಾನವು ಬಕ್ರೀದ್ ಮತ್ತು ರಂಜಾನ್ ಹಬ್ಬಗಳಂದು ಸಾಮೂಹಿಕ ಪ‍್ರಾರ್ಥನೆಗೆ ಹಾಗೂ ಮಕ್ಕಳ ಕ್ರೀಡಾ ಚಟುವಟಿಕೆಗೆ ಸೀಮಿತವಾಗಿರಬೇಕು ಎಂದು ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠ ಆದೇಶಿಸಿತ್ತು. ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು ಹೈಕೋರ್ಟ್‌ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿತ್ತು. ಇದನ್ನು ಆಲಿಸಿದ್ದ ದ್ವಿಸದಸ್ಯ ಪೀಠವು ‘ಈದ್ಗಾ ಮೈದಾನದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಅನುಮತಿ ಕೋರಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಸ್ವೀಕರಿಸಿರುವ ಮನವಿ ಪತ್ರಗಳನ್ನು ಆ. 31ರಿಂದ ಸೀಮಿತ ಅವಧಿಗೆ ಪರಿಗಣಿಸಿ ಕರ್ನಾಟಕ ಸರ್ಕಾರ ಸೂಕ್ತ ಆದೇಶ ಹೊರಡಿಸಬಹುದು’ ಎಂದುಹೇಳಿತ್ತು.

ವಿಭಾಗೀಯ ಪೀಠದ ಆದೇಶ ಪ್ರಶ್ನಿಸಿಸುಪ್ರೀಂ ಕೋರ್ಟ್‌ಗೆ ಕರ್ನಾಟಕ ವಕ್ಫ್‌ ಮಂಡಳಿ ಹಾಗೂ ಸೆಂಟ್ರಲ್‌ ಮುಸ್ಲಿಂ ಅಸೋಸಿಯೇಷನ್‌ ಮೇಲ್ಮನವಿ ಸಲ್ಲಿಸಿದ್ದವು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ಅಭಯ್‌ ಎಸ್‌. ಓಕಾ ಹಾಗೂ ಎಂ.ಎಂ.ಸುಂದರೇಶ್ ಅವರನ್ನು ಒಳಗೊಂಡ ಪೀಠವು ‘200 ವರ್ಷಗಳಿಂದ ಈ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡಿಲ್ಲ. ಇದನ್ನು ನೀವು ಸಹ ಒಪ್ಪಿಕೊಳ್ಳುತ್ತಿದ್ದೀರಿ. ಹಾಗಾದರೆ ಏಕೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬಾರದು’ ಎಂದು ಕರ್ನಾಟಕ ಸರ್ಕಾರ, ವಕ್ಫ್‌ ಮಂಡಳಿ ಹಾಗೂ ಇತರರನ್ನು ಪ್ರಶ್ನಿಸಿದ್ದಲ್ಲದೇ, ಬೇರೆ ಕಡೆ ಗಣೇಶೋತ್ಸವ ಆಚರಿಸುವಂತೆ ಸೂಚಿಸಿದೆ. ಧಾರ್ಮಿಕ ಕೇಂದ್ರಗಳನ್ನು ವಿವಾದದ ನೆಲೆಯಾಗಿಸಿ, ರಾಜಕೀಯ ಲಾಭ ಮಾಡಿಕೊಳ್ಳುವ ಇಂದಿನ ದುರ್ದಿನಗಳಲ್ಲಿ ನ್ಯಾಯಮೂರ್ತಿಗಳು ಎತ್ತಿರುವ ಪ್ರಶ್ನೆ ಹಾಗೂ ನೀಡಿರುವ ಆದೇಶವು ಭಾರತವು ಕಾಪಿಟ್ಟುಕೊಂಡು ಬಂದ ಧಾರ್ಮಿಕ ಸಹಿಷ್ಣುತೆ ಹಾಗೂ ಸೌಹಾರ್ದದ ಆಶಯಗಳ ಭಾಗವೇ ಆಗಿದೆ.ಹೀಗಿರುವಾಗ, ರಾಜ್ಯ ಸರ್ಕಾರವೇ ಈ ಸಂಬಂಧ ವಿವಾದದ ಭಾಗವಾಗಲು ಹೊರಟಿದ್ದು ಒಪ್ಪತಕ್ಕ ನಡೆಯಲ್ಲ. ಸಮುದಾಯಗಳನ್ನು ಪರಸ್ಪರ ಎತ್ತಿಕಟ್ಟುವಂತಹ ಯಾವುದೇ ಬಗೆಯ ನಡವಳಿಕೆಯು ಜವಾಬ್ದಾರಿಯುತ ಸರ್ಕಾರಕ್ಕೆ ಶೋಭೆ ತರುವಂತಹದ್ದಲ್ಲ.

ರಾಜಕೀಯ ಪಕ್ಷಗಳಿಗೆ ಅಸ್ಥಿರತೆ ಕಾಡಿದಾಗಲೆಲ್ಲ ಧಾರ್ಮಿಕ ವಿವಾದಗಳು ಆಸರೆಯಾಗುತ್ತಲೇ ಬಂದಿವೆ. 1990ರ ದಶಕದಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಅವಕಾಶ ಬೇಕೆಂದು ಬಿಜೆಪಿ ದೊಡ್ಡ ಮಟ್ಟದ ಹೋರಾಟ ನಡೆಸಿತ್ತು. ಹಿಂದೂ ಮತ್ತು ಮುಸ್ಲಿಂ ಸಮುದಾಯಗಳವರು ಪರ–ವಿರೋಧದ ನೆಲೆಯಲ್ಲಿ ಬೀದಿಗೆ ಇಳಿದಿದ್ದರಿಂದ ಘರ್ಷಣೆ ತೀವ್ರಗೊಂಡು ಗೋಲಿಬಾರ್ ನಡೆದಿತ್ತು. ನಾಲ್ವರು ಜೀವ ಕಳೆದುಕೊಂಡಿದ್ದರು. ಕರ್ಫ್ಯೂ ಹಾಗೂ ನಿಷೇಧಾಜ್ಞೆ ಹೇರಿದ್ದರಿಂದಾಗಿ ಹುಬ್ಬಳ್ಳಿ–ಧಾರವಾಡ ಅವಳಿ ನಗರಗಳಲ್ಲಿ ಜನ ಸಂಕಷ್ಟ ಅನುಭವಿಸಿದ್ದರು.

ವ್ಯವಹಾರ ಸ್ಥಗಿತಗೊಂಡು ವಾಣಿಜ್ಯನಗರಿ ತತ್ತರಿಸಿಹೋಗಿತ್ತು. ಆದರೆ ರಾಜಕೀಯವಾಗಿ ಇದು ಬಿಜೆಪಿಗೆ ಲಾಭ ತಂದುಕೊಟ್ಟಿತ್ತು. 1994ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಜಗದೀಶ ಶೆಟ್ಟರ್ ಎದುರು ಜನತಾದಳದಿಂದ ಸ್ಪರ್ಧಿಸಿದ್ದ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಲು ಅನುಭವಿಸಿದ್ದರು. ಈದ್ಗಾ ಮೈದಾನದ ವಿವಾದವೇ ಆ ಸೋಲಿಗೆ ಕಾರಣ ಎಂದು ವ್ಯಾಖ್ಯಾನಿಸಲಾಗಿತ್ತು. ಚುನಾವಣೆಯಲ್ಲಿ ಜನತಾದಳ ಬಹುಮತ ಪಡೆದು ಅಧಿಕಾರ ಹಿಡಿದಿತ್ತು. ಆಗಮುಖ್ಯಮಂತ್ರಿ
ಯಾಗಿದ್ದ ಎಚ್.ಡಿ. ದೇವೇಗೌಡ ಹಾಗೂ ಸಿ.ಎಂ. ಇಬ್ರಾಹಿಂ ಅವರು ದೀರ್ಘ ಅವಧಿಯ ಈ ವಿವಾದವನ್ನು ಸೌಹಾರ್ದದಿಂದ ಬಗೆಹರಿಸಿದ್ದರು.

ಬೆಂಗಳೂರಿನ ಚಾಮರಾಜಪೇಟೆಯ ಮೈದಾನವು ರಾಜಕೀಯ ಮೇಲಾಟಕ್ಕೆ ಬಳಕೆಯಾಗುವುದು ಬೇಡ. ಮೈದಾನಗಳು ಹಾಗೂ ಧಾರ್ಮಿಕ ಕೇಂದ್ರಗಳು ಮನುಷ್ಯ ಸಂಬಂಧಗಳನ್ನು ಬೆಸೆಯುವ ವೇದಿಕೆಗಳು. ಗಣೇಶೋತ್ಸವದಂತಹ ಆಚರಣೆಗಳು ವಿವಾದಗಳ ಸೃಷ್ಟಿಗೆ ಬಳಕೆಯಾಗಬಾರದು. ಸರ್ಕಾರ ಇಂತಹ ಪ್ರಕರಣಗಳನ್ನು ಸೌಹಾರ್ದದಿಂದ ಬಗೆಹರಿಸುವ ದಿಕ್ಕಿನತ್ತ ಹೆಜ್ಜೆ ಇಡಬೇಕೇ ವಿನಾ ರಾಜಕೀಯ ಲಾಭ–ನಷ್ಟದ ಲೆಕ್ಕಾಚಾರದಲ್ಲಿ ಯಾವುದೇ ಒಂದು ಸಮುದಾಯದ ಪರ ಅಥವಾ ವಿರುದ್ಧ ನಿಲುವು ತಳೆಯಬಾರದು.ಕರ್ನಾಟಕದ ಶಾಂತಿ–ಸೌಹಾರ್ದದ ಪರಂಪರೆಯನ್ನು ಸರ್ಕಾರ ಎತ್ತಿಹಿಡಿಯಬೇಕು. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ನಡೆಯುವುದು ಋಜುಮಾರ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT