ಶನಿವಾರ, ಸೆಪ್ಟೆಂಬರ್ 19, 2020
23 °C

ಸಂಪಾದಕೀಯ | ಹೆಣ್ಣುಮಕ್ಕಳಿಗೆ ಸಮಾನ ಆಸ್ತಿ ಹಕ್ಕು; ಗೊಂದಲ ಬಗೆಹರಿಸಿದ ತೀರ್ಪು

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಹಿಂದೂ ಅವಿಭಕ್ತ ಕುಟುಂಬದ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಇರುವ ಹಕ್ಕು ಸಮಾನ ಎಂಬುದಕ್ಕೆ ಕಾನೂನಿನ ಮಾನ್ಯತೆ ಸಿಕ್ಕಿ ಒಂದೂವರೆ ದಶಕವೇ ಸಂದಿದೆ. ಅಷ್ಟಾದರೂ ಈ ಕುರಿತು ಕೆಲವು ಗೊಂದಲಗಳು ಇದ್ದವು. ಸುಪ್ರೀಂ ಕೋರ್ಟ್‌ ಮಂಗಳವಾರ ನೀಡಿರುವ ಮಹತ್ವದ ತೀರ್ಪು ಈ ಗೊಂದಲಗಳನ್ನು ನಿವಾರಿಸಿದೆ.

ಇದನ್ನು ಕೇಳಲು: ಸಂಪಾದಕೀಯ | ಹೆಣ್ಣುಮಕ್ಕಳಿಗೆ ಸಮಾನ ಆಸ್ತಿ ಹಕ್ಕು; ಗೊಂದಲ ಬಗೆಹರಿಸಿದ ತೀರ್ಪು

ಕಾಯ್ದೆಯ ವ್ಯಾಖ್ಯಾನದಲ್ಲಿನ ಗೊಂದಲದಿಂದಾಗಿ, ಕೆಲವು ಹೆಣ್ಣುಮಕ್ಕಳಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿತ್ತು. ಇದರಿಂದ ತಮ್ಮ ಪಾಲಿನ ಪಿತ್ರಾರ್ಜಿತ ಆಸ್ತಿ ಹಕ್ಕುದಾರಿಕೆಯ ಪ್ರತಿಪಾದನೆ ಸಾಧ್ಯವಾಗದೆ, ಅನಿವಾರ್ಯವಾಗಿ ಅವರು ಕೋರ್ಟ್‌ ಮೆಟ್ಟಿಲೇರಿದ್ದರು. ಹೀಗಾಗಿ, ಹೈಕೋರ್ಟ್‌ಗಳು ಮತ್ತು ಕೆಳ ಹಂತದ ನ್ಯಾಯಾಲಯಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ಈಗ ಈ ಎಲ್ಲ ಪ್ರಕರಣಗಳನ್ನು ಆರು ತಿಂಗಳೊಳಗೆ ಇತ್ಯರ್ಥಪಡಿಸಬೇಕು ಎಂದು ಸಹ ನ್ಯಾಯಪೀಠವು ಸೂಚಿಸಿರುವುದು, ಸದೃಢ ಸಮಾಜಕ್ಕೆ ಅತ್ಯಗತ್ಯವಾದ ಮಹಿಳಾ ಸಬಲೀಕರಣಕ್ಕೆ ಪೂರಕವಾದ ನಡೆಯಾಗಿದೆ.

ಆಧುನಿಕ ಕಾಲಘಟ್ಟದಲ್ಲಿ ವಿವಿಧ ಕ್ಷೇತ್ರಗಳು ಹೆಣ್ಣುಮಕ್ಕಳಿಗೆ ಬಾಗಿಲು ತೆರೆದು, ಸಮಾನತೆಯ ಸಾಕಾರಕ್ಕೆ ಅವಕಾಶ ಮಾಡಿಕೊಟ್ಟರೂ ಅವರ ಆಸ್ತಿ ಹಕ್ಕುದಾರಿಕೆ ವಿಚಾರದಲ್ಲಿ‌ ಮಾತ್ರ ವಿಶಾಲವಾದ ನಿಲುವು ಸಾಧ್ಯವಾಗಿರಲಿಲ್ಲ. ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಸಮಾನ ಹಕ್ಕು ನೀಡಲೇಬೇಕು ಎಂಬ ಒತ್ತಾಯಕ್ಕೆ ಕೆಲವು ರಾಜ್ಯಗಳು, ಅದರಲ್ಲೂ ವಿಶೇಷವಾಗಿ ದಕ್ಷಿಣದ ರಾಜ್ಯಗಳು ಪೂರಕವಾಗಿ ಸ್ಪಂದಿಸಿದ್ದವು. ಅದರಂತೆ, ಹೆಣ್ಣುಮಕ್ಕಳು ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಪಾಲು ಪಡೆಯುವ ಹಕ್ಕನ್ನು ಕರ್ನಾಟಕದಲ್ಲಿ 1994ರಲ್ಲಿಯೇ ಕಲ್ಪಿಸಲಾಯಿತು. ಇದಕ್ಕೆ ಪೂರಕವಾಗಿ, ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ 2005ರಲ್ಲಿ 1956ರ ಹಿಂದೂ ಉತ್ತರಾಧಿಕಾರ ಕಾಯ್ದೆಗೆ ತಂದ ತಿದ್ದುಪಡಿಯು ದೇಶದಾದ್ಯಂತ ಜಾರಿಯಾಗಿ, ಭಾರತದ ಇತಿಹಾಸದಲ್ಲಿಯೇ ಕ್ರಾಂತಿಕಾರಕ ನಡೆ ಎನಿಸಿಕೊಂಡಿತು. ಆದರೆ, 2005ರ ತಿದ್ದುಪಡಿಗೆ ಮುನ್ನ ಜನಿಸಿದ ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕಿಲ್ಲ ಎಂಬ ರೀತಿಯಲ್ಲಿ ಕೆಲ ನ್ಯಾಯಾಲಯಗಳು ಕಾಯ್ದೆಯನ್ನು ವ್ಯಾಖ್ಯಾನಿಸಿದ್ದವು.

ಈ ಸಂಬಂಧ ಮೇಲ್ಮನವಿಯೊಂದರ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಹೆಣ್ಣು ಮತ್ತು ಗಂಡು ಮಕ್ಕಳಿಬ್ಬರೂ ಸಮಾನ ಎಂಬ ನಿಯಮವು 2005ಕ್ಕಿಂತ ಹಿಂದೆ ದಾಖಲಾದ ಪಾಲು ವಿವಾದ ಪ್ರಕರಣಗಳಿಗೂ ಅನ್ವಯವಾಗುತ್ತದೆ ಎಂದು ಖಚಿತಪಡಿಸಿತ್ತು. ಆದರೆ 2005ಕ್ಕೂ ಮುನ್ನ ತಂದೆ ಅಥವಾ ಮಗಳು ತೀರಿಕೊಂಡಿದ್ದಲ್ಲಿ ಈ ಕಾಯ್ದೆ ಅನ್ವಯವಾಗುತ್ತದೆಯೇ ಎಂಬ ಬಗ್ಗೆ ಎರಡು ನ್ಯಾಯಪೀಠಗಳು ಭಿನ್ನ ತೀರ್ಪು ನೀಡಿದ್ದವು. ಇದರಿಂದ ಈ ವಿಚಾರ ಬಗೆಹರಿಯದ ಪ್ರಶ್ನೆಯಾಗಿಯೇ ಉಳಿದಿತ್ತು.

ಇದೀಗ, 2005ರ ತಿದ್ದುಪಡಿ ಕಾಯ್ದೆಯು ಪೂರ್ವಾನ್ವಯ ಆಗಲಿದೆ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿರುವುದರಿಂದ, ತಿದ್ದುಪಡಿ ಕಾಯ್ದೆಗೆ ಮುನ್ನ ಅಥವಾ ಆನಂತರ ತಂದೆ ಜೀವಂತ ಇಲ್ಲದಿದ್ದರೂ ಮಗಳು ಸಮಾನ ಪಾಲು ಪಡೆಯಲು ಅರ್ಹಳಾಗಲಿದ್ದಾಳೆ. ಒಂದು ವೇಳೆ ಮಗಳು ಜೀವಂತವಾಗಿ ಇಲ್ಲದಿದ್ದರೂ ಆಕೆಯ ಮಕ್ಕಳು ತಮ್ಮ ತಾಯಿಗೆ ಸಿಗಬೇಕಾದ ಹಕ್ಕುಗಳನ್ನು ಕೇಳಬಹುದಾಗಿದೆ.

ಇದಿಷ್ಟೂ ಕಾಯ್ದೆಗೆ ಸಂಬಂಧಿಸಿದ ತಾಂತ್ರಿಕ ಅಂಶಗಳಾದರೆ, ತ್ರಿಸದಸ್ಯ ನ್ಯಾಯಪೀಠದ ನ್ಯಾಯಮೂರ್ತಿಗಳಲ್ಲಿ ಒಬ್ಬರಾದ ಅರುಣ್‌ ಮಿಶ್ರಾ ಅವರು ತೀರ್ಪು ನೀಡುವ ವೇಳೆ, ‘ಮಗಳು ಸದಾ ಮಗಳಾಗಿಯೇ ಇರುತ್ತಾಳೆ. ಆದರೆ, ಮಗ ಮದುವೆ ಆಗುವವರೆಗೆ ಮಾತ್ರ ಮಗನಾಗಿ ಇರುತ್ತಾನೆ’ ಎಂದು ಹೇಳಿರುವ ಮಾತು ಮನನೀಯ. ಮಹಿಳೆಗೆ ನೀಡುವ ಆಸ್ತಿ ಹಕ್ಕುದಾರಿಕೆಯು ಆಕೆಯನ್ನು ಆರ್ಥಿಕವಾಗಿ ಸಬಲೀಕರಿಸುವುದಷ್ಟೇ ಅಲ್ಲದೆ ಪುರುಷ ಪ್ರಧಾನ ವ್ಯವಸ್ಥೆಯನ್ನು ದುರ್ಬಲಗೊಳಿಸುವ, ಲಿಂಗ ತಾರತಮ್ಯ ನಿವಾರಿಸುವ, ಸಾಮಾಜಿಕ ಸಮಾನತೆ ಸಾಧಿಸುವಂತಹ ಮಹತ್ವದ ಆಯಾಮಗಳನ್ನೂ ಹೊಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು