ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸನಸಭೆಯಲ್ಲಿ ದಾಂದಲೆಗೆ ಅವಕಾಶ ಇಲ್ಲ: ಸುಪ್ರೀಂ ಕೋರ್ಟ್‌ ತೀರ್ಪು ಸ್ವಾಗತಾರ್ಹ

ಸಂಪಾದಕೀಯ
Last Updated 6 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಶಾಸನಸಭೆಯ ಕಲಾಪ‍ ನಡೆಯುವ ಸಂದರ್ಭದಲ್ಲಿ ಸದನದೊಳಗೆ ಶಾಸಕರು ನಡೆಸುವ ಹಿಂಸೆ ಅಥವಾ ದಾಂದಲೆಗೆ ವಾಕ್‌ ಸ್ವಾತಂತ್ರ್ಯ ಅಥವಾ ವಿಶೇಷ ಅಧಿಕಾರದ ಹೆಸರಿನಲ್ಲಿ ರಕ್ಷಣೆ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿರುವುದು ಸ್ವಾಗತಾರ್ಹ. ಚುನಾಯಿತ ಜನಪ್ರತಿನಿಧಿಗಳು ಸಮರ್ಪಕವಾದ ಮತ್ತು ಸಂಸದೀಯ ನಡವಳಿಕೆ ಹೊಂದಿರಬೇಕಾದ ಅಗತ್ಯ ಇದೆ ಎಂಬುದನ್ನೂ ಇದು ದೃಢಪಡಿಸಿದೆ. ದೇಶದ ದಂಡನಾ ಕಾನೂನುಗಳ ಅಡಿಯಲ್ಲಿ ಅಪರಾಧ ಎಂದು ಗುರುತಿಸಿದ ಕೃತ್ಯವನ್ನು ಶಾಸನಸಭೆಯ ಒಳಗೆ ನಡೆಸಿದರೂ ಅದನ್ನು ಅಪರಾಧ ಎಂದೇ ಪರಿಗಣಿಸಬೇಕು. ಆದರೆ, ಜನಪ್ರತಿನಿಧಿಗಳಲ್ಲಿ ಕೆಲವರು ಇಂತಹ ಅಪರಾಧವನ್ನು ಸದನದೊಳಗೆ ಎಸಗಿ ಶಿಕ್ಷೆಯಿಂದ ತಪ್ಪಿಸಿಕೊಂಡ ಉದಾಹರಣೆಗಳು ಇವೆ. ಶಾಸಕರು ನಡೆಸುವ ಹಿಂಸಾತ್ಮಕ ಕೃತ್ಯಗಳನ್ನು ನ್ಯಾಯಾಂಗದ ಪರಿಶೀಲನೆಗೆ ಒಳಪ‍ಡಿಸಿ, ತನಿಖೆ ಮತ್ತು ವಿಚಾರಣೆಗೆ ಒಳಪಡಿಸುವುದನ್ನು ಸಂಸದೀಯ ವಿಶೇಷಾಧಿಕಾರ ಎಂಬ ಹೆಸರಿನಲ್ಲಿ ತಡೆಯಲಾಗುತ್ತದೆ. ಶಾಸಕಾಂಗದ ವಿಶೇಷಾಧಿಕಾರವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿಲ್ಲ. ಜನಪ್ರತಿನಿಧಿಗಳು ತಮ್ಮ ಕಾನೂನುಬದ್ಧ ಕರ್ತವ್ಯ ನಿರ್ವಹಿಸುವುದಕ್ಕೆ ಮಾತ್ರ ಶಾಸಕಾಂಗದ ವಿಶೇಷಾಧಿಕಾರವು ಸೀಮಿತವಾಗಿರಬೇಕು ಎಂಬುದನ್ನು ಸ್ಪಷ್ಟಪಡಿಸುವ ಅಗತ್ಯ ಇದೆ. ಶಾಸನಸಭೆಯಲ್ಲಿ ಹಿಂಸಾಚಾರ ನಡೆಸಿದರೆ ಅದರ ಪರಿಣಾಮದಿಂದ ರಕ್ಷಣೆ ಪಡೆಯಲು ಈ ವಿಶೇಷಾಧಿಕಾರ ಬಳಕೆ ಆಗಬಾರದು.

ಕೇರಳ ವಿಧಾನಸಭೆಯಲ್ಲಿ 2015ರಲ್ಲಿ ಎಡ ಪ್ರಜಾಸತ್ತಾತ್ಮಕ ರಂಗದ (ಎಲ್‌ಡಿಎಫ್‌) ಸದಸ್ಯರು ದಾಂದಲೆ ನಡೆಸಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಈ ತೀರ್ಪು ನೀಡಿದೆ. ಈಗ ಆಡಳಿತಾರೂಢ ಮೈತ್ರಿಕೂಟವಾಗಿರುವ ಎಲ್‌ಡಿಎಫ್‌ ಆಗ ವಿರೋಧ ಪಕ್ಷವಾಗಿತ್ತು. ಆಗಿನ ಹಣಕಾಸು ಸಚಿವರ ಮೇಲೆ ಭ್ರಷ್ಟಾಚಾರದ ಆರೋಪ ಇತ್ತು. ಹಾಗಾಗಿ, ಅವರು ಬಜೆಟ್‌ ಮಂಡಿಸಲು ಅವಕಾಶ ನೀಡುವುದಿಲ್ಲ ಎಂದು ಎಲ್‌ಡಿಎಫ್‌ ಶಾಸಕರು ದಾಂದಲೆ ನಡೆಸಿದ್ದರು. ಸದನದಲ್ಲಿ ನಡೆಸಿದ್ದ ಈ ದಾಂದಲೆಯಿಂದ ಭಾರಿ ಹಾನಿಯೂ ಆಗಿತ್ತು. ದಾಂದಲೆ ಆರೋಪದಲ್ಲಿ ಆರು ಶಾಸಕರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಅವರ ಪೈಕಿ ಒಬ್ಬರು ಈಗ ಸಚಿವರಾಗಿದ್ದಾರೆ. ಎಲ್‌ಡಿಎಫ್‌ ಅಧಿಕಾರಕ್ಕೆ ಬಂದ ಬಳಿಕ ಈ ಪ್ರಕರಣವನ್ನು ಹಿಂದಕ್ಕೆ ಪಡೆಯಲು ಬಯಸಿತ್ತು. ಆದರೆ, ತಿರುವನಂತಪುರದ ಮುಖ್ಯ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಈ ಮನವಿಯನ್ನು ತಿರಸ್ಕರಿಸಿದರು. ಹೈಕೋರ್ಟ್‌ ಕೂಡ ಅದನ್ನು ಎತ್ತಿ ಹಿಡಿಯಿತು. ಹೈಕೋರ್ಟ್‌ ನಿರ್ಧಾರವನ್ನು ಪ್ರಶ್ನಿಸಿ ಕೇರಳ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯ ಆಧಾರದಲ್ಲಿ ಸುಪ್ರೀಂ ಕೋರ್ಟ್‌ ಈಗ ತೀರ್ಪು ನೀಡಿದೆ. ಹಾಗಾಗಿ, ಸಚಿವ ಮತ್ತು ಇತರರ ವಿರುದ್ಧ ತನಿಖೆ ನಡೆಸಲು ಅವಕಾಶವಾಗಲಿದೆ. ಸದನದ ಕಲಾಪದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದರಿಂದ ರಕ್ಷಣೆ ಒದಗಿಸುವ ಸಂವಿಧಾನದ 194 (2) ವಿಧಿಯನ್ನು ಸರ್ಕಾರ ಉಲ್ಲೇಖಿಸಿತ್ತು. ಈಗಿನ ಆದೇಶವು ಸಂವಿಧಾನದ ವಿಧಿಯ ವ್ಯಾಪ್ತಿ ಎಷ್ಟು ಎಂಬುದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲು ನೆರವಾಗಲಿದೆ.

ಶಾಸಕರ ನಡವಳಿಕೆಯು ಪ್ರತಿಭಟನೆಯ ಅಭಿವ್ಯಕ್ತಿಯಷ್ಟೇ ಆಗಿತ್ತು. ವಾಕ್‌ ಸ್ವಾತಂತ್ರ್ಯದ ಹಕ್ಕಿನಲ್ಲಿ ಈ ಅವಕಾಶ ಇದೆ ಎಂದು ಕೇರಳ ಸರ್ಕಾರವು ವಾದಿಸಿತ್ತು. ಕುರ್ಚಿಗಳನ್ನು ಎತ್ತಿ ಎಸೆಯುವುದು, ಮೇಜುಗಳನ್ನು ಮುರಿಯುವುದು, ಕಂಪ್ಯೂಟರ್‌ ಮತ್ತು ಧ್ವನಿವರ್ಧಕ ಉಪಕರಣಗಳನ್ನು ಎಸೆಯುವುದಕ್ಕೆ ಯಾವ ವಾಕ್‌ ಸ್ವಾತಂತ್ರ್ಯವೂ ಅವಕಾಶ ಕೊಡುವುದಿಲ್ಲ. ಹಾಗೆಯೇ, ಪ್ರಕರಣವನ್ನು ಹಿಂದಕ್ಕೆ ಪಡೆಯುವ ಸರ್ಕಾರದ ಅಧಿಕಾರದಲ್ಲಿ ನ್ಯಾಯಾಂಗವು ಮಧ್ಯಪ್ರವೇಶಿಸುವಂತಿಲ್ಲ ಎಂಬ ಸರ್ಕಾರದ ವಾದ ಕೂಡ ಸರಿಯಾದುದಲ್ಲ. ಪ್ರಕರಣವನ್ನು ಹಿಂದಕ್ಕೆ ಪಡೆಯುವ ಸರ್ಕಾರದ ನಿರ್ಧಾರವು ಸದುದ್ದೇಶದಿಂದ ಕೂಡಿದೆಯೇ, ಸಾರ್ವಜನಿಕ ಹಿತಾಸಕ್ತಿಯನ್ನು ಹೊಂದಿದೆಯೇ ಎಂಬುದನ್ನು ಪರಿಶೀಲನೆಗೆ ಒಳಪಡಿಸುವ ಅಧಿಕಾರ ನ್ಯಾಯಾಲಯಕ್ಕೆ ಇದೆ. ಶಾಸನಸಭೆಯ ಸದಸ್ಯರ ವಿಶೇಷಾಧಿಕಾರ ಮತ್ತು ಹಕ್ಕುಗಳ ಬಗ್ಗೆ ಇದ್ದ ಕೆಲವು ತಪ್ಪು ಗ್ರಹಿಕೆಗಳನ್ನು ಸುಪ್ರೀಂ ಕೋರ್ಟ್‌ನ ತೀರ್ಪು ಪರಿಹರಿಸಿದೆ. ಈ ತೀರ್ಪು ಭವಿಷ್ಯದ ಸಂಭಾವ್ಯ ಪ್ರಕರಣಗಳಿಗೆ ಮಾರ್ಗದರ್ಶಿ ಆಗಬೇಕು. ಆರು ಶಾಸಕರ ವಿರುದ್ಧದ ತನಿಖೆ ಕೂಡ ಉತ್ತಮ ಉದಾಹರಣೆ ಎನಿಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT