ಭಾನುವಾರ, ಜೂನ್ 26, 2022
26 °C

ಸಂಪಾದಕೀಯ | ಜಿಎಸ್‌ಟಿ ಕುರಿತ ‘ಸುಪ್ರೀಂ’ ತೀರ್ಪು; ಒಕ್ಕೂಟ ತತ್ವದ ಪುನರುಚ್ಚಾರ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ ಶಿಫಾರಸುಗಳು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಪಾಲಿಗೆ ಕಡ್ಡಾಯವಾಗಿ ಪಾಲಿಸಬೇಕಾದವು ಅಲ್ಲ, ಆ ಶಿಫಾರಸುಗಳು ‘ಮನವೊಲಿಕೆಯ ಸ್ವರೂಪ’ದವು ಮಾತ್ರ ಎಂದು ಸುಪ್ರೀಂ ಕೋರ್ಟ್‌ ಕಳೆದ ವಾರ ನೀಡಿರುವ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಇದು, ನಮ್ಮ ಸಂವಿಧಾನದ ಕೇಂದ್ರ ಬಿಂದುವಿನಲ್ಲಿ ಇರುವ ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಗಟ್ಟಿ ದನಿಯಲ್ಲಿ ಹೇಳಿದಂತೆ ಇದೆ. ಸಂವಿಧಾನದ 246(ಎ) ಹಾಗೂ 279ನೇ ವಿಧಿಗಳಲ್ಲಿ ಈಗಾಗಲೇ ಹೇಳಿರುವ ಮಾತುಗಳನ್ನು ಈ ತೀರ್ಪು ಮತ್ತೊಮ್ಮೆ ಹೇಳಿದೆ, ಅದನ್ನು ಇನ್ನಷ್ಟು ಸ್ಪಷ್ಟಪಡಿಸಿದೆ.

‘ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರವು ವಿಧಿಸುವ ಸರಕು ಮತ್ತು ಸೇವಾ ತೆರಿಗೆ ವಿಚಾರದಲ್ಲಿ ಕಾನೂನು ರೂಪಿಸಲು ಪ್ರತೀ ರಾಜ್ಯದ ಶಾಸನಸಭೆಗೆ ಅಧಿಕಾರ ಇದೆ’ ಎಂದು 246(ಎ) ವಿಧಿ ಹೇಳುತ್ತದೆ. ಜಿಎಸ್‌ಟಿ ಮಂಡಳಿಯ ರಚನೆ ವಿಚಾರವಾಗಿ ಪ್ರಕ್ರಿಯೆಗಳನ್ನು, ಮಂಡಳಿಯಲ್ಲಿ ಯಾರಿರಬೇಕು ಎಂಬುದನ್ನು, ಮಂಡಳಿಯ ಅಧಿಕಾರ ಹಾಗೂ ಜವಾಬ್ದಾರಿಗಳನ್ನು 279ನೇ ವಿಧಿಯು ಹೇಳುತ್ತದೆ. ಜಿಎಸ್‌ಟಿ ಮಂಡಳಿಯು ತೆರಿಗೆಯ ವಿವಿಧ ಆಯಾಮಗಳ ವಿಚಾರವಾಗಿ ‘ಕೇಂದ್ರ ಹಾಗೂ ರಾಜ್ಯಗಳಿಗೆ ಶಿಫಾರಸುಗಳನ್ನು ಮಾಡಬೇಕು’ ಎಂದು ಈ ವಿಧಿಯು ಸ್ಪಷ್ಟವಾಗಿ ಹೇಳಿದೆ. ಮಂಡಳಿಮಾಡುವ ಶಿಫಾರಸುಗಳನ್ನು ಪಾಲಿಸುವುದು ಕಡ್ಡಾಯ ಎಂದು ವಿಧಿಯು ಎಲ್ಲಿಯೂ ಹೇಳಿಲ್ಲ.

ಹೀಗಾಗಿ, ಮಂಡಳಿ ಮಾಡಿರುವ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಕಡ್ಡಾಯವಾಗಿ ‍ಪಾಲಿಸಬೇಕಾಗಿಲ್ಲ, ಜಿಎಸ್‌ಟಿಗೆ ಸಂಬಂಧಿಸಿದ ಕಾನೂನು ರೂಪಿಸುವ ವಿಚಾರದಲ್ಲಿ ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಮಾನ, ವಿಶಿಷ್ಟ ಅಧಿಕಾರ ಇದೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿರುವುದು ಜಿಎಸ್‌ಟಿ ಕುರಿತ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಇದೆ.

ಗುಜರಾತ್ ಹೈಕೋರ್ಟ್‌ ನೀಡಿದ್ದ ಆದೇಶವೊಂದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿ, ಸುಪ್ರೀಂ ಕೋರ್ಟ್‌ ಈ ತೀರ್ಪು ನೀಡಿದೆ. ಸಮುದ್ರ ಮಾರ್ಗವಾಗಿ ಸರಕು ಸಾಗಣೆಗೆ ಶೇಕಡ 5ರಷ್ಟು ತೆರಿಗೆ ವಿಧಿಸುವುದು ಅಸಾಂವಿಧಾನಿಕ ಎಂದು ಹೈಕೋರ್ಟ್ ಹೇಳಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿ, ಸುಪ್ರೀಂ ಕೋರ್ಟ್‌ ವಿಸ್ತೃತ ವಿಚಾರಗಳ ಬಗ್ಗೆ ಸ್ಪಷ್ಟನೆ ನೀಡಿದೆ. ಜಿಎಸ್‌ಟಿ ಕಾನೂನನ್ನು ಸಂವಿಧಾನದ ಚೌಕಟ್ಟಿನಲ್ಲಿ ಇರಿಸಿ, ಅದರ ಹಿನ್ನೆಲೆಯಲ್ಲಿ ಕೆಲವು ವಿವರಣೆಗಳನ್ನು ನೀಡಿದೆ. ‘ಒಂದು ದೇಶ, ಒಂದು ತೆರಿಗೆ’ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಸರಕುಗಳು ಮತ್ತು ಸೇವೆಗಳಿಗೆ ತೆರಿಗೆ ವಿಧಿಸುವ ತಮ್ಮ ಅಧಿಕಾರವನ್ನು ಬಿಟ್ಟುಕೊಟ್ಟವು. ಅವು ಹೊಸ ವ್ಯವಸ್ಥೆಯೊಂದನ್ನು ರೂಪಿಸಲು ಬಿಟ್ಟುಕೊಟ್ಟ ಅಧಿಕಾರವು ‍ಪೂರ್ತಿಯಾಗಿ ಅಳಿಸಿಹೋಗಿದೆ ಎಂದು ಭಾವಿಸಬೇಕಾಗಿಲ್ಲ. ಕೇಂದ್ರಕ್ಕೆ ರಾಜ್ಯಗಳ ಒಕ್ಕೂಟದಲ್ಲಿ ಇರುವಷ್ಟೇ ಪಾಲು ಏಕೀಕೃತ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಾಜ್ಯಗಳಿಗೂ ಇದೆ. ಜಿಎಸ್‌ಟಿ ಮಂಡಳಿಯಲ್ಲಿ ರಾಜ್ಯಗಳಿಗೆ ಮೂರನೆಯ ಎರಡರಷ್ಟು ಮತದಾನದ ಹಕ್ಕು ಇದೆ. ಕೇಂದ್ರಕ್ಕೆ ಇಲ್ಲಿ ಮೂರನೆಯ ಒಂದರಷ್ಟು ಮತದಾನದ ಹಕ್ಕು ಇದೆ.

ಜಿಎಸ್‌ಟಿ ವ್ಯವಸ್ಥೆಯಲ್ಲಿ ತಮಗೆ ಸಮಾನ ಹಕ್ಕುಗಳು ಇವೆ ಎಂಬ ಸತ್ಯವನ್ನು ರಾಜ್ಯಗಳಿಗೂ ಕೇಂದ್ರಕ್ಕೂ ತಿಳಿಹೇಳುವಂತೆ ಇದೆ ಈ ತೀರ್ಪು. ಜಿಎಸ್‌ಟಿ ಮಂಡಳಿಯು ‘ಸರಕು ಮತ್ತು ಸೇವೆಗಳಿಗೆ ರಾಷ್ಟ್ರ ಮಟ್ಟದಲ್ಲಿ ಸೌಹಾರ್ದದ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವ ಅಗತ್ಯದ ಆಧಾರದಲ್ಲಿ’ ಮುನ್ನಡೆಯಬೇಕು ಎಂದು 279(ಎ) ವಿಧಿಯು ಹೇಳುತ್ತದೆ. ಸುಪ್ರೀಂ ಕೋರ್ಟ್‌ನ ಈ ತೀರ್ಪಿನ ಕಾರಣದಿಂದಾಗಿ ಕೇಂದ್ರದ ಸೂಚನೆಯನ್ನು ರಾಜ್ಯಗಳು ತಿರಸ್ಕರಿಸುತ್ತವೆ, ಅವುಗಳನ್ನು ಅನುಷ್ಠಾನಕ್ಕೆ ತರಲು ನಿರಾಕರಿಸುತ್ತವೆ, ಆಗ ಜಿಎಸ್‌ಟಿ ವ್ಯವಸ್ಥೆಯೇ ಕುಸಿದುಬೀಳುತ್ತದೆ ಎಂದು ಅರ್ಥೈಸುವುದು ಸರಿಯಲ್ಲ. ಈ ತೀರ್ಪು ಹಾಗೂ ಅದರಲ್ಲಿ ಇರುವ ವಿವೇಕವು ಜಿಎಸ್‌ಟಿ ವ್ಯವಸ್ಥೆಯ ಎಲ್ಲ ಪಾಲುದಾರರು ಇನ್ನಷ್ಟು ಸೂಕ್ಷ್ಮವಾಗಿ ವರ್ತಿಸಿ, ಎಲ್ಲರ ಅನಿಸಿಕೆಗಳಿಗೆ ಬೆಲೆ ಕೊಡುವಂತೆ ಪ್ರೇರಣೆ ನೀಡಬೇಕು. ಜಿಎಸ್‌ಟಿ ವ್ಯವಸ್ಥೆಯಿಂದ ರಾಜ್ಯಗಳ ಆದಾಯಕ್ಕೆ ಆಗಬಹುದಾದ ನಷ್ಟಕ್ಕೆ ಪರಿಹಾರ ಕೊಡುವ ಅವಧಿಯು ಮುಂದಿನ ತಿಂಗಳು ಕೊನೆಗೊಳ್ಳಲಿದೆ. ಇಂತಹ ಸಂದರ್ಭದಲ್ಲಿ ಕೇಂದ್ರವು ರಾಜ್ಯಗಳ ಆತಂಕಗಳಿಗೆ ಹೆಚ್ಚು ಸಂವೇದನಾಶೀಲವಾಗಿ ಸ್ಪಂದಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು