ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ಬಾಡಿಗೆ ತಾಯ್ತನನಿಷೇಧ ಪುನರ್ವಿಮರ್ಶಿಸಿ

Last Updated 21 ಡಿಸೆಂಬರ್ 2018, 19:41 IST
ಅಕ್ಷರ ಗಾತ್ರ

ಬಾಡಿಗೆ ತಾಯ್ತನ ನಿಯಂತ್ರಿಸುವ ಉದ್ದೇಶದ ಬಾಡಿಗೆ ತಾಯ್ತನ ನಿಯಂತ್ರಣ ಮಸೂದೆಗೆ ಬುಧವಾರ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದೆ. ಬಾಡಿಗೆ ತಾಯ್ತನವನ್ನು ನಿಯಂತ್ರಿಸಬೇಕಾದದ್ದು ಅಗತ್ಯವಾದ ಕ್ರಮ. ಆದರೆ ಬಾಡಿಗೆ ತಾಯ್ತನ ನಿಯಂತ್ರಿಸುವ ಭರದಲ್ಲಿ ಹಲವು ಅವಾಸ್ತವಿಕ ಅಂಶಗಳು ಈ ಮಸೂದೆಯಲ್ಲಿ ಸೇರ್ಪಡೆಯಾಗಿವೆ. ಮಸೂದೆಯ ಉದ್ದೇಶ ಒಳ್ಳೆಯದೇ ಇರಬಹುದಾದರೂ ಇದರಲ್ಲಿ ದೋಷಗಳಿವೆ ಎಂಬುದೂ ನಿಜ.

ವಾಣಿಜ್ಯ ಬಾಡಿಗೆ ತಾಯ್ತನವನ್ನು ಈ ಮಸೂದೆ ಸಂಪೂರ್ಣ ನಿಷೇಧಿಸುತ್ತದೆ.ಎಂದರೆ ತನ್ನ ಸೇವೆಗಾಗಿ ಬಾಡಿಗೆ ತಾಯಿ ಹಣ ಪಡೆದುಕೊಳ್ಳುವಂತಿಲ್ಲ. ಮಕ್ಕಳಿಲ್ಲದ ದಂಪತಿಯ ನಿಕಟ ಸಂಬಂಧಿ ಮಾತ್ರ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಪರೋಪಕಾರದ ಬಾಡಿಗೆ ತಾಯ್ತನ ಸೇವೆ ನೀಡಲು ಮುಂದಾಗಬಹುದು ಎಂದು ಈ ಮಸೂದೆ ಹೇಳುತ್ತದೆ.

ಯಾವುದೇ ಆರ್ಥಿಕ ಲಾಭದ ನಿರೀಕ್ಷೆ ಇಲ್ಲದೆ ಸಂಬಂಧಿಕರಿಗೆ ಮಗು ಹೆತ್ತುಕೊಡುವಂತಹ ಪರೋಪಕಾರವನ್ನು ಮಹಿಳೆ ಮಾಡಬೇಕು ಎಂದು ನಿರೀಕ್ಷಿಸುವುದೂ ಹೆಣ್ಣಿನ ಮೇಲೆ ಮತ್ತೊಂದು ಬಗೆಯ ಒತ್ತಡ ಹೇರಿದಂತೆ. ಬಸಿರಿನ ಸಂಕಟ, ಹೆರಿಗೆ ನೋವುಗಳೆಲ್ಲವನ್ನೂ ಪರೋಪಕಾರಕ್ಕಾಗಿ ಸಹಿಸಬೇಕೆಂಬುದು ಇಂದಿನ ದಿನಮಾನಗಳಲ್ಲಿ ಕ್ಲಿಷ್ಟಕರ. ಜೊತೆಗೆ, ಈ ನಿಕಟ ಸಂಬಂಧಿ ‘ಯಾರು’ ಎಂಬುದನ್ನು ಈ ಮಸೂದೆ ವ್ಯಾಖ್ಯಾನಿಸಿಲ್ಲ.

ಹೀಗಾಗಿ, ವಾಣಿಜ್ಯ ಬಾಡಿಗೆ ತಾಯ್ತನ ನಿಷೇಧದಿಂದ ಸಮಸ್ಯೆ ಪರಿಹಾರವಾಗದು. ಬದಲಿಗೆ ಈ ವ್ಯವಹಾರಗಳು ಇನ್ನಷ್ಟು ಭೂಗತವಾಗುತ್ತವೆ ಎಂಬುದು ನಿಜ. ಇದರಿಂದ ಬಾಡಿಗೆ ತಾಯಂದಿರ ಸ್ಥಿತಿಗತಿಗಳು ಮತ್ತಷ್ಟು ಅಸುರಕ್ಷಿತವಾಗುತ್ತವೆ. 2002ರಲ್ಲಿ ರಾಷ್ಟ್ರದಲ್ಲಿ ಬಾಡಿಗೆ ತಾಯ್ತನಕ್ಕೆ ಅವಕಾಶ ನೀಡಿದ ನಂತರ ಇದು ನೂರಾರು ಕೋಟಿ ರೂಪಾಯಿಗಳ ಉದ್ಯಮವಾಗಿ ಅನಿಯಂತ್ರಿತವಾಗಿ ಬೆಳೆಯಿತು ಎಂಬುದು ನಿಜ.

ಸಂತಾನೋತ್ಪತ್ತಿ ನೆರವಿನ ಪ್ರಜನನ ತಂತ್ರಜ್ಞಾನ (ಎಆರ್‌ಟಿ) ಕ್ಲಿನಿಕ್‌ಗಳ ಮಾನ್ಯತೆ, ಉಸ್ತುವಾರಿ ನಿಯಂತ್ರಣಕ್ಕಾಗಿ 2005ರಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಮಾರ್ಗದರ್ಶಿ ಸೂತ್ರಗಳನ್ನು ನೀಡಿದ್ದರೂ ಅವುಗಳ ಉಲ್ಲಂಘನೆ ಪ್ರಮಾಣ ಹೆಚ್ಚಾಯಿತು. ಮಧ್ಯವರ್ತಿಗಳು ಹಾಗೂ ಕ್ಲಿನಿಕ್ ಮಾಲೀಕರಿಂದ ಬಡಮಹಿಳೆಯರು ಶೋಷಿತರಾಗುವುದು ಆತಂಕಕಾರಿ ವಿದ್ಯಮಾನವಾಯಿತು. ಸರಿಯಾದ ಕಾನೂನು ಇಲ್ಲದ್ದರಿಂದ ಬಾಡಿಗೆ ತಾಯಿಯಿಂದ ಪಡೆದ ಮಕ್ಕಳು ಅಂತರರಾಷ್ಟ್ರೀಯ ಕಾನೂನು ಜಟಿಲತೆಗಳಲ್ಲಿ ಸಿಕ್ಕಿಹಾಕಿಕೊಂಡ ಪ್ರಕರಣಗಳೂ ವರದಿಯಾದವು. ಇಂತಹ ಸನ್ನಿವೇಶದಲ್ಲಿ ಕಾನೂನು ಅತ್ಯವಶ್ಯವಾಗಿ ಬೇಕು.

ಬಾಡಿಗೆ ತಾಯ್ತನ, ಶೋಷಣೆಯಾಗುವುದನ್ನು ತಪ್ಪಿಸಲು ಆ ಪ್ರಕ್ರಿಯೆಯನ್ನು ಸುರಕ್ಷಿತವಾಗಿಸುವುದು ಇಲ್ಲಿ ಮುಖ್ಯ. ಇದಕ್ಕಾಗಿ ನಿಯಂತ್ರಣಗಳು ಬೇಕು. ಕರಾರುಗಳನ್ನು ಬಿಗಿಗೊಳಿಸುವುದೂ ಅಷ್ಟೇ ಮುಖ್ಯ. ಆದರೆ ಈಗ ರೂಪಿಸಿರುವ ಮಸೂದೆ ಸಮಸ್ಯಾತ್ಮಕವಾಗಿದ್ದು ಈ ಮಸೂದೆಯಲ್ಲಿನ ಅನೇಕ ಅಂಶಗಳನ್ನು ಮರುಅವಲೋಕಿಸಬೇಕು ಅಥವಾ ರದ್ದು ಮಾಡಬೇಕು ಎಂಬ ಒತ್ತಾಯಗಳು ಈ ಮೊದಲೇ ಕೇಳಿಬಂದಿದ್ದವು.

ಹೀಗಿದ್ದೂ, ಇದ್ಯಾವುದನ್ನೂ ಲೆಕ್ಕಿಸದೆ ಲೋಕಸಭೆಯಲ್ಲಿ ಈ ಮಸೂದೆಯನ್ನು ಅಂಗೀಕರಿಸಲಾಗಿದೆ. ಬಾಡಿಗೆ ತಾಯ್ತನಕ್ಕೆ ಆರ್ಥಿಕ ಪರಿಹಾರ ಮಾತ್ರವಲ್ಲ, ಬಾಡಿಗೆ ತಾಯಂದಿರಾಗಿ ನಿಯೋಜಿತವಾಗುವ ಮಹಿಳೆಯ ಹಕ್ಕುಗಳೂ ರಕ್ಷಣೆಯಾಗಬೇಕು ಎಂಬಂಥ ವಾದಗಳಿಗೆ ಈ ಮಸೂದೆಯಲ್ಲಿ ಮನ್ನಣೆ ಸಿಕ್ಕಿಲ್ಲ. ಬಂಜೆತನವನ್ನು ದಂಪತಿ ಸಾಬೀತುಪಡಿಸಲು ಅವರಿಗೆ ಮದುವೆಯಾಗಿ ಐದು ವರ್ಷಗಳಾಗಿರಬೇಕು ಎಂಬಂತಹ ಷರತ್ತು ಮಸೂದೆಯಲ್ಲಿರುವುದು ಸರಿಯಲ್ಲ ಎಂದು ಎನ್‌ಸಿಪಿ ಸಂಸತ್‌ ಸದಸ್ಯೆ ಸುಪ್ರಿಯಾ ಸುಳೆ ಹೇಳಿರುವುದು ಸರಿಯಾದದ್ದು.

ವಿಜ್ಞಾನ ಮತ್ತು ತಂತ್ರಜ್ಞಾನ ಈ ಮಟ್ಟಿಗೆ ಬೆಳೆದಿರುವ ಈ ಕಾಲದಲ್ಲಿ ಬಾಡಿಗೆ ತಾಯಿಯಿಂದ ಮಗು ಪಡೆದುಕೊಳ್ಳಲು ದಂಪತಿ ಯಾಕೆ ಇಷ್ಟು ಕಾಲ ಕಾಯಬೇಕು? ಎಂಬುದನ್ನು ಪರಿಶೀಲಿಸುವುದು ಅಗತ್ಯವಿದೆ. ಕುಟುಂಬದ ಪರಿಕಲ್ಪನೆಗಳು ಬದಲಾಗುತ್ತಿರುವ ಇಂದಿನ ಸಂದರ್ಭದಲ್ಲಿ ಕುಟುಂಬ ಎಂದರೆ ಹೀಗೇ ಇರಬೇಕು ಎಂಬುದನ್ನೂ ಈ ಮಸೂದೆ ಸೂಚಿಸುವಂತಿದೆ. ಅವಿವಾಹಿತರು, ವಿಚ್ಛೇದಿತರು ಸೇರಿದಂತೆ ಏಕಪೋಷಕರು (ಸಿಂಗಲ್ ಪೇರೆಂಟ್), ಲಿವ್ ಇನ್ ಹಾಗೂ ಸಲಿಂಗ ದಂಪತಿಗಳಿಗೆ ಬಾಡಿಗೆ ತಾಯಂದಿರ ಮೂಲಕ ಮಕ್ಕಳು ಪಡೆಯುವ ಹಕ್ಕನ್ನು ನಿರಾಕರಿಸಲಾಗಿದೆ. ಲಿವ್ ಇನ್ ದಂಪತಿಯ ಹಕ್ಕುಗಳನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿದೆ ಎಂಬುದು ನಮಗೆ ನೆನಪಿರಬೇಕು.

ಭಾರತೀಯ ಬಾಡಿಗೆ ತಾಯಂದಿರನ್ನು ಬಳಸಿಕೊಳ್ಳಲು ವಿದೇಶಿ ಪ್ರಜೆಗಳಿಗೂ ಈ ಮಸೂದೆ ಪ್ರಕಾರ ನಿಷೇಧವಿದೆ. ತಮ್ಮದೇ ಮಗು ಹೆರಲು ಸಾಧ್ಯವಿರದ, ಕಾನೂನು ಪ್ರಕಾರ ವಿವಾಹವಾದ ಭಾರತೀಯ ದಂಪತಿ ಬಿಟ್ಟರೆ ಬೇರೆ ಯಾರಿಗೂ ಬಾಡಿಗೆ ತಾಯ್ತನದ ಅವಕಾಶ ಈ ಮಸೂದೆ ಪ್ರಕಾರ ಇಲ್ಲ. ಆದರೆ ಅವಿವಾಹಿತರಿಗೂ ಮಗು ದತ್ತು ಪಡೆದುಕೊಳ್ಳಲು ಭಾರತದ ಕಾನೂನಿನಲ್ಲಿ ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT