ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ತೈಲದ ಮೇಲಿನ ತೆರಿಗೆ ವಿಚಾರ ಕ್ಷುಲ್ಲಕ ರಾಜಕೀಯ ಸರಿಯಲ್ಲ

Last Updated 29 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ಬಿಜೆಪಿಯೇತರ ಪಕ್ಷಗಳ ಆಳ್ವಿಕೆ ಇರುವ ರಾಜ್ಯ ಸರ್ಕಾರಗಳು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್‌) ಕಡಿತ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಆದರೆ, ಈ ಕರೆಯು ಬಿಜೆಪಿಯೇತರ ಪಕ್ಷಗಳು ಮತ್ತು ಮುಖ್ಯಮಂತ್ರಿಗಳಲ್ಲಿ ಆಕ್ರೋಶ ಮೂಡಿಸಿದೆ. ವ್ಯಾಟ್‌ ಕಡಿತ ಮಾಡದ ಆರು ರಾಜ್ಯಗಳನ್ನು ಪ್ರಧಾನಿ ಹೆಸರಿಸಿದ್ದಾರೆ. ಆ ರಾಜ್ಯ ಸರ್ಕಾರ
ಗಳನ್ನು ತೀವ್ರವಾಗಿ ಟೀಕಿಸಿದ್ದಾರೆ. ಆದರೆ, ಪ್ರಧಾನಿಯವರ ಮಾತು ಪೂರ್ಣ ಸತ್ಯ ಅಲ್ಲ. ಅವರ ಟೀಕೆಯು ನೈತಿಕವಾಗಿ ಹಾಗೂ ರಾಜಕೀಯವಾಗಿ ದುರ್ಬಲವಾಗಿದೆ. 2020ರ ಮಾರ್ಚ್‌–ಮೇ ಅವಧಿಯಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕವನ್ನು ಕ್ರಮವಾಗಿ ಶೇ 44ರಷ್ಟು ಮತ್ತು ಶೇ 69ರಷ್ಟು ಹೆಚ್ಚಿಸಿದೆ. ವಿರೋಧಾಭಾಸ ಎಂದರೆ, ಈ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ದರ ಕುಸಿಯುತ್ತಲೇ ಇತ್ತು. 2020–21ರಲ್ಲಿ ಪೆಟ್ರೋಲಿಯಂನಿಂದ ಕೇಂದ್ರವು ಪಡೆಯುತ್ತಿದ್ದ ವರಮಾನದಲ್ಲಿ ಹೆಚ್ಚಳವಾಗಿದ್ದರೆ, ರಾಜ್ಯಗಳ ವರಮಾನದಲ್ಲಿ ಕುಸಿತವಾಗಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರವು ಕಳೆದ ನವೆಂಬರ್‌ನಲ್ಲಿ ಕಡಿತ ಮಾಡಿದೆ. ಜನರ ಹೊರೆ ತಗ್ಗಿಸುವುದಕ್ಕಾಗಿ ಹೀಗೆ ಮಾಡಲಾಗಿದೆ ಎಂದು ಕೇಂದ್ರ ಹೇಳಿಕೊಂಡಿದೆ. ಆದರೆ, ಕೆಲವು ರಾಜ್ಯಗಳ ವಿಧಾನಸಭೆಗೆ ಚುನಾವಣೆ ಹತ್ತಿರವಿತ್ತು ಎಂಬುದೇ ನಿಜವಾದ ಕಾರಣ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಏರಿಕೆ ಆಗುತ್ತಲೇ ಇದ್ದರೂ ಉತ್ತರಪ್ರದೇಶ ಸೇರಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಮುಂಚಿನ 137 ದಿನ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಸ್ಥಿರವಾಗಿಯೇ ಇದ್ದವು. ಈ ಹಿಂದೆ, ಪಶ್ಚಿಮ ಬಂಗಾಳ, ಗುಜರಾತ್‌ ಮತ್ತು ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುಂಚೆಯೂ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಸಿರಲಿಲ್ಲ. ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ, ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಹಲವು ಬಾರಿ ಹೆಚ್ಚಳವಾಗಿದೆ. ಹಾಗಾಗಿ, ಕೇಂದ್ರವು ತೆರಿಗೆಯನ್ನು ಕಡಿತ ಮಾಡಿದ್ದು ಮತ್ತು ದರ ಏರಿಸದೇ ಇದ್ದದ್ದು ಚುನಾವಣಾ ರಾಜಕೀಯದ ತಂತ್ರವೇ ಹೊರತು ಜನರ ಹೊರೆ ತಗ್ಗಿಸುವ ಕಾಳಜಿಯಿಂದ ಅಲ್ಲ ಎಂಬುದು ನಿಚ್ಚಳ. ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತವಾಗಿಸಿ ಬಹಳ ಕಾಲ ಕಳೆದಿದೆ. ಅಂದರೆ, ಕಚ್ಚಾ ತೈಲ ದರದ ಆಧಾರದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರವು ನಿಗದಿಯಾಗಬೇಕು. ಇದು ಸರ್ವ ಋತುವಿಗೂ ಅನ್ವಯವಾಗುವ ನಿಯಮ. ಆದರೆ, ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ದರ ಇಳಿಕೆಯಾಗುತ್ತಿದ್ದಾಗಲೂ ಭಾರತದ ಯಾವುದೇ ರಾಜ್ಯದಲ್ಲಿ ಚುನಾವಣೆ ಇಲ್ಲದ ಸಂದರ್ಭದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಏರಿಕೆ ಆಗಿದೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ದರದಲ್ಲಿ ತೀವ್ರ ಏರಿಕೆ ಆಗುತ್ತಿದ್ದಾಗಲೂ ಯಾವುದೋ ರಾಜ್ಯದಲ್ಲಿ ಚುನಾವಣೆ ಇದ್ದಾಗ ಇಂಧನ ದರದಲ್ಲಿ ಯಾವ ಏರಿಕೆಯೂ ಆಗದ ಪ್ರಹಸನಕ್ಕೆ ಭಾರತದ ಜನರು ಸಾಕ್ಷಿಯಾಗಿದ್ದಾರೆ.

ಈಗ, ಬಿಜೆಪಿಯೇತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳು ಪೆಟ್ರೋಲ್‌, ಡೀಸೆಲ್‌ ಮೇಲಿನ ವ್ಯಾಟ್‌ ಕಡಿತ ಮಾಡಬೇಕು ಎಂದು ಪ್ರಧಾನಿ ಹೇಳಿರುವುದು ರಾಜಕೀಯ ಅಲ್ಲ, ನೈಜವಾದ ಕಾಳಜಿ ಎಂದು ಭಾವಿಸಲು ಯಾವ ಕಾರಣವೂ ಇಲ್ಲ. ಗುಜರಾತ್‌ ವಿಧಾನಸಭೆಗೆ ಈ ವರ್ಷ ಚುನಾವಣೆ ನಡೆಯಲಿದೆ ಎಂಬುದನ್ನು ಪ್ರಧಾನಿಯವರ ಮಾತು ನೆನಪಿಸಿದೆ ಅಷ್ಟೇ.ಜಿಎಸ್‌ಟಿ ಜಾರಿಗೆ ಬಂದ ಬಳಿಕ, ಇಂಧನ, ಮದ್ಯದ ಮೇಲಿನ ತೆರಿಗೆ ಮತ್ತು ಮುದ್ರಾಂಕ ಸುಂಕವಷ್ಟೇ ರಾಜ್ಯ ಸರ್ಕಾರಗಳ ಮುಖ್ಯ ವರಮಾನಗಳಾಗಿ ಉಳಿದಿವೆ. ಕೋವಿಡ್‌ ಸಾಂಕ್ರಾಮಿಕ ತಂದ ಸಂಕಷ್ಟವು ರಾಜ್ಯಗಳ ಆರ್ಥಿಕ ಸ್ಥಿತಿಯನ್ನು ಶೋಚನೀಯವಾಗಿಸಿದೆ. ಜಿಎಸ್‌ಟಿ ಪರಿಹಾರದ ಮೊತ್ತವನ್ನು ಕೇಂದ್ರವು ರಾಜ್ಯಗಳಿಗೆ ಸಮರ್ಪಕವಾಗಿ ಪಾವತಿಸಿಲ್ಲ. ಕಳೆದ ವರ್ಷದ ಎಂಟು ತಿಂಗಳ ಜಿಎಸ್‌ಟಿ ಪ‍ರಿಹಾರವನ್ನು ಮಾತ್ರ ರಾಜ್ಯಗಳಿಗೆ ಪಾವತಿಸಲಾಗಿದೆ. ₹ 78,704 ಕೋಟಿ ಬಾಕಿ ಇದೆ ಎಂದು ಕೇಂದ್ರವೇ ಒಪ್ಪಿಕೊಂಡಿದೆ.

ಕೋವಿಡ್‌ ಸ್ಥಿತಿಗತಿಯ ಬಗ್ಗೆ ಚರ್ಚಿಸುವುದಕ್ಕಾಗಿ ಆಯೋಜನೆಗೊಂಡಿದ್ದ ಸಭೆಯಲ್ಲಿ ಮೋದಿಯವರು ರಾಜ್ಯಗಳನ್ನು ಟೀಕಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ತಮ್ಮ ನಿಲುವನ್ನು ಪ್ರತಿಪಾದಿಸಲು ಅವಕಾಶ ಇಲ್ಲದಲ್ಲಿ ಪ್ರಧಾನಿಯವರು ಸಮರ್ಥನೀಯವಲ್ಲದ ಆರೋಪಗಳನ್ನು ಮಾಡಿರುವುದು ಸರಿಯಲ್ಲ. ಪ್ರಧಾನಿಯವರು ಹೇಳಿರುವಂತೆ ಪೆಟ್ರೋಲ್‌–ಡೀಸೆಲ್‌ ದರದಲ್ಲಿ ಬಿಜೆಪಿ ಆಳ್ವಿಕೆಯ ರಾಜ್ಯಗಳು ಮತ್ತು ಬಿಜೆಪಿಯೇತರ ರಾಜ್ಯಗಳಲ್ಲಿ ಭಾರಿ ವ್ಯತ್ಯಾಸವೇನೂ ಇಲ್ಲ. ದರ ಕಡಿತದ ಪ್ರಯೋಜನವನ್ನು ಜನರಿಗೆ ವರ್ಗಾಯಿಸದೇ ಇರುವ ಮೂಲಕ ಬಿಜೆಪಿಯೇತರ ಪಕ್ಷಗಳ ಸರ್ಕಾರಗಳು ಜನರಿಗೆ ಅನ್ಯಾಯ ಮಾಡಿವೆ ಎಂದು ಮೋದಿ ಆರೋಪಿಸಿದ್ದಾರೆ. ಆದರೆ, ಇಂತಹ ಅನ್ಯಾಯವನ್ನು ಕೇಂದ್ರವೇ ಬಹಳ ಕಾಲದಿಂದ ಮಾಡಿಕೊಂಡು ಬಂದಿದೆ. ಪ್ರಧಾನಿಯವರೇ ಹೇಳಿದಂತೆ ‘ಸಹಕಾರಿ ಒಕ್ಕೂಟ’ ಎಂಬುದು ಇಲ್ಲಿ ಅನ್ವಯವೇ ಆಗುವುದಿಲ್ಲ. ಈ ವಿಚಾರದಲ್ಲಿ ಮತ್ತು ಇತರ ಹಲವು ವಿಚಾರಗಳಲ್ಲಿ ಒಕ್ಕೂಟದ ತತ್ವಗಳನ್ನು ಕೇಂದ್ರವು ಉಲ್ಲಂಘನೆ ಮಾಡಿದೆ. ದರ ಕಡಿತಕ್ಕೆ ಸಂಬಂಧಿಸಿ ಪ್ರಧಾನಿಯವರು ರಾಜಕೀಯ ಹೇಳಿಕೆ ನೀಡಿದ್ದಾರೆಯೇ ಹೊರತು ಉಪಯುಕ್ತ ಸಲಹೆ ಅಂತೂ ಖಂಡಿತ ಅಲ್ಲ. ಪೆಟ್ರೋಲಿಯಂ ಉತ್ಪನ್ನಗಳ ದರ ಕಡಿತ ಆಗಲೇಬೇಕು. ಆದರೆ, ಅದರ ದೊಡ್ಡ ಹೊಣೆಗಾರಿಕೆ ಕೇಂದ್ರದ ಮೇಲೆಯೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT