ಶುಕ್ರವಾರ, ಆಗಸ್ಟ್ 12, 2022
21 °C

ಟೆನಿಸ್‌ ಅಂಗಳದಿಂದ ಹೊಮ್ಮಿದ ದಿಟ್ಟ ಸಂದೇಶ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಜಪಾನಿನ ನವೊಮಿ ಒಸಾಕಾ ಈಚೆಗೆ ಅಮೆರಿಕ ಓಪನ್ ಟೆನಿಸ್‌ ಪ್ರಶಸ್ತಿಗೆ ಮುತ್ತಿಕ್ಕಿದಾಗ ನ್ಯೂಯಾರ್ಕ್‌ನ ಆರ್ಥರ್ ಆ್ಯಶ್ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಯಲ್ಲಿ ಚಪ್ಪಾಳೆ ತಟ್ಟಿದ್ದು ಬೆರಳೆಣಿಕೆಯಷ್ಟು ಜನ ಮಾತ್ರ. ಕೊರೊನಾ ವೈರಾಣು ಸೃಷ್ಟಿಸಿರುವ ಬಿಕ್ಕಟ್ಟಿನ ನಡುವೆ ಪ್ರೇಕ್ಷಕರಿಲ್ಲದ ಅಂಗಳದಲ್ಲಿ ನಡೆದ ಈ ಟೂರ್ನಿಯಲ್ಲಿ ನವೊಮಿ ಅವರ ಸುಂದರ ಆಟಕ್ಕಿಂತಲೂ ಜನಾಂಗೀಯ ದ್ವೇಷದ ವಿರುದ್ಧ ಅವರು ಕೊಟ್ಟ ದಿಟ್ಟ ಸಂದೇಶ ವಿಶ್ವದ ಕೋಟ್ಯಂತರ ಜನರ ಮನಗೆದ್ದಿತು. ಅಮೆರಿಕದಲ್ಲಿ ಜನಾಂಗೀಯ ದ್ವೇಷಕ್ಕೆ ಬಲಿಯಾದ ಏಳು ಜನರಿಗೆ ಅವರು ಗೌರವ ಸಲ್ಲಿಸಿದ ರೀತಿಯು ಮೆಚ್ಚುಗೆಗೆ ಪಾತ್ರವಾಯಿತು. ಮೊದಲ ಸುತ್ತಿನಿಂದ ಫೈನಲ್‌ ಪಂದ್ಯದವರೆಗೂ ಒಟ್ಟು ಏಳು ಪಂದ್ಯಗಳಲ್ಲಿ ಒಬ್ಬೊಬ್ಬ ವ್ಯಕ್ತಿಯ ಹೆಸರು ಇದ್ದ ಮಾಸ್ಕ್ ಧರಿಸಿ ಅಂಕಣಕ್ಕಿಳಿದಿದ್ದು 22 ವರ್ಷದ ನವೊಮಿ ಅವರ ದಿಟ್ಟತನದ ಪ್ರತೀಕವಾಗಿತ್ತು. ಈಚೆಗೆ ಅಮೆರಿಕದಲ್ಲಿ ಪೊಲೀಸ್ ದೌರ್ಜನ್ಯದಲ್ಲಿ ಮೃತಪಟ್ಟಿದ್ದ ಜಾರ್ಜ್‌ ಫ್ಲಾಯ್ಡ್ ಹೆಸರಿನ ಮುಖಗವಸನ್ನು ಕ್ವಾರ್ಟರ್‌ಫೈನಲ್‌ನಲ್ಲಿ ಮತ್ತು 2014ರಲ್ಲಿ ಗುಂಡಿನೇಟಿಗೆ ಬಲಿಯಾಗಿದ್ದ ತಮಿರ್ ರೈಸ್ ಹೆಸರು ಹೊಂದಿದ್ದ ಮಾಸ್ಕ್‌ ಅನ್ನು ಫೈನಲ್‌ನಲ್ಲಿ ಧರಿಸಿ ಕಣಕ್ಕಿಳಿದಿದ್ದರು. ಮಿತಭಾಷಿ, ಸಂಕೋಚ ಸ್ವಭಾವದ ನವೊಮಿ ಅವರ ಪ್ರತಿಭಟನೆಯ ಪರಿ ಮಾತ್ರ ದಿಟ್ಟ ಸಂದೇಶವನ್ನೇ ರವಾನಿಸಿತು. ಆಟಗಾರರ ದೈಹಿಕ ಮತ್ತು ಮಾನಸಿಕ ಬಲಪ್ರದರ್ಶನಕ್ಕಷ್ಟೇ ಕ್ರೀಡೆ ಸೀಮಿತವಲ್ಲ, ಸಾಮಾಜಿಕ ಹೊಣೆ ಮತ್ತು ಅನ್ಯಾಯವನ್ನು ಪ್ರತಿಭಟಿಸುವ ವೇದಿಕೆಯೂ ಹೌದು ಎಂಬುದನ್ನು ಅವರು ಮತ್ತೊಮ್ಮೆ ತೋರಿಸಿಕೊಟ್ಟರು. 1968ರ ಮೆಕ್ಸಿಕೊ ಒಲಿಂಪಿಕ್ಸ್‌ನಲ್ಲಿ ಅಥ್ಲೀಟ್‌ಗಳು ತೋರಿದ ಬ್ಲ್ಯಾಕ್‌ ಪವರ್ ಸಲ್ಯೂಟ್ ಪ್ರತಿಭಟನೆ, ಬಾಕ್ಸಿಂಗ್ ದಂತಕಥೆ ಮೊಹಮ್ಮದ್ ಅಲಿ ತಾವು ಒಲಿಂಪಿಕ್ಸ್‌ನಲ್ಲಿ ಗೆದ್ದ ಚಿನ್ನದ ಪದಕವನ್ನೇ ಒಹಿಯೊ ನದಿಗೆ ಬಿಸಾಕಿದ್ದರೆನ್ನಲಾದ ಪ್ರಸಂಗಗಳು ಇತಿಹಾಸದ ಪುಟಗಳಲ್ಲಿವೆ.

ಹೋದ ತಿಂಗಳು ಜೇಕಬ್ ಬ್ಲೇಕ್ ಎನ್ನುವ ಕಪ್ಪುವರ್ಣೀಯ ವ್ಯಕ್ತಿಯ ಮೇಲೆ ನಡೆದ ಗುಂಡಿನ ದಾಳಿಯನ್ನು ಖಂಡಿಸಿದ ನವೊಮಿ, ವೆಸ್ಟರ್ನ್‌–ಸದರ್ನ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್‌ ಪಂದ್ಯವನ್ನೇ ಬಹಿಷ್ಕರಿಸಿದ್ದರು. ಆಯೋಜಕರು ಮತ್ತು ಇನ್ನುಳಿದ ಆಟಗಾರರೂ ಅವರ ಬೆಂಬಲಕ್ಕೆ ನಿಂತು ಇತಿಹಾಸ ಬರೆದರು. ನವೊಮಿಯವರ ತಾಯಿ ಜಪಾನಿನವರು. ತಂದೆ ಹೈಟಿಯ ಕಪ್ಪು ವರ್ಣೀಯ. ಬಾಲ್ಯದಿಂದಲೂ ಜನಾಂಗೀಯ ನಿಂದನೆಯ ವ್ಯಂಗ್ಯಗಳನ್ನು ಕೇಳುತ್ತಲೇ ಬೆಳೆದವರು ನವೊಮಿ. ತಮ್ಮ ಸಹೋದರಿ ಮೇರಿಯೊಂದಿಗೆ ಟೆನಿಸ್‌ನಲ್ಲಿ ಒಂದೊಂದೇ ಮೆಟ್ಟಿಲೇರುತ್ತ, ಚಾಂಪಿಯನ್ ಆಗುವ ಕನಸು ಕಾಣುತ್ತ ಬೆಳೆದರು. ತಮ್ಮ ಆಟಕ್ಕೆ ಪ್ರೇರಣೆಯಾಗಿದ್ದ ಅಮೆರಿಕದ ಸೆರೆನಾ ವಿಲಿಯಮ್ಸ್‌ ಅವರನ್ನೇ 2018ರಲ್ಲಿ ಮಣಿಸಿ ಅಮೆರಿಕ ಓಪನ್ ಪ್ರಶಸ್ತಿ ಜಯಿಸಿದರು. ಹೋದವರ್ಷ ಆಸ್ಟ್ರೇಲಿಯಾ ಓಪನ್‌ ಕಿರೀಟವನ್ನೂ ಧರಿಸಿದರು. ಮೂರನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆಲ್ಲುವ ಮೂಲಕ ಏಷ್ಯಾದಲ್ಲಿಯೂ ಟೆನಿಸ್‌ ಕ್ರೀಡೆಯ ಬೆಳವಣಿಗೆಗೆ ವಿಪುಲ ಅವಕಾಶಗಳಿರುವುದನ್ನು ತೋರಿಸಿಕೊಟ್ಟವರು. ಈ ಹಿಂದೆ ಚೀನಾದ ಲೀ ನಾ ಅವರು ಎರಡು ಗ್ರ್ಯಾನ್‌ಸ್ಲಾಮ್‌ ಗೆದ್ದಿದ್ದರು. ಭಾರತದ ಯಾವ ಟೆನಿಸ್‌ ಪಟುವೂ ಇದುವರೆಗೆ ಪುರುಷ ಅಥವಾ ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಗ್ರ್ಯಾನ್‌ಸ್ಲಾಮ್‌ ಗೆದ್ದಿಲ್ಲ. ಡಬಲ್ಸ್‌ ಮತ್ತು ಮಿಶ್ರಡಬಲ್ಸ್‌ನಲ್ಲಿ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಈ ದೇಶಗಳ ಪ್ರತಿಭೆಗಳಿಗೆ ನವೊಮಿ ಅನುಕರಣೀಯ ಆಟಗಾರ್ತಿಯಾಗಿದ್ದಾರೆ. ಕ್ರೀಡಾ ಸಾಧನೆಯ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯನ್ನೂ ಪ್ರದರ್ಶಿಸಿದ ಅವರ ಗುಣ ಕೂಡ ಎಲ್ಲ ಕ್ರೀಡೆಗಳಲ್ಲಿ ಇರುವವರಿಗೂ ಆದರ್ಶವಾಗಬೇಕು. ಮುಂದಿನ ವರ್ಷಕ್ಕೆ ಮುಂದೂಡಲಾಗಿರುವ ಒಲಿಂಪಿಕ್ಸ್‌, ನವೊಮಿ ಅವರ ತವರು ಟೋಕಿಯೊದಲ್ಲಿ ನಡೆಯಲಿದೆ. ಅಲ್ಲಿಯೂ ಅವರು ಚಿನ್ನದ ಪದಕ ಜಯಿಸುವ ಕನಸು ಕಾಣುತ್ತಿದ್ದಾರೆ. ಅವರಿಗೆ ಆ ಸಾಮರ್ಥ್ಯವೂ ಇದೆ. ಅಮೆರಿಕ ಓಪನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಇದೇ ಮೊದಲ ಬಾರಿ ಪ್ರಶಸ್ತಿ ಗೆದ್ದಿದ್ದಾರೆ. ಇದರೊಂದಿಗೆ ಟೆನಿಸ್‌ ಲೋಕದಲ್ಲಿ ನವತಾರೆಯ ಉದಯವಾಗಿದೆ. ದುರಿತ ಕಾಲದ ಕತ್ತಲಿನಿಂದ ಹೊಸಬೆಳಕಿನತ್ತ ಸಾಗುತ್ತಿರುವುದರ ಸಂಕೇತವೂ ಇದಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು