ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಅಧಿಕೃತ ಆದೇಶವಿಲ್ಲದೆ ಪಠ್ಯ ಪರಿಷ್ಕರಣೆ ಇಡೀ ಪ್ರಕ್ರಿಯೆ ನಿಯಮಬಾಹಿರ

Last Updated 10 ಜೂನ್ 2022, 19:31 IST
ಅಕ್ಷರ ಗಾತ್ರ

ಸರ್ಕಾರದ ಅಧಿಕೃತ ಆದೇಶ ಇಲ್ಲದೆಯೇ ಪಠ್ಯ ಪರಿಷ್ಕರಣೆ ನಡೆದಿರುವುದು ಮಕ್ಕಳ ಶಿಕ್ಷಣದ ಕುರಿತು ಸರ್ಕಾರ ಎಷ್ಟು ಗಂಭೀರವಾಗಿದೆ ಎನ್ನುವುದನ್ನು ಸೂಚಿಸುವಂತಿದೆ. ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿ ಸಿದಂತೆ ಸರ್ಕಾರದ ನಡವಳಿಕೆಯು ಕ್ರಮಬದ್ಧತೆಯಿಂದ ಕೂಡಿಲ್ಲ ಹಾಗೂ ಪರಿಷ್ಕರಣಾ ಪ್ರಕ್ರಿಯೆ ಪಾರದರ್ಶಕವಾಗಿಲ್ಲ. ಸಚಿವರ ಮೌಖಿಕ ಸೂಚನೆಯ ಮೇರೆಗೆ ಪರಿಷ್ಕರಣೆ ನಡೆದ ಬಳಿಕ ಘಟನೋತ್ತರ ಅನುಮತಿ ನೀಡಿ ಆದೇಶ ಹೊರಡಿಸಿರುವುದು ಅಕ್ರಮವನ್ನುಸಕ್ರಮಗೊಳಿಸುವ ಪ್ರಯತ್ನದಂತಿದೆ. ಪರಿಶೀಲನಾ ಸಮಿತಿಯನ್ನೇ ತಜ್ಞರ ಪರಿಷ್ಕರಣಾ ಸಮಿತಿ ಎಂದು ಪರಿಗಣಿಸಿರುವುದು ಎಡವಟ್ಟಿನ ನಡೆ.ಪಠ್ಯಪುಸ್ತಕಗಳ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಸರ್ಕಾರ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎನ್ನುವುದನ್ನು ಸರ್ಕಾರದ ಅಪಕ್ವ ನಿಲುವುಗಳೇ ಸೂಚಿಸುತ್ತಿವೆ.

ಪಠ್ಯಪುಸ್ತಕಗಳಲ್ಲಿನ ಕೆಲವು ವಿಷಯಗಳ ಬಗ್ಗೆ ಉಂಟಾದ ಆಕ್ಷೇಪಗಳ ಹಿನ್ನೆಲೆಯಲ್ಲಿ, 2021ರ ಸೆಪ್ಟೆಂಬರ್ 9ರಂದು ಪರಿಶೀಲನಾ ಸಮಿತಿ ರಚಿಸಲಾಗಿತ್ತು. ಎಸ್‌. ಸುರೇಶ್‌ ಕುಮಾರ್‌ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದಾಗ ನೇಮಕಗೊಂಡ ಆ ಸಮಿತಿಗೆ, 1ರಿಂದ 10ನೇ ತರಗತಿಯ ಭಾಷಾ ವಿಷಯಗಳು, ಪರಿಸರ ಅಧ್ಯಯನ ಹಾಗೂ 6ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಗಳಲ್ಲಿ ಇರಬಹುದಾದ ಸೂಕ್ಷ್ಮ–ಸಂಕೀರ್ಣ ವಿಷಯಗಳನ್ನು ಪರಿಶೀಲಿಸಿ ಒಂದು ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿತ್ತು.

ಪರಿಶೀಲನಾ ಸಮಿತಿಯ ವರದಿಯನ್ನು ಸರ್ಕಾರ ಒಪ್ಪಿ ಕೊಂಡಲ್ಲಿ, ಅದನ್ನು ಜಾರಿಗೆ ತರಲು ವಿಷಯ ತಜ್ಞರನ್ನು ಒಳಗೊಂಡ ಪರಿಷ್ಕರಣಾ ಸಮಿತಿಯನ್ನು ಪ್ರತ್ಯೇಕವಾಗಿ ರಚಿಸಬೇಕಾಗಿತ್ತು. ಇಲ್ಲವೇ ಪರಿಶೀಲನಾ ಸಮಿತಿಗೇ ಪರಿಷ್ಕರಣೆಯ ಹೊಣೆಯನ್ನೂ ನೀಡಿ ಹೊಸತಾಗಿ ಆದೇಶವನ್ನಾದರೂ ಹೊರಡಿಸಬೇಕಾಗಿತ್ತು. ಈ ಎರಡೂ ಬಗೆಯಲ್ಲಿ ಸರ್ಕಾರದ ಅಧಿಕೃತ ಆದೇಶ ಇಲ್ಲದೆಯೇ ಪರಿಷ್ಕರಣೆ ನಡೆದಿದೆ. 2022–23ನೇ ಸಾಲಿಗೆ ಪರಿಷ್ಕೃತ ಪಠ್ಯಪುಸ್ತಕಗಳನ್ನು ಮುದ್ರಿಸಿ ವಿತರಿಸುವ ಕುರಿತು ಮಾರ್ಚ್ 9ರಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಆ ಆದೇಶದಲ್ಲಿ, ‘ಪಠ್ಯಪುಸ್ತಕ ಗಳನ್ನು ಪರಿಷ್ಕೃತಗೊಳಿಸಿರುವುದಕ್ಕೆ ಘಟನೋತ್ತರ ಅನುಮತಿ ನೀಡಿ, ಮುದ್ರಿಸಲು ಸೂಚಿಸಲಾಗಿದೆ’ ಎನ್ನುವ ಉಲ್ಲೇಖವಿದೆ. ಅಧಿಕಾರಸ್ಥರು ತಮ್ಮ ಹಿಂಬಾಲಕರಿಗೆಅನುಕೂಲ ಕಲ್ಪಿಸುವ ಉದ್ದೇಶದಿಂದ ಕಾರ್ಯಾದೇಶ ಇಲ್ಲದೆಯೇ ವಿವಿಧ ಕಾಮಗಾರಿಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟು ಆ ಬಳಿಕ ಘಟನೋತ್ತರ ಅನುಮತಿ ಕೊಡಿಸುವಂತಹ ಪರಿಪಾಟವನ್ನು ಶಿಕ್ಷಣ ಇಲಾಖೆಗೂ ಪರಿಚಯಿಸಲು ಸರ್ಕಾರ ಹೊರಟಂತಿದೆ.

ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದ ಯಾವುದೇ ಆದೇಶಗಳು ‘ಕರ್ನಾಟಕ ಪಠ್ಯಪುಸ್ತಕ ಸಂಘ’ದ ಅಂತರ್ಜಾಲ ತಾಣದಲ್ಲಿ ಇಲ್ಲದಿರುವುದು ಕೂಡ ಇಡೀ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯದಿ ರುವುದನ್ನು ತೋರಿಸುವಂತಿದೆ. ಪಠ್ಯಪುಸ್ತಕ ಪರಿಷ್ಕರಣೆ, ಪರಿಶೀಲನಾ ಸಮಿತಿ ರಚನೆಗೆ ಸಂಬಂಧಿಸಿದ ಮಾಹಿತಿಯನ್ನು ವೆಬ್‌ಸೈಟ್‌ನಿಂದ ತೆಗೆಯಲಾಗಿದೆ.

‘ಪರಿಷ್ಕೃತ ಪಠ್ಯಪುಸ್ತಕಗಳಲ್ಲಿನ ಎಲ್ಲ ಬರಹಗಳು ಹಾಗೂ ಮಾಹಿತಿಗೆ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರೇ ಜವಾಬ್ದಾರರು’ ಎನ್ನುವ ಉಲ್ಲೇಖ ಘಟನೋತ್ತರ ಅನುಮತಿ ಆದೇಶದಲ್ಲಿದೆ. ಸರ್ಕಾರಿ ಪಠ್ಯಪುಸ್ತಕಗಳಲ್ಲಿನ ವಿಷಯಗಳಿಗೆ ಆಕ್ಷೇಪಗಳು ಎದುರಾದಲ್ಲಿ ಉತ್ತರಿಸುವ ಹೊಣೆಗಾರಿಕೆಯು ಸಮಿತಿಯ ಅಧ್ಯಕ್ಷರದೇ ಆಗಿರುತ್ತದೆ ಎಂದೂ ಹೇಳ ಲಾಗಿದೆ. ಸರ್ಕಾರಿ ಪಠ್ಯಪುಸ್ತಕಗಳ ಸರಿತಪ್ಪುಗಳ ಉತ್ತರದಾಯಿತ್ವದಿಂದ ಜಾರಿಕೊಳ್ಳಲು ಸರ್ಕಾರಕ್ಕೆ ಅವಕಾಶ ಇಲ್ಲ. ಅದರ ಹೊಣೆ ಸರ್ಕಾರದ್ದೇ ಆಗಿರುತ್ತದೆ. ಹಾಗೆಯೇ, ಪರಿಷ್ಕರಿಸುವ ಸಮಿತಿಯೂ ಪಠ್ಯದಲ್ಲಿನತಪ್ಪು–ಒಪ್ಪುಗಳಿಗೆ ಹೊಣೆ ಹೊರಬೇಕು. ಆಕ್ಷೇಪಗಳಿಗೆ ಉತ್ತರಿಸುವ ಹೊಣೆಯನ್ನು ಸಮಿತಿಯ ಹೆಗಲಿಗೇರಿಸುವುದು, ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಪ್ರಯತ್ನವಾಗಿದೆ. ಆಕ್ಷೇಪಗಳಿಗೆ ಉತ್ತರಿಸುವ ಹೊಣೆಗಾರಿಕೆಯು ಪರಿಷ್ಕರಣಾ ಸಮಿತಿಯದ್ದೇ ಎನ್ನುವುದಾದರೆ, ತಕರಾರುಗಳ ಹಿನ್ನೆಲೆಯಲ್ಲಿ ಪಠ್ಯಗಳನ್ನು ಪುನರ್‌ ಮುದ್ರಿಸಬೇಕಾದ ಸಂದರ್ಭ ಎದುರಾದಲ್ಲಿ ಅದಕ್ಕೆ ತಗುಲುವ ಖರ್ಚು ವೆಚ್ಚಗಳನ್ನೂ ಸಮಿತಿಯಿಂದಲೇ ಭರಿಸಬೇಕಾಗುತ್ತದೆ. ಪರಿಷ್ಕೃತ ಪಠ್ಯಪುಸ್ತಕಗಳ ಮುದ್ರಣಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ. ಸಾರ್ವಜನಿಕರಿಂದ ಆಕ್ಷೇಪಗಳನ್ನು ಆಹ್ವಾನಿಸಿ, ಅದರ ಆಧಾರದ ಮೇಲೆ ಪರಿಷ್ಕೃತ ಪಠ್ಯವನ್ನು ಪುನಃ ಪರಿಷ್ಕರಣೆ ಮಾಡುವುದಾಗಿ ಸರ್ಕಾರ ಹೇಳಿದೆ. ಅದಕ್ಕೆ ಮತ್ತಷ್ಟು ವೆಚ್ಚವಾಗಲಿದೆ. ಸರ್ಕಾರದ ವಿವೇಚನಾರಹಿತ ನಿರ್ಧಾರಗಳಿಂದಾಗಿ ಸಾರ್ವಜನಿಕ ಹಣದ ಅಪಬಳಕೆಯಾಗಿದೆ.

ವಿವಾದ ಹಾಗೂ ಗೊಂದಲಗಳಿಗೆ ಕಾರಣವಾಗಿರುವ ಸಂಗತಿಗಳಿಂದ ತುಂಬಿರುವ ಪರಿಷ್ಕೃತ ಪಠ್ಯಪುಸ್ತಕಗಳನ್ನು ಸಮರ್ಥಿಸಿಕೊಂಡು ಮಾತನಾಡುವುದನ್ನು ಸರ್ಕಾರ ಇನ್ನಾದರೂ ನಿಲ್ಲಿಸಬೇಕು. ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿಯನ್ನು ವಿಸರ್ಜಿಸಿದ ಮಾತ್ರಕ್ಕೆ ವಿವಾದಗಳು ಕೊನೆಗೊಳ್ಳು ವುದಿಲ್ಲ. ಆ ಸಮಿತಿ ಮಾಡಿರಬಹುದಾದ ತಪ್ಪುಗಳನ್ನು ಗುರುತಿಸಿ ಸರಿಪಡಿಸುವುದು ಸರ್ಕಾರದ ಕರ್ತವ್ಯ. ಪಠ್ಯಪುಸ್ತಕಗಳ ಬಗ್ಗೆ ಮಕ್ಕಳು, ಶಿಕ್ಷಕರು ಹಾಗೂ ಸಾರ್ವಜನಿಕ ವಲಯದಲ್ಲಿ ಉಂಟಾಗಿರುವ ಗೊಂದಲಗಳನ್ನು ತಿಳಿಗೊಳಿಸುವ ದಿಸೆಯಲ್ಲಿ ಸರ್ಕಾರ ತಕ್ಷಣ ಕ್ರಿಯಾಶೀಲವಾಗಬೇಕು. ವಿವಾದಕ್ಕೆ ಕಾರಣವಾಗಿರುವ ಪುಸ್ತಕಗಳನ್ನು ಹಿಂತೆಗೆದುಕೊಳ್ಳುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಗತ್ಯವಾಗಿರುವ ಕ್ರಮ ಮಾತ್ರವಲ್ಲ, ಸರ್ಕಾರ ತನ್ನ ತಪ್ಪನ್ನು ತಿದ್ದಿಕೊಳ್ಳುವ ನಡೆಯೂ ಹೌದು. ಪರಿಷ್ಕೃತ ಪಠ್ಯಗಳನ್ನು ಪರಿಚಯಿಸುವ ಕೆಲಸವನ್ನು ಮುಂದಿನ ವರ್ಷಕ್ಕೆ ಮುಂದೂಡಿ, ಕಳೆದ ವರ್ಷದ ಪಠ್ಯಪುಸ್ತಕಗಳನ್ನೇ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮುಂದುವರಿಸುವುದಕ್ಕೆ ಸರ್ಕಾರಕ್ಕೆ ಯಾವುದೇ ಪ್ರತಿಷ್ಠೆ ಅಡ್ಡಿಯಾಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT