ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಪಕ್ಷಕ್ಕೆ ಬಲ ತುಂಬುವುದು ಮರೆತು, ಬಣರಾಜಕೀಯದಲ್ಲಿ ಮುಳುಗಿದ ಕಾಂಗ್ರೆಸ್

Last Updated 28 ಜೂನ್ 2021, 19:18 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಕುರಿತ ಚರ್ಚೆ ಒಮ್ಮೆಲೇ ಬಿರುಸು ಪಡೆದುಕೊಂಡಿದೆ. ‘ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್‌. ಯಡಿಯೂರಪ್ಪ ಅವರನ್ನು ಬದಲಾಯಿಸಬೇಕು’ ಎಂಬ ಕುರಿತು ಪರ-ವಿರೋಧ ಚರ್ಚೆ ಆಡಳಿತಾರೂಢ ಬಿಜೆಪಿಯಲ್ಲಿ ನಡೆದಿದೆ; ‘ಮುಂದಿನ ಚುನಾವಣೆಯ ಬಳಿಕ ತಮ್ಮ ಪಕ್ಷದಿಂದ ಇಂಥವರೇ ಮುಖ್ಯಮಂತ್ರಿ ಆಗಬೇಕು’ ಎಂಬ ಬಹಿರಂಗ ವಾಗ್ವಾದ ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ. ರಾಜ್ಯದಲ್ಲಿ ಈಗ ಬಿಜೆಪಿ ನೇತೃತ್ವದ ಸರ್ಕಾರವಿದೆ.

ಹಾಗಾಗಿ,ಆ ಪಕ್ಷದೊಳಗೆ ಮುಖ್ಯಮಂತ್ರಿ ಬದಲಾವಣೆಯ ಕುರಿತ ಚರ್ಚೆ ನಡೆದರೆ ಅದನ್ನು ಸಹಜ ರಾಜಕೀಯ ವಿದ್ಯಮಾನ ಎನ್ನಬಹುದು. ಬಿಜೆಪಿಯ ಹೆಚ್ಚಿನ ಶಾಸಕರು ಮತ್ತು ವರಿಷ್ಠರು ಒಪ್ಪಿದರೆ ಅಲ್ಲಿ ಮುಖ್ಯಮಂತ್ರಿಯ ಬದಲಾವಣೆ ನಡೆಯಲೂಬಹುದು. ಆದರೆ ಕಾಂಗ್ರೆಸ್ ಪಕ್ಷಕ್ಕೆ ಏನಾಗಿದೆ? ವಿಧಾನಸಭಾ ಚುನಾವಣೆ ನಡೆಯಲು ಇನ್ನೂ ಎರಡು ವರ್ಷಗಳಿವೆ. ಈಗಲೇ ತಮ್ಮ ಪಕ್ಷದಿಂದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಇವರೇ ಆಗಬೇಕು ಎಂದು ಪಕ್ಷದ ಹಲವು ಶಾಸಕರು ಮತ್ತು ನಾಯಕರು ಬಹಿರಂಗ ಹೇಳಿಕೆಗಳನ್ನು ನೀಡುತ್ತಿರುವುದು ಹಾಸ್ಯಾಸ್ಪದವಾಗಿ ಕಾಣಿಸುತ್ತಿದೆ. ಮೊದಲು ಚುನಾವಣೆ ನಡೆಯಬೇಕು. ಬಳಿಕ ಪಕ್ಷ ಅದರಲ್ಲಿ ಬಹುಮತ ಪಡೆಯಬೇಕು. ಅದ್ಯಾವುದೂ ಇಲ್ಲದೆ ಕಾಂಗ್ರೆಸ್ ನಾಯಕರು ಹಗಲುಗನಸು ಕಾಣುತ್ತಿದ್ದಾರೆ.

‘ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದರು’ ಎಂಬ ಗಾದೆಯಂತಿದೆ ಕಾಂಗ್ರೆಸ್‍ನ ಪರಿಸ್ಥಿತಿ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿ ಎಂದುಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಶುರುವಾದ ಬೆನ್ನಲ್ಲೇ ಪಕ್ಷದೊಳಗೆ ಭಿನ್ನಾಭಿ ಪ್ರಾಯಗಳು ಭುಗಿಲೆದ್ದಿವೆ.

‘ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ’ ಎಂದುಶಾಸಕರಾದ ಜಮೀರ್ ಅಹ್ಮದ್ ಖಾನ್ ಮತ್ತು ರಾಘವೇಂದ್ರ ಹಿಟ್ನಾಳ್ ಬಹಿರಂಗವಾಗಿ ಹೇಳಿದ್ದಾರೆ. ಪಕ್ಷದ ಜಿಲ್ಲಾ ಪದಾಧಿಕಾರಿಗಳ ಬದಲಾವಣೆಯ ಪಟ್ಟಿಯೊಂದಿಗೆ ಶಿವಕುಮಾರ್ ದೆಹಲಿಗೂ ಹೋಗಿಬಂದಿದ್ದು, ಅಲ್ಲಿ ಸಿದ್ದರಾಮಯ್ಯ ಬೆಂಬಲಿಗರ ವಿರುದ್ಧ ದೂರು ನೀಡಿದ್ದಾರೆ ಎನ್ನಲಾಗುತ್ತಿದೆ. ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ, ‘ನೀವೇ ಅಭ್ಯರ್ಥಿ’ ಎಂದು ತಮ್ಮ ಹಿಂಬಾಲಕರಿಗೆ ಶಿವಕುಮಾರ್ ಭರವಸೆ ನೀಡಿರುವುದಾಗಿ ಸಿದ್ದರಾಮಯ್ಯ ಬೆಂಬಲಿಗರು ದೂರಿದ್ದಾರೆ. ‘ಮುಖ್ಯಮಂತ್ರಿ ಅಭ್ಯರ್ಥಿಯ ಕುರಿತು ಯಾರೂ ಬಹಿರಂಗ ಹೇಳಿಕೆ ನೀಡಬಾರದು. ಪಕ್ಷದ ಶಿಸ್ತು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಕಾಂಗ್ರೆಸ್ಸಿನ ಕರ್ನಾಟಕದ ಉಸ್ತುವಾರಿ ಹೊತ್ತಿರುವ ರಣದೀಪ್‍ಸಿಂಗ್ ಸುರ್ಜೇವಾಲಾ ಎಚ್ಚರಿಕೆ ನೀಡಿದ್ದಾರೆ. ಈ ಎಚ್ಚರಿಕೆಯ ಹೊರತಾಗಿಯೂ ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಬೆಂಬಲಿಗರ ನಡುವಣ ಟೀಕೆ- ಪ್ರತಿಟೀಕೆಗಳು ನಿಂತಿಲ್ಲ.

ಈ ಮಧ್ಯೆ, ಹಿರಿಯ ನಾಯಕರಾದ ಜಿ. ಪರಮೇಶ್ವರ ಮತ್ತು ಕೆ.ಎಚ್.ಮುನಿಯಪ್ಪ ಭೇಟಿಯಾಗಿ ‘ದಲಿತ ಮುಖ್ಯಮಂತ್ರಿ’ ಬೇಡಿಕೆಯನ್ನು ತೇಲಿಬಿಟ್ಟಿದ್ದಾರೆ. ‘ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿಯಾಗಲು ಲಿಂಗಾಯತ ಅಭ್ಯರ್ಥಿಗಳ ಕೊರತೆಯಿಲ್ಲ’ ಎಂದುಹಿರಿಯ ಶಾಸಕ ಎಂ.ಬಿ.ಪಾಟೀಲ ಹೇಳಿದ್ದಾರೆ. ಇದನ್ನೆಲ್ಲ ಗಮನಿಸಿರುವ ಜನಸಾಮಾನ್ಯರು ‘ಕಾಂಗ್ರೆಸ್ ನಾಯಕರು ಅಧಿಕಾರಕ್ಕಾಗಿ ಚಡಪಡಿಸುತ್ತಿದ್ದಾರೆ’ ಎಂದು ಹಾದಿಬೀದಿಯಲ್ಲಿ ಮಾತನಾಡಿಕೊಳ್ಳುವಂತಾಗಿದೆ. ಪಕ್ಷನಿಷ್ಠ ಕಾಂಗ್ರೆಸ್ ಕಾರ್ಯಕರ್ತರೇ ಈ ವಿದ್ಯಮಾನದ ಕುರಿತು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಸದ್ಯದ ರಾಜಕೀಯ ಪರಿಸ್ಥಿತಿ ಗಮನಿಸಿದರೆ, ಕಾಂಗ್ರೆಸ್ ನಾಯಕರ ಈ ಅಧಿಕಾರದ ಹಪಹಪಿ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ದುಬಾರಿಯಾಗಿ ಪರಿಣಮಿಸಲೂಬಹುದು. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ದಕ್ಷ ಆಡಳಿತ ನೀಡುತ್ತಿದೆ ಎಂದು ಯಾರೂ ಹೇಳುತ್ತಿಲ್ಲ. ಕೋವಿಡ್ ನಿರ್ವಹಣೆ ಯಲ್ಲಿ ಈ ಸರ್ಕಾರದ ವೈಫಲ್ಯ ಮೇಲ್ನೋಟಕ್ಕೇ ಕಾಣಿಸುತ್ತಿದೆ. ಭ್ರಷ್ಟಾಚಾರ ವ್ಯಾಪಕವಾಗಿದೆ ಎಂದು ಬಿಜೆಪಿಯ ಕೆಲವು ಶಾಸಕರೇ ಆರೋಪಿಸಿದ್ದಾರೆ. ಹಾಗೆಂದು ಇವೆಲ್ಲದರ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಜನರು ಕಾಂಗ್ರೆಸ್‍ಗೆ ಕಣ್ಣುಮುಚ್ಚಿ ಮತ ಹಾಕುತ್ತಾರೆ ಎನ್ನುವಂತಿಲ್ಲ. ಪ್ರತಿಪಕ್ಷವಾಗಿ ಕಾಂಗ್ರೆಸ್ ತನ್ನ ಪಾತ್ರವನ್ನು ಸರಿಯಾಗಿ ನಿರ್ವಹಿಸಿದೆಯೇ ಎನ್ನುವುದನ್ನೂ ಮತದಾರರು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದಾರೆ.

ಕೊರೊನಾ ಸೋಂಕು ತೀವ್ರ ಸ್ವರೂಪ ಪಡೆದುಕೊಂಡಾಗ ಕಾಂಗ್ರೆಸ್ ಪಕ್ಷದ ವತಿಯಿಂದ ಆಂಬುಲೆನ್ಸ್ ಮತ್ತು ಆಮ್ಲಜನಕ ಒದಗಿಸಿದ್ದು ಹಾಗೂ ಬಡಜನರಿಗೆ ಪಡಿತರ ವಿತರಣೆ ಮಾಡಿದ್ದು ಒಳ್ಳೆಯ ಕ್ರಮ. ಜನಸಾಮಾನ್ಯರನ್ನು ಕಿತ್ತು ತಿನ್ನುತ್ತಿರುವ ಬೆಲೆ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸಿದ್ದೂ ಜನರ ಮನಸ್ಸಿನಲ್ಲಿದೆ. ಆದರೆ, ಎಲ್ಲ ಬಣ್ಣಗಳನ್ನೂ ಮಸಿ ನುಂಗಿತು ಎನ್ನುವಂತೆ, ಮುಖ್ಯಮಂತ್ರಿ ಹುದ್ದೆಗಾಗಿ ಕಾಂಗ್ರೆಸ್ ನಾಯಕರ ಕಿತ್ತಾಟದ ವರದಿಗಳು ಪಕ್ಷದ ಪ್ರತಿಷ್ಠೆಯನ್ನು ಮುಕ್ಕಾಗಿಸುತ್ತಿವೆ. ‘ಚುನಾವಣೆಗೆ ಇನ್ನೂ ಎರಡು ವರ್ಷ ಇರುವಾಗಲೇ ಈ ನಾಯಕರು ಮುಖ್ಯಮಂತ್ರಿ ಪಟ್ಟಕ್ಕಾಗಿ ಹೀಗೆ ಕಿತ್ತಾಡಿದರೆ, ಇನ್ನು ಚುನಾವಣೆಯ ಫಲಿತಾಂಶ ಬಂದ ಬಳಿಕ ಎಷ್ಟು ಕಿತ್ತಾಡಬಹುದು?’ ಎಂದು ಜನರು ಆಲೋಚಿಸುವಂತಾದರೆ ಅದರಲ್ಲಿ ತಪ್ಪೇನೂ ಇಲ್ಲ.

ಈ ಹಿಂದಿನ ಚುನಾವಣೆಗಳಲ್ಲೂ ಕಾಂಗ್ರೆಸ್ಸನ್ನು ಕಾಂಗ್ರೆಸ್ಸೇ ಸೋಲಿಸಿದ ಪ್ರಕರಣಗಳು ಜನರ ನೆನಪಿನಲ್ಲಿವೆ. ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿ ಪಟ್ಟದ ಕನಸು ಕಾಣುವುದನ್ನು ಬಿಟ್ಟು, ಕೋವಿಡ್ ಸಂಕಷ್ಟದಿಂದ ಇನ್ನೂ ಹೊರಬರದಿರುವ ಜನರಿಗೆ ನೆರವಾಗುವುದನ್ನು ಮುಂದುವರಿಸಲಿ. ಪ್ರತಿಪಕ್ಷವಾಗಿ ರಚನಾತ್ಮಕ ಕೆಲಸ ಮಾಡಿದರೆ, ಜನರು ಚುನಾವಣೆಯ ಸಂದರ್ಭದಲ್ಲಿ ಸಹಜವಾಗಿಯೇ ಆ ಪಕ್ಷವನ್ನು ನೆನಪಿಸಿಕೊಳ್ಳುತ್ತಾರೆ. ಜನರು ಕೋವಿಡ್ ಹೊಡೆತದಿಂದ ತತ್ತರಿಸಿ, ಆರ್ಥಿಕ ಸಂಕಷ್ಟದಿಂದ ಹೊರಬರಲು ಪರಿತಪಿಸುತ್ತಿರುವ ಈ ಹೊತ್ತಲ್ಲಿ, ನಾಯಕರ ಅಧಿಕಾರದಾಹದ ನಿರ್ಲಜ್ಜ ಪ್ರದರ್ಶನ ಎಳ್ಳಷ್ಟೂ ಸರಿಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT