ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷ ಕಾರುವ ಹೇಳಿಕೆಗಳಿಂದ ಜನಪ್ರತಿನಿಧಿಗಳ ಘನತೆಗೇ ಕುತ್ತು

Last Updated 24 ಜನವರಿ 2020, 19:43 IST
ಅಕ್ಷರ ಗಾತ್ರ

ರಾಜ್ಯದ ಆಡಳಿತಾರೂಢ ಬಿಜೆಪಿಯ ಹಲವು ನಾಯಕರು ಇತ್ತೀಚೆಗೆ ಸಾರ್ವಜನಿಕವಾಗಿ ವ್ಯಗ್ರ, ಬೆಂಕಿಯುಗುಳುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹ ಹೇಳಿಕೆಗಳಿಂದ ಸಮಾಜದ ಮೇಲೆ ಯಾವ ಪರಿಣಾಮವಾಗುತ್ತದೆ ಎನ್ನುವ ಅರಿವಿಲ್ಲದವರಂತೆ ಮಾತನಾಡುತ್ತಿದ್ದಾರೆ. ರಾಜ್ಯದ ಕಂದಾಯ ಸಚಿವ ಆರ್‌.ಅಶೋಕ, ‘ಪಾಕಿಸ್ತಾನ ನಮ್ಮ ವೈರಿರಾಷ್ಟ್ರ. ಆ ದೇಶವನ್ನು ಭೂಪಟದಿಂದ‍ತೆಗೆದು ಹಾಕುತ್ತೇವೆ’ ಎಂದು ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.

ಸಂಸದ ಎ.ನಾರಾಯಣಸ್ವಾಮಿ‘ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಎರಡನ್ನೂ ಸೇರಿಸಿ ಅಖಂಡ ಭಾರತ ನಿರ್ಮಾಣ ಮಾಡುವುದು ಬಿಜೆಪಿಯ ಸಂಕಲ್ಪ. ಈ ಎರಡೂ ರಾಷ್ಟ್ರಗಳಲ್ಲಿ ಹಿಂದುತ್ವವನ್ನು ಸಾರಿ ಹೇಳುತ್ತೇವೆ’ ಎಂದು ಚಿತ್ರದುರ್ಗದಲ್ಲಿ ಗುಟುರು ಹಾಕಿದ್ದಾರೆ. ಇಬ್ಬರ ಮಾತುಗಳಲ್ಲೂ ನೆರೆಯ ಪಾಕಿಸ್ತಾನ ಮತ್ತು ಬಾಂಗ್ಲಾದ ಮೇಲಿನ ದ್ವೇಷ ಎದ್ದುಕಾಣುತ್ತದೆ. ಪಾಕಿಸ್ತಾನ ಮತ್ತು ಭಾರತದ ನಡುವೆ ಈಗಲೂ ರಾಜತಾಂತ್ರಿಕ ಸಂಬಂಧ ಇದೆ.

ಬಾಂಗ್ಲಾದ ಜೊತೆಗೆ ಭಾರತ ಸರ್ಕಾರ ಉತ್ತಮ ಬಾಂಧವ್ಯ ಹೊಂದಿದೆ. ಪಾಕಿಸ್ತಾನವೂ ಸೇರಿ ಯಾವುದೇ ದೇಶವನ್ನು ‘ಶತ್ರುರಾಷ್ಟ್ರ’ ಎಂದು ಭಾರತ ಸರ್ಕಾರ ಘೋಷಣೆ ಮಾಡಿಲ್ಲ. ಪರಿಸ್ಥಿತಿ ಹೀಗಿರುವಾಗ, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಆ ದೇಶಕ್ಕೆ ‘ಶತ್ರುರಾಷ್ಟ್ರ’ದ ಪಟ್ಟ ಕಟ್ಟಿರುವುದು ಅತಿರೇಕದ ನಡವಳಿಕೆ. ಕಂದಾಯ ಇಲಾಖೆಯ ಸಮಸ್ಯೆಗಳೇ ಹಾಸಿ ಹೊದೆಯುವಷ್ಟಿವೆ. ಅವುಗಳ ಪರಿಹಾರಕ್ಕೆ ಅಶೋಕ ಅವರು ತಮ್ಮ ಶ್ರಮವನ್ನು ಪೂರ್ತಿಯಾಗಿ ಮೀಸಲಿಟ್ಟರೆ ಜನರಿಗೆ ಪ್ರಯೋಜನವಾದರೂ ಆದೀತು.

ನಮ್ಮ ದೇಶದಲ್ಲಿರುವ ಯಾವುದೇ ಧರ್ಮದವರು ಬೇರೊಂದು ದೇಶದ ಪರವಾಗಿದ್ದಾರೆ ಎಂದು ಭಾವಿಸುವುದೇ ಬಾಲಿಶ. ಆದರೆ, ಅಂತಹ ಭಾವನೆಯನ್ನು ಬಿತ್ತುವುದಕ್ಕಾಗಿಯೇ ಕೆಲವರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಯಾರಾದರೂ ಅರ್ಥೈಸಿಕೊಂಡರೆ ಅದಕ್ಕೆ ಈ ನಾಯಕರ ನಡವಳಿಕೆಯೇ ಕಾರಣ.

ಇಂತಹಪ್ರಚೋದನೆಯಿಂದ ರಾಜ್ಯದಲ್ಲಿ ಸಮುದಾಯಗಳ ಮಧ್ಯೆ ಘರ್ಷಣೆ, ಜಗಳ ಹೆಚ್ಚಲಿ ಎನ್ನುವುದು ಇವರ ಹುನ್ನಾರವೇ? ಯಾವ ದೇಶದ ಜೊತೆ ನಮ್ಮ ಸಂಬಂಧ ಹೇಗಿರಬೇಕು ಎಂದು ನಿರ್ಧಾರವಾಗುವುದು ಬೀದಿ ಹೇಳಿಕೆಗಳಿಂದ ಅಲ್ಲ. ಅದಕ್ಕೆ ನಿರ್ದಿಷ್ಟವಾದ ಪ್ರಕ್ರಿಯೆ ಮತ್ತು ನೀತಿ ಇದೆ.

ಇದನ್ನೆಲ್ಲ ಮರೆತು, ವಿವೇಚನಾರಹಿತ ಹೇಳಿಕೆಗಳನ್ನು ನೀಡುವ ಮೂಲಕ ಈ ನಾಯಕರು ತಮ್ಮ ಸ್ಥಾನದ ಘನತೆಗೆ ತಾವೇ ಕುಂದು ತಂದುಕೊಳ್ಳುತ್ತಿದ್ದಾರೆ. ಈ ಮಧ್ಯೆ, ಹೊನ್ನಾಳಿಯ ಶಾಸಕ ರೇಣುಕಾಚಾರ್ಯ ‘ನನ್ನ ಕ್ಷೇತ್ರದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪ್ರದೇಶಗಳಿಗೆ ವಿಶೇಷ ಆಸಕ್ತಿ ವಹಿಸಿ ಮೂಲಸೌಕರ್ಯ ಕಲ್ಪಿಸುವುದಿಲ್ಲ. ಮುಸ್ಲಿಮರು ನನಗೆ ವೋಟು ಹಾಕದಿರುವುದರಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ. ಇನ್ನು ಮುಂದೆ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆಶ್ರಮಿಸುವುದಿಲ್ಲ’ ಎನ್ನುವ ಸಂಕುಚಿತ ಹೇಳಿಕೆಯೊಂದನ್ನು ನೀಡಿದ್ದಾರೆ. ಅದೂ ಅಲ್ಲದೆ, ‘ಮಸೀದಿಗಳಲ್ಲಿ ಮದ್ದುಗುಂಡು ಸಂಗ್ರಹಿಸುವ ಮೂಲಕ ಭಯೋತ್ಪಾದನೆ ಹುಟ್ಟುಹಾಕಲಾಗುತ್ತಿದೆ.

ಮದರಸಾಗಳಲ್ಲಿ ಭಯೋತ್ಪಾದನೆಯನ್ನು ಪೋಷಿಸಲಾಗುತ್ತಿದೆ’ ಎನ್ನುವ ಬೇಜವಾಬ್ದಾರಿ ಮಾತುಗಳನ್ನೂ ಆಡಿದ್ದಾರೆ. ಕ್ಷೇತ್ರದ ಎಲ್ಲ ಜನರನ್ನೂ ಸಮಾನವಾಗಿ ಪರಿಭಾವಿಸಿ, ಯಾವುದೇ ತಾರತಮ್ಯವಿಲ್ಲದೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವುದು ಶಾಸಕರ ಸಂವಿಧಾನಬದ್ಧ ಕರ್ತವ್ಯ.

ಸಮಾಜದಲ್ಲಿ ವೈಷಮ್ಯ ಉಂಟುಮಾಡುವಂತಹ ಹೇಳಿಕೆಗಳನ್ನು ಬಿಜೆಪಿಯ ಹಲವು ನಾಯಕರು ಇತ್ತೀಚೆಗೆ ಪದೇ ಪದೇ ನೀಡುತ್ತಿದ್ದಾರೆ. ಇದರಿಂದ ಸಾಮರಸ್ಯಕ್ಕೆ ಹಾನಿಯಾದರೆ, ಆಡಳಿತದ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ ಎನ್ನುವುದನ್ನು ಮರೆಯಬಾರದು. ಪಕ್ಷದ ನಾಯಕರ ಇಂತಹ ದ್ವೇಷಪೂರಿತ ಭಾಷಣ‌ಗಳಿಗೆ ಕಡಿವಾಣ ಹಾಕಲು ಮುಖ್ಯಮಂತ್ರಿ ಪ್ರಯತ್ನಿಸಿದಂತೆ ಕಾಣುತ್ತಿಲ್ಲ. ಸಮಾಜದಲ್ಲಿ ಶಾಂತಿ ಕದಡಿ, ರಾಜ್ಯದಲ್ಲಿ ಆಡಳಿತ ಹದಗೆಡಲಿ ಎಂದೇನಾದರೂ ಈ ನಾಯಕರು ಬಯಸುತ್ತಿದ್ದಾರೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT