ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಹಾಗೂ ರಂಗಭೂಮಿ ಸರ್ಕಾರದ ಸಹಾನುಭೂತಿ ಅಗತ್ಯ

Last Updated 31 ಜನವರಿ 2022, 19:31 IST
ಅಕ್ಷರ ಗಾತ್ರ

ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಪ್ರಮಾಣ ಶೇಕಡ 2ಕ್ಕೆ ಇಳಿದಿರುವುದರಿಂದ ನಿರ್ಬಂಧಗಳನ್ನು ಭಾಗಶಃ ತೆರವುಗೊಳಿಸಿರುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಜನವರಿ 31ರಿಂದಲೇ ರಾಜ್ಯದಾದ್ಯಂತ ರಾತ್ರಿ ಕರ್ಫ್ಯೂ ರದ್ದುಗೊಳಿಸಿರುವುದು ಜನಜೀವನವನ್ನು
ಸಹಜಸ್ಥಿತಿಗೆ ತರುವ ನಿಟ್ಟಿನಲ್ಲಿ ಅಗತ್ಯವಾಗಿದ್ದ ಕ್ರಮ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ 1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನು ಪುನರಾರಂಭಿಸಲಾಗಿದ್ದು, ಇತರ ಜಿಲ್ಲೆಗಳಲ್ಲಿ ಈಗಿರುವಂತೆಯೇ ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಅನುಸರಿಸಿಕೊಂಡು ತರಗತಿಗಳನ್ನು
ನಡೆಸಲಾಗುತ್ತಿದೆ. ಹೊಸದಾಗಿ ಹೆಚ್ಚಿನ ಸಂಖ್ಯೆಯ ಕೋವಿಡ್‌ ಪ್ರಕರಣಗಳು ದಾಖಲಾಗುವ ಶಾಲೆಗಳನ್ನು ಮುಚ್ಚಿ, ಸೋಂಕು ಕಡಿಮೆಯಾದ ಬಳಿಕ ಆ ಶಾಲೆಗಳಲ್ಲಿ ತರಗತಿಗಳನ್ನು ಮತ್ತೆ ಆರಂಭಿಸುವ ಸರ್ಕಾರದ ತೀರ್ಮಾನ ವಿದ್ಯಾರ್ಥಿಗಳ ಹಿತಾಸಕ್ತಿ ರಕ್ಷಣೆಗೆ ಪೂರಕವಾಗಿದೆ. ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿರುವ
ಸಂದರ್ಭದಲ್ಲಿ ವಿದ್ಯಾರ್ಥಿಗಳ ಕಲಿಕೆ ನಿರಂತರವಾಗಿರುವಂತೆ ನೋಡಿಕೊಳ್ಳುವ ದೃಷ್ಟಿಯಿಂದ ಸರ್ಕಾರ ಕೈಗೊಂಡಿರುವ ತೀರ್ಮಾನ ಸರಿಯಾಗಿದೆ. ಶಾಲೆಗಳೊಂದಿಗೆ ಹೋಟೆಲ್‌, ಬಾರ್‌ ಮತ್ತು ರೆಸ್ಟೋರೆಂಟ್, ಪಬ್‌, ಕ್ಲಬ್‌ಗಳ ಮೇಲಣ ನಿರ್ಬಂಧಗಳನ್ನೂ ತೆರವುಗೊಳಿಸಲಾಗಿದೆ. ಪೂರ್ಣ ಸಾಮರ್ಥ್ಯದೊಂದಿಗೆ
ಕಾರ್ಯ ನಿರ್ವಹಿಸಲು ಸಾರ್ವಜನಿಕ ಸಾರಿಗೆ ವ್ಯವಸ್ಥೆಗೂ ಅವಕಾಶ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ವಿವೇಚನೆ ಮೆರೆದಿರುವ ಸರ್ಕಾರ, ಸಿನಿಮಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಮಾತ್ರ ತದ್ವಿರುದ್ಧ ನಿಲುವು ತಳೆದಿದೆ. ಚಿತ್ರಮಂದಿರ, ಮಲ್ಟಿಪ್ಲೆಕ್ಸ್‌, ರಂಗಮಂದಿರ, ಸಭಾಭವನಗಳಲ್ಲಿ ಶೇ 50ರಷ್ಟು ಆಸನಗಳ ಭರ್ತಿಗಷ್ಟೇ ಅವಕಾಶ ಕಲ್ಪಿಸಿರುವುದು ತರ್ಕಬದ್ಧವಾಗಿಲ್ಲ. ಸ್ಟೇಡಿಯಂ, ಜಿಮ್‌ ಹಾಗೂ ಈಜುಕೊಳಗಳಲ್ಲಿ
ಕೂಡ ಶೇ 50ರಷ್ಟು ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ರ‍್ಯಾಲಿ, ಸಮಾವೇಶ ಸೇರಿದಂತೆ ರಾಜಕೀಯ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಿರುವುದು ಸರಿಯಾಗಿದೆ. ಬಿಕ್ಕಟ್ಟಿನ ಸನ್ನಿವೇಶದಲ್ಲಿ ಜನಸಾಮಾನ್ಯರ ಜೀವನೋಪಾಯದ ಮೇಲೆ ಪರಿಣಾಮ ಬೀರದ ರಾಜಕೀಯ ಅಥವಾ ಧಾರ್ಮಿಕ ಕಾರ್ಯಕ್ರಮಗಳನ್ನು ನಿರ್ಬಂಧಿಸುವುದರಲ್ಲಿ ಅರ್ಥವಿದೆ. ಆದರೆ, ಸಿನಿಮಾ ಪ್ರದರ್ಶನಕ್ಕೆ ವಿಧಿಸುವ ನಿರ್ಬಂಧ ಸಾವಿರಾರು ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ.ಸಿನಿಮಾ ಎಂದರೆ ಚಿತ್ರಮಂದಿರಗಳಲ್ಲಿನ ಪ್ರದರ್ಶನ ಎಂದಷ್ಟೇ ಅರ್ಥವಲ್ಲ. ಚಿತ್ರಮಂದಿರದಾಚೆಗೆ ಸಾವಿರಾರು ಕಾರ್ಮಿಕರ ಬದುಕು ಸಿನಿಮಾ ನಿರ್ಮಾಣದೊಂದಿಗೆ ತಳಕು ಹಾಕಿಕೊಂಡಿರುತ್ತದೆ. ಸಿನಿಮಾ ಪ್ರದರ್ಶನಕ್ಕೆ
ಅಡಚಣೆ ಉಂಟಾದಾಗ, ಅದರ ಪರಿಣಾಮ ನಿರ್ಮಾಣ ಚಟುವಟಿಕೆಗಳ ಮೇಲೂ ಆಗುತ್ತದೆ.

ಸುಮಾರು ಎರಡು ವರ್ಷಗಳಿಂದ ಚಿತ್ರೋದ್ಯಮ ಹಾಗೂ ರಂಗಭೂಮಿ ಚಟುವಟಿಕೆಗಳು ಕುಂಟತೊಡಗಿ, ಆ ಉದ್ಯಮಗಳನ್ನು ನೆಚ್ಚಿಕೊಂಡ ಕಾರ್ಮಿಕರು, ತಂತ್ರಜ್ಞರು, ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶೇ 50ರಷ್ಟು ಸೀಟು ಭರ್ತಿಗಷ್ಟೇ ಅವಕಾಶ ಇರುವಾಗ ಹೆಚ್ಚಿನ ಬಂಡವಾಳ ಹೂಡಿ ತಾರಾ ವರ್ಚಸ್ಸಿನ ಕಲಾವಿದರ ಸಿನಿಮಾಗಳನ್ನು ನಿರ್ಮಿಸಿದ ನಿರ್ಮಾಪಕರು ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲು ಹಿಂದೆಮುಂದೆ ನೋಡುವುದು ಸಹಜ. ದೊಡ್ಡ ಬಜೆಟ್‌ ಸಿನಿಮಾಗಳು ತೆರೆಕಾಣುವುದು ಮುಂದಕ್ಕೆ ಹೋದಂತೆಲ್ಲ ನಿರ್ಮಾಪಕನ ಹಣಕಾಸಿನ ಸ್ಥಿತಿ ಬಿಗಡಾಯಿಸುತ್ತಾ ಹೋಗಿ, ಅದರ ಬಿಸಿ ಉದ್ಯಮದ ಮೇಲೂ ಉಂಟಾಗುತ್ತದೆ. ಕೊರೊನಾದ ಮೊದಲೆರಡು ಅಲೆಗಳ ಸಂದರ್ಭದಲ್ಲಿ ಏಕತೆರೆಯ ಅನೇಕ ಚಿತ್ರಮಂದಿರಗಳು, ಶೇ 50ರ ಆಸನ ಭರ್ತಿಯೊಂದಿಗೆ ಕಾರ್ಯ ನಿರ್ವಹಿಸಲು ಅವಕಾಶ
ಇದ್ದರೂ ಸಿನಿಮಾ ಪ್ರದರ್ಶನವನ್ನು ಸ್ಥಗಿತಗೊಳಿಸಿದ್ದವು. ಕೆಲವು ಚಿತ್ರಮಂದಿರಗಳು ಶಾಶ್ವತವಾಗಿಯೂ ಬಾಗಿಲು ಮುಚ್ಚಿವೆ. ಪರಿಸ್ಥಿತಿ ಸುಧಾರಿಸಿತು ಎಂದುಕೊಳ್ಳುವಷ್ಟರಲ್ಲಿ ದಿಢೀರ್‌ ಎಂದೆರಗಿದ ಮೂರನೇ ಅಲೆಯಿಂದಾಗಿ ಚಿತ್ರಮಂದಿರಗಳ ಭವಿಷ್ಯ ಡೋಲಾಯಮಾನವಾಗಿದೆ. ನಿರ್ಬಂಧಗಳು ದೀರ್ಘಕಾಲ ಮುಂದುವರಿದಂತೆಲ್ಲ ನಿರ್ಮಾಪಕರು, ಪ್ರದರ್ಶಕರು, ವಿತರಕರು, ಕಲಾವಿದರು, ಕಾರ್ಮಿಕರಿಂದ ಹಿಡಿದು ಚಿತ್ರೋದ್ಯಮಕ್ಕೆ ಸಂಬಂಧಪಟ್ಟ ಎಲ್ಲರೂ ತೊಂದರೆಗೆ ಸಿಲುಕುತ್ತಾರೆ. ಎರಡು ವರ್ಷಗಳಿಂದ ಮನರಂಜನೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳು ಎದುರಿಸಿದ ಸಂಕಷ್ಟಗಳನ್ನು ನೆನಪಿನಲ್ಲಿರಿಸಿಕೊಂಡು, ಚಿತ್ರಮಂದಿರಗಳು ಮತ್ತು ರಂಗಮಂದಿರಗಳ ಮೇಲೆ ವಿಧಿಸಲಾದ ನಿರ್ಬಂಧಗಳನ್ನು ಸರ್ಕಾರ ತೆರವು
ಗೊಳಿಸಬೇಕಾಗಿದೆ.ಪ್ರೇಕ್ಷಕರು ಸಂಯಮ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸುವ ಹಾಗೂ ಒತ್ತಾಯಿಸುವ ಕೆಲಸವನ್ನು ಚಿತ್ರಮಂದಿರಗಳ ಮೂಲಕ ಸರ್ಕಾರ ಮಾಡಬೇಕೇ ಹೊರತು, ಮುನ್ನೆಚ್ಚರಿಕೆ ನೆಪದಲ್ಲಿ ಸಿನಿಮಾ ಮಂದಿರಗಳಿಗೆ ಪ್ರೇಕ್ಷಕರು ಬರುವುದಕ್ಕೆ ನಿರ್ಬಂಧಗಳನ್ನು ವಿಧಿಸುವುದು ಸರಿಯಲ್ಲ.ಪ್ರತೀ ಪ್ರದರ್ಶನಕ್ಕೆ ಮೊದಲು ಸಂಪೂರ್ಣ ಚಿತ್ರಮಂದಿರವನ್ನು ಸ್ವಚ್ಛಗೊಳಿಸುವುದು,
ಲಸಿಕೆ ಹಾಕಿಸಿಕೊಂಡವರಿಗಷ್ಟೇ ಪ್ರವೇಶ ಕಲ್ಪಿಸುವುದು ಸೇರಿದಂತೆ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವ ಮೂಲಕ ಮನರಂಜನಾ ಉದ್ಯಮ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು ಸರ್ಕಾರ ಅವಕಾಶ ಕಲ್ಪಿಸಬೇಕು. ಇದು ಕಾರ್ಮಿಕರ ಹಿತಾಸಕ್ತಿಯ ಪ್ರಶ್ನೆಯಷ್ಟೇ ಅಲ್ಲ, ಸರ್ಕಾರದ ಸಾಂಸ್ಕೃತಿಕ ಹೊಣೆಗಾರಿಕೆಯೂ ಹೌದು. ಮೂರ್ನಾಲ್ಕು ವರ್ಷಗಳಿಂದ ಪ್ರದಾನಗೊಳ್ಳದಿರುವ ಚಲನಚಿತ್ರ ಪ್ರಶಸ್ತಿಗಳು ಹಾಗೂ ಸಬ್ಸಿಡಿ ವಿತರಣೆಗೆ ಅನುವು ಮಾಡಿಕೊಡುವ ಮೂಲಕ ಚಿತ್ರೋದ್ಯಮಕ್ಕೆ ಸ್ಫೂರ್ತಿ ತುಂಬುವ ಕೆಲಸವನ್ನೂ ಸರ್ಕಾರ ಮಾಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT