ಬುಧವಾರ, ಜನವರಿ 19, 2022
27 °C

ಸಂಪಾದಕೀಯ: ಪೆಗಾಸಸ್ ಪ್ರಕರಣದ ತೀರ್ಪು; ತನಿಖೆಗೆ ಸಮಿತಿ ಸ್ವಾಗತಾರ್ಹ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ದೇಶದ ಜನ ಬಹಳ ನಿರೀಕ್ಷೆಯಿಂದ ಎದುರು ನೋಡುತ್ತಿದ್ದ ತೀರ್ಪೊಂದನ್ನು ಸುಪ್ರೀಂ ಕೋರ್ಟ್‌ ಬುಧವಾರ ಪ್ರಕಟಿಸಿದೆ. ಪೆಗಾಸಸ್ ಗೂಢಚರ್ಯೆ ಪ್ರಕರಣದಲ್ಲಿ ಕೋರ್ಟ್‌ ನೀಡಿರುವ ತೀರ್ಪು ಹಲವು ಕಾರಣಗಳಿಂದಾಗಿ ಮಹತ್ವದ್ದಾಗಲಿದೆ.

ದೇಶದ ನಾಗರಿಕರ ಮೂಲಭೂತ ಹಕ್ಕುಗಳು ಹಾಗೂ ಆ ಹಕ್ಕುಗಳಿಗೆ ಇರಬೇಕಾದ ಸಾಂಸ್ಥಿಕ ರಕ್ಷಣೆಯ ದೃಷ್ಟಿಯಿಂದ ಇದು ಸ್ಮರಣೀಯ ಆಗಲಿದೆ. ಈ ಹಕ್ಕುಗಳಿಗೆ ಈಗಿನ ಸಂದರ್ಭದಲ್ಲಿ ದೇಶದಲ್ಲಿ ಹಲವು ರೂಪಗಳಲ್ಲಿ ಸವಾಲುಗಳು ಎದುರಾಗುತ್ತಿವೆ. ಇಂತಹ ಹಲವು ಸವಾಲುಗಳಲ್ಲಿ ಅತ್ಯಂತ ಪ್ರಮುಖವಾದ ಒಂದು ಸವಾಲನ್ನು ಪೆಗಾಸಸ್ ಪ್ರಕರಣವು ಸಂಕೇತಿಸುವಂತೆ ಇದೆ. ಇಸ್ರೇಲ್‌ ಮೂಲದ ಒಂದು ಕಂಪನಿ ಸಿದ್ಧಪಡಿಸಿದ ತಂತ್ರಾಂಶವೊಂದನ್ನು ಬಳಸಿ ದೇಶದ ನಾಗರಿಕರ ಮೊಬೈಲ್‌ ಫೋನ್‌ಗಳ ಮೇಲೆ ನಿಗಾ ಇರಿಸಲಾಗಿತ್ತು, ನಾಗರಿಕರ ಖಾಸಗಿ ಬದುಕಿನ ಮೇಲೆ ಕಣ್ಣು ಇಡಲಾಗಿತ್ತು, ಇದು ವರ್ಷಗಳಿಂದ ನಡೆದಿತ್ತು ಎಂದು ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ನೇತೃತ್ವದಲ್ಲಿ ಒಂದು ಸಮಿತಿಯನ್ನು ಸುಪ್ರೀಂ ಕೋರ್ಟ್‌ ಈಗ ರಚಿಸಿದೆ. ಪೆಗಾಸಸ್ ತಂತ್ರಾಂಶ ಬಳಸಿ, ನಾಗರಿಕರ ಮೇಲೆ ಅಕ್ರಮವಾಗಿ ಕಣ್ಗಾವಲು ಇರಿಸಲಾಗಿತ್ತೇ ಎಂಬುದನ್ನು ಈ ಸಮಿತಿಯು ತನಿಖೆಗೆ ಒಳಪಡಿಸಲಿದೆ. ಸಮಿತಿಯು ನಡೆಸಲಿರುವ ತನಿಖೆಯು ಪೆಗಾಸಸ್ ಪ್ರಕರಣದ ಹಿಂದಿರುವ ಸತ್ಯವನ್ನು ಹೊರಗೆ ತರಲಿದೆ ಎಂಬ ಭರವಸೆ ಇರಿಸಿಕೊಳ್ಳಬಹುದು. ಇಡೀ ಪ್ರಕರಣದಲ್ಲಿ ತೆಗೆದುಕೊಂಡಿರಬಹುದಾದ ತಪ್ಪು ತೀರ್ಮಾನಗಳು ಹಾಗೂ ಇರಿಸಿರಬಹುದಾದ ತಪ್ಪು ಹೆಜ್ಜೆಗಳಿಗೆ ಯಾರು ಹೊಣೆ ಎಂಬುದನ್ನು ಸಮಿತಿಯು ಬಹಿರಂಗಪಡಿಸಬಹುದು.

ಈ ಸಮಿತಿಗೆ ತನಿಖೆಯಲ್ಲಿ ನೆರವು ನೀಡಲು ಹಲವು ತಜ್ಞರು ಇರಲಿದ್ದಾರೆ. ಸರ್ಕಾರವು ಪ್ರಕರಣದ ಬಗ್ಗೆ ತನಿಖೆ ನಡೆಸಲು ತಾನೇ ಒಂದು ಸಮಿತಿಯನ್ನು ರಚಿಸುವುದಾಗಿ ಹೇಳಿತ್ತು. ಆದರೆ, ಸರ್ಕಾರದ ಪ್ರಸ್ತಾವವನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿ ರುವುದು ಮಹತ್ವದ ಅಂಶ. ಪೆಗಾಸಸ್ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಮೇಲೆಯೇ ಅನುಮಾನದ ನೆರಳು ಇದೆ. ಹೀಗಿರುವಾಗ ಸರ್ಕಾರದ ಉಸ್ತುವಾರಿ ಯಲ್ಲಿಯೇ ಸಮಿತಿಯೊಂದು ಪ್ರಕರಣದ ಬಗ್ಗೆ ತನಿಖೆ ನಡೆಸುವುದು ಅದರ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಮೂಡಿಸುತ್ತಿತ್ತು. ಈ ತೀರ್ಪಿನ ಮೂಲಕ ಸುಪ್ರೀಂ ಕೋರ್ಟ್‌, ದೇಶದ ಜನರ ಮೂಲಭೂತ ಹಕ್ಕುಗಳ ಅತ್ಯಂತ ವಿಶ್ವಾಸಾರ್ಹ ಸಂರಕ್ಷಕ ತಾನು ಎಂಬುದನ್ನು ಮತ್ತೊಮ್ಮೆ ಗಟ್ಟಿ ದನಿಯಲ್ಲಿ ಹೇಳಿದಂತೆ ಆಗಿದೆ. ‘ಜನರ ಖಾಸಗಿತನದ ಪ್ರತೀ ಉಲ್ಲಂಘನೆಯೂ, ಸಾಂವಿಧಾನಿಕ ಅನಿವಾರ್ಯತೆ ಹಾಗೂ ಉಲ್ಲಂಘನೆಯ ಅಗತ್ಯತೆಯ ಪರೀಕ್ಷೆಯಲ್ಲಿ ಉತ್ತೀರ್ಣವಾಗಬೇಕು’ ಎಂದು ಕೋರ್ಟ್‌ ಹೇಳಿದೆ.

‘ಕಾನೂನಿನ ಬೆಂಬಲ ಇಲ್ಲದೆ ಈ ರೀತಿ ಖಾಸಗಿತನದ ಉಲ್ಲಂಘನೆ ಆಗುವುದಕ್ಕೆ ಅವಕಾಶ ಕೊಡಲಾಗದು’ ಎಂದೂ ಕೋರ್ಟ್‌ ಸಾರಿದೆ. ಸುಪ್ರೀಂ ಕೋರ್ಟ್‌ನ ಈ ಮಾತುಗಳು ನಾಗರಿಕರ ಹಕ್ಕುಗಳ ಬಗ್ಗೆ ಕಾಳಜಿ ಇರುವ ವ್ಯಕ್ತಿಗಳಲ್ಲಿ, ಪ್ರಜಾತಂತ್ರದ ಬಗ್ಗೆ ಪ್ರೀತಿ ಇರುವವರಲ್ಲಿ ಬಹಳ ವಿಶ್ವಾಸ ಮೂಡಿಸುವಂತಹವು. ದೇಶದ ಪ್ರಜೆಗಳ ಹಕ್ಕುಗಳನ್ನು ಸಂರಕ್ಷಿಸುವ ವಿಚಾರದಲ್ಲಿ ತಾನು ಯಾವ ರಾಜಿಗೂ ಸಿದ್ಧವಿಲ್ಲ ಎಂಬ ಸಂದೇಶವನ್ನು ಕೋರ್ಟ್‌ ರವಾನಿಸಿದೆ.

ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ತೀಕ್ಷ್ಣವಾಗಿ ಟೀಕಿಸಿರುವುದು ಮಹತ್ವದ್ದು. ಸರ್ವಾಧಿಕಾರದ ಕುರಿತು ಜಾರ್ಜ್‌ ಆರ್ವೆಲ್ ಬರೆದಿರುವ ‘1984’ ಕಾದಂಬರಿಯನ್ನು ಕೋರ್ಟ್‌ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಈ ಉಲ್ಲೇಖವೇ ಇಂದಿನ ಸಂದರ್ಭದಲ್ಲಿ ಬಹಳ ಮಹತ್ವದ್ದು. ಕೋರ್ಟ್‌ ಕೇಳಿದ ಮಾಹಿತಿಯನ್ನು ಸಲ್ಲಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿತ್ತು. ಮಾಹಿತಿ ನೀಡದೆ ಇರುವುದಕ್ಕೆ ರಾಷ್ಟ್ರದ ಭದ್ರತೆಯ ನೆಪವನ್ನು ಮುಂದೆ ಮಾಡಿತ್ತು. ಸರ್ಕಾರದ ಈ ವಾದವನ್ನು ಕೋರ್ಟ್‌ ತಿರಸ್ಕರಿಸಿದೆ. ಸರ್ಕಾರವು ಜನರ ಹಕ್ಕುಗಳನ್ನು ಮೊಟಕುಗೊಳಿಸಲು ಯತ್ನಿಸಿದ ಇತರ ಪ್ರಕರಣಗಳಲ್ಲಿಯೂ ಈ ಪ್ರಕರಣದಲ್ಲಿನ ತೀರ್ಪು ಮಹತ್ವದ್ದಾಗಬಹುದು. ಸುಪ್ರೀಂ ಕೋರ್ಟ್‌ ಈಗ ನೇಮಕ ಮಾಡಿರುವ ಸಮಿತಿಯು ಪ್ರಕರಣದ ತನಿಖೆ ನಡೆಸುವುದಷ್ಟೇ ಅಲ್ಲದೆ, ಜನರ ಹಕ್ಕುಗಳನ್ನು ರಕ್ಷಿಸಲು ಅಗತ್ಯವಿರುವ ಕಾನೂನು ಕುರಿತು ಶಿಫಾರಸು ಮಾಡಲಿದೆ. ಸರ್ಕಾರವು ಈ ಸಮಿತಿಗೆ ತನ್ನ ಪೂರ್ಣ ಸಹಕಾರವನ್ನು ನೀಡಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು