ಶುಕ್ರವಾರ, ಆಗಸ್ಟ್ 23, 2019
25 °C

ಹುಲಿ ಸಂಖ್ಯೆ ಏರಿಕೆ ಆಶಾದಾಯಕ ಬೆಳವಣಿಗೆ

Published:
Updated:
Prajavani

ರಾಷ್ಟ್ರೀಯ ಹುಲಿ ಗಣತಿಯ ಫಲಿತಾಂಶ ಹೊರಬಿದ್ದಿದ್ದು, ಭಾರತದ ಕಾಡುಗಳಲ್ಲಿ 2,967 ವ್ಯಾಘ್ರಗಳಿವೆ ಎಂದು ಅಂದಾಜಿಸಲಾಗಿದೆ. 2014ರ ಗಣತಿಗೆ ಹೋಲಿಸಿದರೆ, 741 ಹುಲಿಗಳು ಹೆಚ್ಚಾಗಿರುವುದು ಕಂಡುಬಂದಿದೆ. ಅಂದರೆ ಶೇ 33ರಷ್ಟು ಏರಿಕೆಯಾಗಿದೆ. ಇದೊಂದು ಮಹತ್ವದ ಬೆಳವಣಿಗೆ. ಹುಲಿಗಳ ಸಂಖ್ಯೆ ಹೆಚ್ಚಾಗಿದೆ ಎಂದರೆ, ಕಾಡಿನ ಸಂರಕ್ಷಣೆ ಸಮರ್ಪಕವಾಗಿದೆ, ಹುಲಿಗೆ ಬೇಕಾದ ಬಲಿಪ್ರಾಣಿಗಳ ಸಂಖ್ಯೆಯೂ ಹೆಚ್ಚಳವಾಗಿದೆ ಎಂದೇ ಅರ್ಥ. 2022ರ ಒಳಗೆ ಹುಲಿಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡಬೇಕು ಎಂದು ಒಂಬತ್ತು ವರ್ಷಗಳ ಹಿಂದೆ ರಷ್ಯಾದ ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಸಂಕಲ್ಪ ಮಾಡಲಾಗಿತ್ತು. ಆದರೆ ಈ ಗುರಿಯನ್ನು ಭಾರತ ನಾಲ್ಕು ವರ್ಷಗಳಿಗೆ ಮೊದಲೇ ಮುಟ್ಟಿದೆ ಎನ್ನುವುದು ಸಂತಸದಾಯಕ. 2006ರಲ್ಲಿ ಪ್ರಥಮ ಹುಲಿ ಗಣತಿ ನಡೆಯಿತು. ಆ ವೇಳೆ, ಭಾರತದಲ್ಲಿ 1,411 ಹುಲಿಗಳು ಇದ್ದವು ಎಂದು ಅಂದಾಜಿಸಲಾಗಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ರಾಜರ ಆಳ್ವಿಕೆ ಮತ್ತು ಬ್ರಿಟಿಷ್‌ ಆಡಳಿತದಲ್ಲಿ ನಡೆದ ನಿರಂತರ ಬೇಟೆ ಹಾಗೂ ಕಾಡಿನ ಸಂರಕ್ಷಣೆಗೆ ಒತ್ತು ಸಿಗದ ಪರಿಣಾಮವಾಗಿ ಹುಲಿಗಳ ಸಂಖ್ಯೆ ನಿರಂತರವಾಗಿ ಕುಸಿದಿತ್ತು. ಸ್ವಾತಂತ್ರ್ಯಾ ನಂತರ ಕಾಡು ಮತ್ತು ಕಾಡುಪ್ರಾಣಿಗಳ ಸಂರಕ್ಷಣೆ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ಹಲವು ದಿಟ್ಟ ಕ್ರಮಗಳಿಂದ ಹುಲಿಗಳ ಸಂಖ್ಯೆಯಲ್ಲಿ ಏರಿಕೆ ಉಂಟಾಗಿದೆ. ಹುಲಿಗಳ ಏರಿಕೆ ಪ್ರಮಾಣವು 2006– 2010ರ ಅವಧಿಯಲ್ಲಿ ಶೇ 21ರಷ್ಟು ಹಾಗೂ 2010–2014ರ ಅವಧಿಯಲ್ಲಿ ಶೇ 30ರಷ್ಟು ಇತ್ತು. ಇದೀಗ ಆಗಿರುವ ಏರಿಕೆಯು ಸಾರ್ವಕಾಲಿಕ ದಾಖಲೆ. ಆದರೆ ಛತ್ತೀಸಗಡ ಮತ್ತು ಮಿಜೋರಾಂನಲ್ಲಿ ಹುಲಿಗಳ ಸಂಖ್ಯೆ ಕುಸಿದಿದೆ. ಉಳಿದಂತೆ ಶಿವಾಲಿಕ್‌ ಬೆಟ್ಟಗಳು ಮತ್ತು ಗಂಗಾ ಬಯಲು, ಪಶ್ಚಿಮಘಟ್ಟ, ಈಶಾನ್ಯ ಬೆಟ್ಟಗಳು, ಮಧ್ಯಭಾರತ ಮತ್ತು ಪೂರ್ವಘಟ್ಟದಲ್ಲಿ ಹುಲಿಗಳ ಸಂಖ್ಯೆ ಏರಿಕೆಯಾಗಿದೆ. ‘ರಾಷ್ಟ್ರಪ್ರಾಣಿ’ಯಾದ ಹುಲಿಯ ಸಂಖ್ಯೆಯು ಕರ್ನಾಟಕದಲ್ಲಿ ಏರಿಕೆಯಾಗಿದ್ದರೂ ರಾಜ್ಯಗಳ ಪೈಕಿ ಅಗ್ರಸ್ಥಾನ ಕೈತಪ್ಪಿದೆ. 2014ರಲ್ಲಿ ರಾಜ್ಯದಲ್ಲಿ 406 ಇದ್ದ ಹುಲಿಗಳ ಸಂಖ್ಯೆ ಇದೀಗ 524ಕ್ಕೆ ಏರಿದೆ. ಬಂಡೀಪುರ ಮತ್ತು ನಾಗರಹೊಳೆ ಅಭಯಾರಣ್ಯಗಳ ವಿಸ್ತೀರ್ಣವನ್ನು ಗಮನಿಸಿದರೆ, ಹುಲಿಗಳ ಸಂಖ್ಯೆ ಗರಿಷ್ಠ ಮಟ್ಟವನ್ನು ತಲುಪಿದೆ. ಹೀಗಾಗಿ, ಮೊದಲ ಸ್ಥಾನ ಕಳೆದುಕೊಂಡಿರುವುದನ್ನು ಹಿನ್ನಡೆ ಎಂದು ಭಾವಿಸಬೇಕಾಗಿಲ್ಲ.

ಮಧ್ಯಪ್ರದೇಶವು 526 ವ್ಯಾಘ್ರಗಳಿಗೆ ನೆಲೆ ಕಲ್ಪಿಸುವ ಮೂಲಕ ಮೊದಲ ಸ್ಥಾನಕ್ಕೆ ಏರಿದೆ. 1995ರಿಂದಲೂ ಇದು ‘ಹುಲಿರಾಜ್ಯ’ ಎಂದೇ ಹೆಸರುವಾಸಿಯಾಗಿತ್ತು. ದೇಶದ ಒಟ್ಟು ಹುಲಿಗಳ ಪೈಕಿ ಶೇ 20ರಷ್ಟು ಆ ರಾಜ್ಯದಲ್ಲೇ ಇದ್ದವು. ಕಳೆದ ಗಣತಿಯ ವೇಳೆ 308ರಷ್ಟಿದ್ದ ಸಂಖ್ಯೆಯಲ್ಲಿ ಈಗ ಭಾರಿ ಏರಿಕೆಯಾಗಿದೆ. ಈ ಬೆಳವಣಿಗೆಗೆ ಮತ್ತೊಂದು ಕಾರಣವಿದೆ. ಗಣತಿಗೆ ಒಂದು ವರ್ಷದ ಮರಿಗಳನ್ನೂ ಪರಿಗಣಿಸಲಾಗಿದೆ. ಈ ಎಲ್ಲ ಮರಿಗಳು ಬದುಕುಳಿಯಬಹುದು ಎಂಬ ಖಾತರಿ ಇರುವುದಿಲ್ಲ. ಈ ಅಂಶ ವಿವಾದಕ್ಕೆ ಕಾರಣವಾಗಿದೆ. ಸೇಂಟ್‌ ಪೀಟರ್ಸ್‌ಬರ್ಗ್‌ ಶೃಂಗಸಭೆ ನಿಗದಿ ಮಾಡಿದ ಗುರಿ ತಲುಪಲು ಕೇಂದ್ರ ಸರ್ಕಾರ ಅಡ್ಡದಾರಿ ಹಿಡಿದಿದೆ ಎನ್ನುವ ಅಪಸ್ವರವು ಸಂರಕ್ಷಣಾ ವಿಜ್ಞಾನಿಗಳಿಂದ ಕೇಳಿಬರುತ್ತಿದೆ. ಕರ್ನಾಟಕದ ಹುಲಿ ಸಂರಕ್ಷಣೆಯನ್ನು ಗಮನಿಸಿದರೆ, ಅತಿಹೆಚ್ಚು ಹುಲಿಗಳಿರುವ ನೀಲಗಿರಿ ಅಭಯಾರಣ್ಯದ ಭಾಗವಾದ ಬಂಡೀಪುರ ಮತ್ತು ನಾಗರಹೊಳೆಯ ಸುತ್ತಮುತ್ತ ಕಾಡಿನಂಚಿನಲ್ಲಿ ಜನವಸತಿ ಪ್ರದೇಶಗಳಿವೆ. ಇಲ್ಲಿ ವನ್ಯಜೀವಿ– ಮಾನವ ಸಂಘರ್ಷ ನಿರಂತರವಾಗಿ ನಡೆಯುತ್ತಲೇ ಇದೆ. ಕಾಡಿನ ಅಂಚಿನಲ್ಲಿ ವಾಣಿಜ್ಯ ಚಟುವಟಿಕೆಯ ಮೇಲೆ ನಿಷೇಧ ಹೇರಿದರೂ ಸಂಘರ್ಷ ಕಡಿಮೆಯಾಗಿಲ್ಲ. ಬಿಳಿಗಿರಿರಂಗನ ಬೆಟ್ಟ ಅರಣ್ಯದ ಹೊರವಲಯದಲ್ಲಿ 50ಕ್ಕೂ ಹೆಚ್ಚು ಸೋಲಿಗರ ಪೋಡುಗಳಿವೆ. ಕಾಡಿನ ನಡುವೆಯೇ ಐದಾರು ಪೋಡುಗಳಿವೆ. ಇದೇ ಕಾಡುಗಳ ನಡುವೆ ಊಟಿ, ಸತ್ಯಮಂಗಲ– ಚಾಮರಾಜನಗರ, ಕೊಳ್ಳೇಗಾಲ– ಹನೂರು ಮತ್ತು ಗುಂಡ್ಲುಪೇಟೆ– ಸುಲ್ತಾನ್‌ಬತ್ತೇರಿ ಸಂಪರ್ಕ ರಸ್ತೆಗಳಿವೆ. ಇಲ್ಲಿ ವಾಣಿಜ್ಯ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಕಾವೇರಿ ಅಭಯಾರಣ್ಯ ಮತ್ತು ಮಹದೇಶ್ವರ ಬೆಟ್ಟ ಅರಣ್ಯದಲ್ಲಿ ಹುಲಿ ಸಂತತಿ ವೃದ್ಧಿಗೆ ಅವಕಾಶವಿದ್ದರೂ ಕಾಡುಗಳ ನಡುವಿನ ಸಂಪರ್ಕ ಕಾರಿಡಾರ್‌ ತುಂಡರಿಸಿದೆ. ಇದೇ ಕಾರಣಕ್ಕೆ ರಾಜ್ಯದ ದಾಂಡೇಲಿ, ಭದ್ರಾ ಅಭಯಾರಣ್ಯದಲ್ಲೂ ವ್ಯಾಘ್ರನ ಸಂತತಿ ವೃದ್ಧಿಗೆ ಅವಕಾಶ ಕಡಿಮೆಯಾಗಿದೆ. ಹುಲಿ ಅಭಯಾರಣ್ಯ ಸೇರಿದಂತೆ ಎಲ್ಲಾ ರೀತಿಯ ಕಾಡುಗಳ ನಡುವೆ ಕಾರಿಡಾರ್‌ ಇದ್ದರೆ ಮಾತ್ರ ಪ್ರಾಣಿಗಳ ನಿರಂತರ ಓಡಾಟಕ್ಕೆ ಅವಕಾಶವಾಗುತ್ತದೆ. ಹುಲಿಯ ವಲಸೆಗೆ ಆಗಮಾತ್ರ ಅವಕಾಶ ದೊರಕುತ್ತದೆ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಮನಹರಿಸಬೇಕು. ಇಲ್ಲವಾದರೆ ಮಾನವ– ವನ್ಯಜೀವಿ ಸಂಘರ್ಷ ನಿವಾರಿಸುವುದು ಕಷ್ಟಸಾಧ್ಯ.

Post Comments (+)