ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ: ವಿವೇಚನಾ ರಹಿತ ಕ್ರಮ

Last Updated 28 ನವೆಂಬರ್ 2019, 4:56 IST
ಅಕ್ಷರ ಗಾತ್ರ

ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಯೋಜನೆಯನ್ನು ಇಡೀ ದೇಶದಲ್ಲಿ ಜಾರಿಗೆ ತರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಂಸತ್ತಿನಲ್ಲಿ ಪ್ರಕಟಿಸಿದ್ದಾರೆ. ಪಕ್ಷದ ರ್‍ಯಾಲಿಗಳಲ್ಲಿ ಮತ್ತು ಸಾರ್ವಜನಿಕ ಸಭೆಗಳಲ್ಲಿ ಅವರು ಈ ವಿಷಯವನ್ನು ಹಿಂದೆ ಹಲವು ಸಲ ಹೇಳಿದ್ದುಂಟು. ಆದರೆ ಈಗ ಸಂಸತ್ತಿನಲ್ಲಿ ಇದನ್ನು ಪ್ರಕಟಿಸುವ ಮೂಲಕ, ಜೇನುಗೂಡಿಗೆ ಕಲ್ಲು ಹೊಡೆಯುವ ಕೆಲಸವೊಂದನ್ನು ಸರ್ಕಾರ ಮಾಡಲು ಹೊರಟಿದೆ ಎನ್ನುವುದು ನಿಸ್ಸಂಶಯ. ರಾಷ್ಟ್ರೀಯ ಪೌರತ್ವ ನೋಂದಣಿ ಯೋಜನೆಯುಅಸ್ಸಾಂನಲ್ಲಿ ಈಗಾಗಲೇ ಹುಟ್ಟುಹಾಕಿರುವ ವಿವಾದಗಳನ್ನು ಬಗೆಹರಿಸಲು ಸಾಧ್ಯವಾಗದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಕೈಚೆಲ್ಲಿ ಕುಳಿತಿವೆ. ಅಸ್ಸಾಂನಲ್ಲಿ ಅಂತಿಮಗೊಳಿಸಿದ ಎನ್‌ಆರ್‌ಸಿ ಪಟ್ಟಿಯಲ್ಲಿ ಹೆಸರು ಒಳಗೊಳ್ಳದ ಸುಮಾರು 19 ಲಕ್ಷ ಜನರ ಭವಿಷ್ಯ ಏನು ಎನ್ನುವುದರ ಬಗ್ಗೆ ಕೇಂದ್ರ ಸರ್ಕಾರಕ್ಕೇ ಸ್ಪಷ್ಟತೆ ಇಲ್ಲ.

ಯೋಜನೆ ಜಾರಿಗೊಳಿಸಿದ ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರವೇ ಈ ಪಟ್ಟಿ ಸರಿಯಿಲ್ಲ ಎಂದು ತಿರಸ್ಕರಿಸಿದೆ. ಈ ಪಟ್ಟಿ ಆಗಬೇಕೆಂದು ಹೋರಾಟ ನಡೆಸಿದ ಅಲ್ಲಿನ ಬಿಜೆಪಿ ಘಟಕವೂ ಪಟ್ಟಿಯನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಈಗ ಅದೇ ಯೋಜನೆಯನ್ನು ಮತ್ತೆ ಅಸ್ಸಾಂನಲ್ಲಿ ಹಾಗೂ ಇಡೀ ದೇಶದಲ್ಲಿ ಜಾರಿಗೊಳಿಸುವ ಅಗತ್ಯವಾದರೂ ಏನಿದೆ? ದೇಶದ 130 ಕೋಟಿ ಜನರನ್ನು ‘ನಿಮ್ಮ ಪೌರತ್ವ ಸಾಬೀತುಪಡಿಸಿ’ ಎಂದು ಕೇಳುವುದರ ಹಿಂದಿನ ಉದ್ದೇಶವಾದರೂ ಏನು? ಭೂತಾನ್‌ ಮತ್ತು ಬಾಂಗ್ಲಾದೇಶದ ಜೊತೆಗೆ ಗಡಿ ಹೊಂದಿರುವ ಅಸ್ಸಾಂನಲ್ಲಿ, ಬಾಂಗ್ಲಾದೇಶ ರಚನೆಯಾದ ಸಂದರ್ಭದ ವಲಸೆ ಸೃಷ್ಟಿಸಿರುವ ಸಂಕಟ ನಿವಾರಣೆಯಾಗಿಲ್ಲ ಮತ್ತು ಸಂಘರ್ಷ ಇನ್ನೂ ಮುಗಿದಿಲ್ಲ. ಹಾಗಾಗಿ, ಸುಪ್ರೀಂ ಕೋರ್ಟ್‌ನ ಸೂಚನೆಯಂತೆ ಎನ್‌ಆರ್‌ಸಿ ಯೋಜನೆ ಜಾರಿಗೊಳಿಸಲಾಯಿತು. ಅದಕ್ಕೆ ಪೂರಕವಾಗಿ 1985ರ ಅಸ್ಸಾಂ ಒಪ್ಪಂದವಿತ್ತು; ವಲಸಿಗರನ್ನು ಗುರುತಿಸಲು 1971 ಅನ್ನು ಮೂಲವರ್ಷವಾಗಿ ತೆಗೆದುಕೊಳ್ಳಬೇಕೆಂಬ ಸುಪ್ರೀಂ ಕೋರ್ಟ್‌ನ ಸೂಚನೆಯೂ ಇತ್ತು. ಆದರೆ ದೇಶದ ಇತರ ರಾಜ್ಯಗಳಲ್ಲಿ ಅಂತಹ ಪರಿಸ್ಥಿತಿಯೇನೂ ಇಲ್ಲ. ಹಾಗಿದ್ದೂ ದೇಶದಾದ್ಯಂತ ಪೌರತ್ವ ನೋಂದಣಿ ಯೋಜನೆ ಜಾರಿಗೊಳಿಸುವ ಮೂಲಕ ಅನಗತ್ಯ ತಾಪತ್ರಯಗಳನ್ನು ಸೃಷ್ಟಿಸುವುದು ಮುತ್ಸದ್ದಿತನದ ಕ್ರಮವಲ್ಲ. ಅಸ್ಸಾಂನಲ್ಲಿ ಸಿದ್ಧಪಡಿಸಿರುವ ಪೌರತ್ವ ನೋಂದಣಿ ಪಟ್ಟಿಯನ್ನು, ರಾಜಕಾರಣಿಗಳಿಗೆ ಸಮ್ಮತಿಯಿಲ್ಲ ಎನ್ನುವ ಕಾರಣಕ್ಕೆ ಮರುಪರಿಶೀಲಿಸಲು ಸುಪ್ರೀಂ ಕೋರ್ಟ್‌ ಕೂಡಾ ಒಪ್ಪುವ ಸಾಧ್ಯತೆ ಇಲ್ಲ.

‘ರಾಷ್ಟ್ರೀಯ ಪೌರತ್ವ ನೋಂದಣಿ ಯೋಜನೆಯು ಬಿಜೆಪಿಗೆ ರಾಜಕೀಯ ಲಾಭವನ್ನು ಗಳಿಸಿಕೊಡುವ ಯೋಜನೆಯಂತೆ ಕಾಣುತ್ತಿದೆ. ಅಯೋಧ್ಯೆಯ ಬಾಬರಿ ಮಸೀದಿ– ರಾಮಜನ್ಮಭೂಮಿ ವಿವಾದ ಮುಗಿದ ಬಳಿಕ, ರಾಷ್ಟ್ರಮಟ್ಟದಇನ್ನೊಂದು ರಾಜಕೀಯ ವಿವಾದದ ಅಗತ್ಯ ಬಿಜೆಪಿಗೆ ಇದ್ದಂತಿದೆ. ಈ ಹಿನ್ನೆಲೆಯಲ್ಲೇ ದೇಶದಾದ್ಯಂತ ಎನ್‌ಆರ್‌ಸಿ ಜಾರಿಯ ಕುರಿತು ಅಮಿತ್‌ ಶಾ ಮಾತನಾಡುತ್ತಿದ್ದಾರೆ’ ಎಂದು ವಿರೋಧ ಪಕ್ಷಗಳು ಆಪಾದಿಸಿವೆ. ಅಸ್ಸಾಂ ಒಂದರಲ್ಲೇ ಈ ಯೋಜನೆಯ ಜಾರಿಗೆಸರ್ಕಾರವು ₹ 1,300 ಕೋಟಿ ಖರ್ಚು ಮಾಡಿದೆ. ಜೊತೆಗೆ 2–3 ಸಲ ಪರಿಷ್ಕರಿಸಲಾದ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಲು ಲಕ್ಷಾಂತರ ಜನರು ಸಾವಿರಾರು ರೂಪಾಯಿ ಖರ್ಚು ಮಾಡಿದ್ದು, ವರ್ಷಗಳ ಕಾಲ ಕಚೇರಿಯಿಂದ ಕಚೇರಿಗೆ ಅಲೆದಾಡಿದ್ದಾರೆ. ಅಸ್ಸಾಂನಲ್ಲಿ ಮುಸ್ಲಿಮರ ವಿರುದ್ಧ ಕುತ್ಸಿತ ರಾಜಕೀಯ ಪ್ರಚಾರಕ್ಕೆ ಈ ಯೋಜನೆ ಬಳಕೆಯಾದದ್ದು ಮೇಲ್ನೋಟಕ್ಕೆ ಕಂಡುಬಂದ ಸಂಗತಿ.

ಅಲ್ಲಿ ಪ್ರಜೆಗಳ ಮಧ್ಯೆ ಪರಸ್ಪರ ಅಪನಂಬಿಕೆ, ವೈಷಮ್ಯಗಳನ್ನು ಹುಟ್ಟುಹಾಕಿದ್ದೊಂದೇ ಈ ಯೋಜನೆಯ ಸಾಧನೆ. ಈಗ ಇಡೀ ದೇಶದಲ್ಲಿ ಅಂತಹ ಕಹಿ ಸ್ಥಿತಿಯನ್ನು ಸೃಷ್ಟಿಸಲು ಅಮಿತ್‌ ಶಾ ಹೊರಟಂತಿದೆ. ಈ ಯೋಜನೆಯ ಜಾರಿಗೆ ಸಾವಿರಾರು ಕೋಟಿ ರೂಪಾಯಿ ವೆಚ್ಚವಾಗಲಿದೆ. ಬೊಕ್ಕಸದ ಮೇಲೆ ಅಷ್ಟೊಂದು ಹೊರೆ ಹೇರಬೇಕಾದ ಅಗತ್ಯ ಇದೆಯೇ? ಜನನ ಮತ್ತು ಮರಣ ಪ್ರಮಾಣಪತ್ರಗಳನ್ನೂ ಸರಿಯಾಗಿ ಇಟ್ಟುಕೊಳ್ಳದ ಲಕ್ಷಾಂತರ ಜನರು ಇರುವ ದೇಶದಲ್ಲಿ, ಪೌರತ್ವ ನೋಂದಣಿ ಮಾಡುವ ಹೊಸ ಯೋಜನೆಯ ಜಾರಿಯು ಪ್ರಜೆಗಳಲ್ಲಿ ಅನಗತ್ಯ ಭಯ ಮತ್ತು ಆತಂಕಗಳನ್ನು ಸೃಷ್ಟಿಸುವುದು ಖಂಡಿತ. ರಾಷ್ಟ್ರೀಯ ಪೌರತ್ವ ನೋಂದಣಿ ಯೋಜನೆ ಜಾರಿಯ ಈ ವಿವೇಚನಾರಹಿತ ನಿರ್ಧಾರವನ್ನು ಸರ್ಕಾರ ಕೈಬಿಡುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT