ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಪರಿವರ್ತಕಗಳ ಸ್ಥಳಾಂತರ ಕಾಲಮಿತಿಯೊಳಗೆ ಪೂರ್ಣಗೊಳ್ಳಲಿ

Last Updated 27 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಸಾರ್ವಜನಿಕ ಸ್ಥಳಗಳಲ್ಲಿ ಸಂಭವಿಸಿದ ವಿದ್ಯುತ್‌ ಅವಘಡಗಳಿಂದಾಗಿ ಬೆಂಗಳೂರಿನಲ್ಲಿ ಒಂದು ತಿಂಗಳ ಅವಧಿಯಲ್ಲಿ ನಾಲ್ಕು ಮಂದಿ ಜೀವ ಕಳೆದುಕೊಂಡಿದ್ದಾರೆ. ನಗರದ ಹೊರವಲಯದ ಮಂಗನಹಳ್ಳಿ ಎಂಬಲ್ಲಿ ವಿದ್ಯುತ್‌ ಪರಿವರ್ತಕ ಸ್ಫೋಟಗೊಂಡು ತಂದೆ ಹಾಗೂ ಮಗಳು ಮೃತಪಟ್ಟಿದ್ದರೆ, ಇನ್ನೆರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಯುವಕರು ವಿದ್ಯುತ್‌ ಪ್ರವಹಿಸುತ್ತಿದ್ದ ತಂತಿ ಹಾಗೂ ಕೇಬಲ್‌ ಸ್ಪರ್ಶದಿಂದ ಅಸುನೀಗಿದ್ದಾರೆ. ವಿದ್ಯುತ್‌ ಅವಘಡಗಳನ್ನು ತಪ್ಪಿಸುವ ವಿಚಾರದಲ್ಲಿ ಬೆಸ್ಕಾಂ ಎಷ್ಟರಮಟ್ಟಿಗೆ ಅಸಡ್ಡೆ ವಹಿಸಿದೆ ಎಂಬುದನ್ನು ಈ ಸಾವುಗಳು ಬೊಟ್ಟು ಮಾಡಿ ತೋರಿಸುತ್ತಿವೆ. ರಸ್ತೆ ಪಕ್ಕ, ರಾಜಕಾಲುವೆ
ಗಳಲ್ಲಿ, ಪಾದಚಾರಿ ಮಾರ್ಗಗಳಲ್ಲಿ ಎಲ್ಲೆಂದರಲ್ಲಿ ಅಳವಡಿಸಿರುವ ವಿದ್ಯುತ್‌ ಪರಿವರ್ತಕಗಳು ಪಾದಚಾರಿಗಳ ಜೀವಕ್ಕೆ ಕಂಟಕಪ್ರಾಯವಾಗುತ್ತಿವೆ. ಅನೇಕ ಕಡೆ ಸಾರ್ವಜನಿಕರ ಜೀವಕ್ಕೆ ಸಂಚಕಾರ ತರಬಲ್ಲ ಸ್ಥಿತಿಯಲ್ಲಿ ನೆಲಮಟ್ಟದಲ್ಲೇ ಇವುಗಳನ್ನು ಸ್ಥಾಪಿಸಲಾಗಿದೆ. ಪ್ರಯಾಣಿಕರ ತಂಗುದಾಣಗಳ ಸಮೀಪದಲ್ಲೂ ಇವುಗಳನ್ನು ಅಳವಡಿಸಿರುವುದನ್ನು ಕಾಣಬಹುದು. ಇನ್ನು ಕೆಲವೆಡೆ ಈಗಲೂ ಹಳೆಯ ಕಂಬಗಳಲ್ಲೇ ವಿದ್ಯುತ್‌ ಪರಿವರ್ತಕಗಳಿದ್ದು, ಅವುಗಳಲ್ಲಿ ಜೋತು ಬಿದ್ದಿರುವ ವಿದ್ಯುತ್ ತಂತಿಗಳು ಅಪಾಯಕ್ಕೆ ಆಹ್ವಾನ ನೀಡುವಂತಿವೆ. ವಾಹನಗಳು ಸಂಚರಿಸುವಾಗ ಇಂತಹ ವಿದ್ಯುತ್‌ ತಂತಿ ಸ್ಪರ್ಶಿಸುವ ಸಾಧ್ಯತೆಯೂ ಇದೆ. ಜಾಗದ ಕೊರತೆ ಇರುವುದರಿಂದ ಕೆಲವೆಡೆ ಜನರು ಓಡಾಡುವ ಕಡೆಯೇ ವಿದ್ಯುತ್‌ ಪರಿವರ್ತಕಗಳನ್ನು ಅನಿವಾರ್ಯವಾಗಿ ಅಳವಡಿಸಬೇಕಾಗುತ್ತದೆ ಎನ್ನುವುದು ಬೆಸ್ಕಾಂ ವಾದ. ಇಂತಹ ಅನಿವಾರ್ಯ ಇದ್ದಾಗ ಅವುಗಳನ್ನು ಎತ್ತರಿಸಿದ ಸ್ಥಳದಲ್ಲಿ ಸ್ಥಾಪಿಸುವ ಮೂಲಕ ಅಪಾಯ ತಡೆಗಟ್ಟಬೇಕು. ಕನಿಷ್ಠಪಕ್ಷ ಅವುಗಳನ್ನು ಅಳವಡಿಸಿರುವ ಸ್ಥಳಕ್ಕೆ ಜನರು ತಲುಪುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು.ನೆಲದಲ್ಲೇ ವಿದ್ಯುತ್‌ ಪರಿವರ್ತಕಗಳನ್ನು ಸ್ಥಾಪಿಸಿರುವ ಅನೇಕ ಕಡೆಗಳಲ್ಲಿ, ಸುರಕ್ಷತೆಗಾಗಿ ಬೇಲಿಯನ್ನು ಕೂಡ ನಿರ್ಮಿಸಿಲ್ಲ. ಇದು ಬೆಸ್ಕಾಂನ ನಿರ್ಲಕ್ಷ್ಯದ ಪರಮಾವಧಿ.

ಬೆಂಗಳೂರು ನಗರದಾದ್ಯಂತ ಒಟ್ಟು 70,267 ವಿದ್ಯುತ್ ಪರಿವರ್ತಕಗಳಿವೆ. ಇವುಗಳಲ್ಲಿ 8,659 ಟ್ರಾನ್ಸ್‌
ಫಾರ್ಮರ್‌ಗಳು ಅಪಾಯಕಾರಿ ಸ್ಥಳಗಳಲ್ಲಿದ್ದು, ಅವುಗಳನ್ನು ಸ್ಥಳಾಂತರಿಸಬೇಕು ಅಥವಾ ಎತ್ತರದ ಸ್ಥಳದಲ್ಲಿ ಅಳವಡಿಸಬೇಕು ಎಂದು ಗುರುತಿಸಲಾಗಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಅಪಾಯಕಾರಿಯಾಗುವಂತಿರುವ ವಿದ್ಯುತ್‌ ಪರಿವರ್ತಕಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಹೈಕೋರ್ಟ್‌ 2021ರ ಏಪ್ರಿಲ್‌ನಲ್ಲಿ ಬೆಸ್ಕಾಂಗೆ ಸೂಚನೆಯನ್ನೂ ನೀಡಿತ್ತು. ಆದರೆ, ಇದುವರೆಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾದ ಹಾಗೂ ಎತ್ತರ ಹೆಚ್ಚಿಸಲಾದ ಟ್ರಾನ್ಸ್‌ಫಾರ್ಮರ್‌ಗಳ ಸಂಖ್ಯೆ ಕೇವಲ 3,000. ವಿದ್ಯುತ್ಪರಿವರ್ತಕಗಳ ಸ್ಥಳಾಂತರ ಕಾರ್ಯಕ್ಕೆ ₹ 100 ಕೋಟಿ ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ ಎಂದು ಹೈಕೋರ್ಟ್‌ಗೆ ಬೆಸ್ಕಾಂ ಇತ್ತೀಚೆಗೆ ಮಾಹಿತಿ ನೀಡಿತ್ತು. ₹ 100 ಕೋಟಿ ವೆಚ್ಚವಾಗುತ್ತದೆ ಎಂಬ ನೆಪ ಹೇಳಿ ವಿದ್ಯುತ್‌ ಪರಿವರ್ತಕಗಳ ಸ್ಥಳಾಂತರಕ್ಕೆ ಮೀನಮೇಷ ಎಣಿಸುತ್ತಾ ಕಾಲಹರಣ ಮಾಡುವುದನ್ನು ಸುತರಾಂ ಒಪ್ಪಲು ಸಾಧ್ಯವಿಲ್ಲ. ಜನರ ಜೀವಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂಬುದನ್ನು ಬೆಸ್ಕಾಂ ಅಧಿಕಾರಿಗಳು ಮನದಟ್ಟು ಮಾಡಿಕೊಳ್ಳಬೇಕು. ಹೈಕೋರ್ಟ್‌ ಸೂಚನೆಯನ್ನು ತುರ್ತಾಗಿ ಅನುಷ್ಠಾನಗೊಳಿಸಿದ್ದರೆ ವಿದ್ಯುತ್ ಅವಘಡಗಳಿಗೆ ನಗರದಲ್ಲಿ ಮತ್ತೆ ಜನರ ಜೀವಗಳು ಬಲಿಯಾಗುವುದಾದರೂ ತಪ್ಪುತ್ತಿತ್ತು ಎಂಬುದನ್ನು ಅಧಿಕಾರಿಗಳು ಮೊದಲು ತಿಳಿದುಕೊಳ್ಳಬೇಕು.

ಬೆಸ್ಕಾಂನ ಬಹುತೇಕ ಪರಿವರ್ತಕಗಳು ಇರುವುದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಸೇರಿರುವ ಜಾಗದಲ್ಲಿ. ಪಾದಚಾರಿ ಮಾರ್ಗದಂತಹ ಜನರು ಓಡಾಡುವ ಜಾಗದಲ್ಲಿ ಸುರಕ್ಷತಾ ಕ್ರಮಗಳಿಲ್ಲದೇ ಟ್ರಾನ್ಸ್‌ಫಾರ್ಮರ್‌ ಅಳವಡಿಸಲು ಅವಕಾಶ ಕಲ್ಪಿಸುವುದರಲ್ಲಿ ಬಿಬಿಎಂಪಿಯ ಅಸಡ್ಡೆಯೂ ಇದೆ. ಇವುಗಳಿಂದ ಜನರಿಗೆ ಅಪಾಯ ಉಂಟಾಗುತ್ತದೆ ಎಂಬ ಬಗ್ಗೆ ದೂರುಗಳು ಬಂದ ಬಳಿಕವೂ ಅವುಗಳನ್ನು ಸ್ಥಳಾಂತರಿಸಲು ಬಿಬಿಎಂಪಿ ಮುತುವರ್ಜಿ ವಹಿಸಿಲ್ಲ. ಹೊಸ ಟ್ರಾನ್ಸ್‌
ಫಾರ್ಮರ್‌ಗಳ ಅಳವಡಿಕೆ ಹಾಗೂ ಈಗಾಗಲೇ ಪಾದಚಾರಿ ಮಾರ್ಗಗಳ ಮೇಲಿರುವ ಟ್ರಾನ್ಸ್‌
ಫಾರ್ಮರ್‌ಗಳ ಸ್ಥಳಾಂತರಕ್ಕೆ ಜಾಗ ಗುರುತಿಸಲು ಬಿಬಿಎಂಪಿ ಹಾಗೂ ಬೆಸ್ಕಾಂ ಅಧಿಕಾರಿಗಳ
ನ್ನೊಳಗೊಂಡ ಸಮನ್ವಯ ಸಮಿತಿ ರಚಿಸಲು ಹೈಕೋರ್ಟ್‌ 2021ರ ಏಪ್ರಿಲ್‌ನಲ್ಲೇ ಸೂಚಿಸಿತ್ತು. ವಿದ್ಯುತ್‌
ಪರಿವರ್ತಕಗಳ ಸ್ಥಳಾಂತರದ ವಿಚಾರದಲ್ಲಿ ಈ ಎರಡರ ನಡುವೆ ಸಮನ್ವಯದ ಕೊರತೆ ಢಾಳಾಗಿ ಎದ್ದುಕಾಣಿಸುತ್ತಿದೆ. ಜನರಿಗೆ ಕಂಟಕವಾಗಿ ಪರಿಣಮಿಸಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ಮತ್ತಷ್ಟು ಜೀವಗಳು ಬಲಿಯಾಗುವುದಕ್ಕೆ ಮುನ್ನವೇ ಸ್ಥಳಾಂತರಿಸಬೇಕು. ಇದಕ್ಕೆ ಸರ್ಕಾರ ಕಾಲಮಿತಿಯನ್ನು
ನಿಗದಿಪಡಿಸಬೇಕು. ಬಿಬಿಎಂಪಿ ಹಾಗೂ ಬೆಸ್ಕಾಂ ಸಮನ್ವಯದಿಂದ ಈ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಹೆಚ್ಚು ಸುರಕ್ಷಿತವಾದ, ಕಡಿಮೆ ಜಾಗದಲ್ಲಿ ಅಳವಡಿಸಬಹುದಾದ ಟ್ರಾನ್ಸ್‌
ಫಾರ್ಮರ್‌ಗಳು ಇತ್ತೀಚೆಗೆ ಬಳಕೆಯಾಗುತ್ತಿವೆ. ಬೆಸ್ಕಾಂ ಈಗಾಗಲೇ ಅನೇಕ ಕಡೆ ಇಂತಹ ಆಧುನಿಕ ಹಾಗೂ ಸುಧಾರಿತ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸುವ ಕಾರ್ಯಕ್ಕೂ ಚಾಲನೆ ನೀಡಿದೆ. ಅನೇಕ ಕಡೆ ಹಳೆ ಮಾದರಿಯ ಟ್ರಾನ್ಸ್‌ಫಾರ್ಮರ್‌ಗಳು ಈಗಲೂ ಇರುವುದನ್ನು ಕಾಣಬಹುದು. ಇಂತಹವುಗಳನ್ನು ಬದಲಿಸಿ ಸುರಕ್ಷಿತ ಸಾಧನಗಳನ್ನು ಅಳವಡಿಸುವ ಕಾರ್ಯವೂ ಸಮರೋಪಾದಿಯಲ್ಲಿ ನಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT