ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರಿಗೆ ಸಮವಸ್ತ್ರವೇ ಭೂಷಣ ಅನಗತ್ಯ ವಿವಾದಕ್ಕೆ ಆಸ್ಪದ ಬೇಡ

Last Updated 18 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಉಡುಪಿ ಜಿಲ್ಲೆಯ ಕಾಪು ಪೊಲೀಸ್ ಠಾಣೆ ಮತ್ತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪೊಲೀಸರೆಲ್ಲರೂ ಕೇಸರಿ ಬಣ್ಣದ ದಿರಿಸು ಧರಿಸಿ ಆಯುಧಪೂಜೆ ನಡೆಸಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆಗಳು ಮೂಡುವಂತೆ ಮಾಡಿದೆ. ನಿರ್ದಿಷ್ಟ ಧರ್ಮವನ್ನು ಸಂಕೇತಿಸುವ ಕೇಸರಿ ಬಣ್ಣದ ದಿರಿಸು ಧರಿಸಿ ಠಾಣೆಯಲ್ಲಿ ಪೂಜೆ ನಡೆಸುವ ಮೂಲಕ ಪೊಲೀಸರು ತಮ್ಮ ನಿಷ್ಪಕ್ಷಪಾತ ಕರ್ತವ್ಯ ನಿರ್ವಹಣೆಯ ಕುರಿತು ಸಾರ್ವಜನಿಕರಲ್ಲಿ ಅನುಮಾನ ಹುಟ್ಟುವಂತೆ ಮಾಡಿದ್ದಾರೆ. ರಾಜ್ಯದ ಬೇರೆ ಹಲವು ಪೊಲೀಸ್ ಠಾಣೆಗಳಲ್ಲಿಯೂ ಪೊಲೀಸರು ತಿಳಿಗೆಂಪು, ಹಸಿರು, ಬಿಳಿ ಮುಂತಾದ ಬಣ್ಣಗಳ ಉಡುಪನ್ನು ಧರಿಸಿ ಆಯುಧಪೂಜೆ ಮಾಡಿರುವುದು ಮತ್ತು ಠಾಣೆಗಳ ಮುಂದೆ ನಿಂತು ಫೋಟೊಗಳನ್ನು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿರುವುದೂ ಕಂಡುಬಂದಿದೆ. ಖಾಕಿ ಪಡೆಯ ಕೇಸರಿ ದಿರಿಸಿನ ಕುರಿತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಸಾಮಾಜಿಕ ವಲಯದ ಹಲವು ಗಣ್ಯರು ತೀವ್ರ ಖಂಡನೆ ವ್ಯಕ್ತಪಡಿಸಿದ್ದರೆ, ಆಡಳಿತಾರೂಢ ಬಿಜೆಪಿ ನಾಯಕರು ‘ಇದರಲ್ಲಿ ತಪ್ಪೇನಿಲ್ಲ’ ಎಂದು ಸಮರ್ಥಿಸಿಕೊಂಡಿದ್ದಾರೆ. ಆಯುಧ ಪೂಜೆಯಂದು ಹಲವು ಪೊಲೀಸ್ ಠಾಣೆಗಳಲ್ಲಿ ಶಸ್ತ್ರಾಸ್ತ್ರಗಳಿಗೆ ಪೂಜೆ ನಡೆಸುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎನ್ನುವ ಮಾತಿನಲ್ಲಿ ನಿಜಾಂಶ ಇದೆ. ಆದರೆ ಆ ಸಂದರ್ಭದಲ್ಲಿ ಸಾಮೂಹಿಕವಾಗಿ ಠಾಣೆಯ ಎಲ್ಲ ಪೊಲೀಸರೂ ಕೇಸರಿ ಉಡುಪು ಧರಿಸಿದ್ದಾಗಲೀ, ಅದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾಗಲೀ ವರದಿಯಾದಂತಿಲ್ಲ. ಹಾಗಾಗಿ, ಈ ಕುರಿತು ಈ ಹಿಂದೆ ವಿವಾದ ಉಂಟಾದಂತಿಲ್ಲ. ಕೇಸರಿ ಬಣ್ಣವನ್ನು ತನ್ನ ಅಸ್ಮಿತೆಯ ರಾಜಕಾರಣಕ್ಕೆ ಬಿಜೆಪಿ ಬಳಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಅದಕ್ಕೆ ರಾಜಕೀಯ ಬಣ್ಣ ಬರುವುದರಲ್ಲಿ ಅನುಮಾನ ಇಲ್ಲ.

ರಾಜಕೀಯ ಪಕ್ಷಗಳ ಪರ- ವಿರೋಧದ ವಾದಗಳು ಏನೇ ಇರಲಿ, ಪೊಲೀಸ್ ಇಲಾಖೆಯು ಇಂತಹ ಅನಗತ್ಯ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವುದರಿಂದ ದೂರ ಇರಬೇಕಾದುದು ಅಗತ್ಯ. ಪ್ರತೀ ವಿಷಯದಲ್ಲಿ ಅನಗತ್ಯವಾಗಿ ಧರ್ಮ ಮತ್ತು ರಾಜಕೀಯ ನುಸುಳುತ್ತಿರುವ ಇಂದಿನ ಸಂಕೀರ್ಣ ಸನ್ನಿವೇಶದಲ್ಲಿ ಪೊಲೀಸ್ ಇಲಾಖೆ ತನ್ನ ನಿಷ್ಪಕ್ಷಪಾತ ನಡವಳಿಕೆಗೆ ಕುಂದು ಬಾರದಂತೆ ನಡೆದುಕೊಳ್ಳಬೇಕಿದೆ. ರಾಜ್ಯ ಸರ್ಕಾರವೇ ಅಂಗೀಕರಿಸಿರುವ ಪೊಲೀಸ್ ನೀತಿಸಂಹಿತೆಯಲ್ಲಿ ಧಾರ್ಮಿಕ ವಿಚಾರಗಳು ಬಂದಾಗ ಪೊಲೀಸರ ನಡೆ ಹೇಗಿರಬೇಕು ಎನ್ನುವ ವಿವರಗಳಿವೆ. ‘ಪೊಲೀಸ್ ಅಧಿಕಾರಿಗಳು ತಮ್ಮ ವೈಯಕ್ತಿಕ ಜೀವನದಲ್ಲಿ ಯಾವುದೇ ಮತವನ್ನು ಅನುಸರಿಸಲು ಸ್ವತಂತ್ರರಾಗಿದ್ದರೂ ಕರ್ತವ್ಯದಲ್ಲಿ ಯಾವುದೇ ಮತದವರ ಪಕ್ಷಪಾತಿಯಾಗಿ ಸಹಾಯ ಮಾಡಿದರೆನ್ನುವ ಭಾವನೆ ಬಾರದಂತೆ ವರ್ತಿಸತಕ್ಕದ್ದು. ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಯು ಧರ್ಮ, ಜಾತಿ, ಭಾಷೆ ಮುಂತಾದ ವಿಚಾರಗಳಲ್ಲಿ ನಿರ್ಲಿಪ್ತರಾಗಿರಬೇಕು’ ಎಂದು ಪೊಲೀಸ್ ನೀತಿಸಂಹಿತೆ ಹೇಳುತ್ತದೆ. ಪೊಲೀಸರು ವೈಯಕ್ತಿಕವಾಗಿ ಮನೆಗಳಲ್ಲಿ ತಮ್ಮ ಧರ್ಮ ಆಚರಿಸುವುದಕ್ಕಾಗಲೀ, ತಮ್ಮ ಧರ್ಮದ ಸಾಮೂಹಿಕ ಶ್ರದ್ಧಾಕೇಂದ್ರಗಳಲ್ಲಿ ಪೂಜೆ ಸಲ್ಲಿಸುವುದಕ್ಕಾಗಲೀ ಯಾರದೂ ಆಕ್ಷೇಪ ಇರಲಾರದು. ಅದಕ್ಕೆ ನಮ್ಮ ಸಂವಿಧಾನದಲ್ಲಿರುವ ಧಾರ್ಮಿಕ ಸ್ವಾತಂತ್ರ್ಯದ ವಿಧಿಯೇ ಅವಕಾಶ ಮಾಡಿಕೊಡುತ್ತದೆ. ಆದರೆ ಕಾನೂನು ಪಾಲನೆಯ ಕೇಂದ್ರವಾದ ಪೊಲೀಸ್ ಠಾಣೆಗಳಲ್ಲಿ ಈ ರೀತಿ ಧಾರ್ಮಿಕ ಆಚರಣೆಗಳನ್ನು ಸಾಮೂಹಿಕವಾಗಿ, ಪ್ರದರ್ಶನಪ್ರಿಯತೆಯೊಂದಿಗೆ ಆಚರಿಸುವುದು ಸಂವಿಧಾನ ವಿರೋಧಿ ನಡೆ. ಇವತ್ತು ಬಣ್ಣಗಳು ಕೂಡಾ ವಿವಿಧ ಧರ್ಮಗಳ, ರಾಜಕೀಯ ಪಕ್ಷಗಳ ಸಂಕೇತವಾಗಿ ಬಿಂಬಿತವಾಗುತ್ತಿವೆ. ಇಂತಹ ಸನ್ನಿವೇಶದಲ್ಲಿ ಪೊಲೀಸ್ ಕಾಯ್ದೆಯ ನಿಯಮಗಳನ್ನು ಯಾವುದೇ ಅನುಮಾನಕ್ಕೆ ಎಡೆಯಿಲ್ಲದಂತೆ ಚಾಚೂ ತಪ್ಪದೆ ಪಾಲಿಸುವತ್ತ ಪೊಲೀಸರು ಗಮನಹರಿಸಬೇಕು. ಸಂವಿಧಾನದ ಮೂಲತತ್ವಗಳಿಗೆ ಎಳ್ಳಷ್ಟೂ ಅಪಚಾರವಾಗದಂತೆ ಎಚ್ಚರ ವಹಿಸಬೇಕು. ಪೊಲೀಸ್ ಠಾಣೆಯಲ್ಲಿ ಧರ್ಮಾತೀತ ಮತ್ತು ಜಾತ್ಯತೀತ ಪರಿಸರ ಇರುವಂತೆ ನೋಡಿಕೊಳ್ಳುವುದು ಹಿರಿಯ ಅಧಿಕಾರಿಗಳ ಕರ್ತವ್ಯವೂ ಹೌದು. ಇಂತಹ ಪರಿಸರ ಇರುವುದು ಮಾತ್ರವಲ್ಲ, ಇದೆ ಎಂಬುದು ಎಲ್ಲರಿಗೆ ಮನವರಿಕೆಯೂ ಆಗುವಂತೆ ನೋಡಿಕೊಳ್ಳಬೇಕು. ಪೊಲೀಸ್‌ ಠಾಣೆಯು ಯಾವುದೋ ಒಂದು ಧರ್ಮಕ್ಕೆ, ಒಂದು ಜಾತಿಗೆ ಅಥವಾ ಒಂದು ಪಕ್ಷಕ್ಕೆ ನಿಷ್ಠವಾಗಿದೆ ಎಂಬ ಅನುಮಾನ ಕೂಡ ಜನರಿಗೆ ಬರದಂತೆ ನೋಡಿಕೊಳ್ಳುವುದು ಪೊಲೀಸರ ಕರ್ತವ್ಯದ ಭಾಗವೇ ಆಗಿದೆ.

ರಾಜಕೀಯ ಪಕ್ಷಗಳ ತಂತ್ರಗಾರಿಕೆಗಳಿಗೆ ಪೊಲೀಸ್ ವ್ಯವಸ್ಥೆಯು ಪರೋಕ್ಷ ದಾಳವಾಗದಂತೆ ನೋಡಿಕೊಳ್ಳುವ ಮತ್ತು ವ್ಯವಸ್ಥೆಯ ಪಾವಿತ್ರ್ಯವನ್ನು ಕಾಪಾಡುವ ಕಡೆಗೆ ಸಮಾಜದಲ್ಲಿರುವ ಎಲ್ಲರೂ ಗಮನ ಹರಿಸಬೇಕು. ಆಯುಧಪೂಜೆ ಒಂದು ಧಾರ್ಮಿಕ ಆಚರಣೆ ಎನ್ನುವ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗಳಲ್ಲಿ ಶಸ್ತ್ರಾಸ್ತ್ರ ಪೂಜೆ ಮಾಡಲೇಬೇಕೆಂದಿದ್ದರೆ ಪೊಲೀಸರು ತಮ್ಮ ಸಮವಸ್ತ್ರದಲ್ಲೇ ಮಾಡಬಹುದಿತ್ತಲ್ಲ? ಪೊಲೀಸರಿಗೆ ಅವರ ಸಮವಸ್ತ್ರಕ್ಕಿಂತ ಪವಿತ್ರವಾದದ್ದು ಇನ್ನೊಂದಿಲ್ಲ. ಠಾಣೆಗಳಲ್ಲಿ ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸಿ ಛದ್ಮವೇಷ ಸ್ಪರ್ಧಿಗಳಂತೆ ಫೋಟೊ ತೆಗೆಸಿಕೊಂಡು ಜಾಲತಾಣಗಳ ಮೂಲಕ ಹಂಚಿಕೊಳ್ಳುವುದು ಪೊಲೀಸರ ಕುರಿತು ಸಾರ್ವಜನಿಕರಲ್ಲಿ ಇರುವ ಸದ್ಭಾವನೆಗೂ ಭಂಗ ತರಲಿದೆ ಎನ್ನುವುದು ಆಡಳಿತ ನಡೆಸುವವರಿಗೂ ಅರ್ಥವಾಗಬೇಕು. ಒಂದು ಧರ್ಮಕ್ಕೆ ಅಥವಾ ಪಕ್ಷಕ್ಕೆನಿಷ್ಠರಾಗಿದ್ದಾರೆ ಎಂದು ಬಿಂಬಿತವಾಗುವ ಪೊಲೀಸರನ್ನು ಇತರರು ನಂಬುವುದು ಹೇಗೆ ಸಾಧ್ಯ? ಇಂತಹ ಪೊಲೀಸರಿಂದ ನ್ಯಾಯ ಸಿಕ್ಕೀತು ಎಂಬ ಭಾವನೆ ಜನರಿಗೆ ಹೇಗೆ ಬರುತ್ತದೆ? ಪೊಲೀಸರ ಇಂತಹ ನಡವಳಿಕೆಯು ಇಲಾಖೆಯ ನಿಷ್ಪಕ್ಷಪಾತ ಸೇವೆ ಮತ್ತು ಕರ್ತವ್ಯದ ತಳಪಾಯಕ್ಕೆ ಕೊಡಲಿ ಪೆಟ್ಟು ಕೊಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT