ಸೋಮವಾರ, ಆಗಸ್ಟ್ 8, 2022
21 °C

ಸಂಪಾದಕೀಯ: ಗೌರವ ಡಾಕ್ಟರೇಟ್‌ಗೆ ‘ಗೌರವ’, ವಿ.ವಿ.ಗಳಿಗೆ ಬೇಕಿದೆ ಲಸಿಕೆ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಸಕ್ಕರೆ ಕಾರ್ಖಾನೆಯ ಮಾಲೀಕರೊಬ್ಬರಿಗೆ ‘ನಾಡೋಜ’ ಗೌರವ ಪುರಸ್ಕಾರ ನೀಡಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಡೆಯು ಸಾಂಸ್ಕೃತಿಕ ವಲಯದಲ್ಲಿ ಟೀಕೆಗೊಳಗಾಗಿದೆ. ಆ ಟೀಕೆ ಟಿಪ್ಪಣಿಗಳನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ಸೀಮಿತವಾಗಿ ನೋಡಬೇಕಿಲ್ಲ. ಒಟ್ಟಾರೆ ಗೌರವ ಡಾಕ್ಟರೇಟ್‌ಗಳ ಆಯ್ಕೆ ಪ್ರಕ್ರಿಯೆಯಲ್ಲಿ ಎಡವಟ್ಟುಗಳಾಗುತ್ತಿರುವುದರ ಜೊತೆಗೆ, ವಿಶ್ವವಿದ್ಯಾಲಯಗಳ ಸಾಂಸ್ಥಿಕ ಚೌಕಟ್ಟು ಶಿಥಿಲವಾಗುತ್ತಿರುವುದನ್ನು ಪ್ರಸಕ್ತ ಚರ್ಚೆ ಸೂಚಿಸುವಂತಿದೆ. ಉದ್ಯಮಿಯೊಬ್ಬರಿಗೆ ‘ನಾಡೋಜ’ ಗೌರವ ಪುರಸ್ಕಾರವನ್ನು ನೀಡುವುದರಲ್ಲಿ ಯಾವ ತಪ್ಪೂ ಇಲ್ಲ. ನಾಡಿಗೆ ದೊಡ್ಡ ಕೊಡುಗೆ ನೀಡಿರುವ ಉದ್ಯಮಿಗಳು ಇದ್ದಾರೆ. ಅಂಥ ಉದ್ಯಮಿಗಳನ್ನು ಗುರುತಿಸಿ ಗೌರವಿಸಿದ್ದರೆ ಕನ್ನಡ ವಿಶ್ವವಿದ್ಯಾಲಯದ ತೀರ್ಮಾನ ಚರ್ಚಾಸ್ಪದವಾಗುತ್ತಿರಲಿಲ್ಲ. ಆಡಳಿತ ಪಕ್ಷದೊಂದಿಗೆ ನಂಟು ಹೊಂದಿರುವ ಉದ್ಯಮಿಗೆ ‘ನಾಡೋಜ’ ಗೌರವ ನೀಡಿರುವುದು ಪ್ರಸಕ್ತ ವಿವಾದಕ್ಕೆ ಕಾರಣವಾಗಿದೆ. ದಾವಣಗೆರೆ ವಿಶ್ವವಿದ್ಯಾಲಯವು ಆಡಳಿತಾರೂಢ ಪಕ್ಷಕ್ಕೆ ಸೇರಿದ ಸಂಸದರಿಗೆ ಗೌರವ ಡಾಕ್ಟರೇಟ್‌ ನೀಡಿರುವುದನ್ನು ಕೂಡ ‘ರಾಜಕಾರಣ ಲಾಭ’ದ ಹಿನ್ನೆಲೆಯಲ್ಲಿಯೇ ನೋಡಬೇಕಾಗಿದೆ. ಆಡಳಿತ ಪಕ್ಷದ ಜೊತೆ ನಂಟು ಹೊಂದಿರುವ ಉದ್ಯಮಿ–ರಾಜಕಾರಣಿಗಳನ್ನು ಪ್ರಶಸ್ತಿ– ಪುರಸ್ಕಾರಗಳಿಗೆ ಆಯ್ಕೆ ಮಾಡುವಾಗ ಹೆಚ್ಚಿನ ವಿವೇಚನೆ ಅಗತ್ಯ. ‘ಕನ್ನಡ ನಾಡು ನುಡಿಗೆ ಸಂಬಂಧಿಸಿದಂತೆ ಕೆಲಸ ಮಾಡಿದ ಯಾರಿಗೆ ಬೇಕಾದರೂ ನಾಡೋಜ ನೀಡಬಹುದು. ಈ ಹಿಂದೆಯೂ ಸಾಹಿತ್ಯ ಹೊರತುಪಡಿಸಿ ಅನ್ಯ ಕ್ಷೇತ್ರದವರಿಗೆ ನಾಡೋಜ ನೀಡಿರುವ ಉದಾಹರಣೆ ಗಳಿವೆ’ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಹೇಳಿದ್ದಾರೆ. ಅವರ ಮಾತು ನಿಜ. ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್‌ ಸಾಹಿತ್ಯ ಕ್ಷೇತ್ರಕ್ಕೆ ಸೀಮಿತವಾದುದಲ್ಲ. ಸಮಾಜಕ್ಕೆ ಕೊಡುಗೆ ನೀಡುವ ಎಲ್ಲ ಕ್ಷೇತ್ರಗಳ ಸಾಧಕರನ್ನೂ ವಿಶ್ವವಿದ್ಯಾಲಯಗಳು ಗುರುತಿಸಬೇಕು. ಸಾಲುಮರದ ತಿಮ್ಮಕ್ಕ, ಸುಕ್ರಿ ಬೊಮ್ಮಗೌಡ ಅಂಥವರನ್ನು ಗುರುತಿಸಿ, ಗೌರವಿಸಿದಾಗ ಯಾರೂ ಆಕ್ಷೇಪಿಸುವುದಿಲ್ಲ. ನಾಡಿನ ಯಾವುದೋ ಮೂಲೆಯಲ್ಲಿ ನಿಸ್ವಾರ್ಥದಿಂದ ದುಡಿಯುವ ವ್ಯಕ್ತಿಗಳನ್ನು ಗುರುತಿಸಿದಾಗ ವಿಶ್ವವಿದ್ಯಾಲಯಗಳ ಘನತೆಯೂ ಹೆಚ್ಚುತ್ತದೆ. ಆದರೆ, ರಾಜಕೀಯ ಹಿನ್ನೆಲೆಯ ವ್ಯಕ್ತಿಗಳನ್ನು ಗೌರವ ಡಾಕ್ಟರೇಟ್‌ಗಳಿಗೆ ಪರಿಗಣಿಸಿದಾಗ ಆಯ್ಕೆ ಪ್ರಕ್ರಿಯೆಯ ಬಗ್ಗೆಯೇ ಅನುಮಾನ ಉಂಟಾಗುತ್ತದೆ.

ಗೌರವ ಡಾಕ್ಟರೇಟ್‌ ಪುರಸ್ಕಾರಗಳು ಅವುಗಳನ್ನು ನೀಡುವ ವಿಶ್ವವಿದ್ಯಾಲಯಗಳ ಆರೋಗ್ಯ ಹೇಗಿದೆ ಎನ್ನುವುದರ ನಾಡಿಪರೀಕ್ಷೆಯೂ ಹೌದು. ಪ್ರಶಸ್ತಿ– ಪುರಸ್ಕಾರಗಳನ್ನು ನೀಡುವ ಮೂಲಕ ವ್ಯಕ್ತಿಗಳ ಸಾಧನೆಯನ್ನು ಗುರುತಿಸಲಾಗುತ್ತದೆ. ಅದೇ ರೀತಿ, ಸಾಧಕರಿಗೆ ಸಲ್ಲುವ ಮೂಲಕ ಪ್ರಶಸ್ತಿ– ಪುರಸ್ಕಾರಗಳ ಘನತೆಯೂ ಹೆಚ್ಚಾಗುವ ದಿಸೆಯಲ್ಲಿ ಆಯ್ಕೆಗಳಿರಬೇಕು. ಹೊಸದಾಗಿ ನೀಡುವ ಪ್ರಶಸ್ತಿ– ಪುರಸ್ಕಾರಗಳು ಈ ಮೊದಲು ಅವುಗಳನ್ನು ಪಡೆದವರಲ್ಲಿ ಹೆಮ್ಮೆ ಹೆಚ್ಚಿಸಬೇಕೇ ವಿನಾ ಮುಜುಗರ ಮೂಡಿಸುವಂತೆ ಆಗಬಾರದು. ಇತ್ತೀಚಿನ ವರ್ಷಗಳಲ್ಲಿ ಕನ್ನಡ ವಿಶ್ವವಿದ್ಯಾಲಯವೂ ಸೇರಿದಂತೆ ಕೆಲವು ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್‌ಗಳ ಆಯ್ಕೆ ಗುಣಮಟ್ಟದಿಂದ ಕೂಡಿಲ್ಲ ಎನ್ನುವ ಟೀಕೆಗಳು, ಶೈಕ್ಷಣಿಕ ಕ್ಷೇತ್ರದ ಸಾಂಸ್ಥಿಕ ಚೌಕಟ್ಟಿನ ಟೊಳ್ಳುತನವನ್ನು ಸೂಚಿಸುತ್ತಿವೆ. ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಗಳಲ್ಲಿ ಅಭ್ಯರ್ಥಿಗಳ ಶೈಕ್ಷಣಿಕ, ಆಡಳಿತಾತ್ಮಕ ಅರ್ಹತೆಗಿಂತಲೂ ಅವರು ಹೊಂದಿರುವ ರಾಜಕೀಯ ಪ್ರಭಾವ ಹಾಗೂ ಹಣಕಾಸಿನ ಶಕ್ತಿಯೇ ಹೆಚ್ಚಿನ ಮಹತ್ವ ಪಡೆಯುತ್ತಿದೆ ಎನ್ನುವ ದೂರುಗಳಿವೆ. ನಾಡೋಜ ಇಲ್ಲವೇ ಗೌರವ ಡಾಕ್ಟರೇಟ್ ಪುರಸ್ಕಾರದ ಆಯ್ಕೆ ಸಮಿತಿಯ ನೇಮಕದಲ್ಲೂ ಸಿಂಡಿಕೇಟ್‌ ಸದಸ್ಯರ ಆಯ್ಕೆಯಲ್ಲೂ ರಾಜಕೀಯ ಒಲವುನಿಲುವುಗಳೇ ಮುಖ್ಯವಾಗುತ್ತಿವೆ. ವಿದ್ವತ್ತಿಗೆ ಹೊರತಾದ ಮತ್ತು ಶಿಕ್ಷಣಕ್ಕೆ ಸಂಬಂಧಿಸಿರದ ಸಂಗತಿಗಳೇ ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆಯಲ್ಲಿ ಮುನ್ನೆಲೆಗೆ ಬಂದಾಗ, ಅಂಥ ಸಮಿತಿಗಳು, ಸಿಂಡಿಕೇಟ್‌ಗಳು ಕೈಗೊಳ್ಳುವ ನಿರ್ಧಾರಗಳು ಸಮರ್ಪಕವಾಗಿರುತ್ತವೆಂದು ಹೇಗೆ ನಿರೀಕ್ಷಿಸುವುದು? ವಿಶ್ವವಿದ್ಯಾಲಯಗಳ ಅನಾರೋಗ್ಯ ಮುಂದುವರಿದಲ್ಲಿ, ಅವುಗಳು ನೀಡುವ ಗೌರವ ಡಾಕ್ಟರೇಟ್‌ಗಳು ಹಾಗೂ ಹಣ ಪಡೆದು ಪದವಿ ನೀಡುವ ನಕಲಿ ವಿಶ್ವವಿದ್ಯಾಲಯಗಳ ‘ಗೌ.ಡಾ.’ಗಳ ನಡುವೆ ಹೆಚ್ಚಿನ ವ್ಯತ್ಯಾಸವೇನೂ ಉಳಿಯುವುದಿಲ್ಲ. ವಿಶ್ವವಿದ್ಯಾಲಯಗಳು ಜ್ಞಾನದ ಉತ್ಪತ್ತಿ ಮತ್ತು ಹಂಚಿಕೆಯ ತಾಣಗಳಾಗುವ ಬದಲು ಸ್ವಾರ್ಥ ರಾಜಕಾರಣದ ಗರಡಿಮನೆಗಳಾಗಿ ಬದಲಾಗುತ್ತವೆ. ಈ ಪರಿಸ್ಥಿತಿ ತಪ್ಪಿಸುವುದಕ್ಕಾಗಿ, ಅನರ್ಹರಿಗೆ ಗೌರವ ಡಾಕ್ಟರೇಟ್‌ಗಳು ಸಲ್ಲುತ್ತಿವೆ ಎನ್ನುವ ಪ್ರಸಕ್ತ ಚರ್ಚೆಯು ವಿಶ್ವವಿದ್ಯಾಲಯಗಳ ಸಾಂಸ್ಥಿಕ ಆರೋಗ್ಯದ ಸುಧಾರಣೆಯ ನಿಟ್ಟಿನಲ್ಲೂ ನಡೆಯಬೇಕಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು