ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ: ಲಿಂಗ ಅಸಮಾನತೆ ನಿವಾರಣೆಗೆ ಬೇಕಿದೆ ಅಭಿಯಾನ

Last Updated 20 ಜೂನ್ 2021, 22:02 IST
ಅಕ್ಷರ ಗಾತ್ರ

ಕೋವಿಡ್ ಲಸಿಕೆ ಪಡೆಯುವ ವಿಚಾರದಲ್ಲಿ ಲಿಂಗ ಅಸಮಾನತೆ ಉಂಟಾಗಿದೆ. ಲಸಿಕೆ ಪಡೆಯುವಲ್ಲಿ ಭಾರತದಲ್ಲಿ ಮಹಿಳೆಯರು ಪುರುಷರಿಗಿಂತ ಹಿಂದೆ ಉಳಿದಿದ್ದಾರೆ. ಕನಿಷ್ಠ ಒಂದು ಡೋಸ್ ಲಸಿಕೆ ಪಡೆದ ಪುರುಷರು ಹಾಗೂ ಮಹಿಳೆಯರ ಸಂಖ್ಯೆಯನ್ನು ಹೋಲಿಸಿದರೆ ಈಗ ಶೇಕಡ 15ರಷ್ಟು ವ್ಯತ್ಯಾಸ ಇದೆ. ಕಳವಳವನ್ನು ಇನ್ನಷ್ಟು ಹೆಚ್ಚಿಸುವ ಸಂಗತಿಯೆಂದರೆ, ಈ ವ್ಯತ್ಯಾಸವು ಈಚಿನ ತಿಂಗಳುಗಳಲ್ಲಿ ಜಾಸ್ತಿ ಆಗಿದೆ.

ಏಪ್ರಿಲ್‌ 10ರ ಅಂಕಿ–ಅಂಶದ ಪ್ರಕಾರ, ಲಸಿಕೆ ಪಡೆದ ಮಹಿಳೆಯರು ಹಾಗೂ ಪುರುಷರ ನಡುವಿನ ವ್ಯತ್ಯಾಸ ಶೇ 2ರಷ್ಟು ಮಾತ್ರ ಆಗಿತ್ತು. ಇದು ಏಪ್ರಿಲ್ 24ರ ವೇಳೆಗೆಶೇ 12ರಷ್ಟಕ್ಕೆ ತಲುಪಿತು. ಮೇ 6ರ ವೇಳೆಗೆ ಇದು ಶೇ 24ಕ್ಕೆ ಏರಿಕೆ ಕಂಡಿತು. ಆ ಬಳಿಕ ವ್ಯತ್ಯಾಸದಲ್ಲಿ ತುಸು ಇಳಿಕೆ ಉಂಟಾಗಿದೆ. ಲಸಿಕೆ ನೀಡಿಕೆಯಲ್ಲಿ ಲಿಂಗ ಅಸಮಾನತೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಅತಿಹೆಚ್ಚು. ಇದಾದ ನಂತರದ ಸ್ಥಾನಗಳಲ್ಲಿ ದೆಹಲಿ ಮತ್ತು ಉತ್ತರಪ್ರದೇಶ ಇವೆ. ಅಸಮಾನತೆ ಇಲ್ಲದಂತೆ ನೋಡಿಕೊಳ್ಳುವಲ್ಲಿ ಕೇರಳ ಹಾಗೂ ಛತ್ತೀಸಗಡ ಪ್ರಶಂಸೆಗೆ ಅರ್ಹವಾದ ಕೆಲಸ ಮಾಡಿವೆ. ಈ ಎರಡು ರಾಜ್ಯಗಳಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆದಿದ್ದಾರೆ. ಇಲ್ಲಿ ಕರ್ನಾಟಕದ ಸಾಧನೆಯು ಕಡಿಮೆಯೇನೂ ಅಲ್ಲ.

ದೇಶದಲ್ಲಿ ಲಸಿಕೆ ನೀಡುವಲ್ಲಿ ಐದನೆಯ ಅತ್ಯಂತ ಕನಿಷ್ಠ ಅಸಮಾನತೆ ಇರುವುದು ಕರ್ನಾಟಕದಲ್ಲಿ. ಪರಿಸ್ಥಿತಿಯನ್ನು ಇನ್ನಷ್ಟು ಉತ್ತಮಪಡಿಸುವ ಅವಕಾಶ ಖಂಡಿತ ಇದೆ. ದೇಶದಲ್ಲಿ ಲಸಿಕೆ ಪಡೆದವರಲ್ಲಿ ಮಹಿಳೆಯರಿಗಿಂತ ‍ಪುರುಷರೇ ಜಾಸ್ತಿ ಇರುವುದಕ್ಕೆ ದೇಶದಲ್ಲಿನ ಲಿಂಗ ಅನುಪಾತದಲ್ಲಿನ ವ್ಯತ್ಯಾಸವೇ ಕಾರಣ ಎನ್ನಲು ಆಗದು. ಭಾರತದ ಜನಸಂಖ್ಯೆಯಲ್ಲಿ ಪುರುಷರ ಸಂಖ್ಯೆಯು ಮಹಿಳೆಯರ ಸಂಖ್ಯೆಗಿಂತ ಶೇ 5.7ರಷ್ಟು ಜಾಸ್ತಿ ಇದೆ. ಲಸಿಕೆ ಪಡೆದವರ ಪ್ರಮಾಣದಲ್ಲಿ ಪುರುಷರು ಹಾಗೂ ಮಹಿಳೆಯರ ನಡುವಿನ ವ್ಯತ್ಯಾಸವು ಶೇ 6ರ ಆಸುಪಾಸಿನಲ್ಲಿ ಇದ್ದಿದ್ದರೆ, ಅದಕ್ಕೆ ಲಿಂಗ ಅನುಪಾತದಲ್ಲಿನ ಅಸಮಾನತೆ ಕಾರಣ ಎಂದು ಹೇಳಬಹುದಿತ್ತು. ಆದರೆ, ಲಸಿಕೆ ಪಡೆದಿರುವುದರಲ್ಲಿನ ವ್ಯತ್ಯಾಸವು ಶೇ 6ಕ್ಕಿಂತ ಬಹಳ ಹೆಚ್ಚಾಗಿರುವುದು ಕಳವಳಕ್ಕೆ ಕಾರಣ.

ಆರೋಗ್ಯ ಸೇವೆಗಳನ್ನು ಒದಗಿಸುವ ವಿಚಾರದಲ್ಲಿ ಸಮಾಜದಲ್ಲಿ ಇರುವ ರಾಚನಿಕ ಸಮಸ್ಯೆಗಳು ಈ ಅಸಮಾನತೆಗೆ ಒಂದು ಕಾರಣ. ಸಾಮಾಜಿಕ ವ್ಯವಸ್ಥೆಯು ಮಹಿಳೆಯರ ಪರವಾಗಿ ಇಲ್ಲ. ಕುಟುಂಬಗಳು ಕೂಡ ಮಹಿಳೆಯರ ಆರೋಗ್ಯವು ಇತರೆಲ್ಲವುಗಳಿಗಿಂತ ಹೆಚ್ಚು ಪ್ರಮುಖ ಎಂದು ಪರಿಗಣಿಸುವ ಸಾಧ್ಯತೆ ಕಡಿಮೆ ಇದೆ. ಡಿಜಿಟಲ್ ಸಾಧನಗಳ ಬಳಕೆಯಲ್ಲಿ ಕೂಡ ಲಿಂಗ ಅಸಮಾನತೆ ಇದೆ.

ಸ್ಮಾರ್ಟ್‌ಫೋನ್ ಹೊಂದಿರುವ ಮಹಿಳೆಯರ ಪ್ರಮಾಣ ಕಡಿಮೆ ಇದೆ ಹಾಗೂ ಅವರು ಕೋವಿನ್‌ ಆ್ಯಪ್‌ ಬಳಸಿ ಲಸಿಕೆ ಪಡೆಯಲು ಹೆಸರು ನೋಂದಾಯಿಸುವುದನ್ನು ತಿಳಿದುಕೊಂಡಿರುವ ಸಾಧ್ಯತೆಗಳು ಕಡಿಮೆ. ಪುರುಷರು ದುಡಿಯಲು ಮನೆಯಿಂದ ಹೊರಗಡೆ ಹೋಗುವ ಕಾರಣ, ಅವರ ಆರೋಗ್ಯವನ್ನು ರಕ್ಷಿಸಬೇಕು, ಅವರ ಆರೋಗ್ಯ ಕಾಪಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಗ್ರಹಿಕೆ ಕೂಡ ಸಮಾಜದ ಕೆಲವು ವರ್ಗಗಳಲ್ಲಿ ಇದೆ. ಕೆಲಸ ಅರಸಿ ದೂರದ ಊರುಗಳಿಗೆ ಹೋಗದ ಗ್ರಾಮೀಣ ಪ್ರದೇಶಗಳ ಮಹಿಳೆಯರಿಗೆ ಕೋವಿಡ್ ಲಸಿಕೆಯ ಅಗತ್ಯ ಇಲ್ಲ ಎಂಬ ಭಾವನೆಯೂ ಕೆಲವರಲ್ಲಿ ಇದೆ. ಲಸಿಕೆಗಳು ಮಹಿಳೆಯರು ಸಮಯಕ್ಕೆ ಸರಿಯಾಗಿ ಋತುಮತಿ ಆಗದಂತೆ ಮಾಡುತ್ತವೆ, ಅವರ ಗರ್ಭಧಾರಣೆ ಸಾಮರ್ಥ್ಯವನ್ನು ಕುಗ್ಗಿಸುತ್ತವೆ ಎಂಬ ಸುಳ್ಳುಸುದ್ದಿಗಳು ಹರಡಿವೆ. ಇಂತಹ ತಪ್ಪು ಗ್ರಹಿಕೆಗಳು, ಸುಳ್ಳು ಸುದ್ದಿಗಳು ಲಸಿಕೆ ಪಡೆಯುವುದಕ್ಕೆ ಹಲವರು ಹಿಂದೇಟು ಹಾಕುವಂತೆ ಮಾಡಿವೆ, ಮಹಿಳೆಯರು ಲಸಿಕೆ ಪಡೆಯದಂತೆ ಮಾಡಿವೆ.

ಲಸಿಕೆ ಕೊಡುವ ವ್ಯವಸ್ಥೆಯಲ್ಲಿ ಇದ್ದ ಡಿಜಿಟಲ್ ಕಂದಕವನ್ನು ತಡವಾಗಿಯಾದರೂ ಒಪ್ಪಿಕೊಂಡ ಸರ್ಕಾರವು, ನೋಂದಣಿ ಇಲ್ಲದೆಯೂ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಹಾಕಿಸಿಕೊಳ್ಳುವ ವ್ಯವಸ್ಥೆ ಕಲ್ಪಿಸಿದೆ. ಈಗ ಮಹಿಳೆಯರು ಲಸಿಕೆ ಪಡೆಯಲು ಸ್ಮಾರ್ಟ್‌ಫೋನ್ ಹೊಂದಿರಬೇಕಾದ ಅಗತ್ಯ ಇಲ್ಲ, ಕೋವಿನ್ ಪೋರ್ಟಲ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕಾದ ಅಗತ್ಯವೂ ಇಲ್ಲ. ಇದು ಲಸಿಕೆ ಪಡೆಯುವಲ್ಲಿ ಇರುವ ದೊಡ್ಡ ಅಡ್ಡಿಯೊಂದನ್ನು ನಿವಾರಿಸಬಹುದು. ಮನೆಮನೆಗೆ ತೆರಳಿ ಲಸಿಕೆ ನೀಡಬೇಕು ಎಂದು ಕೆಲವು ತಜ್ಞರು ಸಲಹೆ ಮಾಡಿದ್ದಾರೆ. ಆದರೆ, ಲಸಿಕೆಯು ಅದನ್ನು ಪಡೆದವರ ಮೇಲೆ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತದೆಯೇ ಎಂಬುದನ್ನು ಕೆಲವು ಹೊತ್ತಿನವರೆಗೆ ಗಮನಿಸಬೇಕಿರುವ ಕಾರಣ, ಮನೆಮನೆಗೆ ತೆರಳಿ ಲಸಿಕೆ ನೀಡುವುದು ಸಾಧ್ಯವಾಗಲಿಕ್ಕಿಲ್ಲ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಸಿಕೆ ಬಗ್ಗೆ ಇರುವ ಸುಳ್ಳುಸುದ್ದಿಗಳನ್ನು ಹೋಗಲಾಡಿಸಲು ಅಭಿಯಾನ ಶುರು ಮಾಡಬೇಕು. ಜನ ಸ್ವಯಂಪ್ರೇರಿತರಾಗಿ ಲಸಿಕೆ ‍ಪಡೆಯುವಂತೆ ಆಗಬೇಕು. ಮಹಿಳೆಯರು ತಾವಾಗಿಯೇ ಬಂದು ಲಸಿಕೆ ಪಡೆಯುವಂತೆ ಮಾಡಲು ಆಶಾ ಕಾರ್ಯಕರ್ತೆಯರನ್ನು ಬಳಸಿಕೊಳ್ಳಬಹುದು.ಕೋವಿಡ್‌ ಎರಡನೆಯ ಅಲೆಯ ತೀವ್ರತೆ ಈಗ ಕಡಿಮೆ ಆಗಿರಬಹುದು. ಆದರೆ, ಇದು ತೀವ್ರವಾಗಿದ್ದ ಸಂದರ್ಭದಲ್ಲಿ ಒಂದೇ ಮನೆಯಲ್ಲಿ ಹಲವರಿಗೆ ಕೋವಿಡ್ ತಗುಲಿದ್ದು ವರದಿಯಾಗಿದೆ. ಕುಟುಂಬದಲ್ಲಿ ಒಬ್ಬರಿಗೆ ಕೋವಿಡ್ ಬಂದರೆ, ಅದು ಅವರಿಗೆ ಮಾತ್ರ ಸೀಮಿತ ಆಗಿರುವುದಿಲ್ಲ ಎಂಬುದನ್ನು ಇದು ಹೇಳುತ್ತದೆ. ಹಾಗಾಗಿ, ಮನೆಯಲ್ಲೇ ಇರುವವರಾದರೂ, ಹೊರಗಡೆ ಹೋಗಿ ಬರುವವರಾದರೂ ಮಹಿಳೆಯರು ಕೂಡ ತಾವಾಗಿಯೇ ಮುಂದಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳ ಬೇಕಿರುವುದು ಇಡೀ ಕುಟುಂಬದ ಆರೋಗ್ಯ ದೃಷ್ಟಿಯಿಂದಲೂ ಮುಖ್ಯವಾದುದು. ಇದರಲ್ಲಿ ನಿರ್ಲಕ್ಷ್ಯ ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT