‘ಮನರೇಗಾ’ ಅಪ್ರಸ್ತುತಗೊಳ್ಳುತ್ತಿದೆ; ವಿಬಿ–ಜಿ ರಾಮ್ ಜಿ ಅನುಷ್ಠಾನಗೊಂಡಿಲ್ಲ. ಉದ್ಯೋಗ ಖಾತರಿ ಯೋಜನೆಗಳು ನನೆಗುದಿಗೆ ಬಿದ್ದಿರುವುದರ ಪರಿಣಾಮ ಗ್ರಾಮೀಣ ಕರ್ನಾಟಕದ ಬಡಜನರ ಮೇಲಾಗಿದೆ.

ಉದ್ಯೋಗ ಭದ್ರತೆ ಮತ್ತು ಸಾಮಾಜಿಕ ನ್ಯಾಯದ ಸಂಕೇತವಾಗಿದ್ದ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ’ಯನ್ನು (ಮನರೇಗಾ) ಅಪ್ರಸ್ತುತಗೊಳಿಸಿರುವ ಹಾಗೂ ‘ವಿಬಿ–ಜಿ ರಾಮ್ಜಿ’ ಯೋಜನೆ ಅನುಷ್ಠಾನಗೊಳಿಸದೆ ಇರುವುದರ ಪರಿಣಾಮ ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಉದ್ಯೋಗ ವಂಚಿತರ ಸಂಕಷ್ಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆಡೂ ನೇರ ಕಾರಣವಾಗಿವೆ. ಜನಸಾಮಾನ್ಯರ ಬದುಕಿನ ಬಗ್ಗೆ ಸರ್ಕಾರಗಳ ಉದಾಸೀನ, ಮುನ್ನೆಚ್ಚರಿಕೆಯ ಕೊರತೆ ಹಾಗೂ ಆಡಳಿತದ ವೈಫಲ್ಯಗಳ ಕಾರಣದಿಂದಾಗಿ ಉದ್ಯೋಗ ಖಾತರಿ ಕಾರ್ಯಕ್ರಮಗಳು ನನೆಗುದಿಗೆ ಬಿದ್ದಿವೆ. ಇದರಿಂದಾಗಿ, ಬೆಳಗಾವಿ, ಧಾರವಾಡ, ಬಳ್ಳಾರಿ, ವಿಜಯಪುರ, ವಿಜಯನಗರ, ಬಾಗಲಕೋಟೆ, ಗದಗ, ಕಲಬುರಗಿ, ಬೀದರ್, ಕೊಪ್ಪಳ, ಯಾದಗಿರಿ ಜಿಲ್ಲೆಗಳ ಬಡಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೆಲಸಕ್ಕೆ ಬೇಡಿಕೆ ಇದ್ದರೂ, ಅನುದಾನ ಮತ್ತು ಅನುಮೋದನೆ ಇಲ್ಲದ ಕಾರಣದಿಂದಾಗಿ ಕೆಲಸ ಸೃಷ್ಟಿಯಾಗುತ್ತಿಲ್ಲ. ಕೂಲಿ ಕಾರ್ಮಿಕರು ಕೆಲಸ ಹುಡುಕಿಕೊಂಡು ವಲಸೆ ಹೋಗಲು ಶುರು ಮಾಡಿದ್ದಾರೆ. ಉದ್ಯೋಗ ಖಾತರಿ ಯೋಜನೆಗಳನ್ನು ಗ್ರಾಮೀಣ ಭಾರತದ ಆರ್ಥಿಕ ಬೆನ್ನೆಲುಬಿನ ರೂಪದಲ್ಲಿ ಗುರ್ತಿಸಲಾಗುತ್ತದೆ. ಈ ಯೋಜನೆಗಳನ್ನು ದುರ್ಬಲಗೊಳಿಸುವ ಅಥವಾ ನಿರ್ಲಕ್ಷಿಸುವ ನೀತಿ ನಿರ್ಧಾರಗಳು, ಸಮಾಜದ ಅತ್ಯಂತ ದುರ್ಬಲ ವರ್ಗಗಳ ಬದುಕಿನ ಮೇಲೆ ನೇರವಾಗಿ ಹೊಡೆತ ನೀಡುತ್ತವೆ; ಆರ್ಥಿಕ ಅಸಮಾನತೆಯನ್ನು ಹೆಚ್ಚಿಸುವುದರ ಜೊತೆಗೆ, ಮಹಿಳೆಯರು ಮತ್ತು ಮಕ್ಕಳನ್ನು ಹೆಚ್ಚಿನ ಅಸಹಾಯಕತೆಗೆ ತಳ್ಳುತ್ತವೆ.

ಗ್ರಾಮೀಣ ಭಾಗದ ಬಡಜನರಿಗೆ ವರ್ಷದಲ್ಲಿ 125 ದಿನಗಳ ಕೆಲಸವನ್ನು ಖಾತರಿಪಡಿಸುವ ‘ಮನರೇಗಾ’ ಕಲ್ಯಾಣ ಯೋಜನೆ, ಉದ್ಯೋಗ ಭದ್ರತೆ ಮತ್ತು ಸಾಮಾಜಿಕ ನ್ಯಾಯದ ಸಂಕೇತವೂ ಆಗಿತ್ತು. ಆ ಯೋಜನೆಯನ್ನು ಅಪ್ರಸ್ತುತಗೊಳಿಸಿದ ಕೇಂದ್ರ ಸರ್ಕಾರ, ‘ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಆಜೀವಿಕ ಮಿಷನ್’ (ವಿಬಿ–ಜಿ ರಾಮ್ ಜಿ) ಹೆಸರಿನ ಕಾರ್ಯಕ್ರಮವನ್ನು 2025ರ ಡಿಸೆಂಬರ್ನಲ್ಲಿ ಜಾರಿಗೊಳಿಸಿತ್ತು. ಆದರೆ, ಇಲ್ಲಿಯವರೆಗೆ ಹೊಸ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಿಯಮ ಮತ್ತು ಮಾರ್ಗಸೂಚಿ ರಚನೆ ಮಾಡದೆ ಇರುವುದರಿಂದ ನೂತನ ಯೋಜನೆ ಅನುಷ್ಠಾನವಾಗಿಲ್ಲ. ಮನರೇಗಾ ಅಡಿ ಹೊಸ ಕಾಮಗಾರಿ ತೆಗೆದುಕೊಳ್ಳುವುದನ್ನು 2026ರ ಜನವರಿಯಿಂದ ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ, ಬಾಕಿ ಇರುವ ಕಾಮಗಾರಿಗಳನ್ನಷ್ಟೇ ಮುಂದುವರಿಸಲಾಗುತ್ತಿದೆ. ಜನರಿಂದ ಬೇಡಿಕೆ ಇದ್ದರೂ ಕೆಲಸ ಒದಗಿಸಲು ಸಾಧ್ಯವಾಗದ ಪರಿಸ್ಥಿತಿಯಿದೆ. ಗ್ರಾಮೀಣ ಭಾಗಗಳಲ್ಲಿ ಉದ್ಯೋಗಾವಕಾಶಗಳು ಕ್ಷೀಣಿಸುವುದನ್ನು ಆರ್ಥಿಕ ಸಮಸ್ಯೆಯ ರೂಪದಲ್ಲಷ್ಟೇ ನೋಡುವುದು ಸಾಧ್ಯವಿಲ್ಲ. ಗ್ರಾಮೀಣ ಕುಟುಂಬಗಳು ವಲಸೆ ಹೋಗಬೇಕಾದ ಸ್ಥಿತಿ ಸೃಷ್ಟಿಯಾಗುವುದು ಸಾಮಾಜಿಕ ಬಿಕ್ಕಟ್ಟುಗಳನ್ನೂ ಸೃಷ್ಟಿಸಲಿದೆ. ವಲಸೆಯಿಂದ ಕುಟುಂಬಗಳು ವಿಘಟಿತವಾಗುತ್ತವೆ. ಮಕ್ಕಳು ಶಾಲೆಯಿಂದ ದೂರವುಳಿಯುವ ಸ್ಥಿತಿ ಸೃಷ್ಟಿಯಾಗಬಹುದು. ಊರಿನಿಂದ ಊರಿಗೆ ಅಲೆದಾಡುವ ಸ್ಥಿತಿ ಮಹಿಳೆಯರನ್ನು ಅಸುರಕ್ಷತೆಯ ಆತಂಕದಲ್ಲಿ ಉಳಿಸುತ್ತದೆ. ಇಂಥ ಅಸುರಕ್ಷಿತ ಸಂದರ್ಭ ಬಾಲ್ಯವಿವಾಹಗಳಿಗೆ ಪೂರಕ ಸ್ಥಿತಿ ಸೃಷ್ಟಿಸುತ್ತದೆ.

ಕೇಂದ್ರ ಸರ್ಕಾರದ ‘ವಿಬಿ–ಜಿರಾಮ್ ಜಿ’ ಯೋಜನೆಯ ಬಗ್ಗೆ ರಾಜ್ಯ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ. ‘ಮನರೇಗಾ’ ಕಾರ್ಯಕ್ರಮವನ್ನು ಅಪ್ರಸ್ತುತಗೊಳಿಸುವ ಕೇಂದ್ರದ ಕ್ರಮ ಕಾಂಗ್ರೆಸ್ ಪಕ್ಷಕ್ಕೆ ಮಹಾತ್ಮ ಗಾಂಧಿಯ ಸ್ವರಾಜ್ಯದ ಆಶಯವನ್ನು ನೇಪಥ್ಯವಾಗಿ ತಳ್ಳುವ ಪ್ರಯತ್ನದಂತೆ ಕಾಣಿಸಿದೆ. ವಿರೋಧ ಪಕ್ಷಗಳ ಪ್ರತಿರೋಧವನ್ನು ಲೆಕ್ಕಿಸದೆ ‘ವಿಬಿ–ಜಿ ರಾಮ್ ಜಿ’ ಯೋಜನೆಯನ್ನು ಪ್ರಕಟಿಸುವಲ್ಲಿ ಕೇಂದ್ರ ಸರ್ಕಾರ ಉತ್ಸಾಹ ವ್ಯಕ್ತಪಡಿಸಿತ್ತು. ಹೊಸ ಯೋಜನೆಯು 2047ರ ‘ವಿಕಸಿತ ಭಾರತ’ ಗುರಿಸಾಧನೆಗೆ ಪೂರಕವಾಗಿದೆ ಎಂದೂ ಸರ್ಕಾರ ಹೇಳಿತ್ತು. ಈಗಿನ ಸ್ಥಿತಿ ನೋಡಿದರೆ, ಯೋಜನೆಯನ್ನು ಜಾರಿಗೊಳಿಸುವಲ್ಲಿ ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದಂತಿಲ್ಲ. ಕೇಂದ್ರದ ಯೋಜನೆಯನ್ನು ವಿರೋಧಿಸುತ್ತಿರುವ ರಾಜ್ಯ ಸರ್ಕಾರ ಕೂಡ, ಉದ್ಯೋಗ ಖಾತರಿ ಯೋಜನೆಯಿಂದ ವಂಚಿತರಾಗುವ ಗ್ರಾಮೀಣರಿಗೆ ಪರ್ಯಾಯ ಸೃಷ್ಟಿಸುವ ಬಗ್ಗೆ ಯೋಚಿಸಿಲ್ಲ. ಅಪ್ಪ–ಅಮ್ಮನ ಜಗಳದಲ್ಲಿ ಕೂಸು ಬಡವಾದಂತೆ, ಸರ್ಕಾರಗಳ ಸಂಘರ್ಷದಲ್ಲಿ ಬಡಜನ ನಲಗುತ್ತಿದ್ದಾರೆ. ರಾಜಕೀಯ ಸಂಘರ್ಷವನ್ನು ಮರೆತು, ಗ್ರಾಮೀಣರ ಸಂಕಷ್ಟವನ್ನು ನಿವಾರಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ತಕ್ಷಣವೇ ಕಾರ್ಯೋನ್ಮುಖವಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.