ಸಂಪಾದಕೀಯ | ವಿಧಾನಸೌಧದ ಪಾವಿತ್ರ್ಯಕ್ಕೆ ಧಕ್ಕೆ ತರುವ ವಿದ್ಯಮಾನ ಅಕ್ಷಮ್ಯ

ಭಾನುವಾರ, ಜೂಲೈ 21, 2019
27 °C

ಸಂಪಾದಕೀಯ | ವಿಧಾನಸೌಧದ ಪಾವಿತ್ರ್ಯಕ್ಕೆ ಧಕ್ಕೆ ತರುವ ವಿದ್ಯಮಾನ ಅಕ್ಷಮ್ಯ

Published:
Updated:
Prajavani

ಕನ್ನಡನಾಡಿನ ಜನರಿಗೆ ವಿಧಾನಸೌಧದ ಬಗ್ಗೆ ಪವಿತ್ರವಾದ ಭಾವನೆ ಇದೆ. ಅದು ಕನ್ನಡಿಗರ ಮಕುಟಮಣಿ. ಆದರೆ ಬುಧವಾರ ಅಲ್ಲಿ ನಡೆದ ವಿದ್ಯಮಾನ, ಆ ಸೌಧದ ಪಾವಿತ್ರ್ಯಕ್ಕೆ ಧಕ್ಕೆ ತರುವಂತಿತ್ತು. ಬೀದಿಯಲ್ಲಿ ಜಗಳ ಮಾಡುವ ರೌಡಿಗಳಿಗಿಂತಲೂ ಕಡೆಯಾಗಿ ನಮ್ಮ ಜನಪ್ರತಿನಿಧಿಗಳು ನಡೆದುಕೊಂಡಿರುವುದು ವಿಷಾದನೀಯವಷ್ಟೇ ಅಲ್ಲ, ಎಲ್ಲರೂ ತಲೆ ತಗ್ಗಿಸುವಂತಹ ವಿಚಾರ.

ವಿಧಾನಸೌಧದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ಅಕ್ಷರಶಃ ಬೇಜವಾಬ್ದಾರಿಯಿಂದ ನಡೆದುಕೊಂಡರು. ಘೋಷಣೆ, ಪ್ರತಿಘೋಷಣೆ, ಹಲ್ಲೆ ಯತ್ನ, ಶಾಸಕರೊಬ್ಬರ ಕೊರಳಿನ ಪಟ್ಟಿ ಹಿಡಿದು ಎಳೆದುಕೊಂಡು ಹೋಗಿದ್ದು, ಕೊಠಡಿಯಲ್ಲಿ ಕೂಡಿ ಹಾಕಿದ್ದು ಎಲ್ಲವೂ ಗೂಂಡಾ ವರ್ತನೆಗಳೆ. ಸುಮಾರು ಎರಡು ಗಂಟೆಗಳ ಕಾಲ ವಿಧಾನಸೌಧದಲ್ಲಿ ನಡೆದ ವಿದ್ಯಮಾನಗಳು ಜನಸಾಮಾನ್ಯರು ಉಸಿರು ಬಿಗಿ ಹಿಡಿದು ನಿಲ್ಲುವಂತೆ ಮಾಡಿದ್ದವು. ಇಡೀ ವಿಧಾನಸೌಧವನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಶಾಸಕರನ್ನು ಬಿಗಿ ಭದ್ರತೆಯಲ್ಲಿ ಹೊರಕ್ಕೆ ಕರೆತರಲಾಯಿತು. ವಿಧಾನಸೌಧದ ಆವರಣದಲ್ಲಿ ಲಘು ಲಾಠಿ ಪ್ರಹಾರ ಕೂಡ ನಡೆಯಿತು. ಇವೆಲ್ಲವೂ ವಿಧಾನಸೌಧದ ಇತಿಹಾಸದಲ್ಲಿ ಕಪ್ಪು ಚುಕ್ಕೆಗಳಾಗಿ ದಾಖಲಾದವು.

ಶಕ್ತಿಕೇಂದ್ರದಲ್ಲಿ ನಡೆಯುತ್ತಿದ್ದ ಈ ಎಲ್ಲ ವಿದ್ಯಮಾನಗಳನ್ನು ಮಾಧ್ಯಮಗಳಲ್ಲಿ ನೋಡಿದ ಜನರು ‘ಅಯ್ಯೋ ಇಂತಹ ನಾಯಕರಿಗೆ ನಾವು ಮತ ಚಲಾಯಿಸಿದೆವಲ್ಲ’ ಎಂದು ಕೈಕೈ ಹಿಸುಕಿಕೊಳ್ಳುವಂತೆ ಆಯಿತು. ಜನ ವ್ಯಥೆಪಟ್ಟುಕೊಂಡರು, ಅಸಹ್ಯಪಟ್ಟುಕೊಂಡರು. ವಿಧಾನಸೌಧದಲ್ಲಿ ಈ ಬಗೆಯ ಘಟನೆ ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಹಲವಾರು ಬಾರಿ ಅಹಿತಕರ ಘಟನೆಗಳು ನಡೆದಿವೆ. ವಿಧಾನಮಂಡಲದ ಅಧಿವೇಶನದಲ್ಲಿಯೂ ಈ ರೀತಿಯ ಘಟನೆಗಳು ನಡೆದಿವೆ. ಅಂಗಿ ಹರಿದುಕೊಂಡು, ಕಾಗದ ತೂರಿ, ತೋಳು– ತೊಡೆ ತಟ್ಟಿದ ಪ್ರಸಂಗಗಳು ನಡೆದಿದ್ದವು. ವಿಧಾನಸೌಧದ ಆವರಣದಲ್ಲಿ ನಾಯಕರ ಮೇಲೆ ಹಲ್ಲೆಗಳು ಸಹ ನಡೆದ ಪ್ರಕರಣಗಳಿವೆ. ಇವೆಲ್ಲ ನಮ್ಮ ಆಡಳಿತಗಾರರಿಗೆ ಶೋಭೆ ತರುವ ವಿಚಾರಗಳಲ್ಲ.

ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಕೆ.ಸುಧಾಕರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಪ್ರಿಯಾಂಕ್ ಖರ್ಗೆ, ವಿಧಾನಪರಿಷತ್ ಸದಸ್ಯ ನಜೀರ್ ಅಹಮದ್ ಬಲವಂತವಾಗಿ ಎಳೆದುಕೊಂಡು ಹೋಗಿದ್ದು ಯಾವ ಕೋನದಿಂದ ನೋಡಿದರೂ ಸಮರ್ಥನೀಯವಲ್ಲ. ಇದಕ್ಕೆ ಪ್ರತಿಯಾಗಿ ಬಿಜೆಪಿ ಶಾಸಕರು ಸಹ ವಿಧಾನಸೌಧದಲ್ಲಿ ಗದ್ದಲ ಎಬ್ಬಿಸಿದ್ದು ಯಾರೂ ಒಪ್ಪತಕ್ಕ ವಿಚಾರ ಅಲ್ಲ. ಗುರುವಾರ ಕೂಡ ಇಂತಹುದೇ ಸ್ಥಿತಿ ವಿಧಾನಸೌಧದಲ್ಲಿ ಇತ್ತು. ಅತೃಪ್ತ ಶಾಸಕರು ವಿಧಾನಸಭೆ ಅಧ್ಯಕ್ಷರ ಮುಂದೆ ಹಾಜರಾಗುವ ಸಂದರ್ಭದಲ್ಲಿ ಶಕ್ತಿಕೇಂದ್ರದ ಸುತ್ತ ಬಿಗುವಿನ ವಾತಾವರಣ ಇತ್ತು. ವಿಧಾನಸೌಧವು ಆಡಳಿತದ ಕೇಂದ್ರವಾಗಬೇಕೇ ವಿನಾ ಹೊಡೆದಾಟದ ಕೇಂದ್ರವಾಗಬಾರದು.

ಯಾವುದೇ ಅರ್ಥದಲ್ಲಿಯೂ ಅದೊಂದು ‘ಮಾರುಕಟ್ಟೆ’ ಆಗಬಾರದು. ಸಂವಿಧಾನಬದ್ಧವಾಗಿ ಜನರಿಂದ ಆಯ್ಕೆಯಾಗಿ ಹೋದ ಎಲ್ಲ ಶಾಸಕರೂ ಸಂವಿಧಾನಬದ್ಧವಾಗಿಯೇ ನಡೆದುಕೊಳ್ಳಬೇಕು. ವಿಧಾನಸಭೆಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುವಾಗ ತಾವು ಹೇಳಿದ ಮಾತುಗಳನ್ನು, ಕನಿಷ್ಠ ವಿಧಾನಸೌಧದಲ್ಲಿ ಇದ್ದಾಗಲಾದರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಕಳೆದ ನಾಲ್ಕಾರು ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳನ್ನು ಗಮನಿಸುತ್ತಿರುವ ಜನರಿಗೆ ಭ್ರಮನಿರಸನವಾಗಿದೆ.

ಈ ಹಿಂದೆ ವಿಧಾನಸೌಧದಲ್ಲಿ ಇಂತಹ ಅಹಿತಕರ ಘಟನೆಗಳಿಗೆ ಕಾರಣರಾದ ರಾಜಕಾರಣಿಗಳಿಗೆ ಜನರು ತಕ್ಕ ಪಾಠವನ್ನು ತಕ್ಕ ಸಮಯದಲ್ಲಿ ಕಲಿಸಿದ್ದಾರೆ. ಅದು ಈಗಿನ ಶಾಸಕರಿಗೆ ಮತ್ತು ಇತರ ಧುರೀಣರಿಗೆ ನೆನಪಿನಲ್ಲಿ ಇರಬೇಕಾಗಿತ್ತು, ಪಾಠವಾಗಬೇಕಾಗಿತ್ತು. ಆದರೆ, ನಮ್ಮ ನಾಯಕರು ಇತಿಹಾಸದಿಂದ ಪಾಠ ಕಲಿಯುವುದಿಲ್ಲ ಎನ್ನುವುದಕ್ಕೆ ಈಗ ವಿಧಾನಸೌಧದಲ್ಲಿ ನಡೆದ ಘಟನೆಗಳೇ ಸಾಕ್ಷಿ. ಯಾವುದೇ ಕಾರಣಕ್ಕೂ ವಿಧಾನಸೌಧದ ಪಾವಿತ್ರ್ಯಕ್ಕೆ ಧಕ್ಕೆ ತರುವ ಕೆಲಸವನ್ನು ಯಾರೂ ಮಾಡಬಾರದು. ನಮ್ಮ ನಾಯಕರು ಈಗಲೂ ಪಾಠ ಕಲಿಯದಿದ್ದರೆ, ಸಂದರ್ಭ ಬಂದಾಗ ಜನರೇ ಕಲಿಸುತ್ತಾರೆ.

ಬರಹ ಇಷ್ಟವಾಯಿತೆ?

 • 7

  Happy
 • 2

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !