ಶುಕ್ರವಾರ, ನವೆಂಬರ್ 27, 2020
20 °C

ವೊಡಾಫೋನ್, ಐಡಿಯಾ ವಿಲೀನಸೇವಾ ಗುಣಮಟ್ಟ ಹೆಚ್ಚಳ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬ್ರಿಟನ್ನಿನ ದೈತ್ಯ ದೂರಸಂಪರ್ಕ ಸಂಸ್ಥೆ ವೊಡಾಫೋನ್‌ ಮತ್ತು ಆದಿತ್ಯ ಬಿರ್ಲಾ ಸಮೂಹದ ಐಡಿಯಾ ಸೆಲ್ಯುಲರ್‌ ವಿಲೀನ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿರುವುದು ದೂರಸಂಪರ್ಕ ಕ್ಷೇತ್ರದಲ್ಲಿನ ಮಹತ್ವದ ಬೆಳವಣಿಗೆಯಾಗಿದೆ. ದೇಶದಲ್ಲಿ ಅತಿದೊಡ್ಡ ಮೊಬೈಲ್‌ ಸೇವಾ ಸಂಸ್ಥೆ ಅಸ್ತಿತ್ವಕ್ಕೆ ಬರುವ ಹಾದಿ ಈಗ ಸುಗಮಗೊಂಡಿದೆ. ಮೊಬೈಲ್‌ ಕ್ಷೇತ್ರದಲ್ಲಿನ ಅತಿದೊಡ್ಡ ವಿಲೀನವೂ ಇದಾಗಿದ್ದು, ಇದು ಹೊಸ ಮೈಲುಗಲ್ಲು. ಈ ಬೆಳವಣಿಗೆಯು ಮೊಬೈಲ್‌ ಸೇವೆ ಮತ್ತು ವಹಿವಾಟಿನ ಸ್ಥಿರತೆಗೆ ಕಾರಣವಾಗಿ ಬೆಳವಣಿಗೆಯ ವೇಗ ತೀವ್ರಗೊಳಿಸಲಿದೆ. ಮಾರುಕಟ್ಟೆಯು ತೀವ್ರ ಸ್ಪರ್ಧಾತ್ಮಕವಾಗಿರುವ ಕಾಲಘಟ್ಟದಲ್ಲಿ ನಡೆದಿರುವ ಈ ಅತಿ ದೊಡ್ಡ ವಿಲೀನದಿಂದ ಎರಡೂ ಸಂಸ್ಥೆಗಳಿಗಷ್ಟೇ ಅಲ್ಲದೆ ಗ್ರಾಹಕರಿಗೂ ಪ್ರಯೋಜನ ದೊರೆಯಲಿದೆ. ರಿಲಯನ್ಸ್‌ ಜಿಯೊದ ಪ್ರವೇಶದ ನಂತರದ ಮೊದಲ ವಿಲೀನ ಇದಾಗಿದೆ. ಮೊದಲ ಸ್ಥಾನದಲ್ಲಿದ್ದ ಭಾರ್ತಿ ಏರ್‌ಟೆಲ್‌ ಇನ್ನು ಮುಂದೆ ಎರಡನೇ ಸ್ಥಾನಕ್ಕೆ ಹಿಂಬಡ್ತಿ ಪಡೆಯಲಿದೆ. ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್‌ ಮಾರುಕಟ್ಟೆಯಾಗಿರುವ ಭಾರತದಲ್ಲಿ ದರ ಸಮರ ತೀವ್ರಗೊಂಡಿರುವ ಸಂದರ್ಭದಲ್ಲಿಯೇ  ಈ ಬೆಳವಣಿಗೆ ನಡೆದಿದೆ. ಇದರಿಂದ ಮೊಬೈಲ್‌ ಸೇವಾ ಕ್ಷೇತ್ರದಲ್ಲಿ ಹೊಸ ಸಂಚಲನ ಕಂಡುಬರುವ ನಿರೀಕ್ಷೆ ಇದೆ. ತೀವ್ರ ಸ್ವರೂಪದ ಸ್ಪರ್ಧೆಯನ್ನು ಇದು ಇನ್ನೊಂದು ಮಜಲಿಗೆ ಕೊಂಡೊಯ್ಯಲಿದೆ. ಆಧಿಪತ್ಯ ಸ್ಥಾಪಿಸಲು ನಡೆಯಲಿರುವ ಕರೆ ದರ ಮತ್ತು ಡೇಟಾ ಸಮರವು ಮೊಬೈಲ್‌ ಬಳಕೆದಾರರ ಪಾಲಿಗೆ ಖಂಡಿತವಾಗಿಯೂ ಹೆಚ್ಚು ಲಾಭಕರವಾಗಿರಲಿದೆ. ಸ್ಪರ್ಧೆಯು ಕರೆಗಳಿಂದ ಡೇಟಾ ಸೇವೆಗೆ ವರ್ಗಾವಣೆಗೊಂಡಿರುವ ಸಂದರ್ಭದಲ್ಲಿ ವೊಡಾಫೋನ್‌ಐಡಿಯಾ, ಏರ್‌ಟೆಲ್‌ ಮತ್ತು ಜಿಯೊಗಳಿಂದ ಬಳಕೆದಾರರಿಗೆ ಯಾವ ಮಟ್ಟದ ಗುಣಾತ್ಮಕ ಸೇವೆ ದೊರೆಯಲಿದೆ ಎನ್ನುವುದು ಕುತೂಹಲಕಾರಿಯಾಗಿದೆ. ಹೆಚ್ಚಾಗಿ ಡೇಟಾ ಬಳಸುವ ಗ್ರಾಹಕರನ್ನು ಸೆಳೆಯಲು ಮತ್ತು ಅವರನ್ನು ಹಿಡಿದಿಟ್ಟುಕೊಳ್ಳಲು ಈ  ಮುಂಚೂಣಿ ಸಂಸ್ಥೆಗಳ ಮಧ್ಯೆ ಸ್ಪರ್ಧೆ ತೀವ್ರಗೊಳ್ಳಲಿದೆ. ಇದರಿಂದ ಗ್ರಾಹಕರ ಅನುಕೂಲ ದ್ವಿಗುಣಗೊಳ್ಳಲಿದೆ.

ಹೊಸ ಜಂಟಿ ಸಂಸ್ಥೆಯ ಬಳಿ, ಪ್ರತಿಸ್ಪರ್ಧಿಗಳನ್ನು ಸಮರ್ಥವಾಗಿ ಎದುರಿಸಲು ಅಗತ್ಯವಾದ ತರಂಗಾಂತರಗಳೂ ಇವೆ. ಅರೆಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಐಡಿಯಾದ ಪ್ರಭಾವ ಮತ್ತು ಮಹಾನಗರಗಳಲ್ಲಿನ ವೊಡಾಫೋನ್‌ ಜನಪ್ರಿಯತೆಯಿಂದಾಗಿ ದೇಶದಾದ್ಯಂತ ಇದರ ಪ್ರಭಾವ ಕಂಡು ಬರಲಿದೆ. ಸಾಲದ ಹೊರೆ, ದುಬಾರಿ ತರಂಗಾಂತರ ಮತ್ತು ಮೂಲ ಸೌಕರ್ಯ ವೆಚ್ಚ ಹೆಚ್ಚಳವು ಮೊಬೈಲ್‌ ಉದ್ಯಮದ ಸುಸ್ಥಿರ ಬೆಳವಣಿಗೆಗೆ ಅಡ್ಡಿಯಾಗುವ ಅಪಾಯವನ್ನು ಇಂತಹ ವಿಲೀನ ಪ್ರಕ್ರಿಯೆಗಳು ದೂರ ಮಾಡಲಿವೆ. ಮೊಬೈಲ್‌ ಗ್ರಾಹಕರಿಗೆ ನಿರಂತರವಾಗಿ ಗುಣಮಟ್ಟದ ಸೇವೆ ಒದಗಿಸಲು, ಮೂಲ ಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸಲು, ಬಂಡವಾಳ ಹೂಡಿಕೆ ಹೆಚ್ಚಿಸಲು, ಮೊಬೈಲ್‌ ಸೇವಾ ವಲಯದಲ್ಲಿನ ಅವ್ಯವಸ್ಥೆ ದೂರ ಮಾಡಲು ದೂರಸಂಪರ್ಕ ಸೇವಾ ಸಂಸ್ಥೆಗಳ ವಿಲೀನ ನಡೆಯುವುದು ಹೆಚ್ಚು ಅಪೇಕ್ಷಣೀಯವಾಗಿದೆ. ಸಾಲದ ಹೊರೆ, ದುಬಾರಿ ತರಂಗಾಂತರಗಳಂತಹ  ಮೂಲ ಸೌಕರ್ಯಗಳ ವೆಚ್ಚ ಹೆಚ್ಚಳವು ಮೊಬೈಲ್‌ ಉದ್ಯಮದ ಸುಸ್ಥಿರ ಬೆಳವಣಿಗೆಗೆ ಅಡ್ಡಿಯಾಗುವ ಅಪಾಯವನ್ನು ಇಂತಹ ಪ್ರಯತ್ನಗಳು ದೂರ ಮಾಡಲಿವೆ. ಸೀಮಿತ ಸಂಖ್ಯೆಯಲ್ಲಿ ಉಳಿಯಲಿರುವ ಸಂಸ್ಥೆಗಳು, ಸೇವಾ ವಿಸ್ತರಣೆ ಮತ್ತು ಗುಣಮಟ್ಟ ವೃದ್ಧಿಸಲು ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಬಹುದು. ಗ್ರಾಹಕರನ್ನು ಸೆಳೆಯಲು ಆಕರ್ಷಕ ಯೋಜನೆಗಳನ್ನೂ ಆರಂಭಿಸಬಹುದು.

ದೇಶಿ ದೂರಸಂಪರ್ಕ ಕ್ಷೇತ್ರದ ಆರೋಗ್ಯಕರ ಬೆಳವಣಿಗೆಗೆ ಈ ವಿಲೀನವು ಪೂರಕವಾಗಿರುವಂತೆ ಎಚ್ಚರ ವಹಿಸಬೇಕಾಗಿದೆ.  ಬೆಲೆ ನಿಗದಿ ಮಾಡುವ ಅಧಿಕಾರ ಬೆರಳೆಣಿಕೆಯಷ್ಟು ದೈತ್ಯ ಸಂಸ್ಥೆಗಳ ನಿಯಂತ್ರಣದಲ್ಲಿ ಇರಲಿದೆಯೇ, ಇದರಿಂದ ಗ್ರಾಹಕರ ಶೋಷಣೆ ನಡೆಯಲಿದೆಯೇ ಎನ್ನುವ ಅನುಮಾನಗಳಿಗೆ ಆಸ್ಪದ ಇರದಂತೆ ಸರ್ಕಾರ ಎಚ್ಚರ ವಹಿಸಬೇಕಾಗಿದೆ. ಈ ವಿಲೀನವು ಮೊಬೈಲ್‌ ಮಾರುಕಟ್ಟೆ ಸ್ಥಿರಗೊಳ್ಳಲು ನೆರವಾಗಲಿದೆ ಎನ್ನುವ ಆಶಯ ನಿಜವಾಗಲಿ. ವಿಲೀನವು ಯಾವುದೇ ಕಾರಣಕ್ಕೂ ಏಕಸ್ವಾಮ್ಯಕ್ಕೆ ಎಡೆಮಾಡಿಕೊಡದಂತೆ ನೋಡಿಕೊಳ್ಳಬೇಕಾಗಿದೆ. ಗ್ರಾಹಕರಿಗೆ ಕಡಿಮೆ ದರದಲ್ಲಿ ಮೌಲ್ಯವರ್ಧಿತ ಸೇವೆಗಳು ದೊರೆತಲ್ಲಿ ಇಂತಹ ವಿಲೀನದ ಸಾರ್ಥಕತೆ ಹೆಚ್ಚಲಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು