ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಕೋವ್ಯಾಕ್ಸಿನ್‌ಗೆ ಮಾನ್ಯತೆ, ಉತ್ಪಾದನೆ ಹೆಚ್ಚಳದತ್ತ ಹರಿಯಲಿ ಗಮನ

ಸಂಪಾದಕೀಯ
Last Updated 10 ನವೆಂಬರ್ 2021, 20:53 IST
ಅಕ್ಷರ ಗಾತ್ರ

ಭಾರತದಲ್ಲಿಯೇ ಸಿದ್ಧವಾದ ಮೊದಲ ಕೋವಿಡ್‌ ಲಸಿಕೆ ಎಂಬ ಹೆಗ್ಗಳಿಕೆ ಹೊತ್ತಿರುವ, ಹೈದರಾಬಾದ್‌ನ ಭಾರತ್ ಬಯೋಟೆಕ್ ಕಂಪನಿಯ ಕೋವ್ಯಾಕ್ಸಿನ್‌ಗೆ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ತುರ್ತು ಬಳಕೆಗೆ ಅನುಮತಿ ನೀಡಿದೆ. ಇದು ಹಲವು ಆಯಾಮಗಳಿಂದ ಮಹತ್ವದ್ದು, ಭಾರತದ ವೈದ್ಯಕೀಯ ವಿಜ್ಞಾನಿಗಳ ಸಮುದಾಯ ಸಂಭ್ರಮಿಸುವಂತಹುದು. ದೇಶದಲ್ಲಿ ಈಗ ನಡೆದಿರುವ ಕೋವಿಡ್‌ ಲಸಿಕೆ ನೀಡುವ ಅಭಿಯಾನಕ್ಕೆ ಈ ಮಾನ್ಯತೆಯು ಉತ್ತೇಜನ ನೀಡುವಂತೆ ಇದೆ. ಅಲ್ಲದೆ, ದೇಶದ ವಿಜ್ಞಾನಿಗಳ ಸಮೂಹದ ಪಾಲಿಗೆ ಇದು ಹೆಮ್ಮೆಯ ಸಂದರ್ಭವೂ ಹೌದು.

ಈ ಲಸಿಕೆಗೆ ಮಾನ್ಯತೆ ನೀಡಬೇಕು ಎಂಬ ಕೋರಿಕೆಯು ವಿಶ್ವ ಆರೋಗ್ಯ ಸಂಸ್ಥೆಯ ಮುಂದೆ ಹಲವು ತಿಂಗಳುಗಳಿಂದ ಬಾಕಿ ಉಳಿದಿತ್ತು. ಹಾಗಾಗಿ, ಈಗಿನ ಬೆಳವಣಿಗೆಯು ಹಲವು ಅನಿಶ್ಚಿತತೆಗಳನ್ನು ಅಂತ್ಯಗೊಳಿಸಿದೆ. ಆರೋಗ್ಯ ಸಂಸ್ಥೆಯು ಭಾರತದ ಕಡೆಯಿಂದ ಈ ಲಸಿಕೆಗೆ ಸಂಬಂಧಿಸಿದಂತೆ ಹೆಚ್ಚು ಹೆಚ್ಚು ವಿವರಗಳನ್ನು ಕೇಳುತ್ತಿತ್ತು. ಆದರೆ, ಈಗ ಈ ಲಸಿಕೆಯ ಮಾನ್ಯತೆಯ ವಿಚಾರವಾಗಿ ಇದ್ದ ಆತಂಕಗಳು ನಿವಾರಣೆ ಆಗಿವೆ. ದೇಶವು ಇದುವರೆಗೆ 25 ಕೋಟಿಗೂ ಹೆಚ್ಚು ಜನರಿಗೆ ಎರಡೂ ಡೋಸ್ ಲಸಿಕೆ ನೀಡಿದೆ. 65 ಕೋಟಿಗಿಂತ ಹೆಚ್ಚಿನ ಜನರಿಗೆ ಒಂದು ಡೋಸ್ ಲಸಿಕೆ ನೀಡಿ ಆಗಿದೆ. ಆಸ್ಟ್ರಾಜೆನೆಕಾ ಕಂಪನಿ ಅಭಿವೃದ್ಧಿಪಡಿಸಿರುವ, ಭಾರತದಲ್ಲಿ ಕೋವಿಶೀಲ್ಡ್‌ ಎಂಬ ಹೆಸರು ಹೊತ್ತಿರುವ ಲಸಿಕೆಯು ದೇಶದ ಲಸಿಕಾ ಅಭಿಯಾನದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿ ಇದೆ. ಹತ್ತು ಕೋಟಿಗಿಂತ ತುಸು ಹೆಚ್ಚಿನ ಕೋವ್ಯಾಕ್ಸಿನ್ ಡೋಸ್‌ಗಳನ್ನು ಮಾತ್ರ ನೀಡಲಾಗಿದೆ. ಆದರೆ, ಈಗ ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತೆ ದೊರೆತಿರುವ ಕಾರಣದಿಂದಾಗಿ, ಇನ್ನು ಮುಂದೆ ಕೋವ್ಯಾಕ್ಸಿನ್ ಲಸಿಕೆಯ ಬಳಕೆ ಪ್ರಮಾಣವನ್ನು ಇನ್ನಷ್ಟು ಜಾಸ್ತಿ ಮಾಡಲು ಯಾವ ಅಡಚಣೆಯೂ ಇರುವುದಿಲ್ಲ.

ಭಾರತದಲ್ಲಿ ಕೋವ್ಯಾಕ್ಸಿನ್‌ ಲಸಿಕೆ ಪಡೆದವರು ವಿದೇಶಗಳಿಗೆ ಪ್ರಯಾಣ ಮಾಡುವಾಗ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿತ್ತು. ಈ ಸಮಸ್ಯೆಗಳಿಗೆ ಕೂಡ ಇನ್ನು ಮುಂದೆ ಪರಿಹಾರ ಸಿಗುವ ನಿರೀಕ್ಷೆ ಇದೆ. ಹಲವು ದೇಶಗಳು ಕೋವ್ಯಾಕ್ಸಿನ್‌ಗೆ ಮಾನ್ಯತೆ ನೀಡಿರದಿದ್ದ ಪರಿಣಾಮವಾಗಿ, ಕೋವ್ಯಾಕ್ಸಿನ್ ಎರಡೂ ಡೋಸ್ ಪಡೆದಿದ್ದರೂ ಆ ದೇಶಗಳಿಗೆ ಹೋಗುವ ಭಾರತೀಯರು ಪ್ರತ್ಯೇಕವಾಸಕ್ಕೆ ಒಳಪಡಬೇಕಾಗುತ್ತಿತ್ತು. ಕೋವ್ಯಾಕ್ಸಿನ್‌ಗೆ ಈಗ ದೊರೆತಿರುವ ಮಾನ್ಯತೆಯು, ಕೋವಿಡ್‌ ವಿರುದ್ಧ ವಿಶ್ವವ್ಯಾಪಿಯಾಗಿ ನಡೆದಿರುವ ಹೋರಾಟಕ್ಕೆ ಕೂಡ ಬಲ ತುಂಬಿದೆ. ಜಗತ್ತಿಗೆ ಕೋವಿಡ್ ವಿರುದ್ಧದ ಸಮರದಲ್ಲಿ ಬಳಕೆಗೆ ಇನ್ನೊಂದು ಲಸಿಕೆ ದೊರೆತಂತೆ ಆಗಿದೆ. ಲಸಿಕೆಗಳು ಅಗತ್ಯ ಪ್ರಮಾಣದಲ್ಲಿ ಲಭ್ಯವಿಲ್ಲದ ಕಾರಣದಿಂದಾಗಿ, ಲಸಿಕೆಗಳ ಬೆಲೆ ದುಬಾರಿ ಆಗಿರುವುದರ ಕಾರಣದಿಂದಾಗಿ ವಿಶ್ವದ ಹಲವು ದೇಶಗಳಲ್ಲಿ ಲಸಿಕೆ ಪಡೆದುಕೊಂಡವರ ಪ್ರಮಾಣವು ಇನ್ನೂ ಕಡಿಮೆ ಇದೆ. ಲಸಿಕೆ ನೀಡುವ ಅಭಿಯಾನಕ್ಕೆ ವೇಗ ಸಿಗದೆ ಇದ್ದರೆ, ಕೊರೊನಾ ವೈರಾಣು ಮತ್ತೆ ಮತ್ತೆ ರೂಪಾಂತರಗಳನ್ನು ಹೊಂದಬಹುದು, ಕೋವಿಡ್‌ ಸಾಂಕ್ರಾಮಿಕವನ್ನು ತೊಡೆದುಹಾಕುವುದು ಮನುಕುಲಕ್ಕೆ ಇನ್ನಷ್ಟು ಸವಾಲಿನ ಕೆಲಸವಾಗಿ ಪರಿಣಮಿಸಬಹುದು. ಈಗ ಭಾರತವು ತಾನೇ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್‌ ಲಸಿಕೆಯನ್ನು ಬಳಸಿಕೊಂಡು, ಜಾಗತಿಕ ಮಟ್ಟದಲ್ಲಿ ನಡೆದಿರುವ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬಹುದು. ಭಾರತದಲ್ಲಿ ತಯಾರಾಗುವ ಹಲವು ಔಷಧ, ಲಸಿಕೆಗಳ ಮಾದರಿಯಲ್ಲಿ, ಕೋವ್ಯಾಕ್ಸಿನ್‌ ಕೂಡ ಮುಂದೊಂದು ದಿನ ಕಡಿಮೆ ಬೆಲೆಗೆ ಲಭ್ಯವಾಗಬಹುದು.

ಈಗ ಈ ಲಸಿಕೆಯ ಬೆಲೆಯು ದೇಶದ ಮಾರುಕಟ್ಟೆಯಲ್ಲಿ ಕೋವಿಶೀಲ್ಡ್‌ಗಿಂತ ತುಸು ಹೆಚ್ಚೇ ಇದೆ. ಈ ಲಸಿಕೆಯು ಕೈಗೆಟಕುವ ದರದಲ್ಲಿ ಲಭ್ಯವಾಗಬೇಕು ಎಂದಾದರೆ, ಅದರ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಬೇಕು. ಇದೊಂದೇ ಕಾರಣಕ್ಕೆ ಅಲ್ಲದೆ, ದೇಶಿ ಹಾಗೂ ಅಂತರರಾಷ್ಟ್ರೀಯ ಬೇಡಿಕೆಗೆ ತಕ್ಕಂತೆ ಲಸಿಕೆಯನ್ನು ಪೂರೈಸಲು ಕೋವ್ಯಾಕ್ಸಿನ್‌ ಉತ್ಪಾದನೆಯನ್ನು ಜಾಸ್ತಿ ಮಾಡಬೇಕು. ಸರ್ಕಾರದ ಬೆಂಬಲವು ಕೋವ್ಯಾಕ್ಸಿನ್‌ಗೆ ಇದ್ದರೂ, ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್ಐಐ) ಉತ್ಪಾದಿ ಸುತ್ತಿರುವ ಕೋವಿಶೀಲ್ಡ್‌ನಷ್ಟು ಕೋವ್ಯಾಕ್ಸಿನ್‌ ಉತ್ಪಾದನೆ ಇಲ್ಲ. ಕೋವ್ಯಾಕ್ಸಿನ್‌ ತಯಾರಿಕೆಯಲ್ಲಿ ಬಳಕೆಯಾಗಿರುವ ನಿರ್ದಿಷ್ಟ ತಂತ್ರಜ್ಞಾನದ ಕಾರಣದಿಂದಾಗಿ, ಅದರ ಉತ್ಪಾದನೆಯು ಕ್ಲಿಷ್ಟಕರ ಎಂಬ ಮಾತು ಇದೆ. ಉತ್ಪಾದನೆಯ ಹೆಚ್ಚಳದ ಬಗೆ ಹೇಗೆ ಎಂಬ ಬಗ್ಗೆ ವಿಜ್ಞಾನಿಗಳ ಸಮುದಾಯ ದಾರಿ ತೋರಬಹುದೇನೋ. ಆದರೆ, ಈ ಲಸಿಕೆಯ ಉತ್ಪಾದನೆಯನ್ನು ಹೆಚ್ಚಿಸಿದಾಗ ಮಾತ್ರ, ಡಬ್ಲ್ಯುಎಚ್‌ಒ ಈಗ ನೀಡಿರುವ ಮಾನ್ಯತೆಯ ಪೂರ್ಣ ಪ್ರಯೋಜನ‍ಪಡೆಯಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT