ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಪಟಾಕಿ ಸಿಡಿಸುವುದಕ್ಕೆ ನಿರ್ಬಂಧ ಸರ್ಕಾರ ಉಲ್ಟಾ ಹೊಡೆದಿದ್ದೇಕೆ?

Last Updated 10 ನವೆಂಬರ್ 2020, 0:52 IST
ಅಕ್ಷರ ಗಾತ್ರ

ಪಟಾಕಿ ಸಿಡಿಸುವುದರಿಂದ ಆಗುವ ಪರಿಸರ ಮಾಲಿನ್ಯ ಮತ್ತು ಅದು ಸಾರ್ವಜನಿಕ ಆರೋಗ್ಯದ ಮೇಲೆ ಬೀರುವ ವ್ಯತಿರಿಕ್ತ ಪರಿಣಾಮದ ಕುರಿತು ಬಹಳ ಹಿಂದಿನಿಂದಲೂ ಚರ್ಚೆಗಳು ನಡೆಯುತ್ತಿವೆ. ಆದರೆ, ಹಬ್ಬಗಳು ಬಂದಾಗ ಆ ಚರ್ಚೆಗಳೆಲ್ಲ ಮರೆತುಹೋಗಿ ಜನರಲ್ಲಿ ಪಟಾಕಿ ಸಿಡಿಸುವ ಉಮೇದು ಮಾತ್ರ ಉಕ್ಕೇರುತ್ತದೆ. ಕೋವಿಡ್‌ನ ತೀವ್ರತೆ ಇನ್ನೂ ಹೆಚ್ಚಿರುವ ಈ ಸನ್ನಿವೇಶದಲ್ಲಿ ದೆಹಲಿ, ರಾಜಸ್ಥಾನ, ಹರಿಯಾಣ ಮತ್ತು ಒಡಿಶಾ ರಾಜ್ಯಗಳಲ್ಲಿ ಪಟಾಕಿ ಸಿಡಿಸುವುದನ್ನು ನಿರ್ಬಂಧಿಸಲಾಗಿದೆ. ಕರ್ನಾಟಕದಲ್ಲೂ ಈ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಲಾಗುವುದು ಎಂದು ಘೋಷಿಸಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಅಷ್ಟೇ ವೇಗದಲ್ಲಿ ಆ ನಿರ್ಧಾರದಿಂದ ಹಿಂದೆಯೂ ಸರಿದುಬಿಟ್ಟರು. ‘ಹಸಿರು ಪಟಾಕಿ’ಯನ್ನು ಸಿಡಿಸಿ, ಸರಳವಾಗಿ ಹಬ್ಬ ಆಚರಿಸಬೇಕು ಎಂದೂ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಪರಿಸರದ ‘ಆರೋಗ್ಯ’ವನ್ನು ಹಾಳುಮಾಡುವ ಕಾರಣ ಪಟಾಕಿ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಬೇಕು ಎಂಬ ಅರ್ಜಿಗಳು ಈ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿದ್ದೂ ಉಂಟು. ಹಬ್ಬದ ಸಂದರ್ಭದಲ್ಲಿ ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಬಹುದು ಎಂದು ಎರಡು ವರ್ಷಗಳ ಹಿಂದೆಯೇ ಕೋರ್ಟ್‌ ಆದೇಶಿಸಿದೆ. ಆ ಆದೇಶ ಹೇಗೆ ಪಾಲನೆಯಾಗುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಈ ಮಧ್ಯೆ, ಕೋವಿಡ್‌ ವಿರುದ್ಧದ ಹೋರಾಟಕ್ಕೆ ಸರ್ಕಾರ ರಚಿಸಿರುವ ತಾಂತ್ರಿಕ ಸಮಿತಿ ಕೂಡ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಕಾರಣ ಪಟಾಕಿ ಮಾರಾಟವನ್ನು ನಿಷೇಧಿಸಬೇಕು ಎಂದು ಶಿಫಾರಸು ಮಾಡಿದೆ. ಪಟಾಕಿ ಸಿಡಿತಕ್ಕೆ ಆಸ್ಪದ ಬೇಡ ಎನ್ನುವ ಒತ್ತಾಯಕ್ಕೆ ಇಷ್ಟೆಲ್ಲ ಹಿನ್ನೆಲೆ ಇರುವಾಗ ಸರ್ಕಾರ ಉಲ್ಟಾ ಹೊಡೆದಿದ್ದು ಯಾಕೋ?

ದೇಶದಲ್ಲಿ ಮಹಾರಾಷ್ಟ್ರ ಹೊರತುಪಡಿಸಿದರೆ ಅತ್ಯಧಿಕ ಕೋವಿಡ್‌ ಪೀಡಿತರನ್ನು ಹೊಂದಿರುವ ರಾಜ್ಯ ಕರ್ನಾಟಕ. ಅದರಲ್ಲೂ ಬೆಂಗಳೂರು ಈಗಲೂ ದೇಶದ ಹಾಟ್‌ಸ್ಪಾಟ್‌ಗಳಲ್ಲಿ ಒಂದೆನಿಸಿದೆ. ಇಂತಹ ಸನ್ನಿವೇಶದಲ್ಲಿ ವೈರಾಣು ನಿಯಂತ್ರಣಕ್ಕಾಗಿ ಕೈಗೊಳ್ಳುವ ಕಟ್ಟುನಿಟ್ಟಿನ ಕ್ರಮಗಳಲ್ಲಿ ಯಾವ ಸಡಿಲಿಕೆಗೂ ಆಸ್ಪದ ನೀಡುವ ಅಗತ್ಯವಿಲ್ಲ. ಚಳಿಗಾಲ ಶುರುವಾಗುತ್ತಿರುವ ಈ ಸಂದರ್ಭದಲ್ಲಿ ವೈರಾಣು ಹರಡುವಿಕೆಯ ತೀವ್ರತೆ ಹೆಚ್ಚು ಎಂದು ತಜ್ಞರು ಹೇಳುತ್ತಿದ್ದಾರೆ. ಅದರೊಟ್ಟಿಗೆ ಪಟಾಕಿ ಸಿಡಿತದಿಂದ ಉಂಟಾದ ಮಾಲಿನ್ಯವೂ ಸೇರಿಕೊಂಡರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ. ‘ಹಸಿರು ಪಟಾಕಿ’ಗೆ ಮಾತ್ರ ಅನುಮತಿ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಪಟಾಕಿ ಸಿಡಿಸುವವರ ಮೇಲೆ ನಿಗಾ ಇಡುವವರು, ಕಡಿಮೆ ಸದ್ದು ಹೊರಡಿಸುವ, ಹೆಚ್ಚು ಮಾಲಿನ್ಯಕಾರಕವಲ್ಲದ ಪಟಾಕಿಗಳನ್ನು ಮಾತ್ರ ಸಿಡಿಸಲಾಗಿದೆ ಎಂದು ಖಚಿತಪಡಿಸುವವರು ಯಾರು? ಸಾರ್ವಜನಿಕ ಆರೋಗ್ಯವನ್ನು ಸಂಕಷ್ಟಕ್ಕೆ ತಳ್ಳಿದರೂ ಪರವಾಗಿಲ್ಲ, ಪಟಾಕಿಯನ್ನು ಸಿಡಿಸಿಯೇ ಸಿದ್ಧ ಎನ್ನುವ ಹಟವಾದರೂ ಏಕೆ? ಪಟಾಕಿ ಹೊಡೆಯುವವರು, ಆ ಖಯಾಲಿಗಾಗಿ ತಮ್ಮ ಆರೋಗ್ಯವನ್ನಲ್ಲದೆ ಸಮುದಾಯದ ಸ್ವಾಸ್ಥ್ಯವನ್ನೇ ಪಣಕ್ಕೆ ಇಡುತ್ತಿರುವುದನ್ನು ಮರೆಯಬಾರದು. ವಾಯು ಗುಣಮಟ್ಟದ ಯಾವುದೇ ಸಮೀಕ್ಷೆಗಳ ಮೇಲೊಮ್ಮೆ ಕಣ್ಣಾಡಿಸಿ ನೋಡಿದರೆ ಬೆಂಗಳೂರು ಮಾತ್ರವಲ್ಲದೆ, ಹುಬ್ಬಳ್ಳಿ–ಧಾರವಾಡ, ಕಲಬುರ್ಗಿ ಮತ್ತು ದಾವಣಗೆರೆ ನಗರಗಳು ಪರಿಶುದ್ಧ ಗಾಳಿಯ ಕೊರತೆ ಅನುಭವಿಸುತ್ತಿರುವುದು ಎದ್ದು ಕಾಣುತ್ತದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಸಿದ್ಧಪಡಿಸಿದ ವಾಯು ಗುಣಮಟ್ಟ ಕುಸಿತ ಕಂಡ ನಗರಗಳ ಪಟ್ಟಿಯಲ್ಲೂ ಇವುಗಳ ಹೆಸರಿದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಎನ್‌ಜಿಟಿ ನೋಟಿಸ್ ಕೂಡ ನೀಡಿದೆ. ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಬಳಲುವವರಿಗೆ ಬೆಂಗಳೂರು ಉತ್ತಮ ಸ್ಥಳವಲ್ಲ ಎಂಬ ಮಾತು ವೈದ್ಯರಿಂದಲೇ ಕೇಳಿಬಂದಿದೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ತಾನು ಕೈಗೊಂಡ ಸರಿಯಾದ ನಿರ್ಧಾರದಿಂದ ಹಿಂದೆ ಸರಿದಿದ್ದಾದರೂ ಏಕೆ? ಹಬ್ಬವನ್ನು ಮನೆಯಲ್ಲೇ ಸಡಗರದಿಂದ ಆಚರಿಸೋಣ. ಆದರೆ, ಆರೋಗ್ಯದ ಕುರಿತು ನಿರ್ಲಕ್ಷ್ಯ ಸಲ್ಲದು. ಪಟಾಕಿ ನಿಷೇಧದ ವಿಚಾರದಲ್ಲಿ ರಾಜ್ಯ ಸರ್ಕಾರವು ಹೆಜ್ಜೆ ಹಿಂದಿಡುವಲ್ಲಿ ಯಾವುದಾದರೂ ಲಾಬಿ ಕೆಲಸ ಮಾಡಿದ್ದು ನಿಜವೇ ಆಗಿದ್ದರೆ, ಆಡಳಿತದ ಹೊಣೆ ಹೊತ್ತವರು ಜನರ ಆರೋಗ್ಯವನ್ನು ಕಡೆಗಣಿಸಿದ್ದಾರೆಂದೇ ಅರ್ಥ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT