ಮಹಿಳೆಯೊಬ್ಬರ ಸ್ಪರ್ಧೆಗೆ ಇಷ್ಟೊಂದು ಅಸಹನೆ ಏಕೆ?

ಬುಧವಾರ, ಮಾರ್ಚ್ 27, 2019
26 °C

ಮಹಿಳೆಯೊಬ್ಬರ ಸ್ಪರ್ಧೆಗೆ ಇಷ್ಟೊಂದು ಅಸಹನೆ ಏಕೆ?

Published:
Updated:
Prajavani

ಜವಾಬ್ದಾರಿಯುತ ಜನಪ್ರತಿನಿಧಿಯ ಬಾಯಿಯಿಂದ ಎಂತಹ ಮಾತುಗಳು ಬರಬಾರದು ಎಂದು ಪ್ರಜ್ಞಾವಂತ ಸಮಾಜ ಬಯಸುತ್ತದೋ ಅಂತಹ ಮಾತುಗಳು ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಅವರ ಬಾಯಿಯಿಂದ ಬಂದಿವೆ. ‘ಗಂಡ ಸತ್ತು ಎರಡು ತಿಂಗಳಾಗಿಲ್ಲ, ಸುಮಲತಾಗೇಕೆ ರಾಜಕೀಯ?’ ಎಂಬ ಅವರ ಮಾತಿನಲ್ಲಿ ಅಧಿಕಾರ ಮದದ ಠೇಂಕಾರ ಎದ್ದುಕಾಣುತ್ತದೆ.

ಇದು, ಸುಸಂಸ್ಕೃತ ನಡತೆಯಲ್ಲ. ರಾಜಕಾರಣದಲ್ಲಿ ಸುದೀರ್ಘ ಅನುಭವ ಇದ್ದರೂ ಆ ಪಕ್ವತೆ ಅವರ ನಡೆ–ನುಡಿಯಲ್ಲಿ ಕಾಣಿಸದೇ ಇರುವುದು ವಿಷಾದನೀಯ. ಅವರ ಇಂತಹ ವರ್ತನೆ ಇದೇ ಮೊದಲೇನೂ ಅಲ್ಲ. ಕೊಡಗಿನ ನೆರೆ ಪುನರ್ವಸತಿ ಕೇಂದ್ರದಲ್ಲಿ ಸಂತ್ರಸ್ತರತ್ತ ಬಿಸ್ಕೆಟ್‌ ಪೊಟ್ಟಣಗಳನ್ನು ಅವರು ಎಸೆದ ವಿಡಿಯೊ ಕೆಲ ದಿನಗಳ ಹಿಂದೆ ವೈರಲ್‌ ಆಗಿತ್ತು. ಅದರಲ್ಲಿ ಊಳಿಗಮಾನ್ಯ ವ್ಯವಸ್ಥೆಯ ಅಹಂಕಾರವನ್ನು ಕಂಡಿದ್ದ ಪ್ರಜ್ಞಾವಂತರು ‘ಅಬ್ಬಾ, ಯಾವ ಪರಿ  ದಾರ್ಷ್ಟ್ಯ ಇದು’ ಎಂದು ಹುಬ್ಬೇರಿಸಿದ್ದರು.

ಈಗ ಸುಮಲತಾ ಅವರನ್ನು ಉದ್ದೇಶಿಸಿ ಆಡಿರುವ ಮಾತು ಅದನ್ನು ಪುಷ್ಟೀಕರಿಸುವಂತಿದೆ. ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ನಿಖಿಲ್‌ ಕುಮಾರಸ್ವಾಮಿ ಅವರನ್ನು ಕಣಕ್ಕೆ ಇಳಿಸಲು ಜೆಡಿಎಸ್‌ ಮುಂದಾಗಿದೆ. ಅದೇ ಕ್ಷೇತ್ರದಿಂದ ಸ್ಪರ್ಧಿಸಲು ಸುಮಲತಾ ಬಯಸಿರುವುದು ಜೆಡಿಎಸ್‌ ಮುಖಂಡರಿಗೆ ಪಥ್ಯವಾಗಿಲ್ಲ. ಹಾಗಾಗಿ, ಆ ಪಕ್ಷದ ಹಿರಿಯ ಮುಖಂಡರಲ್ಲಿ ಹಲವರು ಸುಮಲತಾ ವಿರುದ್ಧ ಹರಿಹಾಯುತ್ತಲೇ ಇದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಇಂತಹ ವರ್ತನೆ ಯಾವುದೇ ರಾಜಕೀಯ ಪಕ್ಷಕ್ಕೆ ಶೋಭೆ ತರುವುದಿಲ್ಲ. ‘ಹಿಂದೂ ಸಂಸ್ಕೃತಿ’ಯನ್ನು ಮುಂದಿಟ್ಟುಕೊಂಡು ರೇವಣ್ಣ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವುದು ಅಸಂಬದ್ಧದ ನಡೆ. ಕುಟುಂಬ ಸದಸ್ಯರ ಅಗಲಿಕೆಯಿಂದ ನೋವು ಉಂಟಾಗುವುದು ಸಹಜ.

ಆ ಆಘಾತದಿಂದ ಚೇತರಿಸಿಕೊಳ್ಳಲು ಸಮಯ ಬೇಕಾಗಬಹುದು. ಅದೇನೇ ಇದ್ದರೂ ಸುಮಲತಾ ಅವರಿಗೆ ಅಂಬರೀಷ್‌ ಪತ್ನಿ ಎಂಬುದರಾಚೆಗೂ ತಮ್ಮದೇ ಆದ ವ್ಯಕ್ತಿತ್ವ ಇದೆ. ಅದನ್ನು ಗೌರವಿಸಬೇಕು. ಮಹಿಳೆಯೊಬ್ಬರು ಸ್ಪರ್ಧಿಸುತ್ತಾರೆ ಎಂಬುದೇ ಆಡಳಿತಾರೂಢ ಪಕ್ಷವೊಂದಕ್ಕೆ ಈ ಮಟ್ಟದ ಆತಂಕ ತಂದಿರುವುದು ಸೋಜಿಗದ ಸಂಗತಿ. ತಮ್ಮ ಕುಟುಂಬದ ಕುಡಿಯ ವಿರುದ್ಧ ಕಣದಲ್ಲಿ ಪ್ರಬಲ ಸ್ಪರ್ಧಿ ಇರಬಾರದು ಎಂದು ಬಯಸುವುದು ಪಕ್ಕಾ ಯಜಮಾನಿಕೆ ಮನೋಭಾವ. ಇಂತಹುದಕ್ಕೆ ಪ್ರಜಾಪ್ರಭುತ್ವದಲ್ಲಿ ಅವಕಾಶ ಇರಬಾರದು.

ಮಹಿಳೆಯ ರಾಜಕೀಯ ಪ್ರವೇಶ ಇಂಗಿತ ಮಾತ್ರದಿಂದಲೇ ಎದೆಗುಂದಿ, ಮನಸೋಇಚ್ಛೆ ನಾಲಿಗೆ ಹರಿಯಬಿಟ್ಟು ಆಕೆಯನ್ನು ಹಿಮ್ಮೆಟ್ಟಿಸಲು ನೋಡುವ ಪುರುಷ ಪ್ರಧಾನ ವ್ಯವಸ್ಥೆಯ ಷಡ್ಯಂತ್ರ ಅನೂಚಾನವಾಗಿ ನಡೆದುಬಂದಿದೆ. ಚಿತ್ರನಟಿ ರಮ್ಯಾ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದಾದಾಗ ಅವರ ವಿರುದ್ಧ ವೈಯಕ್ತಿಕ ನೆಲೆಯಲ್ಲಿ ಟೀಕೆಗಳು ಕೇಳಿಬಂದಿದ್ದವು. ಸಚಿವರಾಗಿದ್ದ ಮಹದೇವ ಪ್ರಸಾದ್‌ ನಿಧನದ ಬಳಿಕ ಅವರ ಪತ್ನಿ ಮೋಹನಕುಮಾರಿ ಅವರು ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿದಾಗಲೂ ಬಿಜೆಪಿ ಮುಖಂಡರೊಬ್ಬರು ರೇವಣ್ಣ ಅವರು ಮಾತನಾಡಿದ ರೀತಿಯಲ್ಲೇ ಸಭ್ಯವಲ್ಲದ ಹೇಳಿಕೆ ನೀಡಿದ್ದರು.

ಇವೆಲ್ಲವೂ ಮಹಿಳೆಯರ ರಾಜಕೀಯ ಪ್ರವೇಶಕ್ಕೆ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಇರುವ ಅಸಹನೆಯ ವಿವಿಧ ಮಜಲುಗಳು. ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ಕಲ್ಪಿಸುವ ಉದ್ದೇಶದ ಮಸೂದೆಯನ್ನು ಅಂಗೀಕರಿಸಲು ಇಂತಹ ಮನಃಸ್ಥಿತಿಯಿಂದಾಗಿಯೇ ಸಾಧ್ಯವಾಗಿಲ್ಲ. ವಿಧಾನಸಭೆ ಹಾಗೂ ಸಂಸತ್ತಿನಲ್ಲಿ ಮಹಿಳೆಯರ ಪ್ರಾತಿನಿಧ್ಯ ಪ್ರಮಾಣದಲ್ಲಿ ಏರಿಕೆ ಆಗುತ್ತಿಲ್ಲ. ಒಂದು ಕ್ಷೇತ್ರದಲ್ಲಿ ಮಹಿಳೆಯೊಬ್ಬರ ಸ್ಪರ್ಧೆ ಬಗ್ಗೆಯೇ ಇಷ್ಟೊಂದು ಅಸಹನೆ ವ್ಯಕ್ತಪಡಿಸುವ ಆಳುವವರ್ಗ, ರಾಜಕೀಯದಲ್ಲಿ ಮಹಿಳೆಗೆ ಸಮಪಾಲು ದೊರಕಿಸಿಕೊಡಬಹುದು ಎಂಬ ನಿರೀಕ್ಷೆ ಇರಿಸಿಕೊಳ್ಳಬಹುದೇ?

ಬರಹ ಇಷ್ಟವಾಯಿತೆ?

 • 31

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !