ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ ಜನಕರಿಗೆ ಕೊನೆಗೂ ಒಲಿದ ವಿಶ್ವಕಪ್‌ ಕಿರೀಟ

Last Updated 15 ಜುಲೈ 2019, 20:00 IST
ಅಕ್ಷರ ಗಾತ್ರ

ಇಂಗ್ಲೆಂಡ್‌ನ ಕ್ರೀಡಾಪ್ರೇಮಿಗಳ ಹೃದಯಗಳಲ್ಲಿ ಫುಟ್‌ಬಾಲ್ ದಿಗ್ಗಜ ಸರ್ ಆಲ್ಫ್‌ ರಾಮ್ಸೆ ಅವರ ನಂತರದ ಸ್ಥಾನವನ್ನು ಈಗ ಕ್ರಿಕೆಟಿಗ ಇಯಾನ್ ಮಾರ್ಗನ್ ಪಡೆದುಕೊಂಡಿದ್ದಾರೆ. ರಾಮ್ಸೆ ಬಳಗ 1966ರಲ್ಲಿ ಬ್ರಿಟನ್‌ಗೆ ಫಿಫಾ ವಿಶ್ವಕಪ್ ಗೆದ್ದುಕೊಟ್ಟಿತ್ತು. ಇದೀಗ ಮಾರ್ಗನ್ ನಾಯಕತ್ವದ ತಂಡವು ಏಕದಿನ ಕ್ರಿಕೆಟ್ ವಿಶ್ವಕಪ್ ಜಯಿಸಿದೆ. ಭಾನುವಾರ ಲಾರ್ಡ್ಸ್‌ ಅಂಗಳದಲ್ಲಿ ಸೂಪರ್ ಓವರ್‌ವರೆಗೆ ಬೆಳೆದು ರೋಚಕ ಅಂತ್ಯ ಕಂಡ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್ ವಿರುದ್ಧ ಜಯಿಸಿತು.ವಿಶ್ವಕ್ಕೆ ಕ್ರಿಕೆಟ್ ಹೇಳಿಕೊಟ್ಟ ದೇಶದ ಮೊದಲ ಸಾಧನೆ ಇದು. 44 ವರ್ಷಗಳ ಇತಿಹಾಸದಲ್ಲಿ ಮೂರು ಬಾರಿ (1979, 1987 ಮತ್ತು 1992) ಫೈನಲ್‌ ತಲುಪಿದ್ದ ಇಂಗ್ಲೆಂಡ್ ಎಡವಿತ್ತು. ಈ ಬಾರಿಯೂ ಜಯ ಸುಲಭವಾಗಿ ಒಲಿಯಲಿಲ್ಲ. ನ್ಯೂಜಿಲೆಂಡ್ ತಂಡದ ದಿಟ್ಟ ಹೋರಾಟದ ಎದುರು ಇಂಗ್ಲೆಂಡ್‌ಗೆ ಅದೃಷ್ಟ ಜೊತೆಗೂಡಿತು. ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಅವರ ಕೆಚ್ಚೆದೆಯ ಹೋರಾಟದಿಂದ ನಿಗದಿತ ಓವರ್‌ಗಳ ಅವಧಿಯಲ್ಲಿ ಟೈ ಆದ ಪಂದ್ಯವು ಸೂಪರ್‌ ಓವರ್‌ಗೆ ಹೋಯಿತು. ಅದೂ ಟೈ ರೋಚಕತೆಗೆ ಮೆರುಗು ನೀಡಿತು. ಅಂತಿಮವಾಗಿ ಪಂದ್ಯದ ಫಲಿತಾಂಶ ಇತ್ಯರ್ಥಗೊಂಡಿದ್ದು ಬೌಂಡರಿಗಳ ಲೆಕ್ಕದ ಮೇಲೆ. ಫೈನಲ್‌ಗೆ ಭಾರತ ಪ್ರವೇಶಿಸುವ ಭರವಸೆಯಲ್ಲಿ ಟಿಕೆಟ್ ಖರೀದಿಸಿದ್ದ ಭಾರತೀಯ ಅಭಿಮಾನಿಗಳೂ ಕಿವೀಸ್–ಇಂಗ್ಲೆಂಡ್ ಹಣಾಹಣಿಗೆ ಸಾಕ್ಷಿಯಾದರು.

ಈ ಟೂರ್ನಿಯು ಭಾರತಕ್ಕೆ ನಾಲ್ಕರ ಘಟ್ಟದವರೆಗೂ ಕೆಲವು ಸ್ಮರಣೀಯ ಸಾಧನೆಗಳ ಪಯಣವಾಯಿತು. ರೌಂಡ್‌ ರಾಬಿನ್ ಲೀಗ್‌ನಲ್ಲಿ ಕಠಿಣ ಸವಾಲು ಎದುರಿಸಿದ ವಿರಾಟ್ ಕೊಹ್ಲಿ ಬಳಗವು ಅಂಕಪಟ್ಟಿಯ ಮೊದಲ ಸ್ಥಾನಕ್ಕೇ ರಿದ್ದು ದೊಡ್ಡ ಸಾಧನೆ. ವಿಶ್ವಕಪ್ ಇತಿಹಾಸದಲ್ಲಿ ಪಾಕ್‌ ತಂಡದೆದುರು ಭಾರತದ ಯಶಸ್ಸಿನ ಓಟ ಈ ಬಾರಿಯೂ ಮುಂದುವರಿಯಿತು. ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಈ ಟೂರ್ನಿಯಲ್ಲಿ ಐದು ಶತಕ ದಾಖಲಿಸಿ ವಿಶ್ವದಾಖಲೆ ಬರೆದರು. ಪ್ರಮುಖ ಆಟಗಾರರ ಗಾಯದ ಸಮಸ್ಯೆಯಿಂದ ತಂಡ ಎದೆಗುಂದಲಿಲ್ಲ. ಭುವನೇಶ್ವರ್ ಕುಮಾರ್ ಬದಲಿಗೆ ಕಣಕ್ಕಿಳಿದ ಮೊಹಮ್ಮದ್ ಶಮಿ ನಾಲ್ಕು ಪಂದ್ಯಗಳಲ್ಲಿ 14 ವಿಕೆಟ್ (ಹ್ಯಾಟ್ರಿಕ್ ಸೇರಿ) ಗಳಿಸಿದರು. ಎದುರಾಳಿ ತಂಡಗಳ ಬ್ಯಾಟ್ಸ್‌ಮನ್‌ಗಳಿಗೆ ಜಸ್‌ಪ್ರೀತ್ ಬೂಮ್ರಾ ಸಿಂಹಸ್ವಪ್ನರಾದರು. ಕನ್ನಡಿಗ ಕೆ.ಎಲ್. ರಾಹುಲ್ ಒಂದು ಶತಕ ದಾಖಲಿಸಿದರು. ಲೀಗ್‌ನ ಕೊನೆಯ ಪಂದ್ಯದ ವೇಳೆಗೆ ಸ್ಥಾನ ಗಳಿಸಿದ್ದ ಮಯಂಕ್ ಅಗರವಾಲ್ ಅವರಿಗೆ ಕಣಕ್ಕಿಳಿಯುವ ಅವಕಾಶ ಸಿಗಲಿಲ್ಲ. ತಮ್ಮ ವೃತ್ತಿಜೀವನದ ಕೊನೆಯ ವಿಶ್ವಕಪ್ ಟೂರ್ನಿ ಅಡಿದ ಮಹೇಂದ್ರಸಿಂಗ್ ಧೋನಿ ಹಲವು ಕಾರಣಗಳಿಗೆ ಗಮನ ಸೆಳೆದರು. ಮೊದಲ ಪಂದ್ಯದಲ್ಲಿ ಅವರು ಧರಿಸಿದ್ದ ವಿಕೆಟ್‌ಕೀಪಿಂಗ್ ಕೈಗವಸಿನ ಮೇಲಿದ್ದ ಭಾರತೀಯ ಸೇನೆಯ ಬಲಿದಾನ ಲಾಂಛನವು ಚರ್ಚೆಗೆ ಗ್ರಾಸವಾಯಿತು. ಕೆಲ ಪಂದ್ಯಗಳಲ್ಲಿ ಅವರ ತಾಳ್ಮೆಯ ಬ್ಯಾಟಿಂಗ್‌ ‘ನಿಧಾನಗತಿ’ ಎಂಬ ಟೀಕೆ ಎದುರಿಸಿತು. ರವೀಂದ್ರ ಜಡೇಜ, ಸಿಕ್ಕ ಅವಕಾಶದಲ್ಲಿ ತಾವು ಉಪಯುಕ್ತ ಆಲ್‌ರೌಂಡರ್‌ ಎಂದು ತೋರಿಸಿಕೊಟ್ಟರು. ನಾಲ್ಕರ ಘಟ್ಟದಲ್ಲಿ ನ್ಯೂಜಿಲೆಂಡ್ ಎದುರು ಅನುಭವಿಸಿದ ಸೋಲಿನಿಂದ ಭಾರತಕ್ಕೆ ಕಲಿಯುವ ಪಾಠವೂ ಸಾಕಷ್ಟಿದೆ. ನಾಯಕ ಕೊಹ್ಲಿ, ಮುಖ್ಯ ಕೋಚ್ ರವಿಶಾಸ್ತ್ರಿ ಮತ್ತು ಆಯ್ಕೆ ಸಮಿತಿಯು ಈ ಸೋಲಿನ ಹೊಣೆ ಹೊರಬೇಕು. ವೆಸ್ಟ್‌ ಇಂಡೀಸ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ತಂಡಗಳ ವೈಫಲ್ಯ ಅಚ್ಚರಿ ಮೂಡಿಸಿತು. ಹೋದ ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಸೆಮಿಫೈನಲ್‌ ಹಂತದಲ್ಲಿ ಇಂಗ್ಲೆಂಡ್‌ಗೆ ಶರಣಾಯಿತು. ಆದರೆ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನ ತಂಡಗಳು ಮನಗೆದ್ದವು. ಬಾಂಗ್ಲಾದ ಆಲ್‌ರೌಂಡರ್‌ ಶಕೀಬ್ ಅಲ್ ಹಸನ್ ಮಿಂಚಿದರು. ವಿಂಡೀಸ್‌ನ ಕ್ರಿಸ್‌ ಗೇಲ್, ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹೀರ್, ಪಾಕಿಸ್ತಾನದ ಶೋಯೆಬ್ ಮಲಿಕ್ ಅವರೆಲ್ಲರಿಗೂ ಇದು ಕೊನೆಯ ವಿಶ್ವಕಪ್ ಟೂರ್ನಿಯಾಯಿತು. ಮಳೆಯಿಂದಾಗಿ ಕೆಲ ಪ್ರಮುಖ ಪಂದ್ಯಗಳು ರದ್ದಾದವು. ಅಂಪೈರ್‌ಗಳ ಕೆಲ ನಿರ್ಣಯಗಳೂ ಚರ್ಚೆಗೆ ಗ್ರಾಸವಾದವು. ಬಲೂಚಿಸ್ತಾನ ಮತ್ತು ಕಾಶ್ಮೀರ ಪ್ರತ್ಯೇಕತಾವಾದಿಗಳ ಬ್ಯಾನರ್ ಪ್ರದರ್ಶನದ ‘ರಾಜಕೀಯ’ವೂ ಇಣುಕಿತು. ಆದರೆ, ಫೈನಲ್ ಪಂದ್ಯದ ರೋಚಕತೆಯು ಇವೆಲ್ಲವನ್ನೂ ಮರೆಸಿತು. 46 ದಿನಗಳ ಟೂರ್ನಿಯಲ್ಲಿ ಕ್ರಿಕೆಟ್ ಗೆದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT