ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಭಾರತ ಮಹಿಳಾ ಕ್ರಿಕೆಟ್‌ಗೆ ಹೊಸ ರಂಗು ಡಬ್ಲ್ಯುಪಿಎಲ್

Last Updated 15 ಫೆಬ್ರುವರಿ 2023, 8:05 IST
ಅಕ್ಷರ ಗಾತ್ರ

ಭಾರತದ ಮಹಿಳಾ ಕ್ರಿಕೆಟಿಗರೂ ಈಗ ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಗಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಭಾರತ ತಂಡದ ಉಪನಾಯಕಿ ಸ್ಮೃತಿ ಮಂದಾನ ಸೇರಿದಂತೆ ಹಲವು ಆಟಗಾರ್ತಿಯರಿಗೆ ಹೆಚ್ಚು ಬೇಡಿಕೆ ಬಂದಿದೆ. ಇದರೊಂದಿಗೆ ಭಾರತೀಯ ಕ್ರಿಕೆಟ್‌ ಇತಿಹಾಸದ ಪುಸ್ತಕಕ್ಕೆ ಹೊಸ ಅಧ್ಯಾಯ ಸೇರ್ಪಡೆಯಾದಂತಾಗಿದೆ. ಕೆಲವು ವರ್ಷಗಳ ಹಿಂದೆ ಮಹಿಳಾ ಕ್ರಿಕೆಟ್ ಬಗ್ಗೆ ಇದ್ದ ಉಡಾಫೆಯ ಧೋರಣೆಯು ದೂರವಾಗುವ ಕಾಲ ಸನ್ನಿಹಿತವಾಗಿದೆ. ಮುಂದಿನ ತಿಂಗಳು ನಡೆಯುವ ಚೊಚ್ಚಲ ಟೂರ್ನಿಯಲ್ಲಿ ಒಟ್ಟು ಐದು ತಂಡಗಳು ಕಣಕ್ಕಿಳಿಯಲಿವೆ. ಹೊಸ ಬಣ್ಣಗಳ ಪೋಷಾಕು ಧರಿಸಿದ ಬೇರೆ ಬೇರೆ ದೇಶಗಳ ಆಟಗಾರ್ತಿಯರಿರುವ ತಂಡಗಳು ಸ್ಪರ್ಧೆಗಿಳಿಯಲಿವೆ. ಆಟಗಾರ್ತಿಯರ ಬಿಡ್ ಪ್ರಕ್ರಿಯೆಯಲ್ಲಿ ಸ್ಮೃತಿ ಮಂದಾನ ಎಲ್ಲರಿಗಿಂತ ಹೆಚ್ಚು (₹ 3.40 ಕೋಟಿ) ಮೊತ್ತ ಗಳಿಸಿದ್ದಾರೆ. ಹರ್ಮನ್‌ಪ್ರೀತ್ ಕೌರ್, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮಾ, ಪೂಜಾ ವಸ್ತ್ರಕರ್ ಮತ್ತು ರಿಚಾ ಘೋಷ್ ಅವರೂ ಒಂದೂವರೆ ಕೋಟಿ ರೂಪಾಯಿಗಿಂತಲೂ ಹೆಚ್ಚು ಮೊತ್ತವನ್ನು
ತಮ್ಮದಾಗಿಸಿಕೊಂಡಿದ್ದಾರೆ. ವನಿತೆಯರಿಗೂ ಐಪಿಎಲ್ ಆರಂಭಿಸಿಬೇಕು ಎಂದು ಕೆಲವು ವರ್ಷಗಳ ಹಿಂದೆ ಕೆಲವು ಮಾಜಿ ಆಟಗಾರ್ತಿಯರು ಮಾಡಿದ್ದ ಮನವಿ ಬಗ್ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಆಸಕ್ತಿ ತೋರಿರಲಿಲ್ಲ. ಪುರುಷರ ಐಪಿಎಲ್‌ನಲ್ಲಿಯೇ
ಮಹಿಳೆಯರಿಗಾಗಿ ಪ್ರದರ್ಶನ ಪಂದ್ಯಗಳನ್ನು ಏರ್ಪಡಿಸಲಾಗುತ್ತಿತ್ತು. ಪ್ರೇಕ್ಷಕರನ್ನು ನಿರೀಕ್ಷೆಗೆ ತಕ್ಕಂತೆ ಸೆಳೆಯುವಲ್ಲಿ ಅವು ಸಫಲವಾಗಿರಲಿಲ್ಲ.
ಆದರೆ ಡಬ್ಲ್ಯುಪಿಎಲ್‌ ಟೂರ್ನಿಯನ್ನು ಟಿ.ವಿ. ಹಾಗೂ ಸ್ಮಾರ್ಟ್‌ಫೋನ್‌ಗಳಲ್ಲೂ ಜನ ವೀಕ್ಷಿಸುತ್ತಾರೆಂಬ ಭರವಸೆ ಮೂಡಿದೆ. ಮಹಿಳಾ ಟೂರ್ನಿಯ ಮಾಧ್ಯಮ ಹಕ್ಕುಗಳು ಇತ್ತೀಚೆಗಷ್ಟೇ ₹ 951 ಕೋಟಿಗೆ ಬಿಕರಿಯಾಗಿದ್ದವು. ಪುರುಷರ ಐಪಿಎಲ್‌ಗೆ ಹೋಲಿಸಿದರೆ ಇದು ತುಂಬಾ ಚಿಕ್ಕ ಮೊತ್ತ. ಆದರೆ ಉತ್ತಮ ಆರಂಭ ಎನ್ನುವುದರಲ್ಲಿ ಸಂಶಯವಿಲ್ಲ. ಇದರಿಂದಾಗಿ ಮಹಿಳಾ ಲೀಗ್‌ ಟೂರ್ನಿಯೂ ಮಂಡಳಿಯ ಬೊಕ್ಕಸಕ್ಕೆ ಆದಾಯ ತರುವ ಸಾಮರ್ಥ್ಯ ಹೊಂದಿದೆ ಎಂಬುದು ಈಗ ಸಾಬೀತಾಗಿದೆ. ಐಪಿಎಲ್ ತಂಡಗಳ ಮಾಲೀಕರೇ ಮಹಿಳಾ ತಂಡಗಳನ್ನೂ ಸ್ಪರ್ಧಾತ್ಮಕ ಬೆಲೆಗೆ ಖರೀದಿ ಮಾಡಿರುವುದು ಕೂಡ ಮಹತ್ವದ ಸಂಗತಿ. ಡಯಾನಾ ಎಡುಲ್ಜಿ, ಶಾಂತಾ ರಂಗಸ್ವಾಮಿ, ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ ಅವರಂತಹ ದಿಗ್ಗಜರು ಹಲವು ವರ್ಷಗಳಿಂದ ಮಾಡಿದ ನಿರಂತರ ಪ್ರಯತ್ನಕ್ಕೆ ಈಗ ಫಲ ಲಭಿಸಿದೆ.

ಮಹಿಳಾ ಕ್ರಿಕೆಟಿಗರಿಗೆ ಕಳೆದ ಕೆಲವು ತಿಂಗಳುಗಳಲ್ಲಿ ಬಹಳಷ್ಟು ಉತ್ತೇಜನಕಾರಿ ಯೋಜನೆಗಳು ಜಾರಿಗೆ ಬಂದಿರುವುದು ಸ್ವಾಗತಾರ್ಹ. ಕೇಂದ್ರ ಗುತ್ತಿಗೆಯಲ್ಲಿರುವ ಆಟಗಾರ್ತಿಯರಿಗೆ ಸಮಾನ ವೇತನ, 19 ವರ್ಷದೊಳಗಿನವರ ಮಹಿಳಾ ತಂಡವು ಇದೇ ಮೊದಲ ಬಾರಿ ವಿಶ್ವಕಪ್ ಜಯಿಸಿರುವುದು ಕೂಡ ಹೆಣ್ಣುಮಕ್ಕಳು ಕ್ರಿಕೆಟ್‌ ಆಯ್ಕೆ ಮಾಡಿಕೊಳ್ಳಲು ಉತ್ತೇಜನ ನೀಡಲಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಪುರುಷರ ವಿಭಾಗದಲ್ಲಿರುವಂತೆ ಜೂನಿಯರ್ ಹಂತದಿಂದಲೇ ಆರ್ಥಿಕ ಸೌಲಭ್ಯಗಳು ಮಹಿಳಾ ವಿಭಾಗದಲ್ಲಿಯೂ ಜಾರಿಗೊಳ್ಳಲು ಇನ್ನೂ ಕೆಲವು ಕಾಲ ಬೇಕಾಗಬಹುದು. ಡಬ್ಲ್ಯುಪಿಎಲ್ ಜನಮನ ಗೆಲ್ಲುವಲ್ಲಿ ಯಶಸ್ವಿಯಾದರೆ ಹಣದ ಹರಿವು ಹೆಚ್ಚಬಹುದು. ಆ ಮೂಲಕ ಮಹಿಳಾ ಕ್ರಿಕೆಟ್‌ನ ಎಲ್ಲ ಹಂತಗಳ ಅಭಿವೃದ್ಧಿಗೂ ಸಹಕಾರಿಯಾಗುವ ನಿರೀಕ್ಷೆ ಇದೆ. ಮಹಿಳೆಯರಿಗೂ ದೇಶಿ ಟೂರ್ನಿಗಳು ಹೆಚ್ಚಬೇಕು. ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗಳು ಎಲ್ಲ ವಯೋಮಿತಿಗಳಲ್ಲಿಯೂ
ದೊರೆಯುವಂತಾಗಬೇಕು. ಡಬ್ಲ್ಯುಪಿಎಲ್‌ನಿಂದ ಬರುವ ಸಂಪನ್ಮೂಲವು ಮಹಿಳಾ ಕ್ರಿಕೆಟ್ ಏಳ್ಗೆಗೆ ಬಳಕೆಯಾಗಬೇಕು. ಗ್ರಾಮಾಂತರ ಮಟ್ಟದಲ್ಲಿ ಇವತ್ತಿಗೂ ಬಡತನ ಹಾಗೂ ಕಟ್ಟುನಿಟ್ಟಿನ ಸಂಪ್ರದಾಯಗಳಲ್ಲಿ ಮುರುಟಿಹೋಗುತ್ತಿರುವ ಪ್ರತಿಭೆಗಳನ್ನು ಶೋಧ ಮಾಡಿ ಮುಖ್ಯವಾಹಿನಿಗೆ ತರುವ ಕಾರ್ಯವು ಫ್ರ್ಯಾಂಚೈಸಿಗಳಿಂದ ಆಗಬೇಕು. ಆಗ ಈ ಟೂರ್ನಿಯೂ ಬೆಳೆಯುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಲೈಂಗಿಕ ದೌರ್ಜನ್ಯ, ಫಿಕ್ಸಿಂಗ್ ಮತ್ತು ಉದ್ದೀಪನ ಮದ್ದು ಬಳಕೆಯಂತಹ ಪಿಡುಗುಗಳು ಮಹಿಳಾ ಲೀಗ್‌ಗೆ ಸೋಕದಂತೆ ನೋಡಿಕೊಳ್ಳಬೇಕು. ಪುರುಷರ ಐಪಿಎಲ್‌ನಲ್ಲಿ ಈ ಹಿಂದೆ ನಡೆದಿದ್ದ ಸ್ಪಾಟ್‌ ಫಿಕ್ಸಿಂಗ್‌ನಂಥ ಕೆಟ್ಟ ಪ್ರಕರಣಗಳಿಂದ ಕಲಿತ ಪಾಠ ಇಲ್ಲಿ ಉಪಯುಕ್ತವಾಗಬಹುದು. ಭಾರತದ ಮಹಿಳಾ ಕ್ರಿಕೆಟ್‌, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್‌ ಮಾದರಿಯಲ್ಲಿ ಬಲಾಢ್ಯವಾಗಿ ಬೆಳೆಯಲು ಕೂಡ ಈ ಟೂರ್ನಿ ನೆರವಾಗುವ ನಿರೀಕ್ಷೆ ಇದೆ. ಆ ದೇಶಗಳ ಖ್ಯಾತನಾಮ ಆಟಗಾರ್ತಿಯರೂ ಇಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಅದರಿಂದಾಗಿ ಟೂರ್ನಿಯು ಹೆಚ್ಚು ಆಕರ್ಷಕವಾಗುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT