ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಕಲಿಕಾ ಮಾಧ್ಯಮ ಕುರಿತ ಶಿಫಾರಸು ಹಿಂದಿ ಪ್ರಾಬಲ್ಯಕ್ಕೆ ಮತ್ತೊಂದು ಯತ್ನ

Last Updated 14 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ, ಅಧಿಕೃತ ಭಾಷೆಗೆ ಸಂಬಂಧಿಸಿದ ಸಂಸದೀಯ ಸಮಿತಿಯು ಕೆಲವು ಶಿಫಾರಸುಗಳನ್ನು ಈಚೆಗೆ ಸಲ್ಲಿಸಿದೆ. ಇವು ಹಿಂದಿ ಭಾಷೆಯ ಬಳಕೆಗೆ ಸಂಬಂಧಿಸಿದ ಶಿಫಾರಸುಗಳು. ಇವುಗಳನ್ನು ಒಪ್ಪಿಕೊಂಡು ಅನುಷ್ಠಾನಕ್ಕೆ ತಂದಿದ್ದೇ ಆದಲ್ಲಿ, ಬಹುತ್ವದ ಆಧಾರದ ಮೇಲೆ ನಿಂತಿರುವ ಭಾರತದ ಪರಿಕಲ್ಪನೆಯನ್ನೇ ಹಾಳುಮಾಡಿದಂತೆ ಆಗುತ್ತದೆ. ಬಹುತ್ವವೆಂದರೆ ಭಾಷೆಗಳ ಬಹುತ್ವವೂ ಸೇರಿಕೊಂಡಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಬೋಧನೆಯ ಮಾಧ್ಯಮದ ಕುರಿತಾಗಿ ಸಮಿತಿ ಮಾಡಿರುವ ಶಿಫಾರಸುಗಳು ಇಡೀ ಶಿಕ್ಷಣ ವ್ಯವಸ್ಥೆಯನ್ನು ಕೆಡಿಸುತ್ತವೆ. ಬೋಧನಾ ಮಾಧ್ಯಮವಾಗಿ ಈಗ ಬಳಕೆಯಲ್ಲಿರುವ ಇಂಗ್ಲಿಷ್‌ ಭಾಷೆಯ ಬದಲಾಗಿ ಹಂತ ಹಂತವಾಗಿ ಹಿಂದಿ ಅಥವಾ ಸ್ಥಳೀಯ ಭಾಷೆಯನ್ನು ತರಬೇಕು ಎಂದು ಸಮಿತಿಯ ಶಿಫಾರಸು ಹೇಳಿದೆ. ಹಿಂದಿ ಭಾಷಿಕ ಪ್ರದೇಶಗಳಲ್ಲಿ ಇರುವ ಭಾರತೀಯ ತಂತ್ರಜ್ಞಾನ ಸಂಸ್ಥೆಗಳಲ್ಲಿ (ಐಐಟಿ), ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್‌), ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು ಕೇಂದ್ರೀಯ ವಿದ್ಯಾಲಯಗಳಲ್ಲಿನ ಬೋಧನಾ ಮಾಧ್ಯಮ ಹಿಂದಿ ಆಗಬೇಕು, ಇತರ ಪ್ರದೇಶಗಳಲ್ಲಿನ ಈ ಸಂಸ್ಥೆಗಳಲ್ಲಿನ ಬೋಧನಾ ಮಾಧ್ಯಮ ಅಲ್ಲಿನ ಭಾಷೆ ಆಗಿರಬೇಕು ಎಂದು ಕೂಡ ಸಮಿತಿಯು ಹೇಳಿದೆ. ನೇಮಕಾತಿ ಪರೀಕ್ಷೆಗಳು ಹಿಂದಿಯಲ್ಲಿ ಇರಬೇಕು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (ಡಿಆರ್‌ಡಿಒ) ಹಿಂದಿಯನ್ನೇ ಬಳಸಬೇಕು ಎಂದು ಕೂಡ ಹೇಳಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಹಿಂದಿ ಬಳಕೆಯನ್ನು ಉತ್ತೇಜಿಸುವ ಉದ್ದೇಶದ 112
ಶಿಫಾರಸುಗಳನ್ನು ಸಮಿತಿಯು ಮಾಡಿದೆ.

ಐಐಟಿಗಳು ಹಾಗೂ ಉನ್ನತ ಶಿಕ್ಷಣ ಬೋಧಿಸಲಿಕ್ಕಾಗಿ ಸ್ಥಾಪಿಸಿರುವ ಇತರ ಸಂಸ್ಥೆಗಳಲ್ಲಿ ಹಿಂದಿಯನ್ನು ಅಥವಾ ಸ್ಥಳೀಯ ಭಾಷೆಗಳನ್ನು ಬೋಧನಾ ಮಾಧ್ಯಮವಾಗಿ ಬಳಕೆ ಮಾಡುವುದರ ಹಿಂದೆ ಇರುವುದು ದೋಷಪೂರಿತ ಆಲೋಚನೆ. ಉನ್ನತ ಶಿಕ್ಷಣದ ಗುರಿಯನ್ನು ಸಾಧಿಸಲಿಕ್ಕೆ ಇದೇ ಅಡ್ಡಿಯಾಗಿ ನಿಲ್ಲಬಹುದು. ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆ ನಡೆಸಿ ಇಂತಹ ಸಂಸ್ಥೆಗಳಿಗೆ ಪ್ರವೇಶ ಕಲ್ಪಿಸಲಾಗುತ್ತದೆ. ಪ್ರವೇಶ ಪರೀಕ್ಷೆಗಳನ್ನು ಹಿಂದಿ ಅಥವಾ ಇತರ ಭಾಷೆಗಳಲ್ಲಿ ನಡೆಸಿದರೂ, ತೇರ್ಗಡೆ ಆದವರು ಇನ್ನೊಂದು ರಾಜ್ಯದಲ್ಲಿನ ಸಂಸ್ಥೆಗೆ ಪ್ರವೇಶ ಪಡೆದಾಗ ಅಲ್ಲಿನ ಭಾಷೆ ಕಲಿಯಬೇಕಾದ ಅನಿವಾರ್ಯ ಎದುರಾಗುತ್ತದೆ. ಇದು ಅವರ ಕಲಿಕೆಗೆ ತೊಡಕನ್ನು ಉಂಟುಮಾಡುತ್ತದೆ. ಒಂದು ರಾಜ್ಯದಲ್ಲಿ ಪದವಿ ಪಡೆದವರು ಇನ್ನೊಂದು ರಾಜ್ಯದಲ್ಲಿ ಕೆಲಸ ಮಾಡುವುದು ಕಷ್ಟವಾಗಬಹುದು. ಅಲ್ಲದೆ, ಯಾವುದೇ ರಾಜ್ಯದಲ್ಲಿ ಪದವಿ ಪಡೆದವರಿಗೆ ದೇಶದಲ್ಲಿ ಅಥವಾ ಹೊರದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯುವುದು ಹಾಗೂ ಕೆಲಸ ಗಿಟ್ಟಿಸುವುದು ಇನ್ನಷ್ಟು ಕಷ್ಟವಾಗಬಹುದು. ಮಾತೃಭಾಷೆಯಲ್ಲಿ (ಪ್ರದೇಶದ ಭಾಷೆಯಲ್ಲಿ) ಶಿಕ್ಷಣ ಪಡೆಯುವುದು ಒಳ್ಳೆಯದೇ. ಆದರೆ, ಅದು ಭಾರತದ ಪರಿಸ್ಥಿತಿಗೆ ಸೂಕ್ತವಾಗುವ ರೀತಿಯಲ್ಲಿ ಇರಬೇಕು. ಪ್ರದೇಶದ ಭಾಷೆಯಲ್ಲಿ ಕಲಿಯುವ ವಿಚಾರದಲ್ಲಿ ಚೀನಾ ಮತ್ತು ಜಪಾನ್‌ನ ಉದಾಹರಣೆಯನ್ನು ಭಾರತಕ್ಕೆ ಅನ್ವಯಿಸುವುದು ಸರಿಯಲ್ಲ. ಏಕೆಂದರೆ ಭಾರತದಲ್ಲಿ ಇರುವಂತೆ ಭಾಷಾ ವೈವಿಧ್ಯ ಆ ದೇಶಗಳಲ್ಲಿ ಇಲ್ಲ.

ಉನ್ನತ ಶಿಕ್ಷಣಕ್ಕಾಗಿ ಇರುವ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಹಾಗೂ ಅಲ್ಲಿಂದ ಪದವಿ ಪಡೆದು ಹೊರಬಂದವರಲ್ಲಿ ಈಗ ಒಂದು ಬಗೆಯ ಸಮಾನತೆಯ ಭಾವನೆ ಇದೆ. ಏಕೆಂದರೆ, ಅವರೆಲ್ಲ ಇಂಗ್ಲಿಷ್‌ ಭಾಷೆಯಲ್ಲಿ ಕಲಿತವರು. ಆದರೆ ಹೊಸ ವ್ಯವಸ್ಥೆಯು ಹಿಂದಿ ಭಾಷೆಯಲ್ಲಿ ಕಲಿತವರ ಪ್ರಾಬಲ್ಯಕ್ಕೆ ದಾರಿ ಮಾಡಿಕೊಡುತ್ತದೆ. ಏಕೆಂದರೆ ಹಿಂದಿಯಲ್ಲಿ ಕಲಿಯುವವರೇ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಇದು ತಾರತಮ್ಯಕ್ಕೆ ಹಾಗೂ ಇತರ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಡಿಆರ್‌ಡಿಒ, ಇಸ್ರೊದಂತಹ ಸಂಸ್ಥೆಗಳಲ್ಲಿ ಹಿಂದಿಯಲ್ಲಿ ಕೆಲಸಗಳು ಆಗಬೇಕು ಎಂದು ಒತ್ತಾಯಿಸುವುದು ತೀರಾ ತಪ್ಪಾಗುತ್ತದೆ. ಕಚೇರಿಗಳಲ್ಲಿ ಹಾಗೂ ಇತರ ಪ್ರದೇಶಗಳಲ್ಲಿ ಹಿಂದಿಯನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು ಎಂಬ ಶಿಫಾರಸು ಹಿಂದಿಯೇತರ ಭಾಷಿಕ ಜನರ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ಹಿಂದಿಯ ಜೊತೆಯಲ್ಲಿ ಸ್ಥಳೀಯ ಭಾಷೆಗಳನ್ನು ಕೂಡ ಉಲ್ಲೇಖಿಸಲಾಗಿದೆಯಾದರೂ, ಶಿಫಾರಸುಗಳ ಹಿಂದಿನ ಉದ್ದೇಶವು ಹಿಂದಿಯ ಪ್ರಾಬಲ್ಯಕ್ಕೆ ಅನುಕೂಲ ಕಲ್ಪಿಸುವುದೇ ಆಗಿದೆ. ಇದು ಭಾಷಿಕ ಬಹುಸಂಖ್ಯಾತವಾದದ ಕಡೆ ಸಾಗುತ್ತದೆ. ಭಾರತದ ಪರಿಕಲ್ಪನೆಗೆ ಇದು ವಿರುದ್ಧ. ದೇಶವನ್ನು ಒಟ್ಟಾಗಿ ಇರಿಸಿರುವ ಒಕ್ಕೂಟ ವ್ಯವಸ್ಥೆಗೆ ಕೂಡ ಇದು ಪೂರಕವಾಗಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT