ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‍1 ಎನ್‍1 ಜ್ವರ, ಝಿಕಾ ವೈರಸ್: ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ

Last Updated 19 ಅಕ್ಟೋಬರ್ 2018, 19:49 IST
ಅಕ್ಷರ ಗಾತ್ರ

ಎಚ್‍‌1 ಎನ್1 ಜ್ವರ ಹಾಗೂ ಝಿಕಾ ವೈರಸ್ ಸೋಂಕು ಆತಂಕ ಮೂಡಿಸುವಂತಹವು. ನಮ್ಮ ರಾಜ್ಯದಲ್ಲಿಯೇ ಎಚ್1 ಎನ್1 ಜ್ವರದಿಂದ ಈ ವರ್ಷ ಈವರೆಗೆ 9 ಜನ ಸತ್ತಿದ್ದಾರೆ. ಎಚ್‍1ಎನ್‍1 ಜ್ವರ ಹಾಗೂ ಝಿಕಾ ವೈರಸ್ ಸೋಂಕು ಹರಡುವಿಕೆ ತಡೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರೇನೋ ಹೇಳಿದ್ದಾರೆ.

ಇದಕ್ಕಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ಈ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸನ್ನದ್ಧತೆ ಪ್ರದರ್ಶಿಸಬೇಕು. ಔಷಧಗಳು ಹಾಗೂ ಪರೀಕ್ಷಾ ಉಪಕರಣಗಳ ಲಭ್ಯತೆಯಲ್ಲಿ ಯಾವುದೇ ಕೊರತೆ ಉಂಟಾಗಬಾರದು.

ಮುಂಜಾಗ್ರತೆ ಕ್ರಮಗಳ ಬಗ್ಗೆ ಜನರಲ್ಲೂ ಅರಿವು ಮೂಡಬೇಕಾದುದು ಅವಶ್ಯ. ಪ್ರತಿನಿತ್ಯ ಸನ್ನಿವೇಶವನ್ನು ನಿರ್ವಹಣೆ ಮಾಡಬೇಕೆಂದು ಕಾಯಿಲೆ ನಿಯಂತ್ರಣದ ರಾಷ್ಟ್ರೀಯ ಕೇಂದ್ರಕ್ಕೆ (ಎನ್‍ಸಿಡಿಸಿ) ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.

ನಮ್ಮ ರಾಜ್ಯದಲ್ಲಿಯೂ, ‘ಎಲ್ಲಾ ಭಾಗದ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದಿದ್ದಾರೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ. ಇತ್ತೀಚೆಗೆ ಪ್ರತಿವರ್ಷವೂ ರಾಜ್ಯದಲ್ಲಿ ಎಚ್1 ಎನ್1 ಪ್ರಕರಣಗಳು ವರದಿಯಾಗುವುದು ಮಾಮೂಲು ಎಂಬಂತಾಗಿದೆ. 2015ರಲ್ಲಿ ಎಚ್‍1 ಎನ್‌1ನಿಂದ 94 ಮಂದಿ ಸತ್ತಿದ್ದರು. ಆ ನಂತರದ ವರ್ಷಗಳಲ್ಲಿ ಹೆಚ್ಚಿನ ಮುಂಜಾಗ್ರತೆ ವಹಿಸಿದ್ದರಿಂದ ಎಚ್‍1 ಎನ್‍1 ನಿಂದ ಮೃತಪಟ್ಟವರ ಸಂಖ್ಯೆ ಇಳಿಮುಖವಾಗಿದೆ. ಈ ವರ್ಷವೂ ಎಚ್1 ಎನ್1 ಆತಂಕ ಹರಡುತ್ತಿರುವ ಬಗ್ಗೆ ಎಚ್ಚರಿಕೆ ವಹಿಸಬೇಕು.

ರಾಜಸ್ಥಾನದ ಜೈಪುರದಲ್ಲಿ ಸುಮಾರು 106 ಮಂದಿ ಝಿಕಾ ವೈರಾಣುವಿನ ಸೋಂಕಿಗೆ ಒಳಗಾಗಿರುವುದು ವರದಿಯಾಗಿದೆ. ಈ ವರ್ಷ, ಝಿಕಾ ವೈರಾಣು ಸೋಂಕಿನ ಮೊದಲ ಪ್ರಕರಣ ದೃಢಪಟ್ಟಿದ್ದು ಸೆ.23ರಂದು. ಆಗಿನಿಂದ ವೈರಾಣು ಸೋಂಕಿಗೆ ಒಳಗಾಗಿರುವವರ ಪಟ್ಟಿ ಬೆಳೆಯುತ್ತಲೇ ಇದೆ. ಈ ಪೈಕಿ ಸುಮಾರು 25 ಮಂದಿ ಗರ್ಭಿಣಿಯರು ಎಂಬುದು ಮತ್ತಷ್ಟು ಆತಂಕ ಹುಟ್ಟಿಸುವಂತಹದ್ದು.

ಕಳೆದ ವರ್ಷ, ರಾಷ್ಟ್ರದಲ್ಲಿ ಮೊದಲ ಬಾರಿಗೆ ಝಿಕಾ ವೈರಾಣು ಸೋಂಕಿನ ನಾಲ್ಕು ಪ್ರಕರಣಗಳು ವರದಿಯಾಗಿದ್ದವು. ಈ ಪೈಕಿ, ಗುಜರಾತ್‍ನ ಅಹಮದಾಬಾದ್‌ನಲ್ಲಿ 3 ಹಾಗೂ ತಮಿಳುನಾಡಿನ ಕೃಷ್ಣಗಿರಿಯಲ್ಲಿ 1 ಪ್ರಕರಣ ವರದಿಯಾಗಿತ್ತು. ಈ ಎರಡೂ ಸ್ಥಳಗಳಲ್ಲಿ ವೈರಾಣು ಹರಡದಂತೆ ಮುಂಜಾಗ್ರತೆ ವಹಿಸಲಾಗಿತ್ತು. ಆದರೆ ಈ ಬಾರಿ ಹೆಚ್ಚಿನ ಪ್ರಮಾಣದ ಪ್ರಕರಣಗಳು ವರದಿಯಾಗಿರುವುದು ಕಳವಳದ ಸಂಗತಿ. ಝಿಕಾ ಸೋಂಕು, ಏಡಿಸ್ ಸೊಳ್ಳೆಯಿಂದ ಹರಡುತ್ತದೆ.

ಸದ್ಯಕ್ಕೆ ಈ ಸೋಂಕು ಜೈಪುರದ ಒಂದು ಭಾಗಕ್ಕೆ ಸೀಮಿತವಾಗಿದೆ. ಆದರೆ, ಸೊಳ್ಳೆಗಳಿಂದಾಗುವ ಸೋಂಕು ಹರಡುವಿಕೆಗೆ ಯಾವುದೇ ರಾಜ್ಯವೂ ಹೊರತಲ್ಲ. ಹೀಗಾಗಿಯೇ ಝಿಕಾ ವೈರಾಣು ನಿಜವಾಗಿಯೂ ದೊಡ್ಡ ಬೆದರಿಕೆಯಾಗಿದೆ. ಝಿಕಾ ವೈರಾಣು ಸೋಂಕು, ದೀರ್ಘಾವಧಿಯ ಸಮಸ್ಯೆಗಳಿಗೆ ಕಾರಣವಾಗುವಂತಹದ್ದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅದರಲ್ಲೂ ಗರ್ಭಿಣಿಯರಿಗೆ ತಗುಲುವ ಸೋಂಕು ಬೀರಬಹುದಾದ ಪರಿಣಾಮಗಳು ಹೆಚ್ಚಿನವು.

ಹೀಗಾಗಿ ತುರ್ತು ಕ್ರಮಗಳು ಅಗತ್ಯ. ಮಲೇರಿಯಾ ನಿಯಂತ್ರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಭಾರತ ಮೇಲುಗೈ ಸಾಧಿಸಿದೆ ಎಂದು ಹೇಳಿಕೊಳ್ಳಬಹುದು. ಆದರೆ ಡೆಂಗ್ಯೂ, ಚಿಕನ್ ಗುನ್ಯಾದಂತಹ ಕಾಯಿಲೆಗಳು ರಾಷ್ಟ್ರದಾದ್ಯಂತ ಪಸರಿಸುತ್ತಲೇ ಇವೆ. ಪೋಲಿಯೊ ನಿರ್ಮೂಲನಕ್ಕೆ ನಡೆಸಿದಂತಹ ಭಾರಿ ಮಟ್ಟದ ಜಾಗೃತಿ ಅಭಿಯಾನ ಸದ್ಯದ ಅಗತ್ಯ.

ಸೊಳ್ಳೆಗಳಿಂದ ಹರಡುವ ಈ ಕಾಯಿಲೆಗಳು ಹೊಸ ಬಗೆಯವು. ಇವು ರಾಷ್ಟ್ರದಾದ್ಯಂತ ಪಸರಿಸಿದರೆ ಕಾಯಂ ಆಗಿ ಬಿಡುತ್ತವೆ. ಹೀಗಾಗಿ ಇದನ್ನು ಹೊಸ ಸಾರ್ವಜನಿಕ ಆರೋಗ್ಯ ಸವಾಲು ಎಂದೇ ಪರಿಗಣಿಸಬೇಕು. ಈ ಸವಾಲಿನ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಸಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT