ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ದೇಶಿ ಉದ್ದಿಮೆ ಹಿತರಕ್ಷಣೆಗೆ ಕಠಿಣ ಎಫ್‌ಡಿಐ ನಿಯಮ

Last Updated 19 ಏಪ್ರಿಲ್ 2020, 21:38 IST
ಅಕ್ಷರ ಗಾತ್ರ

ಕೋವಿಡ್‌–19 ಸಾಂಕ್ರಾಮಿಕವು ಸೃಷ್ಟಿಸಿರುವ ಬಿಕ್ಕಟ್ಟಿನ ಸಂದರ್ಭದ ದುರ್ಲಾಭವನ್ನು ಕೆಲವು ವಿದೇಶಿ ಕಂಪನಿಗಳು ಪಡೆಯದೇ ಇರಲಿ ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ನಿಯಮಗಳನ್ನು ಬಿಗಿಗೊಳಿಸಿದೆ. ಭಾರತದ ಜೊತೆ ಗಡಿಯನ್ನು ಹಂಚಿಕೊಂಡಿರುವ ದೇಶಗಳ ಕಂಪನಿಗಳು, ಈ ಮೊದಲಿನಂತೆ ಸುಲಭ ರೀತಿಯಲ್ಲಿ ಬಂಡವಾಳ ತೊಡಗಿಸಲು ಸಾಧ್ಯವಾಗಲಾರದು. ನೆರೆಯ ದೇಶಗಳ ಕಂಪನಿಗಳು ಪ್ರತ್ಯಕ್ಷ ಇಲ್ಲವೇ ಪರೋಕ್ಷ ರೀತಿಯಲ್ಲಿ ಬಂಡವಾಳ ತೊಡಗಿಸುವುದಕ್ಕೆ ಕೇಂದ್ರ ಸರ್ಕಾರದ ಪೂರ್ವಾನುಮತಿ ಕಡ್ಡಾಯವಾಗಲಿದೆ. ರಾಷ್ಟ್ರೀಯ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಭಾರತದ ಷೇರು ಮಾರುಕಟ್ಟೆ ಕುಸಿದಿದೆ, ಭಾರತದ ಹಲವು ಕಂಪನಿಗಳ ಷೇರು ಮೌಲ್ಯದಲ್ಲಿ ಭಾರಿ ಇಳಿಕೆಯಾಗಿದೆ. ಪರಿಸ್ಥಿತಿ ಹೀಗಿರುವಾಗ, ಚೀನಾದ ಹೂಡಿಕೆದಾರರು ಭಾರತದ ಕಂಪನಿಗಳಲ್ಲಿ ಹೂಡಿಕೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಕೆಲವು ತಜ್ಞರು ವಿಶ್ಲೇಷಿಸಿದ್ದಾರೆ. ಪೀಪಲ್ಸ್‌ ಬ್ಯಾಂಕ್‌ ಆಫ್‌ ಚೀನಾವುಎಚ್‌ಡಿಎಫ್‌ಸಿಯಲ್ಲಿ ತನ್ನ ಪಾಲು ಬಂಡವಾಳವನ್ನು ಶೇ 0.8ರಿಂದ ಶೇ 1.01ಕ್ಕೆಇತ್ತೀಚೆಗೆ ಹೆಚ್ಚಿಸಿದೆ.

ಸರ್ಕಾರವು ಬಹುಶಃ ಈ ನಡೆಯಿಂದ ಎಚ್ಚೆತ್ತುಕೊಂಡಿರಬಹುದು. ಭಾರತದ ಕಂಪನಿಗಳ ಷೇರುಮೌಲ್ಯ– ಆ ಮೂಲಕ ಒಟ್ಟಾರೆ ಮಾರುಕಟ್ಟೆ ಮೌಲ್ಯ– ಕಡಿಮೆ ಇರುವ ಈ ಹೊತ್ತಿನಲ್ಲಿ, ವಿದೇಶಿ ಹೂಡಿಕೆದಾರರ ಹಿಡಿತಕ್ಕೆ ಅಂತಹ ಕಂಪನಿಗಳು ಸುಲಭವಾಗಿ ಒಳಪಡುವುದನ್ನು ತಡೆಯಲು ಕೇಂದ್ರವು ಈ ಕ್ರಮಕ್ಕೆ ಮುಂದಾದಂತೆ ಭಾಸವಾಗುತ್ತಿದೆ. ಭಾರತದ ಕಂಪನಿಯೊಂದರ ಮಾಲೀಕತ್ವವನ್ನುಪ್ರತ್ಯಕ್ಷ ಅಥವಾ ಪರೋಕ್ಷ ಎಫ್‌ಡಿಐ ಮೂಲಕ ಈಗ ಮತ್ತು ಭವಿಷ್ಯದಲ್ಲಿ ವರ್ಗಾವಣೆ ಮಾಡಲು ಸರ್ಕಾರದ ಅನುಮೋದನೆ ಪಡೆಯಲೇಬೇಕು. ಹೀಗಾಗಿ ಚೀನಾ ಸೇರಿದಂತೆ, ಭಾರತದ ಜೊತೆ ಗಡಿಗಳನ್ನು ಹಂಚಿಕೊಂಡಿರುವ ದೇಶಗಳ ಹೂಡಿಕೆದಾರರು ಭಾರತದ ಕಂಪನಿಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಸುಲಭಕ್ಕೆ ಸಾಧ್ಯವಾಗುವುದಿಲ್ಲ.

2017ರಲ್ಲಿ ವಿದೇಶಿ ಬಂಡವಾಳ ಆಕರ್ಷಿಸಲು ಎಫ್‌ಡಿಐ ನಿಯಮ ಸರಳಗೊಳಿಸಲಾಗಿತ್ತು. ಈ ವ್ಯವಸ್ಥೆಯಡಿ ಎಫ್‌ಡಿಐಗೆ ಕೇಂದ್ರ ಸರ್ಕಾರ ಮತ್ತು ಆರ್‌ಬಿಐನ ಪೂರ್ವಾನುಮತಿ ಬೇಕಾಗಿರಲಿಲ್ಲ. ಈಗ ಈ ನಿಯಮದಲ್ಲಿ ಬದಲಾವಣೆ ತಂದು, ಕೇಂದ್ರದ ಅನುಮತಿ ಕಡ್ಡಾಯಗೊಳಿಸಲಾಗಿದೆ. ಷೇರುಪೇಟೆಗಳಲ್ಲಿ ವಹಿವಾಟು ನಡೆಸುವ ಕಂಪನಿಗಳ ಸಂಪತ್ತು, ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ತೀವ್ರ ಕುಸಿತಕ್ಕೆ ಒಳಗಾಗಿದೆ. ಇಂತಹ ಪರಿಸ್ಥಿತಿಯ ಲಾಭ ಪಡೆದು, ಮಾಡುವ ಹೂಡಿಕೆ ಪ್ರಯತ್ನಗಳನ್ನು ಚಿವುಟಿ ಹಾಕುವುದು ಸರ್ಕಾರದ ಉದ್ದೇಶವಾಗಿದೆ. ಸೂಕ್ಷ್ಮ ವಲಯಗಳಾದ ಹಣಕಾಸು, ಡಿಜಿಟಲ್‌ ಮೂಲಸೌಕರ್ಯ, ಇ–ಕಾಮರ್ಸ್‌, ಔಷಧಿ ಮತ್ತು ರಾಸಾಯನಿಕ ತಯಾರಿಕಾ ಕಂಪನಿಗಳಲ್ಲಿ ಹೂಡಿಕೆಯನ್ನು ಸುಲಭವಾಗಿ ಹೆಚ್ಚಿಸಿಕೊಳ್ಳುವ ಪ್ರಯತ್ನಗಳಿಗೆ ಈಗ ಕಡಿವಾಣ ಬೀಳಲಿದೆ. ಎಫ್‌ಡಿಐ ನೀತಿ ಉದಾರವಾಗಿರಬೇಕು ಎನ್ನುವುದು ಜಾಗತೀಕರಣಗೊಂಡಿರುವ ಮಾರುಕಟ್ಟೆಯ ಅಪೇಕ್ಷೆ. ಆದರೆ ಈಗಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಆಗುವ ಅವಕಾಶವಾದಿ ಸ್ವಾಧೀನ ಪ್ರಯತ್ನಗಳನ್ನು
ವಿಫಲಗೊಳಿಸುವ ಸರ್ಕಾರದ ಧೋರಣೆ ಸಮರ್ಥನೀಯ.

ಭಾರತದ ನೆರೆಹೊರೆಯ ದೇಶಗಳ ಪೈಕಿ ಚೀನಾ ಮಾತ್ರ ಆರ್ಥಿಕವಾಗಿ ದೈತ್ಯ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. 2014ರಿಂದ ಈಚೆಗೆ ದೇಶಿ ಉದ್ದಿಮೆಯಲ್ಲಿ ಚೀನಾದ ಪ್ರಭಾವ ಹೆಚ್ಚುತ್ತಲೇ ಸಾಗಿದೆ. ಸ್ಟಾರ್ಟ್ಅಪ್‌ಗಳಲ್ಲಿ ಚೀನಾದ ಕಂಪನಿಗಳು ₹ 30 ಸಾವಿರ ಕೋಟಿ ಮೊತ್ತದ ಬಂಡವಾಳ ತೊಡಗಿಸಿವೆ.ವಾರ್ಷಿಕ ₹ 7,500 ಕೋಟಿ ವಹಿವಾಟು ನಡೆಸುವ ಭಾರತದ 30 ನವೋದ್ಯಮಗಳ (ಯೂನಿಕಾರ್ನ್‌) ಪೈಕಿ 18 ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿವೆ. ದೈತ್ಯ ಕಂಪನಿಗಳಾದ ಅಲಿಬಾಬಾ ಮತ್ತು ಟೆನ್ಸೆಂಟ್‌ ನಮ್ಮ ದೇಶದ 92 ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿವೆ. ದೀರ್ಘಾವಧಿಯಲ್ಲಿ ಭಾರತದ ಹಿತಾಸಕ್ತಿ ರಕ್ಷಿಸಲು ಮತ್ತು ಚೀನಾದ ಕಂಪನಿಗಳು ಒಡ್ಡಿರುವ ಸವಾಲು ಎದುರಿಸಲು ಸರ್ಕಾರವು ದೇಶದ ಇಂದಿನ ಆರ್ಥಿಕ ಇತಿಮಿತಿಗಳನ್ನು ಗಮನದಲ್ಲಿ ಇರಿಸಿಕೊಂಡು ಕೈಗೊಂಡ ಈ ನಿರ್ಧಾರವು ಸಕಾಲಿಕವೂ ಹೌದು. ಇದರಿಂದ ಸ್ಟಾರ್ಟ್‌ಅಪ್‌ಗಳಲ್ಲಿ ವಿದೇಶಿ ಹೂಡಿಕೆ ಪ್ರಮಾಣ ಕಡಿಮೆಯಾಗಬಹುದು. ಹಾಗಾಗಿ, ನವೋದ್ಯಮಗಳಿಗೆ ಅಗತ್ಯವಾದ ಬಂಡವಾಳ ನೆರವು ಕಲ್ಪಿಸಲು ಸರ್ಕಾರ ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಕಾರ್ಯಪ್ರವೃತ್ತವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT