ಮಂಗಳವಾರ, ಅಕ್ಟೋಬರ್ 22, 2019
22 °C

ಮಂಗಳವಾರ, 7–10–1969

Published:
Updated:

ಅಹಿಂಸಾ ಪಥದಲ್ಲಿ ಸಾಗುವಂತೆ ಜನತೆಗೆ ದೈವಾನುಗ್ರಹ ಕೋರಿ ಬಾದ್‌ಷಾಖಾನ್ ಉಪವಾಸ ಅಂತ್ಯ
ನವದೆಹಲಿ, ಅ. 6– ದೇಶದಲ್ಲಿನ ‘ಹಿಂಸೆ, ದ್ವೇಷ, ದಬ್ಬಾಳಿಕೆ’ಗಳ ವಾತಾವರಣದ ವಿರುದ್ಧ ಪ್ರಾಯಶ್ಚಿತ್ತಾರ್ಥವಾಗಿ ಕೈಗೊಂಡಿದ್ದ ಮೂರು ದಿನಗಳ ಉಪವಾಸವನ್ನು ಗಡಿನಾಡು ಗಾಂಧಿ ಖಾನ್‌ ಅಬ್ದುಲ್ ಗಫಾರ್ ಖಾನ್ ಅವರು ಇಂದು ಬೆಳಿಗ್ಗೆ ಏಳು ಗಂಟೆಗೆ ಇಲ್ಲಿ ಮುಕ್ತಾಯಗೊಳಿಸಿದರು.

ಉಪವಾಸದಿಂದ ನಿಶ್ಶಕ್ತರಾದಂತೆ ಕಾಣುತ್ತಿದ್ದ ಎಂಬತ್ತು ವರ್ಷ ವಯಸ್ಸಿನ ಬಾದ್‌ಷಾ ಖಾನರು ಸರ್ವೋದಯ ನಾಯಕ ಶ್ರೀ ಜೈಪ್ರಕಾಶ ನಾರಾಯಣ ಅವರು ನೀಡಿದ ಗ್ಲೂಕೋಸ್ ಮಿಶ್ರಿತ ಮೋಸಂಬಿ ರಸವನ್ನು ಕುಡಿದು ತಮ್ಮ ನಿರಶನವನ್ನು ಅಂತ್ಯಗೊಳಿಸಿದರು.

ಉಪವಾಸವನ್ನು ಅಂತ್ಯಗೊಳಿಸುವ ಮುನ್ನ ಅವರು ಸ್ವಲ್ಪ ಹೊತ್ತು ಮೌನದಿಂದ ಪ್ರಾರ್ಥನೆ ಸಲ್ಲಿಸಿದರು. ನೆರೆದಿದ್ದ ಜನರು ಈ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

ರಾಯಲಸೀಮೆಗೆ ಯೋಜನೆ– ಅಭಿವೃದ್ಧಿ ಮಂಡಳಿ ನೇಮಕ
ಹೈದರಾಬಾದ್, ಅ. 6– ಕರ್ನೂಲು, ಕಡಪ, ಚಿತ್ತೂರು ಮತ್ತು ಅನಂತಪುರ ಜಿಲ್ಲೆಗಳನ್ನೊಳಗೊಂಡ ರಾಯಲಸೀಮೆಗೆ ಯೋಜನೆ ಮತ್ತು ಅಭಿವೃದ್ಧಿ ಮಂಡಳಿಯ ರಚನೆಯನ್ನು ಆಂಧ್ರ ಪ್ರದೇಶ ಮುಖ್ಯಮಂತ್ರಿ ಶ್ರೀ ಕೆ. ಬ್ರಹ್ಮಾನಂದರೆಡ್ಡಿ ಅವರು ಇಂದು ಪ್ರಕಟಿಸಿದರು.

ಈ ಮಂಡಳಿಗೆ ರಾಜ್ಯ ವಿಧಾನಸಭೆಯ ಸ್ಪೀಕರ್ ಶ್ರೀ ಬಿ.ವಿ. ಸುಬ್ಬಾರೆಡ್ಡಿಯವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇತ್ತೀಚೆಗೆ ರಚಿತವಾದ ರಾಯಲಸೀಮೆ ಮಹಾಸಭೆಯ ಅಧ್ಯಕ್ಷರಾಗಿರುವ ಕಡಪ ಜಿಲ್ಲೆಯ ಕಾಂಗ್ರೆಸ್ ಶಾಸಕ ಪಿ. ಬಾಸಿರೆಡ್ಡಿ ಅವರು ಈ ಮಂಡಳಿಯ ಉಪಾಧ್ಯಕ್ಷರು.

ಜನ ಬೆಂಬಲವಿದ್ದರೆ ರಾಷ್ಟ್ರ ಮುನ್ನಡೆಗೆ ಯಾರೂ ಅಡ್ಡಿ ಬರಲಾರರು: ಪ್ರಧಾನಿ
ಪುದುಚೇರಿ, ಅ. 6– ‘ನನ್ನ ನೀತಿಗಳಿಗೆ ಮತ್ತು ಕಾರ್ಯಕ್ರಮಗಳಿಗೆ ದೇಶದ ಜನರು ದೃಢ ಬೆಂಬಲ ನೀಡಿದಲ್ಲಿ, ರಾಷ್ಟ್ರದ ಮುನ್ನಡೆಯನ್ನು ಇಲ್ಲಿಯ ಅಥವಾ ಹೊರಗಡೆಯ ಯಾರೊಬ್ಬರೂ ತಡೆಯಲಾರರು’ ಎಂದು ಪ್ರಧಾನಿ ಇಂದಿರಾ ಗಾಂಧಿ ಇಂದು ಇಲ್ಲಿ ಹೇಳಿದರು.

ಪುದುಚೇರಿಯ ಪುರಸಭೆ ತಮಗೆ ನೀಡಿದ ಪೌರ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಅವರು ‘ನಾನು ಹೋದೆಡೆಯಲ್ಲೆಲ್ಲಾ ಜನರು ಬೆಂಬಲದ ಭರವಸೆ ನೀಡಿದ್ದಾರೆ’ ಎಂದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)