ಸೋಮವಾರ, ಡಿಸೆಂಬರ್ 9, 2019
20 °C

ಸೋಮವಾರ, 17–11–1969

Published:
Updated:

ಲೋಕಸಭೆಯಲ್ಲಿ ಇಂದಿರಾಗೆ ಬಹುಮತ ನಷ್ಟ: ಸರ್ಕಾರ ಭದ್ರ
ನವದೆಹಲಿ, ನ. 16– ಸಂಸತ್ತಿನ ಚಳಿಗಾಲದ ಮಹತ್ವಪೂರ್ಣ ಅಧಿವೇಶನಕ್ಕೆ ಮುನ್ನಾ ದಿನವಾದ ಇಂದು ‘ಸಿಂಡಿಕೇಟ್’ ಪ್ರತಿಸ್ಪರ್ಧಿ ಸಂಸದೀಯ ಪಕ್ಷವನ್ನು ರಚಿಸುವುದರಿಂದ ಅಧಿಕಾರಾರೂಢ ಕಾಂಗ್ರೆಸ್ ಪಕ್ಷ ಸಂಸತ್‌ನ ಉಭಯ ಸದನಗಳಲ್ಲೂ ಸ್ಪಷ್ಟ ಬಹುಮತ ಕಳೆದುಕೊಂಡಿದೆ.

ಆದರೂ ಶ್ರೀಮತಿ ಇಂದಿರಾಗಾಂಧಿಯವರ ನಾಯಕತ್ವದಲ್ಲಿನ ಸರ್ಕಾರ ಪದಚ್ಯುತಗೊಳ್ಳುವ ಸಂಭವ ಕಡಿಮೆ. ಲೋಕಸಭೆಯಲ್ಲಿನ ಬಲಪಂಥೀಯ ವಿರೋಧಿ ಪಕ್ಷಗಳು ಭಾವೋದ್ರೇಕ ಉಂಟು ಮಾಡಿರುವ ರಬಾತ್‌ ವಿವಾದದ ಬಗ್ಗೆ ಬಲಪ್ರದರ್ಶನಕ್ಕೆ ಸಿದ್ಧತೆ ನಡೆಸುತ್ತಿದೆ.

ಏತನ್ಮಧ್ಯೆ 532 ಮಂದಿ ಸದಸ್ಯರಿರುವ ಲೋಕಸಭೆಯಲ್ಲಿ ಕಾಂಗ್ರೆಸ್ಸಿನ ಸದಸ್ಯ ಬಲ 282 ರಿಂದ 217ಕ್ಕೆ ಕುಸಿದಿದೆ.

‘ಗಂಡಾಂತರದ ಸಮಯ ಸಂಸತ್‌ನಲ್ಲಿ ತಪ್ಪದೆ ಹಾಜರಿರಿ’ ಬೆಂಬಲಿಗರಿಗೆ ಇಂದಿರಾ ಮನವಿ
ನವದೆಹಲಿ, ನ. 16– ‘ಬರಲಿರುವ ದಿನಗಳಲ್ಲಿ ಸಂಸತ್‌ನಲ್ಲಿ ತುಂಬಾ ಎಚ್ಚರದಿಂದಿರಿ’ ಎಂದು ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿಯವರು ಇಂದು ಇಲ್ಲಿ ಸಂಸತ್‌ ಕಾಂಗ್ರೆಸ್ ಪಕ್ಷದ ಸದಸ್ಯರಿಗೆ ತಿಳಿಸಿದರು.

ನಾಳೆಯಿಂದ ಪ್ರಾರಂಭವಾಗಲಿರುವ ಸಂಸತ್‌ ಅಧಿವೇಶನ ಅತ್ಯಂತ ಕ್ಲಿಷ್ಟವಾದ ಅಧಿವೇಶನವಾಗಿರುತ್ತದೆ ಎಂದು ಅವರು ಸದಸ್ಯರಿಗೆ ಎಚ್ಚರಿಕೆ ನೀಡಿದರು.

ಸಂಸತ್ ಭವನದ ಮಧ್ಯ ಸಭಾಂಗಣದಲ್ಲಿ ಸಮಾವೇಶಗೊಂಡಿದ್ದ ಸಂಸತ್ ಕಾಂಗ್ರೆಸ್ ಪಕ್ಷದ ಸರ್ವಸದಸ್ಯರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ‘ಸಂಸತ್ ಅಧಿವೇಶನದಲ್ಲಿ ಪ್ರತಿದಿನವೂ ಹಾಜರಿರಿ, ಚರ್ಚೆಗೆತ್ತಿಕೊಂಡಿರುವ ವಿಷಯದಲ್ಲಿ ನಿಮಗೆ ಆಸಕ್ತಿ ಇರಬಹುದು ಅಥವಾ ಇಲ್ಲದಿರಬಹುದು ನಿಮಗೆ ಮಾತನಾಡಲು ಅವಕಾಶ ಸಿಕ್ಕಲಿ ಅಥವಾ ಸಿಗದಿರಲಿ ಪ್ರತಿದಿನವೂ ಸಭೆಯಲ್ಲಿ ಹಾಜರಿರುವುದನ್ನು ಮರೆಯಬೇಡಿ. ಇದು ಗಂಡಾಂತರದ ಕಾಲ. ನಾವೆಲ್ಲ ಒಟ್ಟಾಗಿ ನಿಂತು ಸಭೆಯ ಕಾರ್ಯಕಲಾಪದ ಬಗ್ಗೆ ಇನ್ನೂ ಹೆಚ್ಚಿನ ಸಕ್ರಿಯ ಆಸಕ್ತಿ ತಾಳಬೇಕು ಎಂದು ಅವರು ಸದಸ್ಯರಿಗೆ ವಿಶೇಷ ಮನವಿ ಮಾಡಿದರು.

ಸಿಂಡಿಕೇಟ್ ಎಂ.ಪಿ.ಗಳ ಗುಂಪಿಗೆ ಮುರಾರಜಿ ಅಧ್ಯಕ್ಷ; ರಾಂಸುಭಗ್ ನಾಯಕ
ನವದೆಹಲಿ, ನ. 16– ಎಸ್ಸೆನ್ ಗುಂಪಿನ ಸಂಸತ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಶ್ರೀ ಮುರಾರಜಿ ದೇಸಾಯ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಡಾ. ರಾಂಸುಭಗಸಿಂಗ್ ಅವರನ್ನು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರನ್ನಾಗಿ ಮತ್ತು ಡಾ. ಡಿ.ಎಸ್. ರಾಜು ಅವರನ್ನು ಉಪ ನಾಯಕರನ್ನಾಗಿಯೂ ಚುನಾಯಿಸಲಾಗಿದೆ.

ಪ್ರತಿಕ್ರಿಯಿಸಿ (+)