7

ಭಾನುವಾರ, 7-7-1968

Published:
Updated:

ಎರಡು– ಮೂರು ರಾಜ್ಯಗಳು ಸೇರಿದ ವಲಯ ವ್ಯವಸ್ಥೆ

ಹೈದರಾಬಾದ್, ಜು. 6– ರಾಷ್ಟ್ರೀಯ ಸಮಗ್ರತೆ ಸಾಧಿಸಲು ಎರಡು ಅಥವಾ ಮೂರು ರಾಜ್ಯಗಳನ್ನು ಒಂದು ವಲಯ ವ್ಯವಸ್ಥೆಗೆ ಒಳಪಡಿಸಬೇಕೆಂದು ಮೈಸೂರು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಇಂದು ಇಲ್ಲಿ ಸಲಹೆ ಮಾಡಿದರು.

ಇದು ಹೊಸ ರಾಜ್ಯಗಳ ರಚನೆಯನ್ನು ತಡೆಹಿಡಿಯುವ ಕಾಲ ಎಂದು ಹೇಳಿದ ಶ್ರೀ ಪಾಟೀಲ್ ಅವರು, ಅಸ್ತಿತ್ವದಲ್ಲಿರುವ ರಾಜ್ಯಗಳಲ್ಲಿ ಪರಸ್ಪರ ಐಕ್ಯತಾ ಮನೋಭಾವನೆ ಮೂಡಿಬರಬೇಕೆಂದು ಒತ್ತಾಯಪಡಿಸಿದರು.

**

ಉಸ್ಮಾನಿಯಾದಲ್ಲಿ ಕನ್ನಡ ಪೀಠಕ್ಕೆ 3 ಲಕ್ಷ ರೂ.

ಬೆಂಗಳೂರು, ಜು. 6– ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರತಿಷ್ಠಾನವೊಂದನ್ನು (ಅಧ್ಯಯನ ಪೀಠ) ಸ್ಥಾಪಿಸಲು ಮೈಸೂರು ಸರಕಾರ ಮೂರು ಲಕ್ಷ ರೂ.ಗಳನ್ನು ನೀಡುವುದೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ಇಲ್ಲಿ ಪ್ರಕಟಿಸಿದರು.

**

ಭಾರತ ನೌಕಾದಳದ ಪ್ರಗತಿ ಸಬ್‌ಮೆರೀನ್ ಯುಗಾರಂಭ

ವಿಶಾಖಪಟ್ಟಣ, ಜು. 6– ಭಾರತದ ನೌಕಾದಳವು ಇಂದು ಹೊಸ ಯುಗಕ್ಕೆ ಕಾಲಿಟ್ಟಿತು. ರಷ್ಯದಿಂದ ಪಡೆಯಲುದ್ದೇಶಿಸಿರುವ ನಾಲ್ಕು ಆಧುನಿಕ ಜಲಾಂತರ್ಗಾಮಿ ನೌಕೆಗಳಲ್ಲಿ ಮೊದಲನೆಯ ನೌಕೆ ಇಂದು ಇಲ್ಲಿಗೆ ಬಂದಿತು.

**

ನದೀಜಲ ವಿವಾದ ಶಾಸನದ ತಿದ್ದುಪಡಿ

ನವದೆಹಲಿ, ಜು. 6– ಅಂತರರಾಜ್ಯ ನದೀ ಜಲ ವಿವಾದಗಳ ಶಾಸನವನ್ನು ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ತಿದ್ದುಪಡಿ ಮಾಡುವ ಸಂಭವವಿದೆ.

ಹೆಚ್ಚು ಮಂದಿ ನ್ಯಾಯಾಧಿಪತಿಗಳು ಇರುವ ನ್ಯಾಯಮಂಡಲಿಯೊಂದನ್ನು ರಚಿಸಿ, ಜಟಿಲ ವಾದ–ವಿವಾದಗಳನ್ನು ಪರಿಹರಿಸುವ ಕಾರ್ಯವನ್ನು ಅದು ನಿರ್ವಹಿಸುವಂತೆ ಮಾಡುವುದೇ ಈ ತಿದ್ದುಪಡಿಯ ಉದ್ದೇಶ.

**

ಪೂಜ್ಯ ಆಂಡವನ್ ಸ್ವಾಮಿಗಳಿಗೆ ಭಕ್ತಿಪೂರ್ಣ ಸ್ವಾಗತ

ಬೆಂಗಳೂರು, ಜು. 6– ಪಾದರಕ್ಷೆಯನ್ನೂ ಮೆಟ್ಟದೆ, ಪಾದಚಾರಿಯಾಗಿಯೇ ಎಲ್ಲ ಕಡೆ ಪ್ರವಾಸ ಮಾಡುವ ಸರಳತೆಯ ತೇಜಃಪೂರ್ಣ ಮೂರ್ತಿ, ಉದ್ಧಾಮವೇದಾಂತಿ ಶ್ರೀರಂಗಂನ ಪೆರಿಯಾಶ್ರಮದ ಪರಮ ಪೂಜ್ಯ ಆಂಡವನ್ ಸ್ವಾಮೀಜಿಯವರಿಗೆ ಇಂದು ನಗರದ ನಾನಾ ಕಡೆಗಳಲ್ಲಿ ನಾಗರಿಕರು ಭಕ್ತಿಪೂರ್ವಕ ಸ್ವಾಗತ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !