ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆವರಣ ಗೋಡೆ ಎತ್ತರಕ್ಕೆ ಕ್ರಮ

ಡಂಪಿಂಗ್‌ ಯಾರ್ಡ್‌ಗೆ ಭೇಟಿ: ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ ಪರಿಶೀಲನೆ
Last Updated 25 ಮೇ 2018, 3:14 IST
ಅಕ್ಷರ ಗಾತ್ರ

ಪುತ್ತೂರು: ಉಪವಿಭಾಗಾಧಿಕಾರಿ ನೇತೃತ್ವದ ಸಮಿತಿಯಲ್ಲಿ ₹ 11.35 ಲಕ್ಷ ನಿಧಿ ಇದೆ. ಅದನ್ನು ಬಳಸಿ ಡಂಪಿಂಗ್ ಯಾರ್ಡ್‌ ಸುತ್ತಲಿನ ಆವರಣ ಗೋಡೆ ಎತ್ತರಿಸಲಾಗುವುದು. ಯಾರ್ಡ್‌ ಒಳಗೆ ಇರುವ ವಿದ್ಯುತ್ ಸಮಸ್ಯೆ ಸರಿಪಡಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಹೇಳಿದರು.

ಪುತ್ತೂರು ನಗರದ ಹೊರವಲಯದ ಬನ್ನೂರಿನಲ್ಲಿರುವ ಡಂಪಿಂಗ್ ಯಾರ್ಡ್‌ಗೆ ಗುರುವಾರ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಕುರಿತು ಪರಿಶೀಲಿಸಿದರು.

ಕಳೆದ ವರ್ಷ ಬೆಂಕಿ ದುರಂತ ಸಂಭವಿಸಿದ ಬಳಿಕ ತ್ಯಾಜ್ಯ ರಾಶಿಯ ಮೇಲೆ ಮಣ್ಣು ಸುರಿದು ಸಮತಟ್ಟು ಮಾಡಲಾಗಿದೆ. ಈ ಕೆಲಸ ಚೆನ್ನಾಗಿ ನಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಾನು ಹಲವು ಜಿಲ್ಲೆಗಳಲ್ಲಿ ಡಂಪಿಂಗ್ ಯಾರ್ಡ್‌ ವೀಕ್ಷಣೆ ಮಾಡಿದ್ದೇನೆ. ಅವೆಲ್ಲದಕ್ಕಿಂತ ಪುತ್ತೂರಿನ ಡಂಪಿಂಗ್ ಯಾರ್ಡ್‌ ಉತ್ತಮವಾಗಿದೆ ಎಂದು ಅವರು ಶ್ಲಾಘಿಸಿದರು.

ಡಂಪಿಂಗ್ ಯಾರ್ಡ್‌ನ ಒಂದು ಮೂಲೆಯಲ್ಲಿ ಹೊಂಡವೊಂದನ್ನು ತೆಗೆದು ಕೋಳಿ, ಮೀನು, ಮಾಂಸ ತ್ಯಾಜ್ಯಗಳನ್ನು ಅದರಲ್ಲಿ ಹಾಕುವ ವ್ಯವಸ್ಥೆ ಮಾಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಕಸ ಸಂಗ್ರಹ ವ್ಯವಸ್ಥೆ ಸರಿಯಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಬರುತ್ತಿರುವುದರಿಂದ ಕಸ ಸಂಗ್ರಹ ಎಲ್ಲ ಕಡೆಯೂ ಆಗುವಂತೆ ನಿಗಾವಹಿಸಬೇಕು ಎಂದು ನಗರಸಭೆ ಪೌರಾಯುಕ್ತರು ಹಾಗೂ ಆರೋಗ್ಯ ನಿರೀಕ್ಷಕರಿಗೆ ಸೂಚಿಸಿದರು.

ಆರೋಗ್ಯ ನಿರೀಕ್ಷಕರು ಪ್ರತೀ ದಿನ ಬೆಳಗ್ಗೆ 6.30ರಿಂದ ನಗರದೆಲ್ಲೆಡೆ ಸುತ್ತಾಡಿ ಎಲ್ಲ ಕಡೆ ಕಸ ಸಂಗ್ರಹ ಆಗುತ್ತಿದೆಯೇ ಎಂದು ಪರಿಶೀಲಿಸಬೇಕು. ಕಸ ಸಂಗ್ರಹಕ್ಕೆ ಹೊಸ ತಂಡ ಬಂದಿರುವುದರಿಂದ ಅವರಿಗೆ ನಗರದ ಎಲ್ಲ ಪ್ರದೇಶಗಳ ಪರಿಚಯ ಮಾಡಿ ಕೊಡಬೇಕು ಎಂದು ಅವರು ನಿರ್ದೇಶನ ನೀಡಿದರು.

ಡಂಪಿಂಗ್ ಯಾರ್ಡ್‌ ಪರಿಸರದ ನಿವಾಸಿಗಳು ಇಲ್ಲಿನ ಸಮಸ್ಯೆಗಳ ಕುರಿತು ಉಪವಿಭಾಗಾಧಿಕಾರಿ ಗಮನ ಸೆಳೆದರು. ಕೋಳಿ, ಮೀನು ಮುಂತಾದ ಮಾಂಸದ ತ್ಯಾಜ್ಯಗಳನ್ನು ಸಾಗಿಸುವಾಗ ಅದರ ಕೊಳಚೆ ನೀರು ರಸ್ತೆಗೆ ಚೆಲ್ಲದಂತೆ ಎಚ್ಚರಿಕೆ ವಹಿಸಬೇಕು. ಅದೇ ರೀತಿ ಕಸ ತ್ಯಾಜ್ಯದ ಲೋಡ್ ತರುವಾಗಲೂ ಅದಕ್ಕೆ ಟಾರ್ಪಲ್‌ ಮುಚ್ಚಿ ತರಬೇಕು. ಗಾಳಿಗೆ ಹಾರಿ ನಗರದಲ್ಲಿ ಚೆಲ್ಲದಂತೆ ಎಚ್ಚರಿಕೆ ವಹಿಸಬೇಕೆಂದು ಉಪವಿಭಾಗಾಧಿಕಾರಿ ಕಸ ಸಂಗ್ರಹ ತಂಡದ ಚಿದಾನಂದ್ ಅವರಿಗೆ ಸೂಚನೆ ನೀಡಿದರು.

ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಅವರು ಸ್ವಚ್ಛ ಭಾರತ್ ಮಿಶನ್ ಅಡಿಯಲ್ಲಿ ಪುತ್ತೂರಿನ ಡಂಪಿಂಗ್ ಯಾರ್ಡ್‌ನ್ನು ಸಂಪೂರ್ಣ ಮೇಲ್ದರ್ಜೆಗೆಯೇರಿಸಲು ₹ 4 ಕೋಟಿ ಡಿಪಿಆರ್ ತಯಾರಿಸಿ ಮಿಶನ್‌ಗೆ  ಕಳುಹಿಸಿ ಕೊಡಲಾಗಿದೆ ಎಂದು ಉಪವಿಭಾಗಾಧಿಕಾರಿ ಅವರಿಗೆ ಮಾಹಿತಿ ನೀಡಿದರು.

‌ನಗರಸಭೆಯ ಎಂಜಿನಿಯರ್ ಅರುಣ್ ಕುಮಾರ್, ಆರೋಗ್ಯ ನಿರೀಕ್ಷಕ ರಾಮಚಂದ್ರ, ಶ್ವೇತಾ ಕಿರಣ ಮತ್ತಿತರರು ಇದ್ದರು.

**
ಆರೋಗ್ಯ ನಿರೀಕ್ಷಕರು ಬೆಳಿಗ್ಗೆ ನಗರದಲ್ಲಿ ಸುತ್ತಾಡಿ ತ್ಯಾಜ್ಯ ವಿಲೇವಾರಿ ಸರಿಯಾಗಿ ಆಗುತ್ತಿರುವುದರ ಬಗ್ಗೆ ಗಮನ ಹರಿಸಬೇಕು
– ಕೃಷ್ಣಮೂರ್ತಿ, ಉಪವಿಭಾಗಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT