ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ, 1–7–1969

ಮಂಗಳವಾರ
Last Updated 30 ಜೂನ್ 2019, 19:45 IST
ಅಕ್ಷರ ಗಾತ್ರ

ಆಂಧ್ರ ಪ್ರದೇಶದಲ್ಲಿ ಸ್ವಲ್ಪಕಾಲ ರಾಷ್ಟ್ರಪತಿ ಆಡಳಿತ ಖಚಿತ

ನವದೆಹಲಿ, ಜೂನ್ 30– ಗಲಭೆ ಮತ್ತು ಅರಾಜಕತೆಗೀಡಾಗಿರುವ ಆಂಧ್ರ ಪ್ರದೇಶದಲ್ಲಿ ಸ್ವಲ್ಪ ಕಾಲ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರುವ ಸಂಭವವಿದೆಯೆಂದು ಇಂದು ಇಲ್ಲಿ ತಿಳಿದುಬಂದಿತು.ಈಗ ಆಂಧ್ರ ಪ್ರದೇಶದಲ್ಲಿ ಶಾಂತಿ ಮತ್ತು ಶಿಸ್ತು ಕಿಂಚಿತ್ತೂ ಇಲ್ಲವೆಂಬುದೇ ಕೇಂದ್ರ ನಾಯಕರ ಅಭಿಪ್ರಾಯವಾಗಿದೆ.

ಸಹಕಾರ ಕ್ಷೇತ್ರದ ಅಸಮರ್ಪಕ ಚಟುವಟಿಕೆ ವಿರುದ್ಧ ಜಗಜೀವನರಾಮ್ ಎಚ್ಚರಿಕೆ

ಬೆಂಗಳೂರು, ಜೂನ್ 30– ಇದುವರೆಗೆ ಯಾವುದೇ ಆತಂಕವಿಲ್ಲದೆ, ಸರ್ಕಾರದ ರಕ್ಷಣೆಯಲ್ಲಿ ಬೆಳೆದು, ಕೆಲವೊಂದು ವ್ಯವಹಾರಗಳಲ್ಲಿ ಏಕಸ್ವಾಮ್ಯ ಪಡೆದಿರುವ ಭಾರತದ ಸಹಕಾರ ಕ್ಷೇತ್ರ ಇನ್ನು ಮುಂದೆ ಖಾಸಗಿ ಕ್ಷೇತ್ರದಿಂದ ಸ್ಪರ್ಧೆಯನ್ನು ಎದುರಿಸಬೇಕಾಗಿ ಬರಬಹುದು.

ನಾಲ್ಕನೇ ಪಂಚ ವಾರ್ಷಿಕ ಯೋಜನೆಯಲ್ಲಿ ಹಿಂದಿನ ಯೋಜನೆಗಳಂತೆ, ಸಹಕಾರಿ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದೆಯಾದರೂ, ಅವುಗಳು ಸಮರ್ಪಕವಾಗಿ ಕೆಲಸ ಮಾಡದೇ ಹೋದರೆ, ಬೇರೆ ವ್ಯವಸ್ಥೆಗಳನ್ನು ಮಾಡಬೇಕಾಗಿ ಬರಬಹುದು ಎಂದು ಕೇಂದ್ರ ಸಚಿವ ಶ್ರೀ ಜಗಜೀವನರಾಮ್ ಅವರು ಹೇಳಿದ್ದಾರೆ.

ಹತಾಶ ರಾಜಕಾರಣಿ ಅಪಾಯಕಾರಿ!

ಬೆಂಗಳೂರು, ಜೂನ್ 30– ‘ಮಂತ್ರಿ ಹುದ್ದೆ ಅನಾಕರ್ಷಣೀಯವಾದಷ್ಟೂ ದೇಶಕ್ಕೆ, ರಾಜ್ಯಕ್ಕೆ ಕ್ಷೇಮ’– ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರ ನುಡಿ.

‘ನಮಗೆ ಅಗತ್ಯವಿರುವುದಕ್ಕಿಂತ ಹೆಚ್ಚು ಪ್ರಚಾರ ಸಿಕ್ಕುತ್ತಿದೆ ಎಂದು ನನ್ನ ಭಾವನೆ. ಬೇರೆ ರಾಷ್ಟ್ರಗಳಲ್ಲಿ ಮಂತ್ರಿಗೆ ಇಷ್ಟೊಂದು ಪ್ರಾಮುಖ್ಯವಿಲ್ಲ. ರಾಜಕಾರಣಿಗೆ ಅಧಿಕಾರಕ್ಕೆ ಸಲ್ಲಬೇಕಾದುದಕ್ಕಿಂತ ಹೆಚ್ಚು ‘ಪ್ರಾಶಸ್ತ್ಯ’ ದೊರಕುತ್ತಿರುವುದರಿಂದಲೇ ಅದು ಆಕರ್ಷಕವಾಗಿದೆ’ ಎಂದ ಅವರು, ರಾಜಕಾರಣಿಗಿಂತ ಉತ್ತಮ ಸಾಧನೆ ತೋರಿಸಿದ ರೈತ, ಕಾರ್ಮಿಕ, ಶಿಕ್ಷಕ ಮೊದಲಾದವರಿಗೆ ಉತ್ತಮ ಪ್ರಚಾರ ದೊರಕುವುದು ಅಗತ್ಯವಾಗಿದೆಯೆಂದರು.

‘ಹತಾಶರಾದ ರಾಜಕಾರಣಿಗಳಿಂದಲೇ ದೇಶಕ್ಕೆ ಭಾರೀ ಗಂಡಾಂತರವಿದೆ. ಅದು ಬರದಂತೆ ಮಾಡುವುದು ಸಮಾಜದ ಕರ್ತವ್ಯ. ಸ್ಥಾನದ ಮಹತ್ವ ಕಡಿಮೆಯಾದರೆ ಅದಕ್ಕೆ ಬಡಿದಾಟ, ಕಚ್ಚಾಟ ಕಡಿಮೆಯಾಗುತ್ತೆ. ಭಗ್ನ ಮನೋರಥರಾಗುವವರೂ ಕಡಿಮೆ ಆಗುತ್ತಾರೆ. ಸಮಾಜ ನಿಸ್ವಾರ್ಥ ಸೇವಕರಿಗೆ ಮಹತ್ವದ ಸ್ಥಾನ ನೀಡಿದಷ್ಟೂ ದೇಶಕ್ಕೆ ಹಿತವಾಗುತ್ತೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT