ಬುಧವಾರ, ಜನವರಿ 22, 2020
28 °C

50 ವರ್ಷಗಳ ಹಿಂದೆ |ಬುಧವಾರ, 17–12–1969

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲ್ಕತ್ತ ಕ್ರಿಕೆಟ್ ಟೆಸ್ಟ್ ಮೈದಾನದ ಬಳಿ ದುರಂತ: ನೂಕುನುಗ್ಗಲು- ಆರು ಸಾವು

ಕಲ್ಕತ್ತ, ಡಿ. 16– ಭಾರತ ಮತ್ತು ಆಸ್ಟ್ರೇಲಿಯ ನಡುವೆ ಕ್ರಿಕೆಟ್ ಟೆಸ್ಟ್ ಪಂದ್ಯ ನಡೆಯುತ್ತಿದ್ದ ಈಡನ್ ಗಾರ್ಡನ್ ಹೊರಗಡೆ ಇಂದು ಬೆಳಿಗ್ಗೆ ಸಂಭವಿಸಿದ ನೂಕುನುಗ್ಗಲಿನಲ್ಲಿ ಆರು ಮಂದಿ ಸತ್ತರು; ಕನಿಷ್ಠಪಕ್ಷ ನೂರು ಮಂದಿಗೆ ಗಾಯಗಳಾದವು.

ಗಾಯಗೊಂಡವರಲ್ಲಿ ಇಪ್ಪತ್ತು ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆಯೆಂದೂ ತಿಳಿದುಬಂದಿದೆ. ಇವರಲ್ಲದೆ ಅನೇಕರಿಗೆ ಸಣ್ಣಪುಟ್ಟ ಗಾಯಗಳೂ ಆಗಿವೆ.

ಈ ನೂಕುನುಗ್ಗಲು ಕಾಲ್ತುಳಿತ ಪ್ರಕರಣವು ಈಡನ್‌ ಗಾರ್ಡನ್ ಬಳಿ ಕ್ರಿಕೆಟ್ ಪಂದ್ಯಕ್ಕೆ ಪ್ರತಿನಿತ್ಯದ ಟಿಕೆಟ್ ಕೊಡುವ ಸ್ಥಳದಲ್ಲಿ ಸಂಭವಿಸಿತು.

ಅತ್ಯಾಸೆಯುಳ್ಳ ಹೆಂಗಸು ಇಂದಿರಾ: ಎಸ್ಸೆನ್ 

ಬೆಂಗಳೂರು, ಡಿ. 16– ‘ಅತ್ಯಾಸೆಯುಳ್ಳ, ನಿರಂಕುಶಾಧಿಕಾರಿ, ವ್ಯಕ್ತಿಪೂಜೆಯನ್ನು ಬೆಳೆಸುತ್ತಿರುವ ಹಾಗೂ ಸರ್ವಾಧಿಕಾರಿಯ ಮನೋಭಾವವನ್ನು ಪ್ರದರ್ಶಿಸಿರುವ’ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ‘ಎಷ್ಟು ಬೇಗ ಅಧಿಕಾರ ತ್ಯಜಿಸಿದರೆ ರಾಷ್ಟ್ರಕ್ಕೆ ಅಷ್ಟೂ ಕ್ಷೇಮ’ ಎಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ಕಟುವಾಗಿ ಟೀಕಿಸಿದರು.

‘ದಕ್ಷತೆಯಿಲ್ಲದ ಅತ್ಯಾಸೆಯುಳ್ಳ ಹೆಂಗಸು’ ಎಂದು ಅವರು ಪ್ರಧಾನಿಯನ್ನು ಕರೆದು, ಕಾಂಗ್ರೆಸ್ಸಿನಲ್ಲಿ ಒಡಂಬಡಿಕೆ ಮೂಡದಿರಲು ಆಕೆಯ ಈ ಮನೋ ವೃತ್ತಿಯೇ ಕಾರಣವೆಂದೂ ಆಪಾದಿಸಿದರು.

ಪ್ರಧಾನಿ ಬಗ್ಗೆ ತಮಗೆ ಯಾವ ವೈಯಕ್ತಿಕ ದ್ವೇಷವೂ ಇಲ್ಲವೆಂದು ಸ್ಪಷ್ಟಪಡಿಸಿದ ಕಾಂಗ್ರೆಸ್ ಅಧ್ಯಕ್ಷರು ‘ಆಕೆಯ ಕೆಲವು ಕಾರ್ಯಗಳನ್ನು ನೋಡಿದರೆ, ದೇಶವನ್ನು ಪ್ರಜಾಪ್ರಭುತ್ವದಿಂದ ಸಮತಾವಾದದತ್ತ (ಕಮ್ಯುನಿಸಂ) ಕೊಂಡೊಯ್ಯುವ ಪ್ರಯತ್ನ ಮಾಡುತ್ತಿರುವಂತೆ ಕಾಣುವುದು’ ಎಂದು ಅಭಿಪ್ರಾಯಪಟ್ಟರು.

ಪ್ರತಿಕ್ರಿಯಿಸಿ (+)