ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ ಬದಲಾವಣೆ ಬಯಸಿದ್ದಾರೆ

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪಗೌಡ ಅಭಿಮತ
Last Updated 25 ಏಪ್ರಿಲ್ 2018, 12:32 IST
ಅಕ್ಷರ ಗಾತ್ರ

‘ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜನಪರ ಯೋಜನೆಗಳನ್ನು ಜಾರಿಗೊಳಿಸಿದರು ಮತ್ತು ಉತ್ತಮ ಆಡಳಿತ ನೀಡಿದರು. ಅವರ ಕಾರ್ಯವಿಧಾನ ಮತ್ತು ಮಾರ್ಗದರ್ಶನವೇ ಬಿಜೆಪಿಗೆ ಗೆಲುವಿನ ಶ್ರೀರಕ್ಷೆಯಾಗಲಿದೆ‘ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪಗೌಡ ಹೇಳುತ್ತಾರೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ.

ಈ ಚುನಾವಣೆಯಲ್ಲಿ ನಿಮ್ಮನ್ನೇ ಏಕೆ ಗೆಲ್ಲಿಸಬೇಕು?

ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಐದು ವರ್ಷಗಳಲ್ಲಿ ನಡೆಸಿದ ಆಡಳಿತವನ್ನು ಜನ ನೋಡಿದ್ದಾರೆ. ಅಂಗವಿಕಲರು, ಮಹಿಳೆಯರು ಹಾಗೂ ರೈತಪರ ಯೋಜನೆಗಳನ್ನು ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೂಪಿಸಿದರು. ನೆನೆಗುದಿಗೆ ಬಿದ್ದಿರುವ ಕೆಲಸಗಳನ್ನು ಪೂರ್ಣಗೊಳಿಸುವ ಇಚ್ಛಾಶಕ್ತಿ ಇರುವುದು ಬಿಜೆಪಿಗೆ ಮಾತ್ರ. ಹೀಗಾಗಿ ಜನರು ಈ ಸಲ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತಾರೆ.

ಯಾವ ವಿಷಯಗಳನ್ನು ಇಟ್ಟುಕೊಂಡು ಮತದಾರರ ಬಳಿ ಹೋಗುತ್ತೀರಿ?

ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರವು ಮಾಡಿರುವ ಸಾಧನೆಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗುತ್ತೇವೆ. ದೇಶದಲ್ಲಿ 22 ರಾಜ್ಯಗಳಲ್ಲಿ ಜನ ಕೇಂದ್ರದ ಸಾಧನೆ ನೋಡಿ ಬಿಜೆಪಿಗೆ ಅಧಿಕಾರ ನೀಡಿದ್ದಾರೆ. ಕರ್ನಾಟಕ ಜನರು ಕೂಡ ಕಾಂಗ್ರೆಸ್‌ ಆಡಳಿತದ ಬಗ್ಗೆ ಬೇಸತ್ತಿದ್ದು, ಬಿಜೆಪಿಗೆ ಅಧಿಕಾರದ ಚುಕ್ಕಾಣಿ ನೀಡಲು ಇಚ್ಛಿಸಿದ್ದಾರೆ.

ವೀರಶೈವ – ಲಿಂಗಾಯತ ವಿವಾದ ಬಿಜೆಪಿಗೆಲಾಭ ತಂದುಕೊಡುವುದೇ?

ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ. ರಾಜಕಾರಣಿಗಳು ಅವುಗಳನ್ನು ಬೇರ್ಪಡಿಸುವ ಪ್ರಯತ್ನ ಮಾಡಿದ್ದಾರೆ. ನಾವು ಕರೆಯುವ ಸಭೆಗಳಲ್ಲಿ ಯಾವುದೇ ಭೇದವಿಲ್ಲದೆ ಎಲ್ಲರೂ ಪಾಲ್ಗೊಳ್ಳುತ್ತಾರೆ. ನಾವು ಧರ್ಮ ಒಡೆಯುವ ಕೆಲಸವನ್ನು ಬೆಂಬಲಿಸುವುದಿಲ್ಲ. ರಾಜ್ಯ ಸರ್ಕಾರವು ಮಾಡಿದ ಕುತಂತ್ರ ಜನರಿಗೆ ಅರ್ಥ ಆಗಿದೆ. ಬಿಜೆಪಿ ನಿಲುವನ್ನು ಜನರು ಬೆಂಬಲಿಸಲು ಮುಂದಾಗಿದ್ದಾರೆ.

ಪಕ್ಷಾಂತರಿಗಳಿಗೆ ಮಣೆ, ನಿಷ್ಠರ ಗಡೆಗಣನೆ ಎಂಬ ಆರೋಪ ಇದೆಯಲ್ಲ?

ಕೇಂದ್ರ ಮತ್ತು ರಾಜ್ಯದ ವರಿಷ್ಠರು ಸಮೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಘೋಷಿ ಸಿದ್ದಾರೆ. ಸಾಯುವವರೆಗೂ ಒಬ್ಬರಿಗೆ ಟಿಕೆಟ್‌ ಕೊಡುವುದು ರಾಜಕಾರಣದಲ್ಲಿ ಇಲ್ಲ. ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಕೆಲವರಿಗೆ ಅನ್ಯಾಯ ಆಗಿರಬಹುದು. ಗೆಲ್ಲಬೇಕು ಎನ್ನುವ ಉದ್ದೇಶದಿಂದ ಎಲ್ಲ ಪಕ್ಷಗಳು ಪಕ್ಷಾಂತರಿಗಳಿಗೆ ಅವಕಾಶ ನೀಡುತ್ತಾರೆ.

ಅದೇ ರೀತಿ ಬಿಜೆಪಿಯಲ್ಲೂ ಅವಕಾಶ ನೀಡಿದ್ದೇವೆ. ಆದರೆ, ಪಕ್ಷ ದಿಂದ ತಮಗೆ ಏನು ಲಾಭವಾಗಿದೆ ಎಂಬುದನ್ನು ನೋಡಿಕೊಂಡು ಪಕ್ಷದ ಸಂಘಟನೆಗೆ ಮುಂದಾಗಬೇಕು. ನಿಷ್ಠರನ್ನು ಕಡೆಗಣಿಸಿಲ್ಲ.

ನಿಮ್ಮ ಪಕ್ಷ ಗೆಲ್ಲಲು ಇರುವ ಅವಕಾಶಗಳು ಯಾವವು?

ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಆಡಳಿತದಿಂದ ಜನರು ಬೇಸತ್ತಿರುವುದೇ ಬಿಜೆಪಿ ಅಧಿಕಾರಕ್ಕೆ ಬರಲು ದೊಡ್ಡ ಅವಕಾಶ. ಬಡವರಿಗಾಗಿ, ಅಂಗವಿಕಲರಿಗಾಗಿ ಬಿಜೆಪಿ ಸರ್ಕಾರ ಅವಧಿಯಲ್ಲಿ ಮಾಡಿರುವ ಕೆಲಸಗಳ ಪ್ರತಿಫಲವು ಈಗ ಅಧಿಕಾರಕ್ಕೆ ಬರಲು ಅವಕಾಶವಾಗುತ್ತದೆ.ರೈತಪರ ಯೋಜನೆಗಳ ಲಾಭ ಪಡೆದಿರುವವರು ನಮಗೆ ಮತ ಹಾಕುತ್ತಾರೆ. ಕಾಂಗ್ರೆಸ್‌ ಅಧಿಕಾರದ ಅವಧಿಯಲ್ಲಿ ರೈತರು ನಲುಗಿ ಹೋಗಿದ್ದಾರೆ. ರೈತರ ಆತ್ಮಹತ್ಯೆ ಹೆಚ್ಚಿವೆ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಏನು ಸಾಧನೆ ಆಗುವುದಿಲ್ಲ ಎಂದು ಜನರಿಗೆ ಗೊತ್ತಾಗಿದೆ. ಬಿಜೆಪಿ ಅಧಿಕಾರಕ್ಕೆ ತರಲು ಜನ ಕಾತರದಿಂದ  ಕಾಯುತ್ತಿದ್ದಾರೆ.

ನಿಮ್ಮ ಪಕ್ಷದ ಘೋಷಿತ ಅಭ್ಯರ್ಥಿಗಳು ಬದಲಾಗುವ ಸಾಧ್ಯತೆ ಇದೆಯೇ?

ಮಾನ್ವಿ ಕ್ಷೇತ್ರದಲ್ಲಿ ಸ್ವಲ್ಪ ಬದಲಾವಣೆ ಮಾಡಿದ್ದೇವೆ. ಸ್ಥಳೀಯರಿಗೆ ಆದ್ಯತೆ ನೀಡಬೇಕು ಎನ್ನುವ ಒತ್ತಡ ನಿರ್ಮಾಣವಾಗಿದ್ದರಿಂದ ಶರಣಯ್ಯ ಅವರಿಗೆ ಬಿ ಫಾರಂ ಕೊಡಲಾಗಿದ್ದು, ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ

ಬಿಜೆಪಿ ಅಧಿಕಾರಕ್ಕೆ ಬಂದರೆ ಜಿಲ್ಲೆಯ ಅಭಿವೃದ್ಧಿಗೆ ನಿಮ್ಮ ಆದ್ಯತೆ ಏನು?

ರಾಯಚೂರು ಜಿಲ್ಲೆಯು ತುಂಬಾ ಹಿಂದುಳಿದಿದೆ. ಎರಡು ನದಿಗಳಿದ್ದರೂ ನೀರಿನ ಸಮರ್ಪಕ ಲಾಭ ಜಿಲ್ಲೆಯ ಜನರಿಗೆ ತಲುಪಿಲ್ಲ. ಬ್ರಿಡ್ಜ್‌ ಕಂ ಬ್ಯಾರೇಜ್‌ಗಳನ್ನು ನಿರ್ಮಿಸಿ ಸಮಗ್ರ ನೀರಾವರಿ ಸೌಲಭ್ಯ ಒದಗಿಸುತ್ತೇವೆ. ಕೇಂದ್ರ ಸರ್ಕಾರ ರೂಪಿಸುವ ಪ್ರತಿಯೊಂದು ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದು. ಶೇ 40 ರಷ್ಟು ಜಮೀನು ಜಿಲ್ಲೆಯಲ್ಲಿ ಇನ್ನೂ ನೀರಾವರಿ ಆಗಿಲ್ಲ. ಬಡವರು ಹೆಚ್ಚಾಗಿರುವುದರಿಂದ ಅಭಿವೃದ್ಧಿಯ ಯೋಜನೆಗಳನ್ನು ರೂಪಿಸಿ ನೆರವು ಒದಗಿಸಲಾಗುವುದು. ಜನಪರ ಆಡಳಿತ ಕೊಟ್ಟು, ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT