ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕವನ್ನು ಸಿದ್ದರಾಮಯ್ಯ ಅವರಿಂದ, ದೇಶವನ್ನು ಮೋದಿಯಿಂದ ರಕ್ಷಿಸಬೇಕಾಗಿದೆ: ಓವೈಸಿ

Last Updated 9 ಮೇ 2018, 13:32 IST
ಅಕ್ಷರ ಗಾತ್ರ

ದಾವಣಗೆರೆ: ಕರ್ನಾಟಕವನ್ನು ಸಿದ್ದರಾಮಯ್ಯ ಅವರಿಂದ, ದೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದ ರಕ್ಷಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಅದಕ್ಕಾಗಿ ಎಲ್ಲೆಡೆ ಪ್ರಾದೇಶಿಕ ಪಕ್ಷಗಳು ಅಧಿಕಾರ ಹಿಡಿಯಬೇಕಿದೆ ಎಂದು ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಹೇಳಿದರು.

ಇಲ್ಲಿನ ಬೂದಾಳ್‌ ರಸ್ತೆಯ ಬಿ.ಎನ್‌. ಬಡಾವಣೆಯಲ್ಲಿ ಬುಧವಾರ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಅಮಾನುಲ್ಲಾ ಖಾನ್‌ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಈ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಮನೆಗೆ ಕಳಿಸಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ಬೈ ಬೈ ಮಾಡಿ’ ಎಂದು ಕರೆ ನೀಡಿದರು.

‘ನನ್ನನ್ನು ಕೋಮುವಾದಿ, ಪ್ರಚೋದನಕಾರಿ ಭಾಷಣಕಾರ ಎಂದು ಕಾಂಗ್ರೆಸ್‌ ಜರಿಯುತ್ತದೆ. ಆದರೆ, ಈಚೆಗೆ ಕಾಂಗ್ರೆಸ್‌ನ ಹಿರಿಯ ಮುಖಂಡ ಸಲ್ಮಾನ್‌ ಖುರ್ಷಿದ್‌, ಕಾಂಗ್ರೆಸ್‌ನ ಕೈಗಳಿಗೆ ಮುಸ್ಲಿಮರ ರಕ್ತದ ಕಲೆಗಳು ಅಂಟಿವೆ ಎಂದು ಹೇಳಿದ್ದಾರೆ. ಹಾಗಾದರೆ ಜಾತ್ಯತೀತವಾದಿಗಳು ಯಾರು’ ಎಂದು ಓವೈಸಿ ಪ್ರಶ್ನಿಸಿದರು.

‘ಈಚೆಗೆ ಜಮ್ಮುವಿನ ಕಟುವಾದಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಲಾಯಿತು. ಈ ಪ್ರಕರಣದ ಆರೋಪಿಗಳಲ್ಲೊಬ್ಬ ಗುಲಾಂ ನಬಿ ಆಜಾದ್‌ ಬೆಂಬಲಿಗ. ಇದು ಕಾಂಗ್ರೆಸ್‌ನ ಅಸಲಿ ಜಾತ್ಯತೀತ ಮುಖ’ ಎಂದು ಓವೈಸಿ ವಾಗ್ದಾಳಿ ನಡೆಸಿದರು.

‘ಕಾಂಗ್ರೆಸ್‌ ಪಕ್ಷವು ಮುಸ್ಲಿಮರಲ್ಲಿ ಭೀತಿ ಹುಟ್ಟಿಸಿ ದಶಕಗಳಿಂದ ಮತ ಹಾಕಿಸಿಕೊಳ್ಳುತ್ತಿದೆ. ಮುಂದೆ ಈ ಆಟ ನಡೆಯುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಿಗೂ ಹೆದರಬೇಕಾಗಿಲ್ಲ. ಮುಸ್ಲಿಮರು ಪ್ರಾದೇಶಿಕ ಪಕ್ಷಗಳಿಗೆ ಮತ ಹಾಕಿ’ ಎಂದು ಮನವಿ ಮಾಡಿದರು.

‘ದಲಿತರು, ಅಲ್ಪಸಂಖ್ಯಾತರ ಪರ ಎಂದು ಕಾಂಗ್ರೆಸ್‌ ಹೇಳಿಕೊಳ್ಳುತ್ತಿದೆ. ಆದರೆ, ಉತ್ತರ ಪ್ರದೇಶ ಬಿಟ್ಟರೆ ಅತಿಹೆಚ್ಚು ಕೋಮು ದೌರ್ಜನ್ಯ ಪ್ರಕರಣಗಳು ನಡೆದಿರುವುದು ಕರ್ನಾಟಕದಲ್ಲಿ. ಈಗಲಾದರೂ ಓಲೈಕೆ ರಾಜಕಾರಣ ಬಿಟ್ಟು ಅಲ್ಪಸಂಖ್ಯಾತರ, ದಲಿತರ ಉದ್ಧಾರಕ್ಕೆ ಶ್ರಮಿಸಿ’ ಎಂದು ಓವೈಸಿ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT