ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 11–9–1969

Last Updated 10 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಒಂದು ವಾರ ನಗರದ ಕಾಲೇಜುಗಳು ಬಂದ್

ಬೆಂಗಳೂರು, ಸೆ. 10– ಬೆಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಬರುವ ನಗರದ ಕಾಲೇಜುಗಳನ್ನು ನಾಳೆ (ಗುರುವಾರ)ಯಿಂದ 17ರವರೆಗೆ ಮುಚ್ಚಲು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ವಿ.ಕೆ. ಗೋಕಾಕ್ ಅವರು ತೀರ್ಮಾನಿಸಿದ್ದಾರೆ.

18ರಂದು ಮತ್ತೆ ಕಾಲೇಜುಗಳನ್ನು ತೆರೆಯಲಾಗುವುದೆಂದು ಅವರು ಈ ರಾತ್ರಿ ಪತ್ರಿಕಾ ಪ್ರತಿನಿಧಿಗಳಿಗೆ ಅವರ ತೀರ್ಮಾನವನ್ನು ಪ್ರಕಟಿಸಿದರು.

ಇಂದು ಸಂಜೆ ನಗರದ ಕಾಲೇಜುಗಳ ಪ್ರಿನ್ಸಿಪಾಲರುಗಳ ಸಭೆ ನಡೆದು, ವಿದ್ಯಾರ್ಥಿಗಳ ಮುಷ್ಕರದ ಪರಿಸ್ಥಿತಿಯನ್ನು ಪರಿಶೀಲಿಸಲಾಯಿತು.

ವಿದ್ಯಾರ್ಥಿಗಳು ಪ್ರಸ್ತುತ ಚಳವಳಿಯನ್ನು ನಿಲ್ಲಿಸಿ ಕಾಲೇಜುಗಳೆಲ್ಲವೂ ಯಥಾಸ್ಥಿತಿಯ ಕೆಲಸ ಮಾಡಲನುಕೂಲವಾಗುವಂತೆ ಶಾಂತಿಯುತ ವಾತಾವರಣವನ್ನು ಕಲ್ಪಿಸಬೇಕೆಂದು ಸಭೆ ವಿದ್ಯಾರ್ಥಿಗಳಿಗೆ ಮನವಿ ಮಾಡಿಕೊಂಡಿದೆ.

ಪ್ರಿನ್ಸಿಪಾಲರುಗಳ ಕಳವಳವನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಂಡು ಅವರುಗಳ ಮನವಿಗೆ ಓಗೊಡುವರೆಂದು ಆಶಿಸಿದ್ದಾರೆ.

ಲಾಟರಿ ರಾಜ್

ಮದ್ರಾಸ್, ಸೆ. 10– ಸ್ವಲ್ಪ ಆದಾಯಕ್ಕಾಗಿ ಜನರನ್ನು ನಾಶ ಮಾಡಲು ಪಾನ ನಿರೋಧ ಕಾರ್ಯಗತ ಮಾಡುವ ತೊಂದರೆ ತಪ್ಪಿಸಿಕೊಳ್ಳಲು ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರ್ಕಾರವು ರಾಜ್ಯ ಸರ್ಕಾರಗಳ ಮೂಲಕ ಎಲ್ಲ ಮದ್ಯದ ಅಂಗಡಿಗಳನ್ನೂ ಮತ್ತೆ ತೆರೆಯಿಸಿತೆಂದು ಶ್ರೀ ರಾಜಗೋಪಾಲಾಚಾರಿ ಟೀಕಿಸಿದ್ದಾರೆ.

‘ಸ್ವರಾಜ್ಯ’ ಪತ್ರಿಕೆಯ ಈ ವಾರದ ಸಂಚಿಕೆಯಲ್ಲಿ, ಇತರರ ಹಣದೊಡನೆ ಹತ್ತು ಲಕ್ಷ ಜನರಲ್ಲೊಬ್ಬ ಆಕರ್ಷಕ ಬಹುಮಾನ ಗಳಿಸುವ ಆಸೆ ಒಡ್ಡಿ ಸರ್ಕಾರವು ರಾಷ್ಟ್ರದಾದ್ಯಂತ ಲಾಟರಿ ಮನೋಭಾವ ಹುಟ್ಟಿಸಿದೆಯೆಂದೂ ಅವರು ಬರೆದಿದ್ದಾರೆ.

ಗಾಂಧೀಜಿ ಜೊತೆ ಇದ್ದವರಿಗೆ ಇದರಿಂದ ಅತೀವ ನೋವಾಗಿದೆಯೆಂದೂ ಅವರು ಹೇಳಿದ್ದಾರೆ.

ಪಾಕಿಸ್ತಾನಕ್ಕೆ ರಷ್ಯದ ಶಸ್ತ್ರಾಸ್ತ್ರ ಕೇವಲ ಕಲ್ಪನೆ: ಕೊಸಿಗಿನ್

ಕಲ್ಕತ್ತ, ಸೆ. 10– ಪಾಕಿಸ್ತಾನಕ್ಕೆ ರಷ್ಯದ ಶಸ್ತ್ರಾಸ್ತ್ರ ಸರಬರಾಜಿನ ಪ್ರಶ್ನೆಯ ಬಗ್ಗೆ ರಷ್ಯದ ಪ್ರಧಾನಿ ಕೊಸಿಗಿನ್ ಅವರು ಇಂದು ಇಲ್ಲಿ ಮಾತನಾಡುತ್ತಾ ಭಾರತ ಮತ್ತು ತಮ್ಮ ರಾಷ್ಟ್ರದ ನಡುವಣ ಸ್ನೇಹವನ್ನು ಬಯಸದವರ ಕಲ್ಪನೆ ಇದು ಎಂದು ಹೇಳಿದರು.

‘ಭಾರತದೊಡನೆ ನಮ್ಮ ಸ್ನೇಹ ದೃಢವಾದದ್ದು, ಇದನ್ನು ನಾವು ಎಲ್ಲದಕ್ಕಿಂತಲೂ ಹೆಚ್ಚಾಗಿ ಕಾಣುತ್ತೇವೆ. ಇದಕ್ಕೆ ಹಾನಿ ತರುವುದಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT