ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ, 22–8–1969

Last Updated 21 ಆಗಸ್ಟ್ 2019, 19:46 IST
ಅಕ್ಷರ ಗಾತ್ರ

ಕಾರ್ಯಕಾರಿ ಸಮಿತಿಗೆ ಮುರಾರ್ಜಿ– ಕಾಮರಾಜ್ ರಾಜೀನಾಮೆ ಸಂಭವ

ನವದೆಹಲಿ, ಆ. 21– ಕಾಂಗ್ರೆಸ್ ಅಧ್ಯಕ್ಷರ ನಿವಾಸದಲ್ಲಿ ಇಂದು ಸಂಜೆ ತೀವ್ರ ರಾಜಕೀಯ ಚಟುವಟಿಕೆಗಳು ಕಂಡು ಬಂದವು.

‌‘ಸಿಂಡಿಕೇಟ್’ ನಾಯಕರಾದ ಮುರಾರಜಿ ದೇಸಾಯಿ, ಎಸ್.ಕೆ. ಪಾಟೀಲ್, ಕಾಮರಾಜ್ ಮತ್ತು ಅತುಲ್ಯ ಘೋಷ್ ಇವರು ಒಂದು ಗಂಟೆಯ ದೀರ್ಘ ಚರ್ಚೆ ನಡೆಸಿದರು. ಇಂದಿರಾ ಗಾಂಧಿ ಹಾಗೂ ಅವರ ಸಂಪುಟದ ಇಬ್ಬರು ಹಿರಿಯ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಲು ಆಗದಿದ್ದರೆ ಕಾರ್ಯಕಾರಿ ಸಮಿತಿಗೆ ರಾಜೀನಾಮೆ ಕೊಡುವುದೇ ತಮಗೆ ಉಳಿದಿರುವ ಏಕೈಕ ಮಾರ್ಗವೆಂದು ಮುರಾರಜಿ ದೇಸಾಯಿ ಮತ್ತು ಕಾಮರಾಜ್ ಅವರು ಭಾವಿಸಿದರು.

ಇಂದಿರಾ ಸಸ್ಪೆನ್ಷನ್‌ಗೆ ಕಾನೂನಿನ ತೊಡಕು

ನವದೆಹಲಿ, ಆ. 21– ಕಾಂಗ್ರೆಸ್ ಹೈಕಮಾಂಡ್ ಪ್ರಧಾನಮಂತ್ರಿಯನ್ನು ಸಸ್ಪೆಂಡ್ ಮಾಡುವುದಕ್ಕೆ ಕಾನೂನಿನ ತೊಡಕುಗಳಿವೆ ಎಂದು ಹಿರಿಯ ಕಾಂಗ್ರೆಸ್ ಸದಸ್ಯ ವಿಶ್ವನಾಥರಾಯ್ ಅವರು ಇಂದು ಇಲ್ಲಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಶ್ರೀಮತಿ ಇಂದಿರಾ ಗಾಂಧಿಯವರನ್ನು ಸಸ್ಪೆಂಡ್ ಮಾಡಿದಲ್ಲಿ ಆಕೆ ಪ್ರಧಾನಮಂತ್ರಿಯಾಗಿ ಮುಂದುವರೆಯಲಾಗದೆಂದು ಮಾಜಿ ಉಪ ಪ್ರಧಾನಮಂತ್ರಿ ಮುರಾರಜಿ ದೇಸಾಯಿಯವರು ಇತ್ತೀಚೆಗೆ ಹೇಳಿದ್ದನ್ನು ಪ್ರಸ್ತಾಪಿಸಿರುವ ವಿಶ್ವನಾಥ್ ರಾಯ್‌ ಅವರು ‘ಹೈಕಮಾಂಡ್ ಪಕ್ಷದ ಸದಸ್ಯರು ಅಥವಾ ಅಧಿಕಾರ ವರ್ಗದವರ ವಿರುದ್ಧ ಮಾತ್ರ ಕ್ರಮ ತೆಗೆದುಕೊಳ್ಳಬಹುದು. ಪ್ರಜಾಪ‍್ರಭುತ್ವವಿರುವ ರಾಷ್ಟ್ರದಲ್ಲಿ ಸಂವಿಧಾನದ ಪ್ರಕಾರ ವಯಸ್ಕರ ಮತದಾನದ ಆಧಾರದ ಮೇಲೆ ಆಯ್ಕೆಯಾಗಿರುವ ಜನತಾ ಪ್ರತಿನಿಧಿಗಳಿಗೆ ಹೈಕಮಾಂಡ್ ಏನು ಮಾಡಬೇಕೆಂಬುದನ್ನು ಆಜ್ಞೆ ಮಾಡಲಿಕ್ಕಾಗದು’ ಎಂದು ಹೇಳಿದ್ದಾರೆ.

‘ಪ್ರಧಾನ ಮಂತ್ರಿ ಸಂಸತ್ ಸದಸ್ಯರಿಂದ ಆಯ್ಕೆಗೊಂಡಿರುವ ನಾಯಕ. ಪ್ರಧಾನಮಂತ್ರಿ ಸಂಸತ್ ಸದಸ್ಯರ ವಿಶ್ವಾಸಕ್ಕೆ ಪಾತ್ರರಾಗಿರುವವರೆಗೆ ಮತ್ತು ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಗೆ ಬದ್ಧರಾಗಿರುವವರೆಗೆ ಅವರು ಸಂವಿಧಾನದ ಹೊಣೆಗಾರಿಕೆಯಿಂದ ಹಿಂದೆಗೆಯಲಾಗದು’ ಎಂದು ಅವರು ತಿಳಿಸಿದ್ದಾರೆ.

‘ಮುದ್ದಿನ ಮಗಳು’

ನವದೆಹಲಿ, ಆ. 21– ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರು ಇಂದು ಬೆಳಿಗ್ಗೆ ಇಲ್ಲಿ, ರಾಷ್ಟ್ರಪತಿಗಳಾಗಿ ಚುನಾಯಿತರಾದ ವಿ.ವಿ. ಗಿರಿಯವರನ್ನು ಭೇಟಿ ಮಾಡಿ ಔಪಚಾರಿಕವಾಗಿ ಕುಶಲ ಸಂಭಾಷಣೆ ನಡೆಸಿದರು.

‘ನಮ್ಮ ಮುದ್ದಿನ ಮಗಳು’ ಎಂದು ಸಂಬೋಧಿಸಿ ಶ್ರೀಮತಿ ಸರಸ್ವತಿ ಗಿರಿ ಅವರು ಇಂದಿರಾ ಗಾಂಧಿಯವರನ್ನು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT