ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 21–5–1969

Last Updated 20 ಮೇ 2019, 18:30 IST
ಅಕ್ಷರ ಗಾತ್ರ

ಮೈಸೂರು–ಮಹಾರಾಷ್ಟ್ರ ವಿವಾದ: ಪಾಟಸ್ಕರ್ ವಿಧೇಯಕಕ್ಕೆ ಇಂದಿರಾ ಮನ್ನಣೆ?

ಮುಂಬೈ, ಮೇ 20– ಪಾಟಸ್ಕರ್ ವಿಧೇಯಕ ಪರಿಶೀಲಿಸಲು ಪ್ರಧಾನಿ ಇಂದಿರಾ ಗಾಂಧಿ ಭರವಸೆ ಇತ್ತಿರುವುದಾಗಿ ವರದಿಯಾಗಿದೆ.

20 ನಿಮಿಷ ಇಂದು ಇಂದಿರಾ ಗಾಂಧಿ ಅವರನ್ನು ಭೇಟಿ ಮಾಡಿದ ಪುಣೆ ವಿಶ್ವವಿದ್ಯಾನಿಲಯದ ಉಪಕುಲಪತಿ ಎಸ್.ವಿ. ಪಾಟಸ್ಕರ್, ಮೈಸೂರು–ಮಹಾರಾಷ್ಟ್ರ ಗಡಿ ಕುರಿತು ರಚಿಸಿರುವ ವಿಧೇಯಕವನ್ನು ಸಂವಿಧಾನದ 3ನೇ ವಿಧಿ ಅನುಸಾರ ಸಂಸತ್ತಿನ ಮುಂದಿಡಲು ರಾಷ್ಟ್ರಪತಿ ಅವರಿಗೆ ಸಲ್ಲಿಸಬೇಕೆಂದು ಪ್ರಾರ್ಥಿಸಿ, ವಿಧೇಯಕದ ನಕಲನ್ನು ಅವರಿಗಿತ್ತರು.

ನನೆಗುದಿಗೆ ಬಿದ್ದಿರುವ ಗಡಿ ವಿವಾದದಲ್ಲಿ ಅಂತಿಮ ನಿರ್ಧಾರ ಕೈಕೊಳ್ಳಲು ಸಂಸತ್ತಿಗೆ ಮಾತ್ರವೇ ಅಧಿಕಾರವಿದೆಯೆಂದು ಅವರು ಶ್ರೀಮತಿ ಗಾಂಧಿ ಅವರಿಗೆ ಪ್ರತ್ಯೇಕ ಪತ್ರದಲ್ಲಿ ತಿಳಿಸಿದ್ದಾರೆ.

ಎರಡು ರಾಜ್ಯಗಳ ಜನತೆಯಲ್ಲುಂಟಾಗಿರುವ ಕಹಿ ಭಾವನೆಗಳ ಅಂತ್ಯಕ್ಕೆ ಗಡಿ ವಿವಾದದ ಶೀಘ್ರ ಇತ್ಯರ್ಥ ಬಹು ಅಗತ್ಯ ಎಂದು ಅವರು ಒತ್ತಾಯಪಡಿಸಿದರೆಂದು ಹೇಳಲಾಗಿದೆ.

ವಿಧೇಯಕದ ನಕಲುಗಳನ್ನು ವೈಯಕ್ತಿಕವಾಗಿ ತಾವು, ರಾಷ್ಟ್ರಪತಿ, ಉಪಪ್ರಧಾನಮಂತ್ರಿ ದೇಸಾಯ್‌ ಮತ್ತು ಕೇಂದ್ರ ಗೃಹ ಸಚಿವ ಚವಾಣ್‌ರಿಗೆ ಕಳುಹಿಸಲಿರುವುದಾಗಿ ಶ್ರೀ ಪಾಟಸ್ಕರ್‌ ಪತ್ರಕರ್ತರಿಗೆ ತಿಳಿಸಿದರು.

ಅಪೊಲೊ–10 ದೋಷರಹಿತ ಯಾನ

ಸ್ಪೇಸ್ ಸೆಂಟರ್ (ಹೂಸ್ಟನ್), ಮೇ 20– ಚಂದ್ರನತ್ತ ಕರಾರುವಾಕ್ಕಾಗಿ ಧಾವಿಸುತ್ತಿರುವ ಅಮೆರಿಕದ ಅಪೊಲೊ–10 ಇಂದು ಅಂತರಿಕ್ಷದ ಕರಾಳ ಗರ್ಭದಲ್ಲಿ ಇನ್ನಷ್ಟು ಮುಂದೊತ್ತಿ ಹೋಯಿತು.

ಭೂಮಿ ಹಿಂದೆ ಹಿಂದೆ ಸರಿದಂತೆ ಅಪೊಲೊ–10ರ ಗುರಿ, ಬೆಳ್ಳಿಯ ಬೆಳಕಿನ ಒಂದು ತುಣುಕು ವಿಸ್ತರಿಸುತ್ತಾ ಬಂತು.

ರಷ್ಯ, ಅಮೆರಿಕ ವಿರುದ್ಧ ಯುದ್ಧಕ್ಕೆ ಚೀನ ಪೂರ್ಣ ಸಿದ್ಧ

ಹಾಂಕಾಂಗ್, ಮೇ 20– ಅಮೆರಿಕ ಮತ್ತು ರಷ್ಯದ ವಿರುದ್ಧ ಯುದ್ಧಕ್ಕೆ ಚೀನ ಪೂರ್ಣ ಸಿದ್ಧವಾಗಿದೆ ಎಂದು ಚೀನ ಕಮ್ಯುನಿಸ್ಟ್ ಪಕ್ಷದ ತಾತ್ವಿಕ ಪತ್ರಿಕೆ ‘ರೆಡ್‌ಫ್ಲಾಗ್’ ತಿಳಿಸಿದೆ.

ಈ ಪತ್ರಿಕೆಯಲ್ಲಿ ಸೈನಾಧಿಕಾರಿಯೊಬ್ಬರು ಬರೆದಿರುವ ಲೇಖನವೊಂದರಲ್ಲಿ ಈ ವಿಷಯವನ್ನು ವಿವರಿಸಲಾಗಿದೆಯಲ್ಲದೆ, ಚೀನಿ ಸೈನ್ಯ ಹಿಂದೆಂದಿಗಿಂತಲೂ ಈಗ ತುಂಬಾ ಬಲಿಷ್ಠವಾಗಿದೆ ಎಂದು ತಿಳಿಸಲಾಗಿದೆ.

ಅಮೆರಿಕ ಸಾಮ್ರಾಜ್ಯವಾದಿಗಳು ಮತ್ತು ರಷ್ಯದ ಪರಿಷ್ಕರಣವಾದಿಗಳು, ಆಕ್ರಮಣಕಾರಕ ಯುದ್ಧವನ್ನು ಪ್ರಾರಂಭಿಸುವುದರಲ್ಲಿ ಆಸಕ್ತಿ ತಳೆದಿದ್ದರೆ ಅವರು ಇನ್ನೂ ಹೆಚ್ಚು ವಿಪತ್ಕಾರಕ ಪರಾಭವಗಳನ್ನು ಅನುಭವಿಸಬೇಕಾಗುತ್ತದೆಯಲ್ಲದೆ ತಮ್ಮ ಸರ್ವನಾಶಕ್ಕೆ ತಾವೇ ಕಾರಣವಾಗುತ್ತಾರೆ ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT