ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಶಂಕರ ಜಾತ್ರೆಯಲ್ಲಿ ಸೋಗುಗಳ ಸಂಗಮ

Last Updated 15 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಜಾತ್ರೆ ಎಂದೊಡನೆ ಧಾರ್ಮಿಕ, ಸಾಂಸ್ಕೃತಿಕ ಕಲರವ ಸಹಜ. ಆದರೆ ಬಸವನಬಾಗೇವಾಡಿ ತಾಲ್ಲೂಕಿನ ಯರನಾಳ ಗ್ರಾಮದ ಗೌರಿಶಂಕರ ಜಾತ್ರೆ ಹಲವು ವಿಶೇಷತೆ ಒಳಗೊಂಡಿದೆ.

ಛೆಟ್ಟಿ ಅಮಾವಾಸ್ಯೆ ಮರು ದಿನದಿಂದ (ಡಿ. 8ರಿಂದ 13ರವರೆಗೆ) ನಿತ್ಯ ರಾತ್ರಿ 10ರಿಂದ, ಮಧ್ಯರಾತ್ರಿ 1ಗಂಟೆವರೆಗೂ ವಿವಿಧ ಸೋಗುಗಳನ್ನು ಹಾಕಿದ ಯುವಕರು, ಹಿರಿಯರು ಗ್ರಾಮಸ್ಥರನ್ನು ರಂಜಿಸಿದರು.

ಸೋಗು ಹಾಕುವವರು ಮೊದಲನೇ ದಿನ ಗ್ರಾಮಸ್ಥರ ಕ್ಷಮೆ ಕೇಳುವುದು ಹಿಂದಿನಿಂದ ಬಂದ ವಾಡಿಕೆ. ಕ್ಷಮೆ ಕೇಳುವುದರಲ್ಲೂ ಒಂದು ಅರ್ಥವಿದೆ. ‘ನಮ್ಮದು ಎಲುಬಿಲ್ಲದ ನಾಲಿಗೆ, ನಾವು ಏನು ಬೇಕಾದರೂ ಮಾತನಾಡುತ್ತೇವೆ. ನಮ್ಮನ್ನು ಕ್ಷಮಿಸಿ ಬಿಡಿ’ ಎಂದು ಕೇಳಿಕೊಳ್ಳುವ ಸೋಗುದಾರರು ಬೈಗುಳಗಳ ಸುರಿಮಳೆಗೈಯುತ್ತಾರೆ.

ಇವರ ಬೈಗುಳಗಳನ್ನು ಕೇಳುವ ಗ್ರಾಮಸ್ಥರು ಸಿಟ್ಟಿಗೆಳದೇ ನಗು ನಗುತ್ತಲೇ ತಮ್ಮ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಸೋಗುದಾರರು ಹಾಸ್ಯ ಮಾಡಿ ರಂಜಿಸುವುದು ಒಂದು ಕಡೆಯಾದರೆ; ಇನ್ನೊಂದೆಡೆ ಸಮಾಜದಲ್ಲಿನ ಅವ್ಯವಸ್ಥೆಗಳನ್ನು ಎತ್ತಿ ತೋರಿಸುವ ಕೆಲಸವು ಇಲ್ಲಿ ನಡೆಯುತ್ತದೆ ಎಂದು ಸೋಗು ಹಾಕಿಕೊಳ್ಳುವವರು ಹೇಳುತ್ತಾರೆ.

ನಿತ್ಯವೂ ಒಂದೊಂದು ಸೋಗುಗಳ ಮೂಲಕ ಗ್ರಾಮಸ್ಥರನ್ನು ರಂಜಿಸುವುದರೊಂದಿಗೆ ಭಾರತೀಯ ಸಂಪ್ರದಾಯ, ಜನಪದರ ಜೀವನ ಶೈಲಿ, ವೃತ್ತಿಗಳನ್ನು ತಿಳಿಸಿಕೊಡುವುದರೊಂದಿಗೆ ವ್ಯವಸ್ಥೆಗಳನ್ನು ಹದಗೆಡಿಸುತ್ತಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಪ್ರಸಂಗಗಳು ಈ ಸಂದರ್ಭ ನಡೆದವು.

ಜೋಕಮಾರನ ಸೋಗು ಹಾಕಿಕೊಂಡವರು ಮನೆ ಮನೆಗೆ ತೆರಳಿ ಅದರ ಮಹತ್ವ ತಿಳಿಸಿಕೊಡುತ್ತಾರೆ. ವರ್ಷದ ಮಳೆ ಬೆಳೆ ಕುರಿತಾದ ಹಾಗೂ ವರ್ಷದ ಆಗು ಹೋಗುಗಳ ಬಗ್ಗೆ ಭವಿಷ್ಯ ನುಡಿಯುವ ವೇಷಧಾರಿಗಳು ರಾತ್ರಿ ಗ್ರಾಮ ಸುತ್ತಿ ಭವಿಷ್ಯ ನುಡಿಯುವುದನ್ನು ಆಲಿಸಲು ಎಲ್ಲರೂ ಕಾತರದಿಂದ ಕಾದಿದ್ದು ವಿಶೇಷವಾಗಿತ್ತು.

ತಲೆಯ ಮೇಲೆ ದುರಗಮುರಗವ್ವ ದೇವಿಯನ್ನು ಹೊತ್ತು ವಾದ್ಯದೊಂದಿಗೆ ಗ್ರಾಮದಲ್ಲಿ ಸುತ್ತುವ ಸೋಗುಧಾರಿಗಳು, ಅಂಧರು ತಮ್ಮ ಹೊಟ್ಟೆ ಪಾಡಿಗಾಗಿ ಭಿಕ್ಷೆ ಬೇಡುವ ಸೋಗು. ಮಡಿವಂತರು ಕೆಳವರ್ಗದವರನ್ನು ಕೀಳಾಗಿ ಕಾಣುವ ಪ್ರಸಂಗಗಳು, ಕೊಡ ಹೊತ್ತುಕೊಂಡ ಯಲ್ಲಮ್ಮಗಳ ಮೆರವಣಿಗೆಯ ಸೋಗು... ಹೀಗೆ ಬಗೆ ಬಗೆಯ ಸೋಗುಧಾರಿಗಳು ಗ್ರಾಮಸ್ಥರನ್ನು ರಂಜಿಸಿದರು.

ಸೋಗುಧಾರಿಗಳು ಮೇಲ್ವರ್ಗ, ಕೆಳವರ್ಗ ಎಂಬ ಎರಡು ಗುಂಪುಗಳ ಸೈನ್ಯದ ವೇಷ ಹಾಕಿಕೊಂಡು, ಯುದ್ಧದ ಸನ್ನಿವೇಶ ಬಿಂಬಿಸುತ್ತಾರೆ. ಈ ಯುದ್ಧದಲ್ಲಿ ಕೆಳವರ್ಗದವರು ಗೆಲುವು ಸಾಧಿಸುವ ಮೂಲಕ, ಅಧಿಕಾರ ಹಿಡಿಯುವ ಪ್ರಸಂಗವನ್ನು ಮನ ಮುಟ್ಟುವಂತೆ ತಿಳಿಸಲಾಯಿತು.

ರಾಡಿ ಓಕಳಿಯಾಟ

ಹತ್ತು ಮಂದಿಯಲ್ಲಿ ತಲಾ ಐವರು ಪುರುಷರು–ಮಹಿಳೆಯರ ವೇಷ ಹಾಕಿಕೊಂಡಿರುತ್ತಾರೆ. ತಗ್ಗು ತೋಡಿ ಅದರೊಳಗೆ ನೀರು ಹಾಕುತ್ತಾರೆ. ಅದರಲ್ಲಿನ ರಾಡಿ ನೀರನ್ನು ಪುರುಷ ವೇಷಧಾರಿಗಳು, ಮಹಿಳೆಯರ ಸೋಗು ಹಾಕಿಕೊಂಡ ಪುರುಷರಿಗೆ ಎರಚಲು ಯತ್ನಿಸುತ್ತಾರೆ. ಮಹಿಳಾ ವೇಷಧಾರಿಗಳು ತಪ್ಪಿಸಿಕೊಳ್ಳುವ ಯತ್ನ ನಡೆಯುತ್ತದೆ. ಹೀಗೆ ಪರಸ್ಪರ ಓಕಳಿಯಾಟ ಗ್ರಾಮಸ್ಥರನ್ನು ನಗೆಗಡಲಲ್ಲಿ ತೇಲಿಸುತ್ತದೆ.

ಜಾತ್ರೆಯ ದಿನ (ಡಿ.13 ರಂದು) ದೇವಿ ಸೋಗು, ದ್ಯಾಮವ್ವ ಸೋಗು, ರಾಮ ಲಕ್ಷ್ಮಣರ ಸೋಗು, ಪರಮಾತ್ಮರ ಸೋಗಿನ ಮೆರವಣಿಗೆ ನಡೆಯಿತು. ಗ್ರಾಮದ ನಾಲ್ಕು ಬಡಾವಣೆಗಳಿಂದ ಪ್ರತ್ಯೇಕವಾಗಿ ಒಂದೊಂದು ಸೋಗು ಹೊತ್ತ ಬಂಡಿಗಳ ಮೆರವಣಿಗೆಯು ಕುದುರೆ ಕುಣಿತ ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ಸಾಗಿತು.

ಹಲವು ದಿನ ನಡೆಯುವ ವಿವಿಧ ಸೋಗುಗಳ ಸಂಭ್ರಮಕ್ಕೆ ಅಗತ್ಯವಿರುವ ವೇಷ, ಭೂಷಣಗಳು, ಅಲಂಕಾರ ಹೇಗಿರಬೇಕು ಎಂಬುದನ್ನು ಗ್ರಾಮಸ್ಥರೇ ನಿರ್ಧರಿಸಿ. ಸೋಗುಧಾರಿಗಳಿಗೆ ಅಲಂಕಾರ ಮಾಡುತ್ತಾರೆ. ಸೋಗಾದಾರರು ತಮ್ಮ ಸನ್ನಿವೇಶವನ್ನು ಪ್ರಚುರ ಪಡಿಸುವುದನ್ನು ನೋಡಿದ ಅಪರಿಚಿತರಿಗೆ ಸದ್ಯ ನಡೆಯುತ್ತಿರುವ ಪ್ರಸಂಗ ಎಂಬಂತೆ ನೈಜತೆಯಿಂದ ಕೂಡಿರುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

‘ನಮ್ಮೂರಲ್ಲಿ ಶತಮಾನದ ಹಿಂದಿನಿಂದಲೂ ಈ ಸಂಪ್ರದಾಯ ನಡೆದು ಬಂದಿದೆ. ಗೌರಿಶಂಕರ ಜಾತ್ರೆ ಒಂದು ತಿಂಗಳು ಇದೆ ಎನ್ನುವಾಗಲೇ ಗ್ರಾಮಸ್ಥರೆಲ್ಲರೂ ಸೇರಿ ಸಿದ್ಧತೆಯಲ್ಲಿ ತೊಡಗಿಕೊಳ್ಳುತ್ತಾರೆ. ಪ್ರತಿ ಮನೆಯಲ್ಲಿ ಒಬ್ಬರಾದರೂ ಸೋಗು ಹಾಕಿಕೊಳ್ಳುತ್ತಾರೆ. ಹಿರಿಯರು ಹಾಕಿಕೊಟ್ಟ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಹೋಗುವುದರೊಂದಿಗೆ ಇಂದಿನ ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸುವ ಕೆಲಸ ಮಾಡುತ್ತಿದ್ದೇವೆ’ ಎಂದು ಗ್ರಾಮದ ಸಿದ್ರಾಮಪ್ಪ ಮಾಗಿ, ಶಾಂತು ಏಳಕಿ, ಗುರಪ್ಪ ಕಾಳಗಿ ತಿಳಿಸಿದರು.

ಪ್ರಕಾಶ ಎನ್.ಮಸಬಿನಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT