ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗೂರು ರಾಮಚಂದ್ರಪ್ಪ ಸಂದರ್ಶನ: ವಯಸ್ಸನ್ನು ಜ್ಞಾಪಿಸಬೇಡಿ...

Last Updated 6 ಮಾರ್ಚ್ 2022, 2:04 IST
ಅಕ್ಷರ ಗಾತ್ರ

ಕನ್ನಡದ ಬಹುಮುಖ್ಯ ಚಿಂತಕ–ಲೇಖಕರಲ್ಲಿ ಒಬ್ಬರಾದ ಬರಗೂರು ರಾಮಚಂದ್ರಪ್ಪ ಅವರು ಮಾತು, ಬರಹ, ಚಿಂತನೆ ಮತ್ತು ಕ್ರಿಯೆಯಲ್ಲಿ ಸದಾ ಕ್ರಿಯಾಶೀಲವಾಗಿ ತೊಡಗಿಸಿಕೊಂಡವರು. ಕಥೆ, ಕಾವ್ಯ, ಕಾದಂಬರಿ, ವಿಮರ್ಶೆ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಿಗೆ ಅರ್ಥಪೂರ್ಣವಾದ ಕೊಡುಗೆ ನೀಡಿದವರು. ಬಂಡಾಯ ಸಾಹಿತ್ಯ ಸಂಘಟನೆಯನ್ನು ಮುಂಚೂಣಿಯಲ್ಲಿ ನಿಂತು ರೂಪಿಸಿದವರಲ್ಲಿ ಒಬ್ಬರು. ಶ್ರಮ ಮತ್ತು ಸೃಜನಶೀಲತೆಯ ಸಂಬಂಧವನ್ನು ಕಾಯ್ದಿಟ್ಟುಕೊಂಡವರು. ಅಧ್ಯಾಪಕರಾಗಿ, ಸಿನಿಮಾ ನಿರ್ದೇಶಕರಾಗಿ, ಆಡಳಿತಗಾರರಾಗಿ ನಾಡು–ನುಡಿಯನ್ನು ಕಟ್ಟುವ ಕೆಲಸದಲ್ಲಿ, ಜನಪರ ಮನಸ್ಸುಗಳನ್ನು ರೂಪಿಸುವ ಕ್ರಿಯೆಯಲ್ಲಿ ದಣಿವರಿಯದ ದುಡಿಮೆ ಅವರದು. ಸ್ಪಷ್ಟ ನಿಲುವು, ಖಚಿತ ಮಾತುಗಳಿಗೆ ಹೆಸರಾದ ಬರಗೂರು ಅವರ ಸಮಗ್ರ ಸಾಹಿತ್ಯ ಸಂಪುಟ ‘ಬೆವರು ನನ್ನ ದೇವರು’ ಈ ತಿಂಗಳ 12ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಜನಾರ್ಪಣೆ ಆಗಲಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಚೇತನದೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

***

* ಸರ್ವಾಧಿಕಾರಿ ಧೋರಣೆಗಳೇ ವಿಜೃಂಭಿಸುತ್ತಿರುವ ಈ ಹೊತ್ತಲ್ಲಿ ಲೇಖಕರ ಜವಾಬ್ದಾರಿ ಏನು?
ಸಂವಿಧಾನಾತ್ಮಕ ಆಶಯಗಳನ್ನು ಕೇಂದ್ರವಾಗಿಟ್ಟುಕೊಂಡೇ ಸರ್ವಾಧಿಕಾರಕ್ಕೆ ನಾವು ಎದುರಾಗಬೇಕು. ಎಲ್ಲ ರೀತಿಯ ಸರ್ವಾಧಿಕಾರಗಳನ್ನು ವಿರೋಧಿಸಬೇಕು– ಅದು ಜಾತಿ ಮೂಲವಾದ ಸಾಮಾಜಿಕ ಸರ್ವಾಧಿಕಾರ ಆಗಿರಲಿ, ಧರ್ಮ ಮೂಲವಾದ ಸಾಂಸ್ಕೃತಿಕ ಸರ್ವಾಧಿಕಾರ ಆಗಿರಲಿ ಅಥವಾ ಅಧಿಕಾರ ಮೂಲವಾದ ರಾಜಕೀಯ ಸರ್ವಾಧಿಕಾರ ಆಗಿರಲಿ.

ಸಾಹಿತಿಗಳಾದ ನಾವು ಜನರಿಂದ ಮನ್ನಣೆ ನಿರೀಕ್ಷಿಸುತ್ತೇವೆ. ಜನ ನಮ್ಮಿಂದ ಜವಾಬ್ದಾರಿ ನಿರೀಕ್ಷಿಸುತ್ತಾರೆ. ಯಾವುದೋ ಒಂದು ಪಕ್ಷ ಇಲ್ಲವೇ ಮುಖಂಡನನ್ನು ವಿರೋಧಿಸುವುದು ಆದ್ಯತೆಯಾಗದೆ ಸತ್ಯವನ್ನು ಜನರಿಗೆ ಮನವರಿಕೆ ಮಾಡಿಕೊಡುವುದೇ ಆದ್ಯತೆ ಆಗಬೇಕು.

* ಯುವ ಸಮುದಾಯವು ಮುಕ್ತ ಚರ್ಚೆ– ಸಂವಾದಗಳಿಗೆ ಬೆನ್ನು ತಿರುಗಿಸಿ ನಿಂತಿರುವಂತೆ ಭಾಸವಾಗುತ್ತಿದೆ. ಇದಕ್ಕೆ ಕಾರಣ ಏನಿರಬಹುದು?
ಇದಕ್ಕೆ ಶಿಕ್ಷಣ ವ್ಯವಸ್ಥೆ, ಸಾಮಾಜಿಕ ಮತ್ತು ರಾಜಕೀಯ ಸಂದರ್ಭಗಳು ಕಾರಣ. ಶಿಕ್ಷಣ ಕ್ಷೇತ್ರದಲ್ಲಿ ಬದ್ಧತೆ ಕಡಿಮೆಯಾಗಿದೆ. ಶಿಕ್ಷಣ ಯಾಂತ್ರಿಕವಾಗಿದೆ. ವಿಚಾರಮಂಥನಕ್ಕೆ ಅವಕಾಶ ಇಲ್ಲದಿರುವುದೇ ಹೆಚ್ಚು. ಇದನ್ನು ಜಾತಿ– ಧರ್ಮದ ಶಕ್ತಿಗಳು ದುರುಪಯೋಗ ಮಾಡಿಕೊಳ್ಳುತ್ತಿವೆ. ಪ್ರಗತಿಪರ ಪ್ರತಿರೋಧದ ಶಕ್ತಿ ಹಿಂದಿನಷ್ಟು ಪ್ರಖರವಾಗಿಲ್ಲ. ಜಾಗತೀಕರಣವು ನಮ್ಮ ಮನಃಸ್ಥಿತಿಯಲ್ಲಿಪರೋಕ್ಷವಾಗಿ ಸ್ವಾರ್ಥ ತುಂಬಿದೆ. ಸಮೂಹಪ್ರಜ್ಞೆ ಜಾಗದಲ್ಲಿ ವ್ಯಕ್ತಿಪ್ರಜ್ಞೆ ಬಂದು ಕುಳಿತಿದೆ. ‘ನಾನು ಚೆನ್ನಾಗಿದ್ದಾರೆ ಸಾಕು’ ಎಂಬ ಭಾವ ಬೆಳೆದಿದೆ. ಯುವಪೀಳಿಗೆಯು ಸಮೂಹಸನ್ನಿಗೆ ಬಲಿಯಾಗುತ್ತಿದೆ.

* ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಬರವಣಿಗೆಯ ಕೃಷಿ ಮಾಡಿದ್ದೀರಿ. ಅವುಗಳಲ್ಲಿ ನಿಮಗೆ ಇಷ್ಟವಾದ ಕೃತಿ ಅಥವಾ ಬರಹ ಯಾವುದು?
ನನ್ನ ಒಟ್ಟು ಸಾಹಿತ್ಯ ಕೃಷಿಯೇ ಒಂದು ಕೃತಿ. ಅದರಲ್ಲಿ ಒಂದು ಗ್ರಾಫ್ ಇದೆ. ನಿರ್ದಿಷ್ಟ ಆಶಯದ ಬೆಳವಣಿಗೆಯನ್ನು ಅದರಲ್ಲಿ ಕಾಣಬಹುದು. ಕೆಲವು ಸಲ ಬೆಳೆ ಚೆನ್ನಾಗಿ ಬಂದಿರಬಹುದು. ಕೆಲವೊಮ್ಮೆ ಚೆನ್ನಾಗಿ ಬಾರದೇ ಇದ್ದಿರಬಹುದು. ಇಷ್ಟಾಗಿಯೂ ವೈಚಾರಿಕ ಬರಹಗಳು ನನಗೆ ಯಾವಾಗಲೂ ಇಷ್ಟ. ಇತ್ತೀಚಿನ ದಿನಗಳಲ್ಲಿ ಬರೆದಂತಹ ‘ಮರಣ ದಂಡನೆ’, ‘ಶಬರಿ’, ಕಸ್ತೂರ್‌ಬಾ vs ಗಾಂಧಿ’ಯಂಥ ಕಾದಂಬರಿಗಳು ಕೂಡ ಇಷ್ಟ. ಇಲ್ಲೆಲ್ಲ ಇನ್ನಷ್ಟು ಮಾಗಿದ್ದೇನೆ ಅಂತ ಅನಿಸುತ್ತದೆ.

ವೈಚಾರಿಕ ಬರಹಗಾರ ಎಂದು ಬ್ರ್ಯಾಂಡ್‌ ಆದ ಕಾರಣಕ್ಕೋ ಏನೋ ನನ್ನ ಸೃಜನಶೀಲ ಬರವಣಿಗೆ ಕುರಿತಂತೆ ತುಂಬಾ ಗಮನಾರ್ಹ ವಿಮರ್ಶೆ ಬರಲಿಲ್ಲವೇನೋ ಅಂತ ಅನಿಸುತ್ತದೆ. ಅದರಲ್ಲೂ ವಿಶೇಷವಾಗಿ ಕಾವ್ಯದ ಕುರಿತು. ಕವಿ ಮನಸ್ಸು ಇಲ್ಲದೇ ಇದ್ದರೆ ನಾನು ಉತ್ತಮ ವೈಚಾರಿಕ ಲೇಖಕ ಆಗಲಿಕ್ಕೇ ಆಗುತ್ತಿರಲಿಲ್ಲ.

ನನ್ನೊಳಗೆ ಕವಿ ಸದಾ ಇದ್ದೇ ಇದ್ದಾನೆ. ನನ್ನ ಕಾವ್ಯವನ್ನು ವಿಮರ್ಶಕರು ಮರುಪರಿಶೀಲನೆ ಮಾಡಬೇಕು.

* ಬರವಣಿಗೆಗೆ ಪ್ರೇರಣೆ ಸಿಕ್ಕಿದ್ದು ಎಲ್ಲಿಂದ?
ಶಾಲಾ ದಿನಗಳಲ್ಲೇ ಅಂತಹದೊಂದು ಪ್ರೇರಣೆಗೆ ಒಳಗಾಗಲು ರವೀಂದ್ರನಾಥ ಟ್ಯಾಗೋರ್ ಅವರ ಅನುವಾದಿತ ಕೃತಿ ‘ನನ್ನ ಬಾಲ್ಯ’ ಕಾರಣ. ನಮಗೆ ಅದು ಉಪಪಠ್ಯವಾಗಿತ್ತು. ಪದ್ಯ ಓದಿದರೆ ಸಹಪಾಠಿಗಳಿಂದ ಚಪ್ಪಾಳೆ, ಶಿಕ್ಷಕರಿಂದ ಮೆಚ್ಚುಗೆ ದೊರೆಯುತ್ತದೆ ಎಂದು ಅದರಲ್ಲಿದ್ದ ಒಂದು ಅಂಶ ಮನಸ್ಸಿಗೆ ನಾಟಿತು. ಬರವಣಿಗೆ ಬಗೆಗೆ ಒಲವು ಮೂಡಲು ಇದು ಕಾರಣವಾಯಿತು.

ಶಿಕ್ಷಣ ಮತ್ತು ಸಾಹಿತ್ಯ ಕುರಿತು ಆಸಕ್ತಿ ಹುಟ್ಟಿದ್ದು ಮೂಲತಃ ಅಸ್ಮಿತೆಯ ಹುಡುಕಾಟದ ನೆಲೆಯಲ್ಲಿ. ಚೆನ್ನಾಗಿ ಓದಿದರೆ ಊರಿನಲ್ಲಿ ಜಾತಿಮತ ಭೇದವಿಲ್ಲದೆ ಎಲ್ಲರೂ ಗಮನಿಸುತ್ತಾರೆ ಎಂಬ ಹಂಬಲ ಓದಿನ ಬಗ್ಗೆ ಒಲವು ಹೆಚ್ಚಲು ಕಾರಣವಾಯಿತು. ಅಸ್ಮಿತೆಯ ಸಮಸ್ಯೆಯನ್ನೇ ಆತ್ಮವಿಶ್ವಾಸವಾಗಿ ಪರಿವರ್ತಿಸಿಕೊಳ್ಳುವುದು ಹೇಗೆ ಎಂಬ ಹುಡುಕಾಟದಲ್ಲಿ ಇವು ನೆರವಿಗೆ ಬಂದವು. ಬಿ.ಎ. ಎರಡನೇ ವರ್ಷದಲ್ಲಿ ಓದುವಾಗಲೇ ‘ಮುಳ್ಳುಹಾದಿ’ ಎಂಬ ನಾಟಕ ಬರೆದೆ. ಅದು ಪ್ರದರ್ಶನವನ್ನೂ ಕಂಡಿತು. ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಅವರ ಮಗ ಸೀತಾರಾಮ್‌ ಅವರು ಒಂದು ದಿನ ಕರೆದು ನಾಟಕ ರಚನೆ ಹೇಗಿರಬೇಕು ಅಂತ ವಿವರಿಸಿ ಹೇಳಿದರು. ಆತ್ಮವಿಮರ್ಶೆ ಮುಖ್ಯ ಎಂಬುದು ಅವರ ಮಾತಿನಿಂದ ಗೊತ್ತಾಯಿತು. ಆ ಬಳಿಕ ನಾಟಕ ಪ್ರಕಾರ ನನಗೆ ಒಗ್ಗುವುದಿಲ್ಲ ಅಂತ ಏಕೋ ಅನ್ನಿಸಿ, ಪದ್ಯ ಬರೆಯಲು ಆರಂಭಿಸಿದೆ...

ನಾನು ಮೂಲತಃ ಗಾಂಧೀಜಿಯಿಂದ ಪ್ರಭಾವಿತನಾದವನು. ಆ ಬಳಿಕ ಮಾರ್ಕ್ಸ್‌ ಮತ್ತು ಅಂಬೇಡ್ಕರ್ ಅವರ ಬರವಣಿಗೆಗಳನ್ನು ಓದಿದೆ. ನನ್ನ ಅನುಭವವೇ ಅವರಲ್ಲಿ ಥಿಯರಿ ಆಗಿದೆ ಅಂತ ಅನ್ನಿಸಿ ಅವರ ಬರಹಗಳಿಗೆ ಕೆನೆಕ್ಟ್‌ ಆದೆ, ಅದರಿಂದ ಪ್ರಭಾವಿತನಾದೆ. ಈ ಮೂವರ ಚಿಂತನೆಗಳು ಇಂದಿಗೂ ಪ್ರಸ್ತುತ.

* ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಅಧ್ಯಾಪಕರಾಗಿ ನಿಮ್ಮಅನುಭವ?
ಮೇಷ್ಟ್ರು ಕೆಲಸ ಮೊದಲಿನಿಂದಲೂ ನನಗೆ ಬಹಳ ಇಷ್ಟ. ಮೇಷ್ಟ್ರು ಎಂಬುದು ಬರೀ ಪದ ಅಲ್ಲ; ಸಂವೇದನೆ. ಈಗ ಪ್ರಾಧ್ಯಾಪಕರ ಸಂಖ್ಯೆ ಹೆಚ್ಚು. ಮೇಷ್ಟ್ರುಗಳ ಸಂಖ್ಯೆ ಕಡಿಮೆ. ಪ್ರಾಧ್ಯಾಪಕ ಅನ್ನುವುದು ಹುದ್ದೆ, ಸ್ಥಾನಮಾನ. ಒಳಗೆ ಒಬ್ಬ ಮೇಷ್ಟ್ರು ಇಲ್ಲದೇ ಇದ್ದರೆ ನಿಜವಾದ ಅಧ್ಯಾಪನ ನಡೆಯುವುದಿಲ್ಲ. ವಿದ್ಯಾರ್ಥಿಗಳ ಜತೆಗೆ ಸಾಮೀಪ್ಯ ಮತ್ತು ಅಂತರ ಎರಡೂ ಕಾಪಾಡಿಕೊಂಡು ಇರುವವನೇ ಸರಿಯಾದ ಮೇಷ್ಟ್ರು. ಚೆನ್ನಾಗಿ ಪಾಠ ಮಾಡಿ ಮೊದಲು ವಿದ್ಯಾರ್ಥಿಗಳ ಮನಸ್ಸು ಗೆಲ್ಲಬೇಕು. ಕನ್ನಡ ಸಾಹಿತ್ಯದ ಮುಖಾಂತರವೇ ಸಾಮಾಜಿಕ ಜವಾಬ್ದಾರಿಯನ್ನೂ ಜಾಗೃತಿಯನ್ನೂ ಮೂಡಿಸಲಿಕ್ಕೆ ಸಾಧ್ಯ ಎಂಬು ನಂಬಿದವನು ನಾನು. ಅದರಂತೆಯೇ ನಡೆದುಕೊಂಡಿದ್ದೇನೆ.

* ಬಂಡಾಯ ಸಾಹಿತ್ಯ ಸಂಘಟನೆಯ ಉದ್ದೇಶಗಳು ಎಷ್ಟರಮಟ್ಟಿಗೆ ಈಡೇರಿವೆ?
ಸಾಹಿತ್ಯದಲ್ಲಿ ಹೊಸ ಹುಟ್ಟು ಬೇಕು ಎಂಬ ಆಶಯ ಕನ್ನಡದ ಸಣ್ಣಕಥೆಗಳಲ್ಲಿ ಕಾಣಿಸುತ್ತಿದೆ ಅಂತ 70ರ ದಶಕದ ಮಧ್ಯಭಾಗದಲ್ಲೇ ನಾನು ಒಂದು ಲೇಖನ ಬರೆದಿದ್ದೆ. 1979ರ ವೇಳೆಗೆ ಕಾಲ ಕೂಡಿ ಬಂದಿತು. ಬಂಡಾಯ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿತು. ಚಳವಳಿಯಾಗಿ ಅದು ಏರಿಳಿತಗಳನ್ನು ಕಂಡಿದ್ದರೂ ಸಂಘಟನೆಯ ಆಶಯ ಖಂಡಿತ ಈಡೇರಿದೆ. ಹೊಸದಾಗಿ ಬರೆಯುವವರಲ್ಲಿ ಆತ್ಮವಿಶ್ವಾಸ ಮೂಡಿಸುವಂತಹ ಕೆಲಸವನ್ನು ದಲಿತ ಮತ್ತು ಬಂಡಾಯ ಚಳವಳಿಗಳು ಮಾಡಿವೆ. ನಿರ್ಲಕ್ಷಿತ ಸಮುದಾಯಗಳಿಂದ ಬಂದ ಬರಹಗಾರರಿಗೆ ಅಸ್ಮಿತೆಯನ್ನು ದೊರಕಿಸಿಕೊಟ್ಟಿವೆ. ಬೇರೆ ಬೇರೆ ಬಗೆಯ ಅಸಮಾನತೆಗಳು ಸಾಹಿತ್ಯ ಪ್ರಕಾರಗಳ ವಸ್ತುವಾಗಲು ಕಾರಣವಾಗಿವೆ.

* ಸೃಜನಶೀಲ ಮನಸ್ಸು ಮತ್ತು ಪ್ರಭುತ್ವದ ನಡುವಣ ಸಂಬಂಧ ಹೇಗಿರಬೇಕು?
ಸೃಜನಶೀಲ ವ್ಯಕ್ತಿ ಪ್ರಭುತ್ವದ ಜತೆ ಇಟ್ಟುಕೊಳ್ಳಬೇಕಾದ ಸಂಬಂಧದ ಸ್ವರೂಪಕ್ಕೆ ಪಂಪ, ಬಸವಣ್ಣ ಆದರ್ಶ. ತನಗೆ ಆಶ್ರಯ ಕೊಟ್ಟ ರಾಜನನ್ನು ಅರ್ಜುನನಿಗೆ ಹೋಲಿಸುತ್ತಾನೆ ಪಂಪ. ಅದೇ ಕೃತಿಯಲ್ಲಿ ಕರ್ಣ ಮೇಲುಗೈ ಪಡೆಯುವಂತೆ ನೋಡಿಕೊಳ್ಳುತ್ತಾನೆ. ಬಸವಣ್ಣ ಒಂದು ಹುದ್ದೆಯಲ್ಲಿ ಇದ್ದು ಚಳವಳಿ ಕಟ್ಟಿದರು. ಸರ್ಕಾರ ನಮಗೆ ಕೊಡಮಾಡುವ ಹುದ್ದೆ ಅಥವಾ ಸ್ಥಾನಮಾನವನ್ನು ಒಪ್ಪಿಕೊಳ್ಳಬೇಕಾದರೆ ಆ ಸರ್ಕಾರ ನಮ್ಮ ವಿಚಾರಧಾರೆಗೆ ಸ್ವಲ್ಪವಾದರೂ ಹತ್ತಿರವಾಗಿರಬೇಕು. ಇಲ್ಲವಾದರೆ ಒಪ್ಪಿಕೊಳ್ಳಬಾರದು. ವಿಚಾರಧಾರೆ, ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಾಗ ರಾಜೀನಾಮೆ ಕೊಡಲು ಸಿದ್ಧವಾಗಿರಬೇಕು.

* ನಿಮಗೀಗ 75ರ ಹರೆಯ. ಆದರೂ ನಿರಂತರವಾಗಿ ಯಾವುದಾದರೊಂದು ಕೆಲಸದಲ್ಲಿ ತೊಡಗಿಸಿಕೊಂಡಿರುತ್ತೀರಿ. ನಿಮ್ಮ ಕ್ರಿಯಾಶೀಲತೆಯ ಹಿಂದೆ ಅಡಗಿರುವ ಗುಟ್ಟೇನು?
ವಯಸ್ಸನ್ನು ಮನಸ್ಸು ಗೆಲ್ಲಬೇಕು ಎಂದು ನಂಬಿದವನು ನಾನು. ಮನಸ್ಸು ಯಾವಾಗಲೂ ಮಲಿನವಾಗಬಾರದು. ವಯಸ್ಸಿನ ಬಗ್ಗೆ ಯೋಚನೆ ಮಾಡುವುದಿಲ್ಲ. ವಯಸ್ಸಿನ ಆಧಾರದ ಮೇಲೆ ನನ್ನ ಕುರಿತು ಕಾರ್ಯಕ್ರಮ ಆಯೋಜಿಸುವ ಪ್ರಸ್ತಾವ ತಂದಾಗ ನಾನು ಒಪ್ಪಲಿಲ್ಲ. ನನಗೆ ವಯಸ್ಸನ್ನು ಜ್ಞಾಪಿಸಬೇಡಿ ಅಂತ ಹೇಳುತ್ತೇನೆ. ನನ್ನ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನುಕ್ರಿಯಾಶೀಲತೆಯೇ ಕಾಪಾಡಿದೆ. ಯುವ ಮನಸ್ಸುಗಳ ಜತೆ ಒಡನಾಟ ಹೆಚ್ಚು.

* ಇಷ್ಟೆಲ್ಲ ಕೆಲಸಗಳಿಗೆ ಸಮಯ ಹೇಗೆ ಹೊಂದಿಸುತ್ತೀರಿ?
ನಾಳೆ ಏನು ಕೆಲಸ ಮಾಡಬೇಕು ಅಂತ ಒಂದು ಅಂದಾಜು ಮಾಡಿಕೊಳ್ಳುತ್ತೇನೆ. ಅದರ ಪ್ರಕಾರ ಕೆಲಸ ಮಾಡುತ್ತೇನೆ. ಅದರ ಅರ್ಥ ಯಾಂತ್ರಿಕವಾಗಿ ಮಾಡುತ್ತೇನೆ ಎಂದು ಅಲ್ಲ. ರಾತ್ರಿಯೇ ಬರೆದಿಟ್ಟುಕೊಳ್ಳುತ್ತೇನೆ. ಆದ್ಯತೆ ಅನುಸಾರ ವಿಂಗಡಿಸುತ್ತೇನೆ. ಸಿನಿಮಾ ನೋಡುತ್ತೇನೆ. ಟಿ.ವಿ.ಯಲ್ಲಿ ನ್ಯೂಸ್‌ ತಪ್ಪದೇ ವೀಕ್ಷಿಸುತ್ತೇನೆ. ಕ್ರೀಡಾವಳಿಗಳನ್ನು ನೋಡುತ್ತೇನೆ. ಕುಡುಮಿ ತರಹ ಇರಲ್ಲ. ಕೆಲವು ವೇಳೆ ಏನೂ ಮಾಡಲ್ಲ. ಮೌನವಾಗಿ ಇರುತ್ತೇನೆ. ಅದೇ ವಿಶ್ರಾಂತಿ.

* ‘ಬೆವರು ನನ್ನ ದೇವರು’ ಹೆಸರಿನಲ್ಲಿ ಸಮಗ್ರ ಸಾಹಿತ್ಯ ಸಂಪುಟ ಹೊರಬರುತ್ತಿದೆ. ಇದರ ಕುರಿತು ಏನು ಅನಿಸುತ್ತದೆ?
14 ಸಂಪುಟಗಳು ಒಟ್ಟು 5,260 ಪುಟಗಳ ಬರವಣಿಗೆಯನ್ನು ಒಳಗೊಂಡಿವೆ. ಬರಹಗಳು ಚದುರಿಹೋಗಿದ್ದವು. ಈಗ ವಿಷಯವಾರು ವಿಂಗಡಣೆಯಾಗಿದೆ. ಇದರಿಂದ ಅಧ್ಯಯನಕ್ಕೆ ಅನುಕೂಲ ಆಗುತ್ತದೆ. ನನ್ನ ಬೆಳವಣಿಗೆಯ ಹಂತಗಳನ್ನು ಗುರುತಿಸಲು ಸಹಕಾರಿ. ನನ್ನ ಸಾಹಿತ್ಯ ಜೀವನದಲ್ಲಿ ಇದನ್ನು ಮುಖ್ಯವಾದ ಘಟ್ಟ ಅಂತ ಭಾವಿಸುತ್ತೇನೆ.

* ಮುಂದಿನ ಯೋಜನೆಗಳು?
ಸಾಮಾಜಿಕ ಜವಾಬ್ದಾರಿಯುಳ್ಳ ಯುವ ತಂಡಗಳಿಗೆ ಒತ್ತಾಸೆಯಾಗಿ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಇರಾದೆ ಇದೆ. ಇವತ್ತಿನ ಸಂದರ್ಭದಲ್ಲಿ 70–80ರ ದಶಕಗಳಲ್ಲಿ ಇದ್ದಂತಹ ಸಾಮಾಜಿಕ ಜಾಗೃತಿಯನ್ನು ಮತ್ತೆ ಮೂಡಿಸುವುದು ಅಗತ್ಯ. ನನ್ನ ಪಾಲಿನ ಮುಂದಿನ ಮಹಾಕೃತಿ ಅದೇ. ‘ಆತ್ಮಕತೆ ಬರೆಯಿರಿ’ ಅಂತ ಗೆಳೆಯರು ಒತ್ತಾಯಿಸುತ್ತಿದ್ದಾರೆ. ಆದರೆ ಈ ವಿಚಾರದಲ್ಲಿ ನಾನು ಗೊಂದಲದಲ್ಲಿದ್ದೇನೆ. ಅದರ ಅಗತ್ಯ ಇದೆಯೇ ಎಂಬ ಪ್ರಶ್ನೆ ಇದೆ. ಆತ್ಮರತಿ ಆಗಿಬಿಡಬಹುದು ಎಂಬ ಅನುಮಾನವೂ ಇದೆ. ಆತ್ಮಕತೆಯ ಚೌಕಟ್ಟಿಗೆ ಹೊರತಾಗಿ ಆಯ್ದ ಅನುಭವಗಳನ್ನು ಆಧರಿಸಿ ಬರೆಯಬಹುದೇ ಎಂಬುದರ ಬಗ್ಗೆ ಯೋಚಿಸುತ್ತಿದ್ದೇನೆ.

* ಬಲಪಂಥೀಯ ಐಕಾನ್‌ಗಳನ್ನು ಪ್ರಜ್ಞಾಪೂರ್ವಕವಾಗಿ ಮುನ್ನೆಲೆಗೆ ತರುವ ಕೆಲಸ ನಡೆದಿದೆ. ಇದನ್ನು ಅರ್ಥಮಾಡಿಕೊಳ್ಳುವುದು ಹೇಗೆ?
ಪ್ರಜಾಸತ್ತಾತ್ಮಕ ಸರ್ಕಾರಗಳು ಸಂವಿಧಾನಾತ್ಮಕ ಆಶಯಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿದ್ದರೆ, ಪ್ರಜ್ಞಾಪೂರ್ವಕವಾಗಿ ನಿರ್ಲಕ್ಷಿಸಿದರೆ ರಹಸ್ಯ ಕಾರ್ಯಸೂಚಿಗಳು ಬಹಿರಂಗಕ್ಕೆ ಬರುತ್ತವೆ. ಚರಿತ್ರೆಯನ್ನು ಪೂರ್ವಗ್ರಹದಿಂದ ನೋಡಬಾರದು. ವಸ್ತುನಿಷ್ಠತೆ, ವಿಶ್ಲೇಷಣೆ ಮುಖ್ಯ. ವಿಭಜಕ ಪ್ರವೃತ್ತಿ ಜಾಸ್ತಿ ಆಗುತ್ತಿದೆ. ಸಲ್ಲದವರನ್ನು ಮುನ್ನೆಲೆಗೆ ತರುವ ಪ್ರಯತ್ನ ನಡೆಯುತ್ತಿದೆ. ಆಡಳಿತ ನಡೆಸುವ ಪಕ್ಷ ಬದಲಾದ ಕೂಡಲೇ ಚರಿತ್ರೆಯನ್ನು ಬದಲಾಯಿಸುವ ಅವಶ್ಯಕತೆ ಇಲ್ಲ. ಚರಿತ್ರೆಯ ವ್ಯಾಖ್ಯಾನ, ಮರುವ್ಯಾಖ್ಯಾನವನ್ನು ಚರಿತ್ರಕಾರರು ಮಾಡಬೇಕು; ರಾಜಕೀಯ ಪಕ್ಷಗಳಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT