ಬಿಜೆಪಿ ಪ್ರಣಾಳಿಕೆ ಬಿಡುಗಡೆ: ‘2047ರ ಭಾರತಕ್ಕೆ ನಮ್ಮ ಮುನ್ನುಡಿ’ –ನರೇಂದ್ರ ಮೋದಿ

ಬುಧವಾರ, ಏಪ್ರಿಲ್ 24, 2019
28 °C

ಬಿಜೆಪಿ ಪ್ರಣಾಳಿಕೆ ಬಿಡುಗಡೆ: ‘2047ರ ಭಾರತಕ್ಕೆ ನಮ್ಮ ಮುನ್ನುಡಿ’ –ನರೇಂದ್ರ ಮೋದಿ

Published:
Updated:

ನವದೆಹಲಿ: ಲೋಕಸಭೆ ಚುನಾವಣೆಯ ಪ್ರಣಾಳಿಕೆಯನ್ನು ಬಿಜೆಪಿ ಸೋಮವಾರ ಬಿಡುಗಡೆ ಮಾಡಿತು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೇರಿದಂತೆ ಹಲವು ಪ್ರಮುಖರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಈ ಬಾರಿ ಎನ್‌ಡಿಎಗೆ ಪ್ರಯಾಸದ ಬಹುಮತ

ಪ್ರಣಾಳಿಕೆ ಬಿಡುಗಡೆ ಸಂದರ್ಭ ಮಾತನಾಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ‘ನಮ್ಮ ಆಡಳಿತದಲ್ಲಿ ಒಂದೇಒಂದು ಹಗರಣ ನಡೆದಿಲ್ಲ. ಯುಪಿಎ ಆಡಳಿತದ ಹತ್ತು ವರ್ಷಗಳು ಹೇಗಿದ್ದವು ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ’ ಎಂದು ಹೆಮ್ಮೆಯಿಂದ ಹೇಳಿದರು.

‘ದೇಶದ ಆರ್ಥಿಕತೆ ಸುಧಾರಿಸಲು ನಮ್ಮ ಸರ್ಕಾರ ಸಾಕಷ್ಟು ಶ್ರಮವಹಿಸಿತು. ಬೆಳೆ ಉತ್ಪತ್ತಿ ಸುಧಾರಿಸಲು 12 ಕೋಟಿ ರೈತರಿಗೆ ಅಗತ್ಯ ನೆರವು ಒದಗಿಸಲಾಯಿತು. ವಿಶ್ವಮಟ್ಟದ ಹಲವು ಸೂಚ್ಯಂಕಗಳಲ್ಲಿ ನಮ್ಮ ಸ್ಥಿತಿಗತಿ ಸುಧಾರಿಸಿದೆ. 2014ರಿಂದ 2019ರ ಅವಧಿಯನ್ನು ದೇಶದ ಇತಿಹಾಸವು ಸುವರ್ಣಯುಗ ಎಂದೇ ನೆನಪಿರಿಸಿಕೊಳ್ಳುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಚುನಾವಣಾ ಪೂರ್ವ ಸಮೀಕ್ಷೆ ವಿಶ್ಲೇಷಣೆ– 2019ರ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ

ಒಂದು ಧ್ಯೇಯ, ಒಂದು ದೇಶ: ಮೋದಿ

2047ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದು 100 ವರ್ಷಗಳಾಗಲಿದೆ. 2019ರಿಂದ 2024ರ ಅವಧಿಯಲ್ಲಿ ನೀವು ನಿರ್ಮಿಸುವ ದೇಶವು ಆ ಭಾರತಕ್ಕೆ (ದೇಶದ ಭವಿಷ್ಯಕ್ಕೆ) ದಾರಿ ತೋರಲಿದೆ. ನಮ್ಮ ಮುಂದಿನ ತಲೆಮಾರು 2047ರ ಭವಿಷ್ಯವನ್ನು ನಿರ್ಧರಿಸಲಿದೆ. ಈ ತಲೆಮಾರಿನ ಬದುಕು ಚಂದಗಾಣಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. 2047ರ ಭಾರತಕ್ಕೆ ಹಾದಿ ತೋರಲು, ಮುಂದಿನ ಐದು ವರ್ಷಗಳಲ್ಲಿ ದೇಶವನ್ನು ಹೇಗೆಲ್ಲಾ ರೂಪಿಸಬೇಕು ಎನ್ನುವ ಬಗ್ಗೆ ನಮ್ಮಲ್ಲಿ ಹಲವು ದೊಡ್ಡ ಕನಸುಗಳಿವೆ’ ಎಂದು ಮೋದಿ ಹೇಳಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ನೆನಪಿಗೆ ನಾವು 75 ಗುರಿಗಳನ್ನು ಇಟ್ಟುಕೊಂಡಿದ್ದೇವೆ. ನಾವು ರೂಪಿಸಿರುವ ‘ಒಂದು ಧ್ಯೇಯ, ಒಂದು ದೇಶ’ (ಒನ್ ಮಿಷನ್, ಒನ್ ನೇಷನ್) ಅಜೆಂಡಾ ದೇಶವನ್ನು ನಿಜಕ್ಕೂ ಮುಂದಕ್ಕೆ ಕೊಂಡೊಯ್ಯಲಿದೆ’ ಎಂದು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದರು.

‘ರಾಷ್ಟ್ರೀಯತಾವಾದವು ನಮ್ಮ ಸ್ಫೂರ್ತಿ, ಆಡಳಿತವೇ ನಮ್ಮ ಮಂತ್ರ. ಅಭಿವೃದ್ಧಿ ಬಯಸುವ ಎಲ್ಲ ರಂಗಗಳನ್ನೂ ನಾವು ಮುನ್ನಡೆ ಸಾಧಿಸಬೇಕಾಗಿದೆ. ದೇಶವನ್ನು ಮುನ್ನಡೆಸಲು ನಾವು ಬಹುಹಂತಗಳಲ್ಲಿ ಕೆಲಸ ಮಾಡಲು ನಿರ್ಧರಿಸಿದ್ದೇವೆ. 2014ರಿಂದ 2019ರ ಅವಧಿಯಲ್ಲಿ ನಾವು ಗಳಿಸಿದ ಅನುಭವ, ನಮ್ಮ ಯಶಸ್ಸು ಈ ಪ್ರಣಾಳಿಕೆ ರೂಪಿಸಲು ನೆರವಾಯಿತು. ಜಲ ಸಂಪನ್ಮೂಲ ರಕ್ಷಣೆ ಮತ್ತು ಉಪಯೋಗಕ್ಕಾಗಿ ‘ಜಲ್ ಶಕ್ತಿ’ ಸಚಿವಾಲಯ ಅಸ್ತಿತ್ವಕ್ಕೆ ಬರಲಿದೆ’ ಎಂದು ಮೋದಿ ಹೇಳಿದರು.

ವಾಸ್ತವ ಅರಿತ ಪ್ರಣಾಳಿಕೆ: ಅರುಣ್ ಜೇಟ್ಲಿ

‘ನಮ್ಮ ಪ್ರಣಾಳಿಕೆಯನ್ನು ದೇಶವನ್ನು ಒಡೆಯುವ ತುಕಡೆ ತುಕಡೆ ಮನಃಸ್ಥಿತಿಯಲ್ಲಿ ರೂಪಿಸಿಲ್ಲ. ಇದನ್ನು ಭಾರತದ ವಾಸ್ತವ ಸಂಗತಿಗಳನ್ನು ಅರಿತುಕೊಂಡು ರೂಪಿಸಲಾಗಿದೆ. ಕಳೆದ ಹಲವು ದಶಕಗಳಲ್ಲಿ ವಿಫಲರಾದವರು ಹೊಸ ಆಲೋಚನೆಗಳನ್ನು ಮುಂಚೂಣಿಗೆ ತರಲಾರರು. 2014ರಲ್ಲಿ ಚುನಾವಣೆ ನಡೆದ ಸಂದರ್ಭ ದೇಶದಲ್ಲಿ ಸಿನಿಕ ವಾತಾವರಣ ಇತ್ತು. ಮೋದಿ ಜನರಲ್ಲಿ ಭರವಸೆ ಬಿತ್ತಿದ್ದರು’ ಎಂದು ಬಿಜೆಪಿ ನಾಯಕ ಅರುಣ್ ಜೇಟ್ಲಿ ಹೇಳಿದರು.

‘ಹಿಂದಿನ ಸರ್ಕಾರಗಳು ಘೋಷಣೆಗಳನ್ನು ಪ್ರಕಟಿಸುತ್ತಿದ್ದವು. ಆದರೆ ಮೋದಿ ಸರ್ಕಾರ ಸೌಲಭ್ಯಗಳನ್ನು ಒದಗಿಸಿತು. ಕಳೆದ ಐದು ವರ್ಷಗಳ ಅವಧಿಯಲ್ಲಿ ತೆರಿಗೆ ಏರಿಸಲಿಲ್ಲ, ಬದಲಾಗಿ ಇಳಿಸಿದೆವು. ಜನರ ಕಿಸೆಯಲ್ಲಿ ಹಣ ಇರಬೇಕು, ಆಗಲೇ ಅವರು ಖರ್ಚು ಮಾಡಲು ಸಾಧ್ಯ ಎನ್ನುವುದು ನಮ್ಮ ಸರ್ಕಾರದ ನಿರ್ಧಾರವಾಗಿತ್ತು’ ಎಂದು ನುಡಿದರು.

‘ಭಯೋತ್ಪಾದಕರನ್ನು ಅವರ ಮನೆ ಬಾಗಿಲಿಗೇ ನುಗ್ಗಿ ಹೊಡೆಯುವ ನಮ್ಮ ನೀತಿಯನ್ನು ಜಗತ್ತು ಶ್ಲಾಘಿಸಿದೆ’ ಎಂದು ಜೇಟ್ಲಿ ಹೆಮ್ಮೆಯಿಂದ ಹೇಳಿದರು.

ಇದು ಘೋಷಣೆಯಲ್ಲಿ ಪ್ರಮಾಣ: ಸುಷ್ಮಾ ಸ್ವರಾಜ್

ಇತರ ರಾಜಕೀಯ ಪಕ್ಷಗಳಂತೆ ನಾವು ಘೋಷಣಾ ಪತ್ರವನ್ನು ಪ್ರಕಟಿಸುತ್ತಿಲಲ್ಲ. ಇದು ಸಂಕಲ್ಪ ಪತ್ರ. ನಾವು ಈಡೇರಿಸುತ್ತೇವೆ ಎಂದು ಜನರಿಗೆ ನೀಡುತ್ತಿರುವ ಭರವಸೆ. ಇಲ್ಲಿ ನಾವು ಯಾವುದೇ ಹೊಸ ಭರವಸೆ ನೀಡುತ್ತಿಲ್ಲ’ ಎಂದು ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಹೇಳಿದರು.

ಹೊಸ ಭಾರತಕ್ಕೆ ಸರ್ವ ಪ್ರಯತ್ನ: ರಾಜನಾಥ್ ಸಿಂಗ್

ಸಮಾರಂಭದಲ್ಲಿ ಮಾತನಾಡಿದ ಗೃಹ ಸಚಿವ ರಾಜನಾಥ್ ಸಿಂಗ್, ‘ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶವು ಹಲವು ಉನ್ನತ ಸಾಧನೆಗಳನ್ನು ಮಾಡಿತು. ಪಕ್ಷದ ಕಾರ್ಯಕರ್ತರ ಮೂಲಕ, ಸಾಮಾಜಿಕ ಮಾಧ್ಯಮಗಳ ಮೂಲಕ ಜನರ ‘ಮನದ ಮಾತು’ (ಮನ್‌ ಕಿ ಬಾತ್) ಅರಿಯಲು ಯತ್ನಿಸಿದ್ದೇವೆ’ ಎಂದು ಹೇಳಿದರು.

‘ಈ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳ ಮೂಲಕ ಹೊಸ ಭಾರತ (ನ್ಯೂ ಇಂಡಿಯಾ) ರೂಪಿಸಲು ಮುಂದೆ ಹೆಜ್ಜೆ ಇಡುತ್ತಿದ್ದೇವೆ. ಆದಷ್ಟೂ ಬೇಗ ರಾಮ ಮಂದಿರ ನಿರ್ಮಾಣಕ್ಕೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ. 60 ವರ್ಷ ತುಂಬಿದ ಎಲ್ಲ ರೈತರಿಗೂ ಪಿಂಚಣಿ ನೀಡುತ್ತೇವೆ’ ಎಂದು ಭರವಸೆ ನೀಡಿದರು.

ಪ್ರಣಾಳಿಕೆಯ ಮುಖ್ಯ ವಿಷಯಗಳನ್ನು ಪ್ರಸ್ತಾಪಿಸಿದ ರಾಜನಾಥ್ ಸಿಂಗ್, ಮುಂದಿನ ಅವಧಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಮ್ಯಾನೇಜ್‌ಮೆಂಟ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟುಗಳ ಸಂಖ್ಯೆ ಹೆಚ್ಚಿಸಲಾಗುವುದು. ದೇಶದ ಎಲ್ಲ ಮನೆಗಳಿಗೆ ಅಡುಗೆ ಅನಿಲ, ಶೌಚಾಲಯ, ಕುಡಿಯುವ ನೀರು ಮತ್ತು ವಿದ್ಯುತ್ ಸಂಪರ್ಕ ಒದಗಿಸಲಾಗುವುದು. ರಾಷ್ಟ್ರೀಯ ಹೆದ್ದಾರಿಗಳ ಉದ್ದವನ್ನು ದುಪ್ಪಟ್ಟು ಮಾಡಲಾಗುವುದು. ಗ್ರಾಮೀಣ ಅಭಿವೃದ್ಧಿಗೆ ₹25 ಲಕ್ಷ ವ್ಯಯಿಸಲಾಗುವುದು ಎಂದರು.

ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ ಕಳೆದ ವಾರ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಏ.11ರಂದು ನಡೆಯಲಿದೆ.

ಇನ್ನಷ್ಟು...

ಕಾಂಗ್ರೆಸ್ ಪ್ರಣಾಳಿಕೆ: ಬಡವರಿಗೆ ಹಣ, ಕಾಂಗ್ರೆಸ್‌ ಪಣ

ಪ್ರಣಾಳಿಕೆ ಕೊಡುಗೆ: ಟಿಡಿಪಿ, ವೈಎಸ್‌ಆರ್‌ಸಿ ಪೈಪೋಟಿ

ಬರಹ ಇಷ್ಟವಾಯಿತೆ?

 • 24

  Happy
 • 1

  Amused
 • 2

  Sad
 • 0

  Frustrated
 • 15

  Angry

Comments:

0 comments

Write the first review for this !