
ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ ‘ಎಲ್ರ ಕಾಲೆಳಿಯತ್ತೆ ಕಾಲ’ ಚಿತ್ರ ಮುಂದಿನ ವಾರ ತೆರೆ ಕಾಣುತ್ತಿದೆ. ಜತೆಗೆ ತಮ್ಮ ಹೊಸ ರ್‍ಯಾಪ್ ಸಾಂಗ್ ಬಿಡುಗಡೆ ಖುಷಿಯಲ್ಲಿದ್ದಾರೆ. ತಮ್ಮ ನಟನೆ ಹಾಗೂ ಸಂಗೀತ ಪಯಣ ಕುರಿತು ಅವರು ಮಾತನಾಡಿದ್ದಾರೆ.
ಈ ಚಿತ್ರದ ಮೂಲಕ ನೀವು ಯಾರ ಕಾಲೆಳೆಯಲು ಹೊರಟಿದ್ದೀರಿ?
ಇದು ನನ್ನ ಮೊದಲ ಸಿನಿಮಾ. ಈ ಸಿನಿಮಾ ಪ್ರಾರಂಭವಾಗುವ ಮೊದಲು ನಾನು ರಾಜ್‌ಕುಮಾರ್ ಅವರ ಸಮಾಧಿಗೆ ಹೋಗಿ, ಕೈ ಮುಗಿದು ನಟನಾಗಲು ಅವರ ಆಶೀರ್ವಾದ ಬೇಡಿದ್ದೆ. ನಾಲ್ಕು ವರ್ಷಗಳ ಬಳಿಕ ಅಂತಿಮವಾಗಿ ಅವರ ಹುಟ್ಟುಹಬ್ಬದ ದಿನವೇ ಸಿನಿಮಾ ತೆರೆ ಕಾಣುತ್ತಿದೆ ಎಂಬುದು ಖುಷಿಯ ವಿಷಯ. ವಿಜಯ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕಾಲೇಜಿನ ಪ್ರಾಧ್ಯಾಪಕ. ಯಾರ ಕಾಲನ್ನೂ ಎಳೆಯುವುದಿಲ್ಲ. ಇಲ್ಲಿ ಕಾಲವೇ ನನ್ನ ಕಾಲು ಎಳೆಯುತ್ತದೆ.
ಸಂಪೂರ್ಣ ಹಾಸ್ಯಮಯ ಕಥೆಯಾ?
ಪ್ರಾಧ್ಯಾಪಕನಾಗಿ ಒಂದು ಊರಿಗೆ ಹೋಗಿ ಸಿಕ್ಕಿಹಾಕಿಕೊಳ್ಳುತ್ತೇನೆ. ವಾಪಾಸ್ ಬೆಂಗಳೂರಿಗೆ ಬರುವ ಸ್ಥಿತಿ ಬರುತ್ತದೆ. ಏಕೆ ಆ ಸ್ಥಿತಿ ಬರುತ್ತದೆ ಎಂಬುದೇ ಕಥೆ. ಸಸ್ಪೆನ್ಸ್, ಮಿಸ್ಟ್ರಿ ಜಾನರ್ ಸಿನಿಮಾ ಎನ್ನಬಹುದು. ಜತೆಗೆ ಕಥೆಯಲ್ಲಿ ಹಾಸ್ಯವೂ ಬರುತ್ತದೆ. ಆದರೆ ಪೂರ್ತಿ ಹಾಸ್ಯಮಯ ಕಥೆಯಲ್ಲ. 80ರ ದಶಕದ ಹಳ್ಳಿ ಜೀವನವನ್ನು ಕಟ್ಟಿಕೊಡಲಾಗಿದೆ.
ನಿಮ್ಮ ‘ಕ್ಯಾಂಡಿಕ್ರಶ್’ ಸಿನಿಮಾ ಈಗ ಯಾವ ಹಂತದಲ್ಲಿದೆ?
ಅದರ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಅದರಲ್ಲಿ ಕೇವಲ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವೆ. ಚಿತ್ರದಲ್ಲಿ ತೆರೆಯ ಮೇಲೆ ಐದು ನಿಮಿಷ ಕಾಣಿಸಿಕೊಳ್ಳಬಹುದಷ್ಟೆ.
ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದೀರಾ?
ಇಲ್ಲ, ನಾನು ಕೂಡ ಹೆಚ್ಚು ಆಸಕ್ತಿ ತೋರಿಸಿಲ್ಲ. ಸಂಗೀತದ ಮೇಲೆ ಹೆಚ್ಚು ಗಮನಹರಿಸಿರುವೆ. ಒಳ್ಳೆಯ ಕಥೆ ಬಂದರೆ ನಟಿಸುವೆ.
ಸಂಗೀತದ ಪಯಣ ಹೇಗೆ ಸಾಗಿದೆ?
‘ಕ್ರಿಮಿನಲ್’ ಚಿತ್ರಕ್ಕೆ ಸಂಗೀತ ನೀಡುತ್ತಿರುವೆ. ನನ್ನ ‘ಡಯಾನಾಮೈಟ್’ ಎಂಬ ರ್‍ಯಾಪ್ ಸಾಂಗ್ ಏ.23ಕ್ಕೆ ಯೂಟ್ಯೂಬ್‌ನಲ್ಲಿ ಬಿಡುಗಡೆಗೊಳ್ಳುತ್ತಿದೆ. ಮೈಸೂರಿನ ಹೊಸ ಕಲಾವಿದೆಯನ್ನು ಈ ಹಾಡಿನ ಮೂಲಕ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇನೆ. ಇಂಗ್ಲಿಷ್‌ನಲ್ಲಿ ಸಿದ್ಧಗೊಂಡಿರುವ ಹಾಡಿದು. ಮೊದಲ ಸಲ ವಿಶ್ವದ ಮಾರುಕಟ್ಟೆಗೆ ಪ್ರವೇಶಿಸುತ್ತಿರುವೆ. ತುಂಬ ಪೈಪೋಟಿ ಇರುವ ಮಾರುಕಟ್ಟೆ. ಆದರೂ ಒಂದು ಪ್ರಯತ್ನ ಮಾಡೋಣ ಎಂದು ಹೊರಟಿರುವೆ.
ಕನ್ನಡದಲ್ಲಿಯೂ ಸ್ವತಂತ್ರ ಮೂಸ್ಯಿಕ್ ಆಲ್ಬಂಗಳು ಬರುತ್ತಿವೆ. ಅವುಗಳಿಂದ ಹಾಕಿದ ಬಂಡವಾಳ ಮರಳಿ ತೆಗೆಯಬಹುದಾ?
ಬಂಡವಾಳ ಮರಳಿ ತೆಗೆಯುವುದು ಬಹಳ ಕಷ್ಟವಿದೆ. ನಿರ್ಮಾಪಕರಿದ್ದರೆ ಸರಿ. ಕಲಾವಿದನೇ ಬಂಡವಾಳ ಹಾಕಿ ಹಾಡು ಮಾಡಿದರೆ ಕಷ್ಟ. ಎಲ್ಲ ಹಾಡುಗಳು ಜನಪ್ರಿಯ ಆಗುತ್ತವೆ ಎನ್ನಲು ಸಾಧ್ಯವಿಲ್ಲ. ಅಪರೂಪಕ್ಕೆ ಒಂದೊಂದು ಹಾಡು ಹಿಟ್ ಆಗುತ್ತವೆ. ಜನಪ್ರಿಯ ಹಾಡು ನೀಡಬೇಕಾದರೆ ನೀವು ಸಾಕಷ್ಟು ಸಮಯ ಹಾಗೂ ಹಣ ಹೂಡಿಕೆ ಮಾಡಲೇಬೇಕು. ಆ ದೃಷ್ಟಿಕೋನದಲ್ಲಿ ನೋಡಿದರೆ ಈಗಿನ್ನೂ ಈ ವೃತ್ತಿ ಶುರು ಮಾಡುವವರಿಗೆ ಆರ್ಥಿಕ ಯಶಸ್ಸು ಬಹಳ ಕಷ್ಟವಿದೆ. ನಾನು ಯೂಟ್ಯೂಬ್ ಶುರುಮಾಡಿ 16 ವರ್ಷವಾಯ್ತು. ನನ್ನ ‘ತ್ರೀಪೆಗ್’ ಹಾಡು 190 ದಶಲಕ್ಷ ವೀಕ್ಷಣೆ ಪಡೆದಿದೆ. ಆ ರೀತಿ ಹಿಟ್ ಆದರೆ ಉತ್ತಮ ಆದಾಯ ಬರುತ್ತದೆ. ಇವತ್ತು ನಾನೇ ಹಾಡುಗಳನ್ನು ನಿರ್ಮಿಸುತ್ತಿರುವೆ ಎಂದರೆ, ಅದು ಯೂಟ್ಯೂಬ್‌ನಿಂದಲೇ ಸಾಧ್ಯವಾಗಿದ್ದು. ಹಾಗಂತ ಎಲ್ಲ ಹಾಡುಗಳು ಅದೇ ರೀತಿ ಆಗುತ್ತವೆ ಎನ್ನಲು ಸಾಧ್ಯವಿಲ್ಲ.
ಈಗಲೂ ಪಾರ್ಟಿ ಹಾಡುಗಳಿಗೆ ಅದೇ ರೀತಿ ಬೇಡಿಕೆ ಇದೆಯಾ?
ಇವತ್ತಿನ ಮಾರುಕಟ್ಟೆ ಪೂರ್ಣ ಭಿನ್ನವಾಗಿದೆ. ಈಗಿನ ವೀಕ್ಷಕರು ಸುಮಧುರವಾದ, ನಿಧಾನಗತಿಯ ಸಂಗೀತವನ್ನು ಇಷ್ಟಪಡುತ್ತಿದ್ದಾರೆ. ಜೆನ್‌ಜಿಗಳಲ್ಲಿ ಮದ್ಯ ಸೇವನೆ ಪ್ರಮಾಣ ಕಡಿಮೆಯಾಗಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಹೀಗಾಗಿ ಪಾರ್ಟಿ ಹಾಡುಗಳಿಗೆ ಮೊದಲಿನ ರೀತಿ ಬೇಡಿಕೆ ಉಳಿದಿಲ್ಲ. ಇವತ್ತು ಪಾರ್ಟಿಗಳು ನಡೆಯುತ್ತಿಲ್ಲ ಎಂದಲ್ಲ, ಆದರೆ ಅವುಗಳಿಗೆ ಒಗ್ಗುವ ರೀತಿಯ ಹಾಡುಗಳು ಬೇಕಿವೆ.
ಒಟ್ಟಾರೆಯಾಗಿ ನಟನೆ ಮತ್ತು ಸಂಗೀತ, ನಿರ್ಮಾಣದಲ್ಲಿ ಹೆಚ್ಚು ಸವಾಲು ಯಾವುದು?
ನಿರ್ಮಾಣದಲ್ಲಿ ಹೆಚ್ಚಿನ ಅಪಾಯವಿದೆ. ಹಾಂಗತ ತಂತ್ರಜ್ಞನಾಗಿಯೂ ವೃತ್ತಿ ಸುಲಭವಿಲ್ಲ. ನಿರಂತರ ಯಶಸ್ಸು ಇರಬೇಕು. ಇಲ್ಲವಾದರೆ ಬೇಡಿಕೆ ಕಡಿಮೆಯಾಗುತ್ತದೆ. ‘ಒಗ್ಗಟ್ಟಿನಲ್ಲಿ ಬಲವಿದೆ’ ಎಂಬಂತೆ ನಾವು ತಂಡಗಳಾಗಿ ಬೆಳೆಯಬೇಕು. ಒಂದು ತಂಡ ನಾಲ್ಕೈದು ಸಿನಿಮಾಗಳಾಗುವರೆಗಾದರೂ ಒಟ್ಟಿಗೆ ಇರಬೇಕು. ಆದರೆ ನಮ್ಮಲ್ಲಿ ಹಾಗಾಗುತ್ತಿಲ್ಲ. ಒಂದೆರಡು ಸಿನಿಮಾಗಳಿಗೆ ತಂಡಗಳು ವಿಭಜನೆಗೊಳ್ಳುತ್ತವೆ. ಆಗ ತಂತ್ರಜ್ಞರಾಗಿ ನೆಲೆ ನಿಲ್ಲುವುದು ಕಷ್ಟ.
ಸಿನಿಮಾಕ್ಕೆ ಹೋಲಿಸಿದರೆ ರ್‍ಯಾಪ್ ಮಾರುಕಟ್ಟೆಯಲ್ಲಿ ಪೈಪೋಟಿ ಹೇಗಿದೆ?
ರ್‍ಯಾಪ್‌ನಲ್ಲಿ ಅವಕಾಶ ಹೆಚ್ಚಿದೆ. ಪ್ರೇಕ್ಷಕ ವರ್ಗವೂ ದೊಡ್ಡದಿದೆ. ಆದರೆ ನಿರೀಕ್ಷೆಯೂ ಹೆಚ್ಚಿದೆ. ಇವತ್ತು ಜನಕ್ಕೆ ವಿಶ್ವದ ಸಂಗೀತ ಸುಲಭವಾಗಿ ಸಿಗುತ್ತದೆ. ಹೀಗಾಗಿ ನೀವು ಏನೇ ಮಾಡಿದರೂ ಅದೇ ಗುಣಮಟ್ಟದಲ್ಲಿ ಮಾಡಬೇಕೆಂಬ ನಿರೀಕ್ಷೆ ಜನರದ್ದು. ವಿಶ್ವದರ್ಜೆಯ ಸಂಗೀತವಿದ್ದರೆ ಮಾತ್ರ ಇಲ್ಲಿ ಉತ್ತಮ ಗಳಿಕೆ ಸಾಧ್ಯ. ಇಲ್ಲವಾದಲ್ಲಿ ಕಂಟೆಂಟ್ ಕ್ರಿಯೇಟರ್‌ಗಳ ರೀತಿ ಸಣ್ಣ ಪ್ರಮಾಣದಲ್ಲಿ ಹಾಡು ಮಾಡಬೇಕು. ಈಗ ಕಂಟೆಂಟ್ ಕ್ರಿಯೇಟರ್‌ಗಳ ಯುಗ. ಇಂಟರ್‌ನೆಟ್ ಬಳಕೆದಾರರಿಗೆ ಇವತ್ತು ಇವರೇ ದೊಡ್ಡ ಮೂಲ. ಕಂಟೆಂಟ್ ನೋಡಲು ಇವತ್ತು ಹೆಚ್ಚು ಇಂಟರ್‌ನೆಟ್ ಬಳಕೆಯಾಗುತ್ತಿದೆ. ಅಲ್ಲಿಂದ ಕೂಡ ಆದಾಯ ನಿರೀಕ್ಷಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.