ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡಾಯ ಅರಗಿಸಿಕೊಳ್ಳುವ ಶಕ್ತಿ ಬಿಜೆಪಿಗಿದೆ: ಕೇಂದ್ರ ಸಚಿವೆ ಕರಂದ್ಲಾಜೆ ಸಂದರ್ಶನ

Published 26 ಏಪ್ರಿಲ್ 2023, 20:35 IST
Last Updated 26 ಏಪ್ರಿಲ್ 2023, 20:35 IST
ಅಕ್ಷರ ಗಾತ್ರ

ಬಿಜೆಪಿಗೆ ಬಂಡಾಯವನ್ನು ಎದುರಿಸುವ ಶಕ್ತಿ ಇದೆ. ಹೊಸ ಪ್ರಯೋಗವನ್ನು ರಾಜ್ಯದ ಜನ ಒಪ್ಪಿಕೊಳ್ಳುತ್ತಾರೆ. ಮೋದಿಯವರ ವೇಗಕ್ಕೆ ತಕ್ಕಂತೆ ಹೆಜ್ಜೆ ಹಾಕುವಂತಹ ಸರ್ಕಾರ ರಾಜ್ಯದಲ್ಲಿ ಮತ್ತೆ ಬರಬೇಕಿದೆ ಎಂದು ಕೇಂದ್ರ ಸಚಿವೆ ಕೇಂದ್ರ ಸಚಿವೆ ಹಾಗೂ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ಪ್ರತಿಪಾದಿಸಿದರು.

‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಸಾರರೂಪ ಇಲ್ಲಿದೆ.

*ರಾಜ್ಯದ ಜನ ಬಿಜೆಪಿಗೆ ಏಕೆ ಮತ ಹಾಕಬೇಕು?

ಮತ್ತೆ ಡಬಲ್‌ ಎಂಜಿನ್‌ ಸರ್ಕಾರವನ್ನು ಅಧಿಕಾರಕ್ಕೆ ತರುವ ಸಲುವಾಗಿ ಬಿಜೆಪಿಗೇ ಮತ ಹಾಕಬೇಕು. ನರೇಂದ್ರ ಮೋದಿ ಜಾರಿ ಮಾಡಿದ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಲು ರಾಜ್ಯದಲ್ಲೂ ಬಿಜೆಪಿ ಸರ್ಕಾರವೇ ಇರಬೇಕು. ಬೇರೆ ಪಕ್ಷದ ಸರ್ಕಾರಗಳು ಇದ್ದರೆ ಅಭಿವೃದ್ಧಿ ಸೇರಿದಂತೆ ಯಾವುದೇ ವಿಚಾರದಲ್ಲೂ ಕೇಂದ್ರಕ್ಕೆ ಸಹಕಾರ ನೀಡುವುದಿಲ್ಲ. ಮೋದಿಯವರ ಅಭಿವೃದ್ಧಿಯ ವೇಗಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಸರ್ಕಾರದ ಅಗತ್ಯವಿದೆ.

* ನಾಲ್ಕು ವರ್ಷಗಳಲ್ಲಿ ನಿರೀಕ್ಷೆಗೆ ತಕ್ಕಷ್ಟು ಅಭಿವೃದ್ಧಿ ಆಗಿದೆಯೇ?

ಖಂಡಿತಾ ಆಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಇದ್ದಾಗ ಮಾತ್ರ ಯೋಜನೆಗಳು ತ್ವರಿತಗತಿಯಲ್ಲಿ ಜನರಿಗೆ ತಲುಪುತ್ತವೆ. ಬೇರೆ ಪಕ್ಷಗಳ ಸರ್ಕಾರಗಳು ಇರುವ ಕಡೆಗಳಲ್ಲಿ ಕೇಂದ್ರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಬಿಡುವುದಿಲ್ಲ. ರಾಜ್ಯದಲ್ಲೂ ಜೆಡಿಎಸ್‌– ಕಾಂಗ್ರೆಸ್‌ ಸರ್ಕಾರ ಇದ್ದಾಗ ಕೇಂದ್ರದ ಯೋಜನೆಗಳು ಜಾರಿ ಆಗುತ್ತಿರಲಿಲ್ಲ. ನನ್ನ ಇಲಾಖೆಯದ್ದೇ ಉದಾಹರಣೆಗೆ ತೆಗೆದುಕೊಂಡರೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ 17 ರೈತರು ಮಾತ್ರ ನೋಂದಣಿ ಮಾಡಿಕೊಂಡಿದ್ದರು. ಬಿಜೆಪಿ ಸರ್ಕಾರ ಬಂದ ಮೇಲೆ 55 ಲಕ್ಷ ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ.

* ಈ ಬಾರಿ 75 ಹೊಸಬರಿಗೆ ಟಿಕೆಟ್ ನೀಡಿದ್ದು, ಸಾಕಷ್ಟು ಹಿರಿಯರನ್ನು ಕೈಬಿಟ್ಟಿದ್ದೀರಿ. ಇದು ಪ್ರಯೋಗ ಎನ್ನುವುದಕ್ಕಿಂತ ಅಪಾಯಕಾರಿ ನಡೆ ಅಲ್ಲವೇ?

ವಿವಿಧ ರಾಜ್ಯಗಳಲ್ಲಿ ಚುನಾವಣೆ ನಡೆದಾಗ ಈ ಪ್ರಯೋಗವನ್ನು ನಡೆಸಲಾಗಿದೆ. ಉತ್ತರಪ್ರದೇಶ ಮತ್ತು ಗುಜರಾತ್‌ ಚುನಾವಣೆಗಳಲ್ಲೂ ಹಲವು ಹಿರಿಯರಿಗೆ ಟಿಕೆಟ್‌ ನಿರಾಕರಿಸಲಾಗಿತ್ತು. ಅಲ್ಲೂ ಬಂಡಾಯ, ಪಕ್ಷಾಂತರಗಳು ಆಗಿದ್ದವು. ನಮಗೂ ಆಗ ಇದು ಅಪಾಯಕಾರಿ ನಡೆ ಎಂದೇ ಅನ್ನಿಸಿತ್ತು. ಆದರೆ ಜನ ನಮ್ಮ ಪ್ರಯೋಗವನ್ನು ಒಪ್ಪಿದ್ದರು. ಜನರಿಗೂ ಹೊಸ ಮುಖಗಳು ಬೇಕಿತ್ತು. ಕರ್ನಾಟಕದ ಜನ ಈ ಪ್ರಯೋಗವನ್ನು ಒಪ್ಪುತ್ತಾರೆ.

* ಹೊಸ ಮುಖ ಎಂದು ಪ್ರಭಾವಿಗಳ ಮಕ್ಕಳು ಮತ್ತು ಕುಟುಂಬದವರಿಗೆ ಟಿಕೆಟ್‌ ಕೊಟ್ಟಿದ್ದೀರಲ್ಲವೇ?

ಹಾಗೇನೂ ಇಲ್ಲ, ಬಿ.ವೈ. ವಿಜಯೇಂದ್ರ ಅವರ ವಿಷಯವನ್ನೇ ತೆಗೆದುಕೊಂಡರೆ ಅವರು ಪಕ್ಷದಲ್ಲಿ ಹಲವು ಹುದ್ದೆಗಳಲ್ಲಿ ಇದ್ದರು. ಈಗ ಪಕ್ಷದ ಉಪಾಧ್ಯಕ್ಷರೂ ಹೌದು. ಹಿಂದೆ ಹಲವು ಉಪಚುನಾವಣೆಗಳಲ್ಲೂ ಕೆಲಸ ಮಾಡಿದ್ದಾರೆ. ಪಕ್ಷದಲ್ಲಿ ಶ್ರಮಪಟ್ಟವರಿಗೆ ಕೊಟ್ಟಿದ್ದೇವೆ. ಮನೆಯವರು ಎಂಬ ಕಾರಣಕ್ಕೆ ಕೊಟ್ಟಿಲ್ಲ.

*ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಇಳಿದರು. ಜಗದೀಶ ಶೆಟ್ಟರ್‌ ಮತ್ತು ಲಕ್ಷ್ಮಣ ಸವದಿ ಬಂಡಾಯ ಎದ್ದು ಕಾಂಗ್ರೆಸ್‌ ಸೇರಿದರು. ಲಿಂಗಾಯತರನ್ನು ನಿರ್ಲಕ್ಷ್ಯ ಮಾಡಿದ ವಾದಕ್ಕೆ ಪುಷ್ಟಿ ಸಿಕ್ಕಿದಂತಾಗಿದೆಯಲ್ಲ?

ಶೆಟ್ಟರ್‌ ಮತ್ತು ಸವದಿ ಅವರಿಗೆ ಪಕ್ಷ ಸಾಕಷ್ಟು ಅವಕಾಶ ಕಲ್ಪಿಸಿದೆ. ಸವದಿಯವರನ್ನು ಬೇರೆ ಪಕ್ಷದಿಂದ ಕರೆತಂದು ಶಾಸಕ, ಸಚಿವ, ವಿಧಾನಪರಿಷತ್‌ ಸದಸ್ಯ ಮತ್ತು ಉಪಮುಖ್ಯಮಂತ್ರಿಯನ್ನೂ ಮಾಡಲಾಗಿತ್ತು. ಶೆಟ್ಟರ್ ಅವರು ಕರ್ನಾಟಕದಲ್ಲಿ ಅತ್ಯುನ್ನತ ಸ್ಥಾನವಾದ ಮುಖ್ಯಮಂತ್ರಿ ಹುದ್ದೆ ಪಡೆದ ಬಳಿಕವೂ ಶಾಸಕರಾಗಲು ಹಟ ಹಿಡಿದರು. ಅವರಿಗೆ ಯಾವ ಕಾರಣಕ್ಕೆ ಟಿಕೆಟ್‌ ನಿರಾಕರಿಸಲಾಗುತ್ತಿದೆ ಮತ್ತು ಭವಿಷ್ಯದಲ್ಲಿ ದೊಡ್ಡ ಹುದ್ದೆ ನೀಡುವ ಬಗ್ಗೆಯೂ ಮೊದಲೇ ಸೂಚನೆ ನೀಡಲಾಗಿತ್ತು. ಬಿಜೆಪಿಗೆ ಬಂಡಾಯ ಅರಗಿಸಿಕೊಳ್ಳುವ ಶಕ್ತಿ ಇದೆ. ನಮ್ಮ ಬೂತ್‌ ಮಟ್ಟದ ಕಾರ್ಯಕರ್ತರು ಅಭ್ಯರ್ಥಿಗಳು ಯಾರು ಆಗಬೇಕು ಎಂಬುದನ್ನು ತೀರ್ಮಾನಿಸುತ್ತಾರೆ.

ಅಧಿಕಾರ ನಡೆಸಿದ ಅಲ್ಪಾವಧಿಯಲ್ಲೇ ಮೂವರನ್ನು ಮುಖ್ಯಮಂತ್ರಿ ಮಾಡಿದ್ದೇವೆ. ಅಲ್ಲದೇ ವಿರೋಧ ಪಕ್ಷದ ನಾಯಕ, ಪಕ್ಷದ ಅಧ್ಯಕ್ಷ, ಕೇಂದ್ರದಲ್ಲಿ ಸಚಿವ ಸ್ಥಾನವನ್ನೂ ಅವರಿಗೆ ನೀಡಿದ್ದೇವೆ. ಬಿಜೆಪಿ ಲಿಂಗಾಯತರ ಜತೆ ಇದೆ. ಲಿಂಗಾಯತರು ಬಿಜೆಪಿ ಜತೆಗಿದ್ದಾರೆ. ಲಿಂಗಾಯತರಿಗೆ ಮೀಸಲಾತಿಯನ್ನೂ ಹೆಚ್ಚಿಸಿದ್ದೇವೆ. ಆದರೆ, ಕಾಂಗ್ರೆಸ್‌ ಲಿಂಗಾಯತ ಸಮುದಾಯಕ್ಕೆ ಏನು ಮಾಡಿದೆ?

* ಈ ಬಾರಿ ಹಿಂದುತ್ವಕ್ಕಿಂತ ಲಿಂಗಾಯತ ಅಸ್ತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ ಹಾಗಿದೆ?

ಬಿಜೆಪಿ ಎಲ್ಲ ಸಮುದಾಯವನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತಿದೆ. ಹಿಂದುತ್ವದ ವಿಚಾರ ಈಗಲೂ ಇದೆ. ಸಿದ್ದರಾಮಯ್ಯ ತಮ್ಮ ಅವಧಿಯಲ್ಲಿ ನಾಲ್ಕು ದೊಡ್ಡ ತಪ್ಪುಗಳು ಮಾಡಿದರು. ಟಿಪ್ಪು ಜಯಂತಿಗೆ ಚಾಲನೆ ನೀಡಿದರು, ಪಿಎಫ್‌ಐ ಕಾರ್ಯಕರ್ತರು ಮತ್ತು ಭಯೋತ್ಪಾದಕರನ್ನು ಜೈಲಿನಿಂದ ಬಿಡಿಸಿದರು. ಲಿಂಗಾಯತ ಧರ್ಮವನ್ನು ಒಡೆಯಲು ಹೋದರು. ಶಾಲಾ ಮಕ್ಕಳ ಹಂತದಲ್ಲೂ ಜಾತಿಯನ್ನು ತಂದರು.

*ನೀವು ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯೇ?

ಖಂಡಿತಾ ಇಲ್ಲ. ಕೇಂದ್ರದ ಸಚಿವಳಾಗಿ ಕೆಲಸ ಮಾಡುತ್ತಾ ಇಡೀ ದೇಶ ಸುತ್ತುವ ಅವಕಾಶ ಸಿಕ್ಕಿದೆ. ಮೋದಿ ಸರ್ಕಾರದಲ್ಲಿ ಕಲಿಯವುದು ಸಾಕಷ್ಟಿದೆ. 2023 ವಿಧಾನಸಭೆ ಚುನಾವಣೆ ಮುಗಿದ ನಂತರ ಮತ್ತೆ ದೆಹಲಿಗೆ ಹೋಗುತ್ತೇನೆ. ರಾಜ್ಯಕ್ಕೆ ಬರುವುದಿಲ್ಲ. 

ಪ್ರಜಾವಾಣಿ ವಿಶೇಷ ಸಂದರ್ಶನ....ಕೇಂದ್ರ ಕೃಷಿ ಸಚಿವೆ ಮತ್ತು ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ –ಪ್ರಜಾವಾಣಿ ಚಿತ್ರ/ರಂಜು ಪಿ
ಪ್ರಜಾವಾಣಿ ವಿಶೇಷ ಸಂದರ್ಶನ....ಕೇಂದ್ರ ಕೃಷಿ ಸಚಿವೆ ಮತ್ತು ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ –ಪ್ರಜಾವಾಣಿ ಚಿತ್ರ/ರಂಜು ಪಿ
ಪ್ರಜಾವಾಣಿ ವಿಶೇಷ ಸಂದರ್ಶನ....ಕೇಂದ್ರ ಕೃಷಿ ಸಚಿವೆ ಮತ್ತು ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ –ಪ್ರಜಾವಾಣಿ ಚಿತ್ರ/ರಂಜು ಪಿ
ಪ್ರಜಾವಾಣಿ ವಿಶೇಷ ಸಂದರ್ಶನ....ಕೇಂದ್ರ ಕೃಷಿ ಸಚಿವೆ ಮತ್ತು ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ –ಪ್ರಜಾವಾಣಿ ಚಿತ್ರ/ರಂಜು ಪಿ

Cut-off box - ಬಿಎಸ್‌ವೈ–ಬೊಮ್ಮಾಯಿ ಯಾರ ಆಡಳಿತಕ್ಕೆ ಮೆಚ್ಚುಗೆ? *ಯಡಿಯೂರಪ್ಪ ಆಡಳಿತದಲ್ಲಿ ಸಾಕಷ್ಟು ಸಂಕಷ್ಟಗಳು ಎದುರಾದವು. ಅಧಿಕಾರ ಚುಕ್ಕಾಣಿ ಹಿಡಿಯುತ್ತಿದ್ದಂತೆ ಪ್ರವಾಹ ಭೂಕುಸಿತ ಎದುರಾಯಿತು. ಅದು ಮುಗಿಯುತ್ತಿದಂತೆ ಕೋವಿಡ್‌ ಆವರಿಸಿತು. ಜನರ ಪ್ರಾಣ ಉಳಿಸುವುದ‌ಕ್ಕೇ ಶ್ರಮಿಸಿದರು. ಇಷ್ಟಾಗಿಯೂ ಆರ್ಥಿಕ ಮತ್ತು ಅಭಿವೃದ್ಧಿ ಹಿನ್ನಡೆ ಆಗಲಿಲ್ಲ. ಬೊಮ್ಮಾಯಿ ಅವರು ಯಡಿಯೂರಪ್ಪ ಪರಂಪರೆಯನ್ನೇ ಮುಂದುವರಿಸಿದ್ದಾರೆ.

Cut-off box - ಶೇ 40 ಭ್ರಷ್ಟಾಚಾರ ಮುಳುವಾಗುತ್ತದೆಯೇ? * 2018 ರ ಚುನಾವಣೆಯಲ್ಲಿ ಮೋದಿಯವರು ಸಿದ್ದರಾಮಯ್ಯ ಸರ್ಕಾರಕ್ಕೆ ಶೇ 10 ಕಮಿಷನ್‌ ಸರ್ಕಾರ ಸೀದಾರೂಪಾಯ್ಯಾ ಸರ್ಕಾರ ಎಂದು ಲೇವಡಿ ಮಾಡಿದ್ದರು. ಈಗ ಕಾಂಗ್ರೆಸ್‌ ಶೇ 40 ಭ್ರಷ್ಟಾಚಾರದ ಆರೋಪ ಮಾಡಿದೆ ಇದು ನಿಮಗೆ ಮುಳುವಾಗುತ್ತದೆಯೇ? ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಅಜೆಂಡಾವೇ ಇಲ್ಲ. ಅವರ ಅವಧಿಯಲ್ಲಿ ಅಭಿವೃದ್ಧಿ ಆಗದ ಕಾರಣ ಅಭಿವೃದ್ಧಿ ಆಧಾರದಲ್ಲಿ ಮತ ಕೇಳಲು ಆಗದೇ ಇಂತಹ ಆರೋಪ ಮಾಡುತ್ತಿದ್ದಾರೆ. ತಮ್ಮ ಭಷ್ಟಾಚಾರವನ್ನು ಮುಚ್ಚಲು 2013 ರಲ್ಲಿ ಲೋಕಾಯುಕ್ತ ಮುಚ್ಚಿ ಎಸಿಬಿಗೆ ಅಧಿಕಾರ ನೀಡಿದರು. ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರಿಗಳಿಗೆ ರಕ್ಷಣೆ ಇಲ್ಲ ಎಂಬುದಕ್ಕೆ ಮಾಡಾಳ್‌ ವಿರೂಪಾಕ್ಷಪ್ಪ ಅವರ ಪ್ರಕರಣವೇ ಸಾಕ್ಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT