‘ರಾಜ್ಯಕ್ಕೆ ಇನ್ನಷ್ಟು ನೀರು ಸಿಗುವ ಸಾಧ್ಯತೆ ಇದೆ’

7
ಮೋಹನ್ ಕಾತರಕಿ ಸಂದರ್ಶನ

‘ರಾಜ್ಯಕ್ಕೆ ಇನ್ನಷ್ಟು ನೀರು ಸಿಗುವ ಸಾಧ್ಯತೆ ಇದೆ’

Published:
Updated:
Deccan Herald

ಮಹದಾಯಿ ಜಲವಿವಾದ ನ್ಯಾಯಮಂಡಳಿಯು ಐತೀರ್ಪು ಪ್ರಕಟಿಸಿದೆ. ನೀರು ಹಂಚಿಕೆ ಕೋರಿ ವಾದ ಮಂಡಿಸಿದ್ದ ಕರ್ನಾಟಕ ಕಾನೂನು ತಂಡದ ಪ್ರಮುಖ ಸದಸ್ಯರಾಗಿರುವ, ವಿವಿಧ ಜಲವಿವಾದಗಳಲ್ಲಿ ಪಂಜಾಬ್‌, ಒಡಿಶಾ ಮತ್ತು ಕೇರಳ ರಾಜ್ಯಗಳ ಪರವೂ ವಾದಿಸುತ್ತಿರುವ ಹಿರಿಯ ವಕೀಲ ಮೋಹನ್‌ ಕಾತರಕಿ ಮಹದಾಯಿ ತೀರ್ಪು ಮತ್ತು ಮುಂದಿನ ಕ್ರಮಗಳ ಕುರಿತು ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನದಲ್ಲಿ ವಿವರವಾಗಿ ಮಾತನಾಡಿದ್ದಾರೆ.

ಮಹದಾಯಿ ತೀರ್ಪಿನ ಬಗ್ಗೆ ಪರ ಮತ್ತು ವಿರೋಧ ವ್ಯಕ್ತವಾಗಿದೆ. ಜಲವಿವಾದ ಕಾನೂನು ತಜ್ಞರಾಗಿರುವ ನಿಮ್ಮ ಅಭಿಪ್ರಾಯ ಏನು?

ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಸಮಾಧಾನ ಮತ್ತು ನಿರಾಸೆ ಎರಡೂ ಆಗಿದೆ. ಕುಡಿಯುವ ಉದ್ದೇಶಕ್ಕೆ 5.40 ಟಿಎಂಸಿ ಅಡಿ, ಜಲವಿದ್ಯುತ್‌ ಉತ್ಪಾದನೆಗೆ 8.02 ಟಿಎಂಸಿ ಅಡಿ ನೀರು ಹಂಚಿಕೆಯಾಗಿದ್ದರಿಂದ ಇದನ್ನು ಭಾಗಶಃ ಗೆಲುವು ಎಂದೇ ಕರೆಯಬಹುದು. ಕಳಸಾ– ಬಂಡೂರಿ ನಾಲೆಗಳಿಂದ ಮಲಪ್ರಭಾ ನದಿಗೆ ಹರಿಸಿಕೊಳ್ಳಲು 7.56 ಟಿಎಂಸಿ ಅಡಿ ನೀರು ಕೋರಿದ್ದೆವು. ದೊರೆತಿರುವುದು 3.90 ಟಿಎಂಸಿ ಅಡಿ ಮಾತ್ರ.

ಜಲವಿದ್ಯುತ್‌ ಯೋಜನೆಗಳಿಗಾಗಿ 16 ಟಿಎಂಸಿ ಅಡಿ ನೀರಿಗೆ ಬೇಡಿಕೆ ಇರಿಸಲಾಗಿತ್ತು. ಆದರೆ, ಕಡಿಮೆ ಹಂಚಿಕೆಯಾಗಿದೆ. ಬೇಡಿಕೆಗೆ ಅನುಗುಣವಾಗಿ ನೀರು ಹಂಚಿಕೆಯಾಗದಿರುವುದು ಭಾಗಶಃ ಸೋಲು. ಅಧಿಕ ನೀರನ್ನು ಕೋರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಭಾಗಶಃ ಗೆಲುವು ರಾಜ್ಯಕ್ಕೆ ಯಾವ ರೀತಿ ಅನುಕೂಲಕರ?

ಹುಬ್ಬಳ್ಳಿ– ಧಾರವಾಡ ಅವಳಿ ನಗರ ಸೇರಿದಂತೆ ಕೆಲವು ಪಟ್ಟಣ ಮತ್ತು ಗ್ರಾಮಗಳಿಗೆ 2050ರ ಅವಧಿಗೆ ಪೂರೈಸಲು ತಜ್ಞರ ಲೆಕ್ಕಾಚಾರದ ಪ್ರಕಾರ 7.56 ಟಿಎಂಸಿ ಅಡಿ ನೀರನ್ನು ಕೋರಲಾಗಿತ್ತು. ನ್ಯಾಯಮಂಡಳಿ 3.90 ಟಿಎಂಸಿ ಅಡಿ ನೀರಿಗೆ ಒಪ್ಪಿಗೆ ಸೂಚಿಸಿದೆ. ವಾಸ್ತವದಲ್ಲಿ ಈ ಉದ್ದೇಶಕ್ಕೆ ಸದ್ಯ ಬಳಸುತ್ತಿರುವುದು 2 ಟಿಎಂಸಿ ಅಡಿ ಮಾತ್ರ.

3.90 ಟಿಎಂಸಿ ಅಡಿ ನೀರು ಹಂಚಿಕೆಯಾಗಿರುವ ಅಂಶ ಅನುಕೂಲಕರವೇ. 2048ಕ್ಕೆ ನ್ಯಾಯಮಂಡಳಿಯ ಈ ಐತೀರ್ಪಿನ ಮರು ಪರಿಶೀಲನೆ ಆಗಲಿದೆ. ಆಗ ಮತ್ತೆ ಹೆಚ್ಚುವರಿ ನೀರು ಕೋರಲು ಅವಕಾಶವಿದೆ.

ಮಹದಾಯಿ ಕಣಿವೆಯಲ್ಲಿ ಲಭ್ಯವಿರುವ 188.06 ಟಿಎಂಸಿ ಅಡಿಯಲ್ಲಿ 49 ಟಿಎಂಸಿ ಅಡಿ ನೀರನ್ನು ಮಾತ್ರ ಹಂಚಿಕೆ ಮಾಡಲಾಗಿದೆಯಲ್ಲ?

ನೀರಿನ ಲಭ್ಯತೆ ಬಗ್ಗೆ ಸಾಕಷ್ಟು ವಾದ– ವಿವಾದಗಳು ನಡೆದವು. ಕೇಂದ್ರ ಜಲ ಆಯೋಗದ ಸಮೀಕ್ಷೆಯ ಪ್ರಕಾರ ಮಹದಾಯಿಯಲ್ಲಿ 199 ಟಿಎಂಸಿ ಅಡಿ ನೀರು ಲಭ್ಯವಿದೆ. ಅಷ್ಟು ಪ್ರಮಾಣದ ನೀರೇ ಇಲ್ಲ ಎಂದು ಗೋವಾ ವಾದಿಸಿತ್ತು. ನ್ಯಾಯಮಂಡಳಿ ಸ್ವಯಂ ಸಮೀಕ್ಷೆ ಮೂಲಕ 188.06 ಟಿಎಂಸಿ ಅಡಿ ನೀರು ಲಭ್ಯ ಎಂಬ ನಿರ್ಧಾರಕ್ಕೆ ಬಂದಿದೆ.

ಈ ನಿಟ್ಟಿನಲ್ಲೂ ನಮಗೆ ಗೆಲುವು ದೊರೆತಿದ್ದು, ಗೋವಾಕ್ಕೆ ಸಂಪೂರ್ಣ ಸೋಲಾಗಿದೆ. ಇಷ್ಟೆಲ್ಲ ನೀರಿದ್ದರೂ ಮೂರೂ ರಾಜ್ಯಗಳಿಗೆ 49 ಟಿಎಂಸಿ ಅಡಿ ನೀರನ್ನು ಹಂಚಲಾಗಿದೆ. ಮಿಕ್ಕ 139 ಟಿಎಂಸಿ ಅಡಿ ನೀರು ಸಮುದ್ರಕ್ಕೆ ಹರಿದುಹೋಗಲಿದೆ. ಇದನ್ನೂ ಗಮನಿಸಿ ನ್ಯಾಯಮಂಡಳಿ ಮತ್ತಷ್ಟು ನೀರು ಹಂಚಿಕೆ ಮಾಡಬೇಕಿತ್ತು. ಕರ್ನಾಟಕದ ವಾದವೂ ಅದೇ ಆಗಿದೆ.

ಹಂಚಿಕೆಯಾಗಿರುವ 49 ಟಿಎಂಸಿ ಅಡಿ ನೀರಿನ ನಿರ್ವಹಣೆಗೆ ಪ್ರಾಧಿಕಾರವೊಂದರ ಅಗತ್ಯವಿದೆಯೇ?

ಮೂರು ರಾಜ್ಯಗಳ ಗಡಿಯಲ್ಲಿ ನೀರನ್ನು ಹಂಚಿಕೆ ಮಾಡಿಕೊಡುವ ನಿಯಮಿತ ಉದ್ದೇಶಕ್ಕೆ ಪ್ರಾಧಿಕಾರ ಅತ್ಯಗತ್ಯ. ಕಾವೇರಿಯಲ್ಲೂ ಈ ಉದ್ದೇಶಕ್ಕೇ ಪ್ರಾಧಿಕಾರ ರಚಿಸಲಾಗಿದೆ. ಮೂರೂ ರಾಜ್ಯಗಳು ಹಂಚಿಕೆಗಿಂತ ಅಧಿಕ ಪ್ರಮಾಣದ ನೀರನ್ನು ಪಡೆಯದಂತೆ ನಿರ್ಬಂಧಿಸಲು ಪ್ರಾಧಿಕಾರ ಬೇಕು.

ಕುಡಿಯುವ ಉದ್ದೇಶಕ್ಕೆ ಪೂರೈಕೆ ಮಾಡಲು ರಾಜ್ಯಕ್ಕೆ ಹಂಚಿಕೆಯಾಗಿರುವ 5.40 ಟಿಎಂಸಿ ಅಡಿ ನೀರು ಸಾಕಾಗಲಿದೆಯೇ?

ಮಲಪ್ರಭಾ ಜಲಾಶಯದಿಂದ ಕುಡಿಯುವ ಉದ್ದೇಶದಿಂದ ಬಳಕೆ ಮಾಡಿಕೊಳ್ಳುತ್ತಿರುವುದು ಅಂದಾಜು ಎರಡು ಟಿಎಂಸಿ ಅಡಿ ಮಾತ್ರ. ಬಳಕೆಯ ಉದ್ದೇಶಕ್ಕಾಗಿನ ನಮ್ಮ ಬೇಡಿಕೆ ಭಾಗಶಃ ಈಡೇರಿದೆ. ಕಣಿವೆ ವ್ಯಾಪ್ತಿಯ ಬಳಕೆಗೆ 1.50 ಟಿಎಂಸಿ ಅಡಿ ನೀರನ್ನು ನೀಡಲಾಗಿದ್ದು, ಅದನ್ನು ಇತರ ಉದ್ದೇಶಗಳಿಗೆ ಬಳಸಿಕೊಳ್ಳಬಹುದಾಗಿದೆ.

ಪರಿಸರ ಮತ್ತು ಅರಣ್ಯ ಸಚಿವಾಲಯ ಅನುಮತಿಯನ್ನು ಕೋರಬೇಕು ಎಂಬುದು ನ್ಯಾಯಮಂಡಳಿಯ ನಿರ್ದೇಶನ. ಪಶ್ಚಿಮ ಘಟ್ಟದ ಅರಣ್ಯ ಪರಿಸರದಲ್ಲಿ ಯೋಜನೆ ಆರಂಭಿಸಬೇಕಿರುವುದರಿಂದ ಈ ಎರಡೂ ಅನುಮತಿಗಳು ಸುಲಭಕ್ಕೆ ಸಿಗಬಹುದೇ?

ಪರಿಸರಕ್ಕೆ ಧಕ್ಕೆ ಆಗಲಿದೆಯೇ ಎಂಬುದನ್ನು ಪರಿಗಣಿಸಿಯೇ ಕೇಂದ್ರ ಸರ್ಕಾರ ಅನುಮತಿಗಳನ್ನು ನೀಡುತ್ತದೆ. ರಾಜ್ಯ ಸರ್ಕಾರವು ಕುಡಿಯುವ ನೀರಿನ ಪೂರೈಕೆಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿರುವ ವರದಿಗಳಿಂದ ಅನುಮತಿ ದೊರೆಯಬಹುದು. ಇದೇನೂ ಗಂಭೀರ ಸಮಸ್ಯೆಯಲ್ಲ.

ಪರಿಷ್ಕೃತ ಯೋಜನಾ ವರದಿ ಸಲ್ಲಿಕೆಗೆ ಎಷ್ಟು ಸಮಯ ಬೇಕಾಗಬಹುದು?

ಇದು ಸರ್ಕಾರದ ನಿರ್ಧಾರವನ್ನು ಅವಲಂಬಿಸಿದೆ. ಸರ್ಕಾರ ಆರೇ ತಿಂಗಳಲ್ಲಿ ವರದಿ ಸಲ್ಲಿಸಬಹುದು.

ಕಳಸಾ– ಬಂಡೂರಿ ನಾಲೆಗಳ ನೀರು ಮಲಪ್ರಭಾ ನದಿಯತ್ತ ಯಾವಾಗ ಹರಿಯಬಹುದು?

ಇದರ ಬಗ್ಗೆ ಏನನ್ನೂ ಹೇಳಲಾಗುವುದಿಲ್ಲ. ಶೀಘ್ರವೇ ಅಧಿಸೂಚನೆ ಹೊರಡಿಸುವಂತೆ ನ್ಯಾಯಮಂಡಳಿಯು ಕೇಂದ್ರಕ್ಕೆ ಸೂಚಿಸಿದೆ. ಅಧಿಸೂಚನೆ ಹೊರಡಿಸಿ, ಪ್ರಾಧಿಕಾರ ರಚಿಸಿದ ನಂತರ ಅನುಮತಿ ಪಡೆದು, ಯೋಜನೆ ಕಾಮಗಾರಿ ಆರಂಭಿಸಬಹುದು. ಕಣಿವೆ ವ್ಯಾಪ್ತಿಯ ಗೋವಾ ಅಥವಾ ಮಹಾರಾಷ್ಟ್ರ ಸರ್ಕಾರಗಳು ಸುಪ್ರೀಂ ಕೋರ್ಟ್‌ನಿಂದ ತಡೆಯಾಜ್ಞೆ ತರದಿದ್ದರೆ ರಾಜ್ಯದ ಮುಂದಿನ ಹಾದಿ ಸುಸೂತ್ರವಾಗಲಿದೆ. ಜಲವಿವಾದ ನ್ಯಾಯಮಂಡಳಿಗಳ ಐತೀರ್ಪಿಗೆ ಸುಪ್ರೀಂ ಕೋರ್ಟ್‌ ಇದುವರೆಗೆ ತಡೆಯಾಜ್ಞೆ ನೀಡಿಲ್ಲ ಎಂಬುದೂ ಸಮಾಧಾನಕರ.

ಕಾವೇರಿ ನ್ಯಾಯಮಂಡಳಿಯ ಐತೀರ್ಪು ಹೊರಬಿದ್ದ 11 ವರ್ಷಗಳ ನಂತರ ಸುಪ್ರೀಂ ಕೋರ್ಟ್‌ ನೀರಿನ ಬಿಕ್ಕಟ್ಟಿಗೆ ಕೊನೆ ಹಾಡಿತು. ಮಹದಾಯಿ ನೀರು ಪಡೆಯುವುದೂ ವಿಳಂಬ ಆಗಲಿದೆಯೇ?

ಗೋವಾ ತಗಾದೆ ತೆಗೆಯಲಿದೆಯೇ ಎಂಬುದನ್ನೂ ಇದು ಅವಲಂಬಿಸಿದೆ. ಸುಪ್ರೀಂ ಕೋರ್ಟ್‌ ಅವರ ಮೇಲ್ಮನವಿಯನ್ನು ಮಾನ್ಯ ಮಾಡಿ ವಿಚಾರಣೆ ನಡೆಸಲು ಸಮಯಾವಕಾಶ ಬೇಕು. ಹಾಗಾಗಿ ವಿಳಂಬ ಅನಿವಾರ್ಯ.

ಕಣಿವೆಯಾಚೆಗೆ ನೀರು ಪಡೆಯುವುದು ರಾಜ್ಯ ಕಾನೂನು ತಂಡಕ್ಕೆ ದೊಡ್ಡ ಸವಾಲೆನಿಸಿತ್ತೇ?

ಹೌದು. ಇದು ದೊಡ್ಡ ಸವಾಲು ಮತ್ತು ಅತ್ಯಂತ ಮಹತ್ವದ್ದಾಗಿತ್ತು. ಈ ಹಿಂದೆ ಕೃಷ್ಣಾ ನದಿಯ ನೀರನ್ನು ಕಣಿವೆಯಾಚೆಗಿನ ಬಳಕೆಗೆ ಹಂಚಿಕೆ ಮಾಡಲಾಗಿದೆ. ಆ ಪ್ರಸ್ತಾವಕ್ಕೆ ವಿರೋಧ ಇರಲಿಲ್ಲ ಎಂಬುದು ವಿಶೇಷ. ಕಾವೇರಿ ಪ್ರಕರಣದಲ್ಲಿ ವಿರೋಧದ ನಡುವೆಯೂ ಬೆಂಗಳೂರಿನ ಸ್ವಲ್ಪ ಭಾಗಕ್ಕೆ ಕಣಿವೆಯಾಚೆಯೇ ನೀರು ಹಂಚಿಕೆ ಮಾಡಲಾಗಿದೆ.

ಅಂತರರಾಜ್ಯ ಜಲವಿವಾದಗಳಲ್ಲಿ ರಾಜಕೀಯದ ಕಾರಣದಿಂದ ನ್ಯಾಯ ವಿಳಂಬವಾಗುತ್ತಿದೆಯೇ?

ಆರ್ಥಿಕ ಅಭಿವೃದ್ಧಿಯ ಕಾರಣದಿಂದಾಗಿ ಜಲವಿವಾದ ಪ್ರಕರಣಗಳಲ್ಲಿ ರಾಜಕೀಯ ಬೆರೆತೇ ಇರುತ್ತದೆ. ನ್ಯಾಯಸಮ್ಮತವಾಗಿಯೇ ವಿವಾದ ಬಗೆಹರಿಸಬೇಕು. ಮೊದಲು ರಾಜಕಾರಣಿಗಳು, ತಜ್ಞರು ವಿವಾದ ಬಗೆಹರಿಸಲು ಯತ್ನಿಸುತ್ತಾರೆ. ನಂತರ ನ್ಯಾಯಾಲಯಗಳು ಕಾನೂನಿನಡಿ ಬಗೆಹರಿಸುತ್ತವೆ. ನೀರಿಗಾಗಿ ರಾಜಕಾರಣ ಅನಿವಾರ್ಯ.

ಸುಪ್ರೀಂ ಕೋರ್ಟ್‌ನಲ್ಲಿ ನಮಗೆ ಗೆಲುವಾಗಲಿದೆಯೇ?

ಈಗಿನ ವಾದವನ್ನೇ ಮುಂದುವರಿಸಿದಲ್ಲಿ ಇನ್ನೂ ಅಧಿಕ ಪ್ರಮಾಣದ ನೀರನ್ನು ಪಡೆಯಬಹುದು. ನೀರು ದೊರೆಯಲಿದೆ ಎಂಬುದು ನಮ್ಮ ಆಶಾಭಾವ.

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !